ಚಿತ್ರ ವಿಮರ್ಶೆ: ರಾಮಾರ್ಜುನ
ಒಳ್ಳೆಯವರಿಗೆ ರಾಮನಂಥ ಹುಡುಗ. ತನ್ನವರಿಗೆ ಕಷ್ಟಅಂತ ಬಂದಾಗ ಯುದ್ಧ ಮಾಡಲು ಸೈ ಎನ್ನುವ ವ್ಯಕ್ತಿ. ಹೀಗೆ ಎರಡು ವ್ಯಕ್ತಿತ್ವಗಳ ‘ರಾಮಾರ್ಜುನ’ ಪಕ್ಕಾ ಮಾಸ್ ಮನರಂಜನೆಯ ಸಿನಿಮಾ ಎಂಬುದರಲ್ಲಿ ಅನುಮಾನವಿಲ್ಲ.
ಆರ್ ಕೇಶವಮೂರ್ತಿ
ಪ್ರೀತಿ-ಪ್ರೇಮ, ಸ್ನೇಹ, ಆ್ಯಕ್ಷನ್, ರಾಜಕೀಯದ ನಡುವೆಯೂ ನಿರ್ದೇಶಕ ಕಂ ನಾಯಕ ಆಗಿರುವ ಅನೀಶ್ ಈ ಚಿತ್ರದ ಮೂಲಕ ಹೊಸ ವಿಷಯ ಹೇಳಲು ಹೊರಟಿದ್ದಾರೆ. ಅದನ್ನು ನೀವು ಸಿನಿಮಾ ಪೂರ್ತಿ ನೋಡಿಯೇ ತಿಳಿಯಬೇಕು. ಇಲ್ಲಿ ಕ್ಲೈಮ್ಯಾಕ್ಸ್‌ಗೂ ಮುನ್ನ ಬರುವ ಒಂದು ದೃಶ್ಯ ಇದೆ. ಅದು ಡಾಕ್ಟರ್, ರೋಗಿ ಮತ್ತು ಮೆಡಿಸಿನ್ ಸುತ್ತ ಮಾತು. ಈ ದೃಶ್ಯ ನೋಡುತ್ತಿದ್ದಾಗ ಇಡೀ ಸಿನಿಮಾ ಪ್ರಸ್ತುತ ಘಟನೆಗಳಿಗೆ ಕನೆಕ್ಟ್ ಆಗುತ್ತದೆ.
ಲಾಕ್‌ಡೌನ್ ಕಷ್ಟದಲ್ಲಿರುವ ಬಡವರಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿರುವ ನಟ ಅನೀಶ್
ತಾರಾಗಾಣ: ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ರಂಗಾಯಣ ರಘು, ಶರತ್ ಲೋಹಿತಾಶ್ವ, ರವಿಕಾಳೆ, ಹರೀಶ್ ರಾಜ್, ಲಕ್ಷ್ಮಣ್, ಉಗ್ರಂ ಮಂಜು, ಅರುಣಾ ಬಾಲರಾಜ್, ಬಾಲರಾಜವಾಡಿ.
ನಿರ್ದೇಶನ: ಅನೀಶ್ ತೇಜೇಶ್ವರ್
ಛಾಯಾಗ್ರಾಹಣ: ನವೀನ್ ಕುಮಾರ್
ಸಂಗೀತ: ಆನಂದ್ ರಾಜವಿಕ್ರಮ್
ಚಿತ್ರದ ಮೊದಲ ಭಾಗ ತುಂಬಾ ಸರಳವಾಗಿ, ಮನರಂಜನೆಯ ಹಾದಿಯಲ್ಲೇ ಸಾಗುತ್ತದೆ. ಇನ್ನೇನೋ ಬೇಕು ಎನ್ನುವ ಹೊತ್ತಿಗೆ ಕತೆಯ ಅಸಲಿ ಆಟ ಶುರುವಾಗುತ್ತದೆ. ರಾಮ್ ಹೆಸರಿನ ನಾಯಕ ‘ರಾಮಾರ್ಜುನ’ ಎನ್ನುವ ಟೈಟಲ್‌ಗೆ ನ್ಯಾಯ ಸಲ್ಲಿಸುವ ಶಪಥ ತೊಡುತ್ತಾರೆ. ಅಲ್ಲಿಂದ ಮನರಂಜನೆ ಜತೆಗೆ ಆ್ಯಕ್ಷನ್ ಕೂಡ ಸೇರಿಕೊಂಡು ಮೈ ನವಿರೇಳಿಸುವ ಸಾಹಸ ದೃಶ್ಯಗಳಲ್ಲಿ ಅನೀಶ್, ನಿರೀಕ್ಷೆಗೂ ಮೀರಿ ಶ್ರಮ ಹಾಕಿರುವ ಸತ್ಯ ಪ್ರೇಕ್ಷಕನಿಗೆ ಗೊತ್ತಾಗುತ್ತದೆ. ಒಂದು ದೊಡ್ಡ ನಗರ. ಅದರ ಮಧ್ಯೆ ಬಡವರೇ ಹೆಚ್ಚಾಗಿ ಜೀವನ ಮಾಡುತ್ತಿರುವ ಕೊಳಚೆ ಪ್ರದೇಶ.
ತೀರಾ ಇಕ್ಕಾಟದ ಜಾಗದಲ್ಲಿ ನೂರಾರು ಕುಟುಂಬಗಳು ಜೀವಿಸುತ್ತಿವೆ. ಈ ಜಾಗದ ಮೇಲೆ ಉದ್ಯಮಿಯೊಬ್ಬನ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ ಜಾಗ ಕಬಳಿಸಬೇಕು. ಆದರೆ, ಅದಕ್ಕೆ ಅದೇ ಏರಿಯಾದಲ್ಲಿರುವ ಎಲ್‌ಐಸಿ ಏಜೆಂಟ್ ರಾಮ್, ಅಡ್ಡ ಇದ್ದಾನೆ. ಇವರಿಗೆ ರಾಜಣ್ಣ ಎನ್ನುವ ವ್ಯಕ್ತಿ ಬೆಂಬಲವಾಗಿ ನಿಂತಿದ್ದಾರೆ. ಜತೆಗೆ ಡಾಕ್ಟರ್ ರೂಪದಲ್ಲಿ ಮತ್ತೊಬ್ಬರು ಈ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಣ್ಣನ ಮಾತಿನ ಮೇರೆಗೆ ಇದೇ ಜನರ ಮತಗಳ ಮೇಲೆ ಗೆದ್ದ ಕೌನ್ಸಿಲರ್ ಇದ್ದಾನೆ. ಉದ್ಯಮಿ ಜತೆ ರಾಮ್, ಗುದ್ದಾಡುತ್ತಿರುವಾಗಲೇ ಅದೇ ಏರಿಯಾದಲ್ಲಿ 20 ಮಂದಿಯನ್ನು ಕ್ರೂರವಾಗಿ ಕೊಲೆ ಮಾಡುತ್ತಾರೆ.
ಪ್ರತಿಕಾರ ತೀರಿಸಿಕೊಳ್ಳಲು ಕೊಳಚೆ ಪ್ರದೇಶದ ಜನ ಉದ್ಯಮಿ ಮೇಲೆ ಮುಗಿಬೀಳುತ್ತಾರೆ. ಇಲ್ಲಿಂದ ಚಿತ್ರದಲ್ಲಿ ಮತ್ತೊಂದು ತಿರುವು ಎದುರಾಗಿ ಚಿತ್ರಕಥೆಯಲ್ಲಿ ಮತ್ತಷ್ಟುಕುತೂಹಲ ಮನೆ ಮಾಡುತ್ತದೆ. ಆ ಏರಿಯಾ ಮೇಲೆ ಯಾರ ಕಣ್ಣು ಬಿದ್ದಿದೆ, ರಾಜಣ್ಣ, ಡಾಕ್ಟರ್, ಕೌನ್ಸಿಲರ್ ಇವರಲ್ಲಿ ಯಾರು ವಿಲನ್‌ಗಳು ಎಂದು ಲೆಕ್ಕಾಚಾರ ಹಾಕುತ್ತಾ ಹೋಗುತ್ತಿರುವಂತೆ ಅಚ್ಚರಿಯಾಗಿ ಇನ್ನೊಂದು ವಿಷಯ ತೆರೆದುಕೊಳ್ಳುತ್ತದೆ. ಅದು ಮೆಡಿಕಲ್, ಮೆಡಿಸಿನ್ ಹಾಗೂ ಪ್ರಯೋಗ. ಸಿನಿಮಾ ನೋಡುವಾಗ ಪ್ರೇಕ್ಷಕ ಏನು ಅಂದಾಜು ಮಾಡುತ್ತಾನೋ ಅದಕ್ಕೆ ತದ್ವಿರುದ್ಧವಾಗಿಯೇ ಚಿತ್ರಕತೆ ಸಾಗುತ್ತದೆ. ಒಂದು ಕುತೂಹಲಕಾರಿ ಮತ್ತು ಈಗಿನ ಬೆಳವಣಿಗೆಗಳಿಗೆ ಕನೆಕ್ಟ್ ಆಗುವಂತಹ ಕತೆಯನ್ನು ಹೇಳಿರುವ ಅನೀಶ್, ಮೊದಲ ಹೆಜ್ಜೆಯಲ್ಲೇ ನಿರ್ದೇಶಕರಾಗಿ ಗೆದ್ದಿದ್ದಾರೆ. ಡ್ಯಾನ್ಸ್, ಫೈಟ್, ಮನರಂಜನೆಯಲ್ಲೂ ಅನೀಶ್ ಇಷ್ಟವಾಗುತ್ತಾರೆ. ಅನೀಶ್ ಅವರ ರಗ್‌್ಡ ಎಂಟ್ರಿಗೆ ಖಡಕ್ ಪಾತ್ರಗಳಿಂದ ಗಮನ ಸೆಳೆಯುವುದು ಹರೀಶ್ ರಾಜ್, ಶರತ್ ಲೋಹಿತಾಶ್ವ, ಬಾಲರಾಜವಾಡಿ, ಲಕ್ಷ್ಮಣ್.
ಬದುಕಿನ ದೊಡ್ಡ ಪರೀಕ್ಷೆ ರಾಮಾರ್ಜುನ: ಅನೀಶ್ ತೇಜೇಶ್ವರ್
ಪುನೀತ್ ರಾಜ್‌ಕುಮಾರ್ ಹಾಗೂ ವಸಿಷ್ಠ ಸಿಂಹ ಹಾಡಿರುವ ಹಾಡುಗಳ ಮೂಲಕ ಆನಂದ್ ರಾಜವಿಕ್ರಮ್ ಸಂಗೀತ ನೆನಪಿನಲ್ಲಿ ಉಳಿಯುತ್ತದೆ. ಇನ್ನೂ ನವೀನ್ ಕುಮಾರ್ ಕ್ಯಾಮೆರಾ ಹಾಗೂ ಹೇಮಂತ್ ಸಂಕಲನ ಚಿತ್ರದ ತಾಂತ್ರಿಕತೆಯ ಶ್ರೀಮಂತಿಕೆ ಹೆಚ್ಚಿಸಿದೆ. ನಿಶ್ವಿಕಾ ನಾಯ್ಡು ಅವರ ಮಾತು, ನಟನೆ ಅವರಷ್ಟೇ ನೋಡಲು ಚೆಂದ.