ಚಿತ್ರ ವಿಮರ್ಶೆ: ತುಂಡ್ ಹೈಕ್ಳ ಸಾವಾಸ
ತಂತ್ರಜ್ಞಾನ ಬದಲಾಗಿದೆ. ಜಗತ್ತು ಬದಲಾಗಿದೆ. ಇಂಥಾ ಸಂದರ್ಭದಲ್ಲಿ ಜಟ್ಟ ಗಿರಿರಾಜ್ ಬಹು ವರ್ಷಗಳ ಹಿಂದೆ ಶುರು ಮಾಡಿದ ಸಿನಿಮಾವೊಂದು ಈಗ ತೆರೆಗೆ ಬಂದಿದೆ.
ರಾಜೇಶ್ ಶೆಟ್ಟಿ
ಕತೆಗಾರರಿಗೆ ಒಮ್ಮೊಮ್ಮೆ ಹಳೆಯ ಕತೆಗಳು ಕೈಗೆ ಸಿಕ್ಕಿ ಓದಿದಾಗ ಅದು ಬಾಲಿಶಃ ಅನ್ನಿಸುವುದಿದೆ. ಆ ಕಾಲಕ್ಕೆ ಅದು ಚೆನ್ನಾಗಿತ್ತೋ ಏನೋ, ಕಾಲ ಬದಲಾಗಿದ್ದಕ್ಕೆ ಯಾರು ಹೊಣೆ. ಈ ಸಿನಿಮಾದ ಪ್ರಮುಖ ಪಾತ್ರ ವೀರಭದ್ರ.
ಯೂಆರ್ ಅನಂತಮೂರ್ತಿಯವರ ಭಾರತೀಪುರ ಕಾದಂಬರಿಯ ಜಗನ್ನಾಥನ ಪಾತ್ರ ನೆನಪಿಸುವಂತಹ ಪಾತ್ರ ಅದು.
#MovieReview: ಈ ಜಂಟಲ್‌ಮನ್ ನಿಜಕ್ಕೂ ' ನಂಬರ್ ಒನ್..!'
ಹಳ್ಳಿಯಲ್ಲಿರುವ ದೇವದಾಸಿ ಪದ್ಧತಿ, ಜಾತಿ ಪದ್ಧತಿ, ಹೊಲ ಗದ್ದೆ ನುಂಗುವ ಎಸ್‌ಇಝಡ್ ವಿರುದ್ಧ ಹೋರಾಟ ನಡೆಸುವ ಆ್ಯಂಗ್ರಿ ಯಂಗ್ ಮ್ಯಾನ್. ಜಟ್ಟ ಗಿರಿರಾಜ್ ಬರೆಯಬಹುದಾದ ಪಾತ್ರ. ಆ ಪಾತ್ರವೇ ಈ ಚಿತ್ರದ ಆಧಾರ. ಆ ಪಾತ್ರ ಪ್ರತಿಪಾದಿಸುವ ಒಳ್ಳೆಯ ವಿಚಾರಗಳೇ ಈ ಸಿನಿಮಾದ ಆತ್ಮ. ಈ ಸಿನಿಮಾದ ಆತ್ಮ ಚೆನ್ನಾಗಿದ್ದರೂ ಶಿಲ್ಪ ಸೊಗಸಾಗಿ ಮೂಡಿ ಬಂದಿಲ್ಲ ಅನ್ನುವುದೇ ಸಿನಿಮಾದ ಮಿತಿ. ಒಂದೂರು. ಅಲ್ಲೊಬ್ಬಳು ಹುಡುಗಿ. ವಿಚಾರವಂತೆ, ಬುದ್ಧಿವಂತೆ. ಅವಳನ್ನು ಇಷ್ಟಪಡುವ ಹುಡುಗ ಅವಳ ಅಣ್ಣ ವೀರಭದ್ರನ ಕೈಗೆ ಸಿಕ್ಕಿಬೀಳುವಲ್ಲಿಂದ ಕತೆ ಶುರು.
ಅಲ್ಲಿಂದ ಕಾಮಿಡಿ ಆಫ್ ಎರರ್ಸ್ ಥರ ಪಾತ್ರಗಳು ಮಿಸ್ಟೇಕುಗಳ ಕೈಗೆ ಸಿಕ್ಕು, ವಿಧಿ ಲಿಖಿತ ಎಷ್ಟು ಘೋರ ಅನ್ನುವಂತೆ ಕತೆ ಸಾಗುತ್ತದೆ. ಈ ಪಯಣದಲ್ಲಿ ಗಿರಿ, ಸಾಧು ಕೋಕಿಲ ಸಿಕ್ಕಿ ಒಂಚೂರು ನಗೆ ಮೂಡಿಸುತ್ತಾರೆ. ಉಳಿದಂತೆ ಕತೆ ಕೈ ಮೀರಿ ಚಿತ್ರಕತೆ ವಿಧಿಗೆ ಶರಣಾಗಿ ಪಯಣ ದೂರ ತೀರ ಯಾನದಂತೆ ಭಾಸವಾಗುತ್ತದೆ. ನಿರ್ದೇಶಕ ಗಿರಿರಾಜ್ ಈ ಚಿತ್ರದಲ್ಲಿ ಒಂದು ಪಾತ್ರವೂ ಮಾಡಿದ್ದಾರೆ. ಎಸ್‌ಇಝಡ್ ಹಳ್ಳಿಗೆ ಬರುತ್ತದೆ ಅನ್ನುವಾಗ ಪರಿಸ್ಥಿತಿಗೆ ಶರಣಾಗಿ ಬರಲಿ
ಬಿಡಿ ಅನ್ನುವ ಪಾತ್ರ ಅವರದು. ಈ ಸಿನಿಮಾ ನೋಡುವಾಗ ಚಿತ್ರದುದ್ದಕ್ಕೂ ಅವರು ಪರಿಸ್ಥಿತಿಗೆ ಶರಣಾಗಿರುವುದು ಖಾತ್ರಿಯಾಗುತ್ತದೆ. ಅವರ ಛಾಪು ಇಲ್ಲಿ ಮಸುಕಾದಂತೆ ಭಾಸವಾಗುತ್ತದೆ.
ಕಿಶೋರ್ ಘನತೆವೆತ್ತ ಪಾತ್ರಧಾರಿ. ಅವರ ಪಾತ್ರಕ್ಕೂ ನಟನೆಗೂ ಬೇರೆಯದೇ ತೂಕವಿದೆ. ಸಾಧು ಕೋಕಿಲ ಇಲ್ಲಿ ಒಂದು ಗಂಭೀರ ಪಾತ್ರ ಮಾಡಿದ್ದಾರೆ. ಅವರು ತೆರೆ ಮೇಲೆ ಬಂದಾಗ ಒಂದು ಲವಲವಿಕೆ ಇರುತ್ತದೆ. ಇನ್ನುಳಿದ ಪಾತ್ರಧಾರಿಗಳು ತಮ್ಮ ಶಕ್ತ್ಯಾನುಸಾರ ನಟಿಸಿ ಚಂದಗಾಣಿಸಿಕೊಟ್ಟಿದ್ದಾರೆ. ಬಾಲ್ಯ ಕಳೆದ ಊರು ನಮ್ಮ ಮನಸ್ಸಲ್ಲಿ ಯಾವತ್ತೂ ಸುಂದರವಾಗಿಯೇ ಇರುತ್ತದೆ. ಆದರೆ ಬಹಳ ವರ್ಷಗಳ ನಂತರ ಆ ಊರಿಗೆ ಭೇಟಿ ಕೊಟ್ಟರೆ ಇದ್ಯಾಕೋ ಸರಿ ಇಲ್ಲ ಅನ್ನಿಸಿ ಮನಸ್ಸು ಮಂಕಾಗುತ್ತದೆ. ಅದೇ ಥರ ಈ ಸಿನಿಮಾದ ಹೆಸರೂ ಮನಸ್ಸಲ್ಲೇ ಇದ್ದಿದ್ದರೆ ಚೆನ್ನಾಗಿತ್ತು.