ದೆಹಲಿಯ ನಿರ್ಜನ ಪ್ರದೇಶದ ಮಹಿಳಾ ಹಾಸ್ಟೆಲ್‌ನಲ್ಲಿ ನಡೆಯುವ ಅತಿಮಾನುಷ ಘಟನೆಗಳನ್ನು ಕುರಿತ ಹಾರರ್ ಸೀರೀಸ್ 'ಕ್ವಾಫ್'. ಅಲೌಕಿಕ ಘಟನೆಗಳು, ಭಯಾನಕ ರಹಸ್ಯಗಳು ಮತ್ತು ಪಾತ್ರಗಳ ನಡುವಿನ ಸಂಕೀರ್ಣ ಸಂಬಂಧಗಳನ್ನು ಈ ಸೀರೀಸ್ ಒಳಗೊಂಡಿದೆ.
ಚಿತ್ರ: ಕ್ವಾಫ್ (ಸೀರೀಸ್)
ಜಾನರ್: ಹಾರರ್
ಒಟಿಟಿ: ಅಮೇಜಾನ್ ಪ್ರೈಮ್
ನಿರ್ದೇಶನ: ಪಂಕಜ್ ಕುಮಾರ್
ಬಿಡುಗಡೆಯಾದ ವರ್ಷ: 2025
ತಾರಾಗಣ: ರಜತ್ ಕಪೂರ್, ಗೀತಾಂಜಲಿ ಕುಲಕರ್ಣಿ, ಅಭಿಷೇಕ್ ಚೌಹಾಣ್, ಮೋನಿಕಾ ಪನ್ವರ್, ಶಿಲ್ಪಾ ಶುಕ್ಲಾ, ಶಾಲಿನಿ ವತ್ಸಾ.
ಮಧು ಗ್ವಾಲಿಯರ್ ನ ಹುಡುಗಿ. ತನ್ನ ಪದವಿ ಮುಗಿಸಿ ನೌಕರಿ ಅರಸಿ ದೆಹಲಿಗೆ ಬರುತ್ತಾಳೆ. ಅಲ್ಲಿ ತನ್ನ ಸಹಪಾಟಿ ಅರುಣನ ರೂಮಿನಲ್ಲಿ ಆಶ್ರಯ ಪಡೆಯುತ್ತಾಳೆ. ಅರುಣ ಅವಳು ಪರಸ್ಪರ ಪ್ರೀತಿ ಮಾಡಿರುತ್ತಾರೆ. ಆದರೆ ಮಧುವಿನ ಮೇಲೆ ಕಾಲೇಜಿನಲ್ಲಿ ಇರುವಾಗಲೇ ಗ್ಯಾಂಗ್ ರೇಪ್ ಆಗಿರುತ್ತದೆ. ಅವಳು ಅರುಣನ ಜೊತೆಯಿರುವಾಗಲೇ ಮೂರು ಜನ ಅವಳನ್ನು ಅಪಹರಿಸಿ ಅತ್ಯಾಚಾರ ಮಾಡಿರುತ್ತಾರೆ. ಅವರು ತಮ್ಮ ಮುಖ ಕಾಣದ ಹಾಗೆ ಮಾಸ್ಕ್ ಧರಿಸಿರುತ್ತಾರೆ. ಆದರ ಅವರ ಧ್ವನಿಯನ್ನು ನೆನಪಿಟ್ಟುಕೊಳ್ಳುತ್ತಾಳೆ. ಅವರು ಯಾರು ಎಂದೂ ಅವಳಿಗೆ ಗೊತ್ತಾಗುವುದಿಲ್ಲ. ಮಧು ಗ್ವಾಲಿಯರ್ ನಿಂದ ದೆಹಲಿಗೆ ಬಂದ ಒಂದೆರಡು ದಿನದಲ್ಲಿ ಒಬ್ಬ ಮನೋವೈದ್ಯೆಯ ಬಳಿ ಕೆಲಸ ಸಿಗುತ್ತದೆ. ಬೇಲಾ ಎಂಬ ಮಧುವಿನ ಸೀನಿಯರ್ ಅವಳಿಗೆ ಸಹಾಯ ಮಾಡುತ್ತಾಳೆ. ಬೇಲಾಳ ಫಿಯಾನ್ಸಿ ನಕುಲ್. ನಕುಲನನ್ನು ಮೊದಲ ಬಾರಿ ಮಾತನಾಡಿದಾಗ ಮಧೂಳಿಗೆ ಇವನ ಧ್ವನಿ ಪರಿಚಿತ ಎನಿಸುತ್ತದೆ.
ಮಧುವಿಗೆ ತನ್ನ ಅತ್ಯಾಚಾರದ ಘಟನೆಯನ್ನು ಮರೆಯಲೇ ಆಗಿರುವುದಿಲ್ಲ. ಅವಳು ಅದಕ್ಕಾಗಿ ಮನಸ್ಸಿನಲ್ಲಿ ಕೊರಗುತ್ತಿರುತ್ತಾಳೆ. ಪ್ರತಿದಿನವೂ ಅವರನ್ನು ಕೊಂದ ಹಾಗೇ ಸೇಡು ತೀರಿಸಿಕೊಂಡ ಹಾಗೆ ಅವಳಿಗೆ ಕನಸಾಗುತ್ತಿರುತ್ತದೆ. ಆ ಕಹಿ ಘಟನೆಯನ್ನು ಮರೆತು ಹೊಸ ಬದುಕು ಕಟ್ಟಿಕೊಳ್ಳಬೇಕೆಂದು ಎಷ್ಟು ಪ್ರಯತ್ನಿಸಿದರೂ ಆ ಘಟನೆ ಕಣ್ಣಮುಂದೆ ಬಂದು ಅವಳಿಗೆ ಸವಾಲಾಗುತ್ತಿರುತ್ತದೆ. ಸುಪ್ತ ಮನಸ್ಸಿನಲ್ಲಿ ಆ ಮೂವರ ಬಗ್ಗೆ ರೋಷ ದ್ವೇಷ ಬಹಳವಾಗಿ ಇರುತ್ತದೆ. ಅರುಣ್ ಮಧೂಳನ್ನು ಸಮಾಧಾನ ಪಡಿಸುತ್ತಿರುತ್ತಾನೆ. 'ನಾನಿದ್ದೇನೆ ನಿನಗೆ ನಾವಿಬ್ಬರೂ ಹೊಸಬದುಕು ಕಟ್ಟಿಕೊಳ್ಳೋಣ' ಎಂದು ಧೈರ್ಯ ತುಂಬುತ್ತಿರುತ್ತಾನೆ. ಮಧು ತನ್ನ ಕೆಲಸ ಸಿಕ್ಕ ಕೂಡಲೇ ತನ್ನ ವಾಸವನ್ನು ದೆಹಲಿ ಒಂದು ಏಕಾಂತ ಪ್ರದೇಶದಲ್ಲಿರುವ ಮಹಿಳಾ ಹಾಸ್ಟೆಲ್ ಗೆ ಬದಲಾಯಿಸುತ್ತಾಳೆ.
ಅದೊಂದು ಹಳೆಯ ಹಾಸ್ಟೆಲ್ ಗೋಡೆಗಳೂ ಶಿಥಿಲಾವಸ್ಥೆಯಲ್ಲಿರುತ್ತದೆ. ಅಲ್ಲಿ ನಾಲ್ಕು ಜನ ಹುಡುಗಿಯರು ಇರುತ್ತಾರೆ. ಅವರು ಬಂದು ಎಷ್ಟೋ ವರ್ಷಗಳಾಗಿದ್ದರೂ ಅಲ್ಲಿಂದ ಹೋಗಿರುವುದಿಲ್ಲ. ಹಾಸ್ಟೆಲ್ ವಾರ್ಡನ್ ಗೆ ಅವರನ್ನು ವಾಪಸ್ ಕಳಿಸುವುದೇ ದೊಡ್ಡ ಸವಾಲಾಗಿರುತ್ತದೆ. ಅದರಲ್ಲಿ ಒಬ್ಬಳು ಗರ್ಭಿಣಿ ಅವರ ವೈಯುಕ್ತಿಕ ಸಮಸ್ಯೆಗಳಿಂದ ಹಾಸ್ಟೆಲ್ ನಲ್ಲಿರುತ್ತಾಳೆ. ಇನ್ನು ಮೂವರು ಅವಿವಾಹಿತರು. ಹಾಸ್ಟೆಲ್ ನಲ್ಲಿ ಏನೇ ಅವ್ಯವಸ್ಥೆ ಇದ್ದರೂ ಅವರೆಲ್ಲಾ ಅಲ್ಲಿಯೇ ಇರುತ್ತಾರೆ. ಮಧೂಗೆ ಕೊಡಲಾದ ರೂಂ ನಂ 333 ನಲ್ಲಿ ಮೊದಲು ಅನು ಎಂಬ ಹುಡುಗಿ ಇರುತ್ತಿದ್ದಳು, ಅವಳು ಒಂದು ಅಪಘಾತದಲ್ಲಿ ತೀರಿಕೊಂಡಿರುತ್ತಾಳೆ. ಅನು ದೆವ್ವವಾಗಿ ಅದೇ ರೂಮಿನಲ್ಲಿ ಇದ್ದಾಳೆ ಎಂಬ ವದಂತಿ ಇರುತ್ತದೆ. ಅದಕ್ಕೆ ಸರಿಯಾಗಿ ಮಧೂ ಆ ರೂಮಿಗೆ ವಾಸ ಬಂದಾಗ ಏನೇನೋ ಅಲೌಕಿಯ ಅಸಮಂಜಸ ಘಟನೆಗಳನ್ನು ಅನುಭವಗಳನ್ನು ಎದುರಿಸುತ್ತಾಳೆ. ಅವಳಿಗೆ ಭಯವಾಗುತ್ತದೆ, ಆದರೆ ಹಾಸ್ಟೆಲ್ ಬಿಟ್ಟು ಹೋಗಲು ಆಗುವುದಿಲ್ಲ. ತನ್ನ ಭಯವನ್ನು ತಾನು ಕೆಲಸ ಮಾಡುವ ಮನೋವೈದ್ಯೆಯ ಬಳಿ ಹೇಳಿಕೊಳ್ಳುತ್ತಾಳೆ. ಆಕೆಯಿಂದ ಕೌನ್ಸೆಲಿಂಗ್ ತೆಗೆದುಕೊಳ್ಳುತ್ತಿರುತ್ತಾಳೆ. ಒಮ್ಮೆ ಆ ಮನೋವೈದ್ಯೆಯ ಮಗಳು ಮಧೂ ಒಬ್ಬಳೇ ಇದ್ದಾಗ ಅಸಹಜವಾಗಿ ವರ್ತಿಸುವುದನ್ನು ನೋಡಿಬಿಡುತ್ತಾಳೆ. ಮಧೂಗೆ ಯಾರೋ ತನ್ನೊಳಗೆ ಬಂದ ಹಾಗೆ ಅನಿಸುತ್ತದೆ. ಅವಳ ಧ್ವನಿ ಮ್ಯಾನರಿಸಂ ಎಲ್ಲ ಬದಲಾಗುತ್ತದೆ. ಆ ಸಮಯದಲ್ಲಿ ರಾಕ್ಷಸಿಯಂತೆ ಬದಲಾಗುತ್ತಾಳೆ.
ಮಧೂ ಇದ್ದ ಕೋಣೆಯಲ್ಲಿ ಇದ್ದ ಅನೂ ಸುಂದರ ಯುವತಿ ವಿದ್ಯಾವಂತೆ. ನೌಕರಿ ಮಾಡುತ್ತಿರುತ್ತಾಳೆ. ಅನು ಹಾಗೂ ಬಾಕಿ ನಾಲ್ವರೂ ಬಹಳ ಒಳ್ಳೆಯ ಗೆಳತಿಯರು. ಈ ಐದೂ ಜನರೂ ಒಟ್ಟಿಗೆ ಕೂಡಿ ಹರಟೆ ಹೊಡೆಯುವುದು, ಒಟ್ಟಿಗೇ ಊಟಕ್ಕೆ ಹೋಗುವುದು, ಶಾಪಿಂಗ್ ಮಾಡುವುದೂ ಪಾರ್ಟಿ ಮಾಡುವುದೂ ಎಲ್ಲ ಮಾಡುತ್ತಿರುತ್ತಾರೆ. ಅನುಗೆ ಒಬ್ಬ ಬಾಯ್ ಫೆಂಡ್ ಇರುತ್ತಾನೆ. ಅವನನ್ನೇ ಮದುವೆಯಾಗುವುದೆಂದು ಅನು ನಂಬಿರುತ್ತಾಳೆ. ಆದರೆ ಅವನು ಅನೂಗೆ ಕೈಕೊಡುತ್ತಾನೆ. ಅನೂಗೆ ಆಘಾತವಾಗುತ್ತದೆ. ಆದರೆ ಅವಳ ಹಾಸ್ಟೆಲ್ ಗೆಳತಿಯರು ಅವಳಿಗ ಸಮಾಧಾನ ಮಾಡುತ್ತಾರೆ.
ಇಳಾ ಮಿಶ್ರಾ ಒಬ್ಬ ಪೊಲೀಸ್ ಅಧಿಕಾರಿ. ಅವಳು ವಿಚ್ಚೇದಿತೆ. ಅವಳಿಗೆ ಒಬ್ಬನೇ ಮಗ ಜೀವನ್. ಆದರೆ ಅವನು ಪುಂಡುಪೋಕಿರಿಗಳ ಸಹವಾಸ ಮಾಡಿ ಕೆಟ್ಟುಹೋಗಿರುತ್ತಾನೆ. ವಿದ್ಯೆ ಇಲ್ಲ, ಒಳ್ಲೆಯ ಕೆಲಸವೂ ಇಲ್ಲ. ಪುಡಿಕೆಲಸ ಮಾಡಿಕೊಂಡು ನಾಲ್ಕು ಕಾಸು ಗಳಿಸುತ್ತಿರುತ್ತಾನೆ. ಆ ಪುಡಿಕೆಲಸ ಕ್ರಮ-ಅಕ್ರಮ ಎರಡೂ ಆಗಿರಬಹುದು. ತಾಯಿ ಎಂದರೆ ಆದರವಿಲ್ಲ. ಅವನು ಒಬ್ಬ ಹಕೀಮನೊಡನೆ ಸಂಪರ್ಕದಲ್ಲಿ ಇರುತ್ತಾನೆ. ಆ ಹಕೀಮ ಅತೀಂದ್ರಿಯ ಶಕ್ತಿಗಳನ್ನು ವಶಪಡಿಸಿಕೊಳ್ಳಲು ಯುವತಿಯರನ್ನು ಬಲಿ ಕೊಡುತ್ತಿರುತ್ತಾನೆ. ಜೀವನ್ ಯಾರಾದರೂ ಯುವತಿಯರನ್ನು ಪರಿಚಯ ಮಾಡಿಕೊಂಡು ಹಕೀಮನಿಗೆ ಒಪ್ಪಿಸುವುದು ಅವನು ಆ ಯುವತಿಯ ಬಲಿಕೊಡುವುದು ಹೀಗೇ ನಡೆಯುತ್ತಿರುತ್ತದೆ. ಇಳಾ ಹಾಗೂ ಈ ಹಾಸ್ಟೆಲ್ ವಾರ್ಡನ್ ಗೆಳತಿಯರು. ಆಗಾಗ ಭೇಟಿ ಮಾಡುತ್ತಿರುತ್ತಾರೆ.
ಒಮ್ಮೆ ಜೀವನ್ ಹಾಸ್ಟೆಲಿಲ್ಲಿ ಒಂದು ಸಣ್ಣ ಪೈಂಟ್ ಕೆಲಸ ಮಾಡಲು ಬಂದಿರುತ್ತಾನೆ. ಈ ಹಾಸ್ಟೆಲ್ ನಲ್ಲಿರುವ ಹುಡುಗಿಯರ ಮೇಲೆ ಅವನ ಕಣ್ಣು ಬಿದ್ದಿರುತ್ತದೆ. ಯಾವುದೋ ಕಾರಣಕ್ಕೆ ಜೀವನ್ ಗೂ ಅನು ಮತ್ತು ಅವಳ ಗೆಳತಿಯರಿಗೂ ಜಗಳವಾಗುತ್ತದೆ. ಜೀವನ್ ಅಸಭ್ಯವಾಗಿ ಮಾತನಾಡಿದಾಗ ಅವರಲ್ಲಿ ಒಬ್ಬಳು ಜೀವನ್ ಗೆ ಹೊಡೆದು ಓಡಿಸುತ್ತಾಳೆ. ಅನು ಮತ್ತು ಅವಳ ಗೆಳತಿಯರು ಟೆರೇಸ್ ನಲ್ಲಿ ಹೊಸವರ್ಷದ ಪಾರ್ಟಿ ಮಾಡುತ್ತಿರುತ್ತಾರೆ. ಅಲ್ಲಿಗೆ ಅಚಾನಕ್ಕಾಗಿ ಬರುವ ಜೀವನ್ ಅನುವನ್ನು ತಬ್ಬಿ ಮುತ್ತಿಡುತ್ತಾನೆ. ಇದರಿಂದ ಕೆರಳಿದ ಅನು ಅವನಿಗೆ ಹೊಡೆಯುತ್ತಾಳೆ. ಮಿಕ್ಕ ಹುಡುಗಿಯರೂ ಅನುವಿಗೆ ಸಪೋರ್ಟ್ ಮಾಡಿ ಜೀವನ್ ಗೆ ಬಾರಿಸುತ್ತಾರೆ. ಜೀವನ್ ಸಹ ಹುಡುಗಿಯರ ಮೇಲೆ ಕೈ ಮಾಡುತ್ತಾನೆ, ಅಸಭ್ಯವಾಗಿ ಬೈಯುತ್ತಾನೆ. ಎಲ್ಲರೂ ಸೇರಿ ಅವನಿಗೆ ಹೊಡೆದು ಬಡಿದು ಮಾಡಿ ಕೊನೆಗೆ ಕ್ಯಾಂಪ್ ಫೈರ್ ಬೆಂಕಿಯಿಂದ ಸುಟ್ಟು ಬಿಡುತ್ತಾರೆ. ಇದೆಲ್ಲ ಆವೇಶದಲ್ಲಿ ನಡೆದುಹೋಗುತ್ತದೆ.
ಆ ದಿನದ ಪಾರ್ಟಿಗೆ ಇಳಾ ಮತ್ತು ವಾರ್ಡನ್ ಇಬ್ಬರೂ ಹಾಸ್ಟೆಲಿನಲ್ಲಿ ಇರುತ್ತಾರೆ. ಜೀವನ್ ನ ಬೆಂದ ದೇಹವನ್ನು ಹುಡುಗಿಯರು ಬೆಡ್ ಶೀಟಿನಲ್ಲಿ ನಲ್ಲಿ ಸುತ್ತಿ ರೂಮಿಗೆ ಸಾಗಿಸುವುದನ್ನು ಇಳಾ ನೋಡಿದರೂ ಅದರಲ್ಲಿ ಇರುವುದು ತನ್ನ ಮಗನೇ ಎಂದು ಗೊತ್ತಿರದ ಅವಳು ನಿರ್ಲಕ್ಷ್ಯ ಮಾಡುತ್ತಾಳೆ. ವಾರ್ಡನ್ ಕಣ್ನು ತಪ್ಪಿಸಿ ಜೀವನನನ್ನು ರೂಮಿಗೆ ಸಾಗಿಸುವ ಹುಡುಗಿಯರು ಅವನನ್ನು ಒಂದು ದೊಡ್ಡ ಪೆಟ್ಟಿಗೆಯಲ್ಲಿ ಹಾಕಿಡುತ್ತಾರೆ. ಕುಟುಕು ಜೀವವಿದ್ದ ಜೀವನ್ ಪೆಟ್ಟಿಗೆ ಹಾಕಿ ಮುಚ್ಚಿದಾಗ ಉಸಿರು ಕಟ್ಟಿ ಸತ್ತುಹೋಗುತ್ತಾನೆ. ಅದು ಅನು ಇರುವ ರೂಂ ಆಗಿರುತ್ತದೆ. ನಂತರ ಅವರು ಆ ಹೆಣವನ್ನು ಹಾಸ್ಟೆಲಿನಿಂದ ದೂರ ಸಾಗಿಸಿ ಕಾಡಿನಲ್ಲಿ ಬಿಸಾಡಿ ಬರುತ್ತಾರೆ. ಆದರೆ ಈ ಘಟನೆಯ ನಂತರ ಅನುವಿಗೆ ಅನೇಕ ಅತಿಮಾನುಷ ಘಟನೆಗಳ ಅನುಭವ ಆಗುತ್ತದೆ. 'ಸಾಲಿಯೋ ಮೆ ತುಮ್ ಕೋ ಛೊಡತಾ ನಹೀ' ಎಂಬ ಮಾತು ಆ ಪೆಟ್ಟಿಗೆಯಿಂದ ಕೇಳಿಸುತ್ತಿರುತ್ತದೆ. ಇದರಿಂದ ಹೆದರಿದ ಅನು ಹಾಸ್ಟೆಲ್ ತೊರೆದು ಊರಿಗೆ ಹೊರಡುತ್ತಾಳೆ. ಆಗ ಅಫಘಾತವಾಗಿ ಅನು ಮರಣಿಸುತ್ತಾಳೆ. ಒಂದು ಬಲಿ ಆಯ್ತು. ಉಳಿದ ನಾಲ್ವರಿಗೆ ಹೆದರಿಕೆ ಶುರುವಾಗುತ್ತದೆ. 'ನೀವು ಹಾಸ್ಟೆಲಿನಿಂದ ಹೊರಹೋಗಲು ನಾನು ಬಿಡುವುದಿಲ್ಲ' ಎಂಬ ಮಾತು ಪದೇ ಪದೇ ಧ್ವನಿಸುತ್ತಿರುತ್ತದೆ. ಅವರಿಗೆ ಹಾಸ್ಟೆಲ್ ತೊರೆದು ಹೋಗಲು ಭಯ. ಹಾಸ್ಟೆಲ್ ನಲ್ಲಿ ಇರಲೂ ಭಯ ಇಂಥ ಪರಿಸ್ಥಿತಿಯಲ್ಲಿ ಮಧೂ ಆ ಹಾಸ್ಟೆಲ್ ಗೆ ಬರುತ್ತಾಳೆ. ಅವಳಿಗೆ ವಾರ್ಡನ್ ಅನುವಿನ ಕೋಣೆ ಅಲಾಟ್ ಮಾಡುತ್ತಾಳೆ. ಮಧೂಗೆ ಈಗ ಯಾವುದೋ ಒಂದು ಅಗೋಚರ ಶಕ್ತಿ ಆ ಕೋಣೆಯಲ್ಲಿದೆ ಅದು ತನ್ನನ್ನು ಆಗಾಗ ಆವಾಹಿಸಿಕೊಳ್ಳುತ್ತದೆ ಎಂಬ ಅನುಭವ ಆಗುತ್ತಿರುತ್ತದೆ. ಅನುವಿನ ಗೆಳತಿಯರು ನಾಲ್ವರಿಗೂ ಮಧು ಅಲ್ಲಿರುವುದು ಇಷ್ಟವಿಲ್ಲ. ಅವರು ಹಕೀಮನನ್ನು ಸಂಪರ್ಕಿಸಿ ಮಧುವಿನ ಬಗ್ಗೆ ಹೇಳಿ, ಅವನಿಂದ ಅದೆಂಥದ್ದೋ ಔಷಧಿ ಪಡೆದು ಅದನ್ನು ಗುಟ್ಟಾಗಿ ಮಧುವಿಗೆ ಅವಳು ಕುಡಿಯುವ ಪಾನೀಯದಲ್ಲಿ ಬೆರೆಸಿ ಕೊಡುತ್ತಿರುತ್ತಾರೆ.
ಇಳಾ ತನ್ನ ಮಗ ಕಾಣುತ್ತಿಲ್ಲವೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತಾನೂ ಹುಡುಕಾಡುತ್ತಿರುತ್ತಾಳೆ. ಆಗ ಅವಳಿಗೆ ತನ್ನ ಮಗ ಸಭ್ಯನಲ್ಲ, ಹಕೀಮನ ಜೊತೆ ಸೇರಿ ಕೊಲೆಪಾತಕಿಯಾಗಿದ್ದಾನೆ ಎಂಬ ಮಾಹಿತಿ ತಿಳಿಯುತ್ತದೆ. ಹಕೀಮನ ಮನೆ ರೈಡ್ ಮಾಡಿದರೂ ಪ್ರಯೋಜನವಾಗುವುದಿಲ್ಲ.
ಈ ಮಧ್ಯೆ ಮಧು ನಕುಲನನ್ನು ಭೇಟಿ ಮಾಡಿ ತನ್ನನ್ನು ರೇಪ್ ಮಾಡಿರುವುದು ಅವನು ಮತ್ತು ಅವನ ಸ್ನೇಹಿತರು ಎಂದು ಖಚಿತಪಡಿಸಿಕೊಳ್ಳುತ್ತಾಳೆ. ಇವಳು ತಮ್ಮನ್ನು ಗುರ್ತಿಸಿಬಿಟ್ಟಳೆಂದು ನಕುಲ್ ತನ್ನ ಗೆಳೆಯರ ಜೊತೆಗೂಡಿ ಮಧುವನ್ನು ಅಪಹರಿಸಿ ಸಾಯಿಸಲು ಪ್ರಯತ್ನಿಸುತ್ತಾನೆ. ಮಧು ತನಗಿದ್ದ ಅತಿಮಾನುಷ ಶಕ್ತಿಯಿಂದ ಇಬ್ಬರು ಅತ್ಯಾಚಾರಿಗಳನ್ನು ಕೊಲೆ ಮಾಡುತ್ತಾಳೆ. ನಕುಲ ಉಳಿದು ತಪ್ಪಿಸಿಕೊಳ್ಳುತ್ತಾನೆ.
ಮಧುಗೆ ಅವಳ ಪ್ರೇಮಿ ಅರುಣ್ ತನಗೇನೂ ಸಹಾಯ ಮಾಡುತ್ತಿಲ್ಲ ಎಂಬ ಕೋಪ. ಅಸಹಾಯಕತೆ. ತನ್ನ ಮೇಲೆ ಯಾವುದೋ ಅಗೋಚರ ಶಕ್ತಿ ಆವಾಹನೆ ಯಾಗುತ್ತಿದೆ ಎಂಬ ಅನುಮಾನ ಹಾಗೆ ಆದಾಗ ತಾನು ಅತಿಮಾನುಷವಾಗಿ ವರ್ತಿಸುತ್ತಿದ್ದೇನೆ ಎಂಬ ಗುಮಾನಿ. ಇಳಾಗೆ ತನ್ನ ಮಗ ಎಲ್ಲಿಹೋದ ಎಂಬ ಚಿಂತೆ. ಮಧುವಿನ ಬಾಸ್ ಮನೋವೈದ್ಯೆಗೆ ಹಾಸ್ಟೆಲ್ ನಲ್ಲಿ ಏನೋ ನಡೆಯುತ್ತಿದೆ ಎಂಬ ಸಂಶಯ ಹಾಗೂ ಅಲ್ಲಿರುವ ಎಲ್ಲರನ್ನು ಪಾರು ಮಾಡಬೇಕು ಎಂಬ ಕಾಳಜಿ. ಅಲ್ಲಿರುವ ಇಬ್ಬರು ಹುಡುಗಿಯರನ್ನು ಪಾರು ಮಾಡಬೇಕೆಂದು ಕೊಂಡರೂ ಆಗುವುದಿಲ್ಲ. ಯಾವುದೋ ಅಗೋಚರ ಶಕ್ತಿ ಅಡ್ಡ ಬರುತ್ತದೆ. ಹಕೀಮ ಯಾರು? ಅವನು ಕೊನೆಗೆ ಏನಾಗುತ್ತಾನೆ? ಇಳಾಗೆ ತನ್ನ ಮಗ ಕೊಲೆ ಆಗಿದ್ದಾನೆಂದು ತಿಳಿಯುತ್ತದೆಯೇ? ಮಧು ತನ್ನನ್ನು ಕಾಡುವ ಅಗೋಚರ ಶಕ್ತಿಯಿಂದ ಹೊರಬರುತ್ತಾಳೆಯೇ? ಮಧುಗೆ ತನ್ನ ಮೇಲೆ ಬರುವ ಅತಿಮಾನುಷ ಶಕ್ತಿ ಅರ್ಥಾತ್ ದೆವ್ವ ಯಾರದು? ಜೀವನ್ ದಾ ಅಥವಾ ಅನುದಾ? ತಪ್ಪಿಸಿಕೊಂಡ ನಕುಲ ಏನಾಗುತ್ತಾನೆ?
ಈ ಎಲ್ಲ ಅಂಶಗಳನ್ನು ಕನೆಕ್ಟ್ ಮಾಡಿ ಸಂಶಯ ಪರಿಹರಿಸಿಕೊಳ್ಳಲು ಈ ವೆಬ್ ಸೀರೀಸ್ ನೋಡಿ. ಹಾರರ್ ಎಂಬುದನ್ನು ತುಸು ಧಾರಾಳವಾಗೇ ತೋರಿಸಿದ್ದಾರೆ. ಆಗಾಗ ಕಾಣುವ ಅತಿಮಾನುಷವಾದ ಒಂದು ರೂಪ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಅದರ ಕರ್ಕಶ ಧ್ವನಿ ಮೈಮೇಲೆ ಮುಳ್ಳುಗಳೇಳುವಂತೆ ಮಾಡುತ್ತದೆ. ಸಿಟಿಯಿಂದ ದೂರವಿರುವ ಆ ಹಾಸ್ಟೆಲ್ ವಾತಾವರಣವೇ ಭೀತಿ ಹುಟ್ಟಿಸುತ್ತದೆ. ಸೀರೀಸ್ ನಲ್ಲಿ ಎಲ್ಲರೂ ತಮಗೆ ವಹಿಸಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಎಂಟು ಎಪಿಸೋಡುಗಳಿರುವ ಈ ವೆಬ್ ಸೀರೀಸ್ ಉಗುರು ಕಚ್ಚುತ್ತ ನೋಡುವಂತೆ ಮಾಡುತ್ತದೆ.

