ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿಯೇ ಹಾಡುಗಳಿರುವ ಇಂಗ್ಲೀಷ್ ಸಿನಿಮಾದಂತೆ ಚಿತ್ರವೊಂದನ್ನು ರಚಿಸಿದಂತಹ ಖ್ಯಾತಿ ಪುಟ್ಟಣ್ಣ ಕಣಗಾಲ್‌ಗೆ ಸಲ್ಲುತ್ತದೆ. ಈಗಲೂ ಯೂಟೂಬ್‌ನಲ್ಲಿ ಲಭ್ಯವಿರುವ ಈ ಸಿನಿಮಾ ನೋಡಿದ ವೀಕ್ಷಕ ಮಯೂರ ಅವರು ಸಿನಿಮಾ ವಿಮರ್ಶೆ ಮಾಡಿ 10ಕ್ಕೆ ಭರ್ಜರಿ 9.2 ರೇಟಿಂಗ್ ಕೊಟ್ಟಿದ್ದಾರೆ. ಯಾವುದು ಸಿನಿಮಾ? ಏನು ಕಥೆ? ಇಲ್ಲಿದೆ ವಿವರ.

ಹಾಡುಗಳಿರುವ ಇಂಗ್ಲಿಷ್ ಚಿತ್ರದಂತೆ ಮೂಡಿಬಂದಿರುವ ಎಸ್.ಆರ್. ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ 'ಮಾನಸ ಸರೋವರ' (Manasa Sarovara) ಅಂತರರಾಷ್ಟ್ರೀಯ ಗುಣಮಟ್ಟದ ಅತ್ಯುತ್ತಮ ಚಲನಚಿತ್ರವಾಗಿದೆ. ದೃಶ್ಯಕಾವ್ಯದಂತಹ ಈ ಚಿತ್ರದ ಕಥೆ, ಪಾತ್ರವರ್ಗ ಮತ್ತು ನಿರ್ದೇಶನದ ಬಗ್ಗೆ ಇಲ್ಲಿದೆ ನೆಟ್ಟಿಗ ಮಯೂರ ಅವರ ವಿವರವಾದ ವಿಮರ್ಶೆ.

ಚಿತ್ರದ ಕಥಾಸಾರಾಂಶ:

ಡಾ. ಆನಂದ್ ಒಬ್ಬ ವಿವಾಹಿತ ಮನೋವೈದ್ಯ. ತನ್ನ ದಾಂಪತ್ಯದಲ್ಲಿ ಸುಖವೂ ಶಾಂತಿಯೂ ಇಲ್ಲವೆಂದು ಅರಿತು, ಜಂಜಾಟದ ಬದುಕನ್ನು ತೊರೆಯಲು ನಿರ್ಧರಿಸುತ್ತಾನೆ. ಮಾನಸಿಕ ನೆಮ್ಮದಿಗಾಗಿ ಹಳ್ಳಿಗೆ ಮರಳುವ ದಾರಿಯಲ್ಲಿ ಅವನಿಗೆ ವಾಸಂತಿ ಎಂಬ ಯುವತಿ ಸಿಗುತ್ತಾಳೆ. ಕಣ್ಣಿಗೆ ಬಿದ್ದ ಪ್ರತಿ ಯುವಕನಿಗೂ ಕಲ್ಲು ಹೊಡೆದು ಬೆದರಿಸುವ ಹುಚ್ಚಿ ಅವಳು.

ಮನೋವೈದ್ಯನಾದ ಆನಂದ್ ಅವಳ ಸಮಸ್ಯೆಗೆ ಕಾರಣ ತಿಳಿದು, ಅವಳನ್ನು ತನ್ನ ಆರೈಕೆಗೆ ತೆಗೆದುಕೊಂಡು ಗುಣಪಡಿಸುವ ರಿಸ್ಕ್ ತೆಗೆದುಕೊಳ್ಳುತ್ತಾನೆ. ವಾಸಂತಿ ಚೇತರಿಸಿಕೊಳ್ಳುತ್ತಿದ್ದಂತೆ ಗುರು–ಶಿಷ್ಯೆ, ವೈದ್ಯ–ರೋಗಿಯ ನಡುವೆ ಅಪೂರ್ವ ಬಾಂಧವ್ಯ ಬೆಳೆಯುತ್ತದೆ. ನಂತರ ಆನಂದ್ ಮದುವೆಯ ಪ್ರಸ್ತಾಪ ಇಡುತ್ತಾನೆ. ದೆಹಲಿ ಸಮ್ಮೇಳನದಿಂದ ಹಿಂತಿರುಗಿದ ನಂತರ ಮದುವೆಯಾಗಲು ನಿರ್ಧರಿಸುತ್ತಾರೆ. ಇದರ ಮುಂದಿನ ತಿರುವುಗಳೇನು ಎಂಬುದನ್ನು ತೆರೆಯ ಮೇಲೆ ಕಣ್ಣುಂಬಿ ನೋಡಬೇಕು.

ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನ ಮತ್ತು ಚಿತ್ರಕಥೆ:

ಈ ಚಿತ್ರವು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಹಾಗೂ ಹಿರಿಯ ನಟಿ ಆರತಿ ಅವರ ನಡುವಿನ ಪ್ರೇಮಕಥೆಯನ್ನು ಆಧರಿಸಿದೆ ಎಂಬ ಗಾಸಿಪ್‌ಗಳಿದ್ದರೂ, ಚಿತ್ರದ ಚಿತ್ರಕಥೆ ಮಾತ್ರ ಅಷ್ಟು ಸುಲಭವಾಗಿ ಯಾರನ್ನೂ ಲಘುವಾಗಿ ಯೋಚಿಸಲು ಬಿಡುವುದಿಲ್ಲ. ವಾಸಂತಿ ಆನಂದ್‌ನೊಂದಿಗಿನ ತನ್ನ ಸಂಬಂಧವನ್ನು ಯಾರೊಂದಿಗೂ ಬಹಿರಂಗಪಡಿಸುವುದಿಲ್ಲ. ಈ ನೋವು ಪ್ರೇಕ್ಷಕರ ಮನಸ್ಸನ್ನು ಕಾಡುತ್ತದೆ. ಅದಕ್ಕಾಗಿಯೇ 'ನೀನೇ ಸಾಕಿದ ಗಿಣಿ' ಹಾಡು ಅಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯವಾಯಿತು. ಡಾ. ಜಿ.ಎಸ್. ಶಿವರುದ್ರಪ್ಪನವರ 'ವೇದಾಂತಿ ಹೇಳಿದನು' ಹಾಡು ಕೂಡ ಅತ್ಯಂತ ಅರ್ಥಪೂರ್ಣವಾಗಿದೆ. ಕಥೆಗೆ ತಕ್ಕಂತೆ ಹಾಡುಗಳು ಮತ್ತು ಅನಗತ್ಯ ದೃಶ್ಯಗಳಿಲ್ಲದೆ ವೇಗವಾಗಿ ಸಾಗುವ ಚಿತ್ರಕಥೆ ಚಿತ್ರದ ಮೌಲ್ಯವನ್ನು ಹೆಚ್ಚಿಸುತ್ತದೆ.

ಅಭಿನಯ ಮತ್ತು ಸಂಭಾಷಣೆ:

ವಾಸಂತಿಯ ಪಾತ್ರದಲ್ಲಿ ಪದ್ಮ ವಾಸಂತಿ ಅವರ ಜೀವಂತ ಅಭಿನಯವು ಪ್ರೇಕ್ಷಕರ ಮನಸೂರೆಗೊಳ್ಳುತ್ತದೆ. ಈ ಚಿತ್ರದ ಅದ್ಭುತ ನಟನೆಗಾಗಿ ಪದ್ಮ ವಾಸಂತಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಇನ್ನು ಟಿ.ಎನ್. ಸೀತಾರಾಮ್ ಅವರ ಜೀವಂತ ಹಾಗೂ ಶುದ್ಧ ಕನ್ನಡ ಸಂಭಾಷಣೆಗಳು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಸಿನಿಮಾ ಬಿಡುಗಡೆಯಾದಾಗ ಸಾಧಾರಣ ಪ್ರದರ್ಶನ ಕಂಡಿದ್ದರೂ, ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಹೆಚ್ಚಿನ ಯಶಸ್ಸಿಗೆ ಅರ್ಹವಾಗಿತ್ತು. ಜನರ ಗಾಸಿಪ್ ಮಾತುಗಳನ್ನು ಬದಿಗೊತ್ತಿ, ಒಮ್ಮೆ ತಾಜಾ ಮನಸ್ಸಿನಿಂದ ನೋಡಲೇಬೇಕಾದ ಸಿನಿಮಾ 'ಮಾನಸ ಸರೋವರ'.