ಆರ್‌ ಕೇಶವಮೂರ್ತಿ

ವಿದ್ಯಾರ್ಥಿಗಳು ಹಾಗೂ ಅವರ ಸಾಧನೆಗಳನ್ನೇ ಪ್ರಧಾನವಾಗಿ ಎತ್ತಿ ಹಿಡಿಯುವ ಈ ಚಿತ್ರ, ನಾಯಕ- ನಾಯಕಿ ಹಾಗೂ ವಿಲನ್‌ ಎನ್ನುವ ರೆಗ್ಯುಲರ್‌ ಸೂತ್ರದ ಸುತ್ತ ತಿರುಗಲ್ಲ. ಹೇಳಿಕೊಳ್ಳುವಂತಹ ತಾಂತ್ರಿಕತೆಯ ನೈಪುಣ್ಯತೆ, ಚಿತ್ರಕಥೆ ಹಾಗೂ ಸಂಭಾಷಣೆಗಳು ಇಲ್ಲ. ಆದರೆ, ಜೀವನದಲ್ಲಿ ಸೋತ ಮಗಳನ್ನು ಗೆಲ್ಲಿಸುವ ಪಯಣದಲ್ಲಿ ತಂದೆಯೊಬ್ಬ ಮಾಡುವ ಕೆಲಸ ಮತ್ತು ಅದರಿಂದ ಆಗುವ ಅನಾಹುತಗಳು, ಇದರ ವಿರುದ್ಧ ಸಿಡಿದೇಳುವ ವಿದ್ಯಾರ್ಥಿಗಳು... ಇದು ಒಂದು ಸಾಲಿನ ಕತೆಯಾಗಿ ಚೆನ್ನಾಗಿದೆ. ಇದನ್ನು ತೆರೆ ಮೇಲೆ ಚಿತ್ರಕತೆಯಾಗಿಸಿ ಸಿನಿಮಾ ಮಾಡುವುದು ಎಂಥವರಿಗೂ ಕಷ್ಟವೇ.

ತಾರಾಗಣ: ಸ್ವಸ್ತಿಕಾ ಪೂಜಾರಿ, ಪ್ರಜ್ಞೇಶ್‌ ಶೆಟ್ಟಿ, ಶ್ರೀಧರ್‌, ಗೋವಿಂದೇಗೌಡ, ಸೂರ್ಯ ಕುಂದಾಪುರ, ಧೀರಜ್‌ ಮಂಗಳೂರು

ನಿರ್ದೇಶನ: ಸ್ಮಿತೇಶ್‌ ಎಸ್‌ ಬಾರ್ಯ

ನಿರ್ಮಾಣ: ಶಿವಕುಮಾರ್‌

ಛಾಯಾಗ್ರಾಹಣ: ಸಂತೋಷ್‌ ಆಚಾರ್ಯ ಗುಂಪಲಾಜೆ

ಸಂಗೀತ: ಮಾನಸ ಹೊಳ್ಳ

(ರೇಟಿಂಗ್‌ 3)

ಚಿತ್ರದ ಮೊದಲ ಭಾಗ ಕಾಲೇಜು, ವಿದ್ಯಾರ್ಥಿಗಳು, ಹಾಸ್ಯ ಹೀಗೆ ಸಾಗುತ್ತಲೇ ಸಾವು- ನೋವು, ಮಾಫಿಯಾ ತೆರೆದುಕೊಳ್ಳುತ್ತದೆ. ಆದರೆ, ಈ ಮಾಫಿಯಾಗೂ ಭಾವನಾತ್ಮಕ ನಂಟು ಇದೆ ಎನ್ನುವ ಸತ್ಯ ತಿಳಿಯುವಷ್ಟರಲ್ಲಿ ಸಿನಿಮಾ ಮುಕ್ತಾಯಗೊಳ್ಳುತ್ತದೆ. ಕನಸು ಹೆಸರಿನ ಪಾಲಿಟೆಕ್ನಿಕ್‌ ಕಾಲೇಜು ಇದೆ. ಹತ್ತಾರು ಕನಸುಗಳನ್ನು ಕಟ್ಟಿಕೊಂಡು ನೂರಾರು ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಓದುತ್ತಿದ್ದಾರೆ. ಈ ಕಾಲೇಜು ಜೀವನದಲ್ಲಿ ಸೋತ ಹುಡುಗಿಯ ಕನಸು. ಆದರೆ, ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಕಾಲೇಜಿನಿಂದ ಸಿಗುತ್ತಿರುವ ಸರ್ಟಿಫಿಕೆಟ್‌ಗಳಿಗೆ ಯಾವುದೇ ಬೆಲೆ ಇಲ್ಲ ಎಂದು ಗೊತ್ತಾಗುತ್ತದೆ. ಅಷ್ಟೊತ್ತಿಗೆ ಹಾಸ್ಟೆಲ್‌ನಲ್ಲಿ ಮೂರು ಕೊಲೆಗಳಾಗಿರುತ್ತವೆ. ಈ ಕೊಲೆಗಳಿಗೂ, ಫೇಕ್‌ ಸರ್ಟಿಫಿಕೆಟ್‌ಗೂ ಇರುವ ನಂಟು ಏನು ಎನ್ನುವ ಕುತೂಹಲ ಇದ್ದವರು ಸಿನಿಮಾ ನೋಡಬಹುದು.

ಚಿತ್ರ ವಿಮರ್ಶೆ: ಇನ್ಸ್‌ಪೆಕ್ಟರ್‌ ವಿಕ್ರಂ 

ನೆನಪಿಟ್ಟುಕೊಳ್ಳುವಂತಹ ದೃಶ್ಯಗಳು, ಅಚ್ಚುಕಟ್ಟಾದ ಚಿತ್ರಕಥೆ ಹಾಗೂ ಅದ್ಭುತ ಎನಿಸುವ ನಟನೆಯ ಚಿತ್ರ ಎಂಬ ನಿರೀಕ್ಷೆ ಇಟ್ಟುಕೊಂಡೇ ಸಿನಿಮಾ ನೋಡಬೇಕು ಅಂತೇನಿಲ್ಲ. ಶ್ರೀಧರ್‌, ಸ್ವಸ್ತಿಕಾ ಪೂಜಾರಿ ಹಾಗೂ ಹಾಸ್ಯ ಪಾತ್ರದಲ್ಲಿ ಗೋವಿಂದೇಗೌಡ ಚಿತ್ರದ ಕತೆಗೆ ಪೂರಕವಾಗಿ ಕಾಣಿಸಿಕೊಂಡು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.