ಚಿತ್ರ ವಿಮರ್ಶೆ: ಶಿವಾರ್ಜುನ
ಇದು ಪಕ್ಕಾ ಸಿದ್ಧ ಮಾದರಿ ಸಿನಿಮಾ. ನಾಲ್ಕು ಫೈಟು, ನಾಲ್ಕು ಸಾಂಗು, ಒಂದಷ್ಟುಸೆಂಟಿಮೆಂಟ್ ಡೈಲಾಗ್ಸು ; ಇವಿಷ್ಟುಇಟ್ಟುಕೊಂಡು ಸಿನಿಮಾ ಮಾಡಿದ್ರೆ ಪ್ರೇಕ್ಷಕರಿಗೆ ಇಷ್ಟುವಾಗುತ್ತೆ ಎನ್ನುವ ಆತ್ಮವಿಶ್ವಾಸದೊಂದಿಗೆ ಮಾಡಿದ ಚಿತ್ರ. ಹಾಗಾದ್ರೆ ಇವತ್ತಿನ ಟ್ರೆಂಡ್‌ಗೆ ಇಷ್ಟೇನಾ ಸಿನಿಮಾ ರಂಜನೆಯ ಸಿದ್ಧ ಸೂತ್ರ ? ಉತ್ತರಕ್ಕೆ ಇಲ್ಲಿ ಯಾವುದೇ ಲಾಜಿಕ್ ಇಲ್ಲ, ಮ್ಯಾಜಿಕ್ ಕೂಡ ಇಲ್ಲ. ಬದಲಿಗೆ ನಿರ್ದೇಶಕ ಶಿವತೇಜಸ್‌ಗೆ ಈಗ ಬದಲಾಗುವ ಕಾಲವಂತು ಹೌದು.
ದೇಶಾದ್ರಿ ಹೊಸ್ಮನೆ
ಒಂದೇ ಮಾತಿನಲ್ಲಿ ಹೇಳುವುದಾದರೆ ಇದು ರಾತ್ರಿ ಉಳಿದ ಅನ್ನಕ್ಕೆ ಬೆಳಗ್ಗೆ ಒಗ್ಗರಣೆ ಹಾಕಿದಂತಹ ಕಥಾ ಹಂದರದ ಚಿತ್ರ. ಕತೆಯ ವಿಶೇಷತೆ ಏನು ಅಂತ ಹುಡುಕಿಹೊರಟರೆ ಅದು ಮರುಳುಗಾಡಿನಲ್ಲಿ ನೀರಿಗಾಗಿ ಅಲೆದಂತೆ. ಆದರೂ, ಇಲ್ಲಿರುವ ಕತೆ ಹೀಗಿದೆ : ರಾಮದುರ್ಗ ಹಾಗೂ ರಾಯದುರ್ಗ ಹೆಸರಿನ ಎರಡು ಉರುಗಳು.ಎರಡು ಊರಿನ ನಡುವೆ ಒಂದು ಹೊಳೆಸಾಲು. ಆ ಊರುಗಳಲ್ಲಿ ರಾಯಪ್ಪ ಹಾಗೂ ರಾಮೇಗೌಡ ಎನ್ನುವ ಇಬ್ಬರು ಗೌಡರು. ರಾಮೇಗೌಡ ಸಂಭಾವಿತ. ರಾಯಪ್ಪ ಕಡು ಕೋಪಿಷ್ಟ. ಅವರ ನಡುವೆ ಹಳೇ ವೈಷಮ್ಯ. ಆ ದ್ವೇಷವನ್ನು ಹೋಗಲಾಡಿಸಿ, ಅವೆರೆಡು ಊರುಗಳ ಮಧ್ಯೆ ಶಾಂತಿ, ನೆಮ್ಮದಿ ಉಂಟು ಮಾಡಲು ಅವಧೂತನಂತೆ ಬರುವ ಒಬ್ಬ ನಾಯಕ. ಮುಂದಿನದು ಹೋರಾಟ, ಹೊಡೆದಾಟ, ಜತೆಗೆ ಮರಸುತ್ತವ ಒಂದು ಪ್ರೇಮಕತೆ.
ಕನ್ನಡ ಚಿತ್ರರಂಗಕ್ಕೆ ಇದು ಹಳಸಲು ಸರಕು. ಅಷ್ಟು-ಇಷ್ಟುಒಂದಷ್ಟುಚೇಂಜಸ್ ಇಟ್ಟುಕೊಂಡು ಬಂದು ಹೋದ ಸಿನಿಮಾಗಳದ್ದು ಇಲ್ಲಿ ದೊಡ್ಡಪಟ್ಟಿಯಿದೆ. ಈಗ ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ ಇದು. ಹೋಗಲಿ, ನಿರೂಪಣೆಯಾದರೂ ಚೆನ್ನಾಗಿದೆಯಾ ? ಆರಂಭದ ದೃಶ್ಯ ಮುಂದೇನೋ ಇದೆ ಅಂತ ಕುತೂಹಲ ಹುಟ್ಟಿಸಿತ್ತು. ಆದರೆ ಆನಂತರದ ಕತೆ ದಿಕ್ಕಾಪಾಲು. ಚಿತ್ರದ ಮೊದಲಾರ್ಧವೀಡಿ ಸಾಧುಗೆ ಮೀಸಲಾಗಿದೆ. ಅವರ ಡಬಲ್ ಮೀನಿಂಗ್ ಡೈಲಾಗು, ನಾಯಕಿ ಅಕ್ಷತಾ ಅವರ ಮಾದಕ ಮೈಮಾಟ ಸಿನಿಮಾವನ್ನೇ ಹಳ್ಳಿ ತಪ್ಪಿಸಿವೆ.
ಕಿಶೋರ್ ತಹಸೀಲ್ದಾರ್ ಆಗಿ ಬರುವ ಮೂಲಕ ದ್ವಿತೀಯಾರ್ಧದ ಕತೆಗೆ ಒಂದು ತಿರುವು ಸಿಗುತ್ತದೆ. ಅದು ಕೂಡ ಹೆಚ್ಚು ಹೊತ್ತು ಉಳಿಯುವುದಿಲ್ಲ. ಎರಡು ಊರಿನ ವೈಷಮ್ಯಕ್ಕೆ ತಿಲಾಂಜಲಿಯಿಟ್ಟು, ನಿಂತು ಹೋದ ಊರ ಜಾತ್ರೆ ನಡೆಸಲು ಮುಂದಾದ ತಹಸೀಲ್ದಾರ್‌ನನ್ನೇ ರಾಯಪ್ಪ ಕೊಲೆ ಮಾಡಿ ಬಿಸಾಕುತ್ತಾನೆ. ಇಲ್ಲಿ ಸರ್ಕಾರಿ ಅಧಿಕಾರಿಗಳ ಕೊಲೆ ಎನ್ನುವುದು ಕಳ್ಳೇಪುರಿ ತಿಂದಷ್ಟೇ ಸುಲಭ. ನಿರೂಪಣೆ ಶೈಲಿ, ಪಾತ್ರಗಳ ಸೃಷ್ಟಿಯಲ್ಲೆ ನಿರ್ದೇಶಕರ ಲೆಕ್ಕಚಾರ ಕೈ ತಪ್ಪಿದೆ. ಕೆಲವು ಪಾತ್ರಗಳು ಯಾಕೆ ಬಂದವು, ಎಲ್ಲಿ ಕಳೆದು ಹೋದವು ಎನ್ನುವುದೇ ಗೊತ್ತಾಗುವುದಿಲ್ಲ. ಅಷ್ಟಾಗಿಯೂ ಇದು ಆ್ಯಕ್ಷನ್ ಪ್ರಿಯರಿಗೆ ಇಷ್ಟವಾಗುವ ಸಿನಿಮಾ.
ನಾಯಕ ನಟ ಚಿರು ನಟನೆಗಿಂತ ಆ್ಯಕ್ಷನ್ ದೃಶ್ಯಗಳಲ್ಲೇ ಹೆಚ್ಚು ಇಷ್ಟವಾಗುತ್ತಾರೆ. ಹಳ್ಳಿ ಹುಡುಗಿಯಾಗಿ ಅಮೃತ ಐಯ್ಯಂಗಾರ್ ಲವಲವಿಕೆಯಲ್ಲಿ ನಟಿಸಿದ್ದಾರೆ. ತಾರಾ, ದಿನೇಶ್ ಮಂಗಳೂರು, ಅವಿನಾಶ್ ಅವರದ್ದು ಎಂದಿನಂತೆ ಅನುಭವದ ಪಕ್ವ ಅಭಿನಯ. ಹೊಸ ಪ್ರತಿಭೆ ಅಕ್ಷತಾ ತಮ್ಮ ನಟನೆಗಿಂತ ಗ್ಲಾಮರಸ್ ಲುಕ್ ಮೂಲಕವೇ ಮಾಸ್ ಆಡಿಯನ್ಸ್ ಹಾರ್ಟ್‌ಬಿಟ್ ಹೆಚ್ಚಿಸುತ್ತಾರೆ. ತಾರಾ ಪುತ್ರ ಶ್ರೀಕೃಷ್ಣನ ಮುದ್ದಾದ ನಟನೆ ಗಮನ ಸೆಳೆಯುತ್ತದೆ. ಸುರಾಗ್ ಸಂಗೀತ ಎರಡು ಹಾಡುಗಳಲ್ಲಿ ಇಷ್ಟವಾಗುತ್ತದೆ. ಉಳಿದ ತಾಂತ್ರಿಕತೆಯ ಬಗ್ಗೆ ಹೇಳದಿದ್ದರೆ ಉತ್ತಮ.
ತಾರಾಗಣ: ಚಿರಂಜೀವಿ ಸರ್ಜಾ, ಅಮೃತ ಐಯ್ಯಂಗಾರ್,ಅಕ್ಷತ ಶ್ರೀನಿವಾಸ್, ಕಿಶೋರ್, ತಾರಾ, ಅವಿನಾಶ್, ದಿನೇಶ್ ಮಂಗಳೂರು,ಸಾಧು ಕೋಕಿಲ
ನಿರ್ದೇಶನ :ಶಿವತೇಜಸ್
ನಿರ್ಮಾಣ: ಎಂ.ಬಿ. ಮಂಜುಳಾ ಶಿವಾರ್ಜುನ