ಚಿತ್ರ ವಿಮರ್ಶೆ : ಐ 1
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಟೈಟಲ್ ಎಷ್ಟುವಿಭಿನ್ನವೋ, ಅದರ ಕಥಾ ಹಂದರವೂ ಅಷ್ಟೇ ವಿಚಿತ್ರ. ಮೂವರು ಉದ್ಯಮಿಗಳ ಮಕ್ಕಳ ಅಪಹರಣ ಪ್ರಕರಣದ ಸುತ್ತಲ ಕತೆ ಇದು. ಆ ಕತೆ ನಡೆಯುವುದು ಮಣ್ಣಿನಾಳದಲ್ಲಿ ಹೂತಿಟ್ಟಒಂದು ಟೆಂಪೋ ಟ್ರಾಕ್ಸ್, ಮೂರು ಪಾತ್ರ, ಒಂದು ಸಿಸಿಟಿವಿ ಕ್ಯಾಮರಾ, ಹಾಗೆಯೇ ಮತ್ತೊಂದು ಸ್ಪೀಕರ್ ಮೊಬೈಲ್ ಫೋನ್‌ಗಳ ಮೂಲಕ. ಇವೆಲ್ಲ ನೋಡಿದರೆ ಎರಡು ಗಂಟೆಯ ಒಂದು ಸಿನಿಮಾವನ್ನು ಹೀಗೂ ಮಾಡುವುದಿಕ್ಕೆ ಸಾಧ್ಯವೇ ಎನ್ನುವ ಕುತೂಹಲದ ಪ್ರಶ್ನೆಗೆ ಉತ್ತರ ಎನ್ನುವ ಹಾಗೆ ಈ ಸಿನಿಮಾ ಮಾಡಿ ತೆರೆಗೆ ತಂದಿದ್ದಾರೆ ನಿರ್ದೇಶಕ ರಾಜ್ ಕುಮಾರ್.
ದೇಶಾದ್ರಿ ಹೊಸ್ಮನೆ
ನಿರ್ಮಾಣದ ಆ ಕತೆ ಇರಲಿ, ಸಿನಿಮಾದ ಕತೆ ಕೂಡ ಸಿಂಪಲ್. ಭ್ರಷ್ಟಾಚಾರದಿಂದ ಹಣ ಸಂಪಾದಿಸಿದ ಮೂವರು ಉದ್ಯಮಿಗಳ ಮಕ್ಕಳನ್ನು ಅಪಹರಿಸಿದ ಒಬ್ಬ ಅಪರಿಚಿತ ವ್ಯಕ್ತಿ, ಆ ಮೂವರನ್ನು 20 ಅಡಿ ಆಳದಲ್ಲಿ ಕೆಸರಿನಡಿ ಹೂತಿಟ್ಟಟೆಂಪೋ ಟ್ರಾಕ್ಸ್‌ನಲ್ಲಿ ಬಂಧಿಸಿಟ್ಟು ಶಿಕ್ಷಿಸಿರುತ್ತಾನೆ. ಆ ಮೂವರನ್ನು ಆತ ಯಾರೆ ಅಲ್ಲಿ ಬಂಧಿಸಿಟ್ಟ? ಅವರೇನು ತಪ್ಪು ಮಾಡಿದ್ದರು? ಆತನ ಬೇಡಿಕೆ ಏನು? ಇದಿಷ್ಟುಪ್ರಶ್ನೆಗಳಿಗೆ ಉತ್ತರ ಎಂಬಂತೆ ಸಾಗುತ್ತದೆ ಈ ಕತೆ. ಒಂದು ಆ್ಯಗಲ್‌ನಲ್ಲಿ ಈ ಕತೆ ನೋಡುಗರಿಗೆ ಹಿಂದಿಯ ‘ಎ ವೆಡ್ನೆಸ್ ಡೇ’ ಚಿತ್ರ ನೆನಪಿಸಿದರೂ ಅಚ್ಚರಿ ಇಲ್ಲ, ಹಾಗಂತ ಅದಕ್ಕೂ ಇದಕ್ಕೂ ಯಾವುದೇ ಹೋಲಿಕೆ ಇಲ್ಲ. ಜಾನರ್ ಒಂದೇ ಎನ್ನುವುದನ್ನು ಬಿಟ್ಟರೆ ಅದೇ ಬೇರೆ, ಇದೇ ಬೇರೆ.
ಈ ಚಿತ್ರದ ಕತೆಗೊಂದು ಆಶಯ ಇದೆ. ವ್ಯವಸ್ಥೆ ವಿರುದ್ದ ಸಿಡಿದೆದ್ದವರು ಕಾನೂನಿನ ಮೂಲಕ ನ್ಯಾಯ ಸಿಗದೇ ಇದ್ದಾಗ ಅನ್ಯ ಮಾರ್ಗದ ಮೂಲಕ ಸೇಡು ತೀರಿಸಿಕೊಳ್ಳುವ ಕಥಾ ಹಂದರ ಇಲ್ಲಿದೆ. ಅದನ್ನು ವಿಭಿನ್ನವಾಗಿಯೋ, ವಿಚಿತ್ರವಾಗಿಯೋ ತೋರಿಸುವ ನಿರ್ದೇಶಕ ಸಾಹಸವನ್ನು ತಡೆದುಕೊಳ್ಳುವುದಕ್ಕೂ ಪ್ರೇಕ್ಷಕರಿಗೆ ಎಂಟೆದೆ ಬೇಕು. ನಿಂತಲ್ಲೇ ನಿಲ್ಲುವ ಕತೆ, ಮೂರೇ ಪಾತ್ರ, ಒಂದೇ ಲೊಕೇಷನ್ಸ್, ಕ್ಯಾಮರಾದ ಅದೇ ಆ್ಯಗಲ್ ಮತ್ತೆ ಮತ್ತೆ ಕಂಡಾಗ ಆಗುವ ಕಿರಿ ಕಿರಿ ತಡೆದುಕೊಳ್ಳುವುದಕ್ಕೂ ಶಕ್ತಿಬೇಕು, ತಾಳ್ಮೆಯೂ ಇರಬೇಕು. ಅವೆಲ್ಲ ನಿಮ್ಮಲ್ಲಿದ್ದರೆ ಈ ಸಿನಿಮಾ ನಿಮ್ಮನ್ನು ರಂಜಿಸಿಬಲ್ಲದು.
ಚಿತ್ರದಲ್ಲಿ ಕಿಡ್ನಾಪ್ ಆದ ಮೂವರು ಉದ್ಯಮಿಗಳ ಮಕ್ಕಳಾಗಿ ಕಿಶೋರ್, ಧೀರಜ್ ಹಾಗೂ ರಂಜನ್ ಅಭಿನಯಿಸಿದ್ದಾರೆ. ಆ ಪಾತ್ರಗಳಿಗೆ ಅವರು ನ್ಯಾಯ ಒದಗಿಸಿದ್ದಾರೆನ್ನುವ ಸಮಾಧಾನ ಇದ್ದರೂ,ಒಮ್ಮೊಮ್ಮೆ ಅತೀಯಾಗಿ ಅಬ್ಬರಿಸುವ ಅವರ ಹಾವ ಭಾವಗಳು ಸಹಿಸಿಕೊಳ್ಳುವುದೇ ಕಷ್ಟಎನಿಸುತ್ತದೆ. ಒಂದು ಟಿಟಿ ಒಳಗಡೆ ಸೆರೆ ಸಿಕ್ಕ ಇಡೀ ಸಿನಿಮಾದ ಚಿತ್ರಣವನ್ನು ಛಾಯಾಗ್ರಾಹಕ ಷಿನೋಬ್ ಟಿ ಚಾಕೋ ಸವಾಲಿನ ಹಾಗೆ ಸೆರೆ ಹಿಡಿದ್ದಾರೆ. ಹಾಗೆ ನೋಡಿದರೆ ಹೆಚ್ತೇ ಬೋರ್ ಎನಿಸುವ ಎರಡು ಗಂಟೆಗಳ ಈ ಸಿನಿಮಾದ ಪಯಣವನ್ನು ಒಂದಷ್ಟುಉಲ್ಲಾಸದಾಯಕ ಎನಿಸುವಂತೆ ಮಾಡುವುದು ಚಿತ್ರಕ್ಕೆ ಬಳಸಿಕೊಂಡ ಜಾನಪದ ಹಾಡು. ಅದೇ ಕಾರಣಕ್ಕೆ ಸಿನಿಮಾ ಕಷ್ಟವಾದರೂ, ನೋಡಿಸಿಕೊಂಡು ಹೋಗುತ್ತದೆ.