Mooka Jeeva Film Review: ವಿಶೇಷ ಚೇತನ ವ್ಯಕ್ತಿಯ ವೈಶಿಷ್ಟ್ಯ ಪೂರ್ಣ ಪಯಣ
ಕಲಾತ್ಮಕತೆಯ ಜಾಡಿನಲ್ಲಿ ಸಾಗುವ ಈ ಕತೆಯಲ್ಲಿ ತಾಯಿ, ಮಗ, ಪ್ರೀತಿಸಿದವ ಹಿಂದೆ ಹೋಗುವ ಮಗಳು, ಊರಿನ ಗೌಡ ಮತ್ತು ಅದೇ ಊರಿನಲ್ಲಿ ನಡುವೆಯ ಒಂದಿಷ್ಟು ಸಮಸ್ಯೆಗಳೇ ಚಿತ್ರದ ಪ್ರಧಾನ ಅಂಶಗಳು.
ಆರ್.ಕೆ
ಸಾಮಾಜಿಕ ಜವಾಬ್ದಾರಿಯನ್ನು ಹೇಳುವ ನಿಟ್ಟಿನಲ್ಲಿ ರೂಪಿಸಿರುವ ಸಿನಿಮಾ ‘ಮೂಕ ಜೀವ’. ಜೆ ಎಂ ಪ್ರಹ್ಲಾದ್ ಅವರ ಕಾದಂಬರಿ ಆಧಾರಿತ ಈ ಚಿತ್ರದ ಕತೆ ಹಳ್ಳಿಯ ಬಡ ಕುಟುಂಬದ ವಿಶೇಷ ಚೇತನನ ಸುತ್ತ ಸಾಗುತ್ತದೆ. ಸ್ವಾವಲಂಬಿ ಜೀವನಕ್ಕೆ ಅಂಗ ವೈಕಲ್ಯ ಅಡ್ಡಿಯಾಗಲ್ಲ ಎಂಬುದನ್ನು ಹೇಳುತ್ತಲೇ, ಇಂಥ ವಿಶೇಷ ಚೇತನ ವ್ಯಕ್ತಿಗಳನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಅವರನ್ನು ನಿರ್ಲಕ್ಷೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಈ ಸಿನಿಮಾ ಹೇಳುತ್ತದೆ.
ಕಲಾತ್ಮಕತೆಯ ಜಾಡಿನಲ್ಲಿ ಸಾಗುವ ಈ ಕತೆಯಲ್ಲಿ ತಾಯಿ, ಮಗ, ಪ್ರೀತಿಸಿದವ ಹಿಂದೆ ಹೋಗುವ ಮಗಳು, ಊರಿನ ಗೌಡ ಮತ್ತು ಅದೇ ಊರಿನಲ್ಲಿ ನಡುವೆಯ ಒಂದಿಷ್ಟು ಸಮಸ್ಯೆಗಳೇ ಚಿತ್ರದ ಪ್ರಧಾನ ಅಂಶಗಳು. ಗಂಡು ದಿಕ್ಕು ಇಲ್ಲದೆ ಇಬ್ಬರು ಮಕ್ಕಳನ್ನು ಸಾಕುತ್ತಾ ಜೀವನ ಸಾಗಿಸುತ್ತಿರುವ ಮಹಿಳೆ ಮುಂದೆ ಊರು ತೊರೆಯಬೇಕಾದಾಗ ಏನಾಗುತ್ತದೆ, ಮುಂದೆ ಈಕೆಯ ಮಗ ಏನಾಗುತ್ತಾನೆ, ಊರಿಂದ ಓಡಿ ಹೋದ ಮಗಳು ಏನಾಗಿರುತ್ತಾಳೆ ಎಂಬುದನ್ನು ತುಂಬಾ ತಾಳ್ಮೆಯಿಂದಲೇ ನಿರೂಪಿಸಿದ್ದಾರೆ ನಿರ್ದೇಶಕರು.
ಚಿತ್ರ: ಮೂಕಜೀವ
ತಾರಾಗಣ: ಕಾರ್ತಿಕ್ ಮಹೇಶ್, ಶ್ರೀಹರ್ಷ, ಅಪೂರ್ವಶ್ರೀ, ಮೇಘಶ್ರೀ, ಗಿರೀಶ್ ವೈದ್ಯನಾಥನ್, ರಮೇಶ್ ಪಂಡಿತ್
ನಿರ್ದೇಶನ: ಶ್ರೀನಾಥ್ ವಸಿಷ್ಠ
ಶ್ರೀಕಂಠನ ಪಾತ್ರದಲ್ಲಿ ಶ್ರೀಹರ್ಷ, ನಾಯಕನ ಪಾತ್ರದಲ್ಲಿ ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್, ನಾಯಕಿಯಾಗಿ ಮೇಘಾಶ್ರೀ, ತಾಯಿ ಪಾತ್ರದಲ್ಲಿ ಅಪೂರ್ವಶ್ರೀ ಅವರು ಗಮನ ಸೆಳೆಯುತ್ತಾರೆ. ಊರಿನ ಯಜಮಾನನಾಗಿ ರಮೇಶ್ ಪಂಡಿತ್, ಕತೆಗೆ ನ್ಯಾಯ ಸಲ್ಲಿದ್ದಾರೆ. ಸಿನಿಮಾ ಅರಿವಿನ ಮಾಧ್ಯಮ ಎನ್ನುವವರಿಗೆ ‘ಮೂಕ ಜೀವ’ ಆಪ್ತವಾಗುತ್ತದೆ.