Yala Kunni Film Review: ಹಳ್ಳಿಯಲ್ಲಿ ವಜ್ರಮುನಿ ಕೋಮಲು ಮಸ್ತು ಕಮಾಲು
ಇಡೀ ಚಿತ್ರದ ಉದ್ದಕ್ಕೂ ಅಲ್ಲಲ್ಲಿ ಕೋಮಲ್ ಕಚಗುಳಿ ಇಡುತ್ತಾರೆ. ಅವರ ಕಾಮಿಡಿ ಟೈಮಿಂಗ್‌ಗೆ ಪ್ರೇಕ್ಷಕ ಚಪ್ಪಾಳೆ ತಟ್ಟುತ್ತಾನೆ. ಸಾಲದಕ್ಕೆ ಸಾಧು ಕೋಕಿಲ ಬರುತ್ತಾರೆ. ಅತ್ತ ಒಳ್ಳೆಯವನು ಅಲ್ಲದ, ಇತ್ತ ಕೆಟ್ಟವನೂ ಅಲ್ಲದೆ ನಾಯಕನ ತಂದೆ ಪಾತ್ರವೇ ಚಿತ್ರದ ಕೇಂದ್ರಬಿಂದು.
ಆರ್. ಕೇಶವಮೂರ್ತಿ
ಹಳ್ಳಿಗಳ ಸಣ್ಣ ಸಣ್ಣ ಘಟನೆಗಳ ಹಿನ್ನೆಲೆಯಲ್ಲಿ ಸಾಗುವ ಹಾಸ್ಯೋತ್ಸವ ಡ್ರಾಮಾ ‘ಯಲಾಕುನ್ನಿ’ ಚಿತ್ರ. ಮನರಂಜನೆಗೇ ಮೊದಲ ಆದ್ಯತೆ ನೀಡಿರುವ ಈ ಚಿತ್ರವೂ ಸಂಪೂರ್ಣವಾಗಿ ಗ್ರಾಮ ವಾಸ್ತವ್ಯದಂತೆ ಸಾಗುತ್ತದೆ. ಗ್ರಾಮೀಣ ಭಾಗದಲ್ಲಿನ ಪ್ರೀತಿ, ಪ್ರೇಮ, ಅಕ್ರಮ-ಸಕ್ರಮಗಳು, ಸಂಬಂಧಗಳು, ರಾಜಕೀಯ, ದ್ವೇಷ, ನಿರುದ್ಯೋಗ ಹೀಗೆ ಎಲ್ಲವನ್ನೂ ಅನಾವರಣ ಮಾಡುತ್ತಲೇ ಯಾವುದಕ್ಕೂ ಅಂಟಿಕೊಳ್ಳದೆ ಸಿನಿಮಾ ಸಾಗುತ್ತದೆ.
ಇಡೀ ಚಿತ್ರದ ಉದ್ದಕ್ಕೂ ಅಲ್ಲಲ್ಲಿ ಕೋಮಲ್ ಕಚಗುಳಿ ಇಡುತ್ತಾರೆ. ಅವರ ಕಾಮಿಡಿ ಟೈಮಿಂಗ್‌ಗೆ ಪ್ರೇಕ್ಷಕ ಚಪ್ಪಾಳೆ ತಟ್ಟುತ್ತಾನೆ. ಸಾಲದಕ್ಕೆ ಸಾಧು ಕೋಕಿಲ ಬರುತ್ತಾರೆ. ಅತ್ತ ಒಳ್ಳೆಯವನು ಅಲ್ಲದ, ಇತ್ತ ಕೆಟ್ಟವನೂ ಅಲ್ಲದೆ ನಾಯಕನ ತಂದೆ ಪಾತ್ರವೇ ಚಿತ್ರದ ಕೇಂದ್ರಬಿಂದು. ಹೀರೋ ಹೆಸರು ಸತ್ಯ ಹರಿಶ್ಚಂದ್ರ. ಆದರೆ, ಆತ ಹೇಳೋದಲ್ಲ ಸುಳ್ಳೇ. ಒಂದು ಸತ್ಯ ಹೇಳಕ್ಕೆ ಆರಂಭಿಸಿದರೆ ಏನಾಗುತ್ತದೆ ಎನ್ನುವ ಕುತೂಹಲ ಚಿತ್ರದ ಕತೆಯನ್ನು ಮುಂದುವರಿಸುತ್ತದೆ.
ಚಿತ್ರ: ಯಲಾಕುನ್ನಿ
ತಾರಾಗಣ: ಕೋಮಲ್, ಅಪ್ಪಣ್ಣ, ಅಮೃತಾ, ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್
ನಿರ್ದೇಶನ: ಎನ್ ಆರ್ ಪ್ರದೀಪ್
ರೇಟಿಂಗ್: 3
ವಜ್ರಮುನಿ ಕಾಲದ ಹಳ್ಳಿ ಕತೆಯ ಚಿತ್ರಗಳನ್ನು ಮಿಸ್ ಮಾಡಿಕೊಳ್ಳುವವರಿಗೆ ‘ಯಲಾಕುನ್ನಿ’ ಬಹು ಮೆಚ್ಚುಗೆ ಆಗುತ್ತದೆ. ಕೋಮಲ್ ನಿರಾಸೆ ಮಾಡದೆ ತೆರೆಯನ್ನು ಆವರಿಸಿಕೊಳ್ಳುತ್ತಾರೆ. ಅವರಿಗೆ ವಜ್ರಮುನಿ ಗೆಟಪ್, ಅವರದ್ದೇ ಧ್ವನಿ ಸೂಟ್ ಆಗಿದೆ. ಅದ್ದೂರಿ ಮೇಕಿಂಗ್, ತಾಂತ್ರಿಕ ಶ್ರೀಮಂತಿಕೆಯ ಆಚೆ ಮೂಡಿ ಬಂದಿರುವ ಸಹಜ ಮತ್ತು ಮನರಂಜನೆಯ ಚಿತ್ರವಿದು. ಮಹಂತೇಶ್, ತಮ್ಮಣ್ಣ, ಮಯೂರ್ ಪಟೇಲ್, ಸಾಧು ಕೋಕಿಲಾ, ಮಾನಸಿ ಸುಧೀರ್, ಉಮೇಶ್ ಸಕ್ಕರೆನಾಡು ಪಾತ್ರಗಳು ಪ್ರೇಕ್ಷಕರಿಂದ ಹೆಚ್ಚಿನ ಗಮನ ಸೆಳೆಯುತ್ತವೆ.