ಶ್ರೀಮನ್ನಾರಾಯಣನ ಹತ್ತು ಅವತಾರಗಳು;ರಕ್ಷಿತ್ ಶೆಟ್ಟಿ ಸಂದರ್ಶನ!
ಒಂದೇ ಒಂದು ರೂಪಾಯಿ ಇಲ್ಲದೆ ಕಿರು ಚಿತ್ರ ಮಾಡಿದೆ. ನಂತರ ಒಂದು ಸಾವಿರ ರೂಪಾಯಿ ಖರ್ಚು ಮಾಡಿ ಒಂದು ಕಿರುಚಿತ್ರ ಮಾಡಿದೆ. ಇದಕ್ಕೂ ಮೊದಲು ಕೈ ತುಂಬಾ ಸಂಬಳ ಕೊಡುವ ಉದ್ಯೋಗ ನನ್ನ ಹುಡುಕಿಕೊಂಡು ಬಂತು. ಸಾಫ್ಟ್‌ವೇರ್ ಉದ್ಯೋಗ ಬಿಟ್ಟು ಬಂದೆ. ನನ್ನ ಹಾಗೆ ಕನಸು ಕಂಡ ಹುಡುಗರನ್ನ ತಂಡ ಮಾಡಿಕೊಂಡೆ...
ಆರ್. ಕೇಶವಮೂರ್ತಿ
ಈ ಚಿತ್ರ ಶುರುವಾಗುವ ಮುನ್ನ ನಿಮಗೆ ಸವಾಲಾಗಿ ಅನಿಸಿದ್ದೇನು?
ಸಾಹಸ ಸನ್ನಿವೇಶಗಳು. ಯಾಕೆಂದರೆ ನಾನು ಇದುವರೆಗೂ ಫೈಟ್ ಮಾಡಿಲ್ಲ. ಆದರೆ, ಈ ಚಿತ್ರಕ್ಕಾಗಿ ನಾನು ತೆರೆ ಮೇಲೆ ಫೈಟ್ ಮಾಡಬೇಕು ಎಂದಾಗ ಕೊಂಚ ಯೋಚಿಸಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳಿವೆ. ಐದು ಫೈಟ್‌ಗಳನ್ನು ಸಾಹಸ ನಿರ್ದೇಶಕ ವಿಕ್ರಮ್ ಅವರು ಕಂಪೋಸ್ ಮಾಡಿದ್ದಾರೆ. ಕಾಮಿಡಿ, ಫ್ಯಾಂಟಸಿ, ಅಡ್ವೆಂಚರ್ ಹೀಗೆ ಬೇರೆ ರೀತಿಯ ಫೈಟ್‌ಗಳಿರುತ್ತವೆ ಎಂಬುದನ್ನು ಚಿತ್ರಕತೆ ಸಿದ್ಧವಾದಾಗಲೇ ಗೊತ್ತಾಯಿತು. ಆದರೆ, ಹೇಗೆ ತೆರೆ ಮೇಲೆ ತರುವುದು ಎನ್ನುವ ಯೋಚನೆ ಹುಟ್ಟಿಕೊಂಡಿತು. ಸಿನಿಮಾ ಶುರುವಾದ ಮೇಲೆ ಸವಾಲು ನನಗೆ ಇಷ್ಟವಾಯಿತು.
ಹಾಗಾದರೆ ಸಾಹಸ ಸನ್ನಿವೇಶಗಳಿಗೆ ತಯಾರಿ ಹೇಗಿತ್ತು?
ಫೈಟ್ ಮಾಸ್ಟರ್ ವಿಕ್ರಮ್ ಅವರಿಗೆ ದೊಡ್ಡ ಹೆಸರಿದೆ. ಅವರ ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಮಾಡಬೇಕು ಎನ್ನುವ ಯೋಚನೆ ನನ್ನ ತಯಾರಿಗೆ ಅಣಿ ಮಾಡಿತು. ಚಿಕ್ಕಂದಿನಲ್ಲೇ ನಾನು ಕಲಿತಿದ್ದ ಕರಾಟೆ ಹಾಗೂ ಸ್ಪೋರ್ಟ್ಸ್ ನನ್ನ ಫೈಟ್ ಸಾಹಸಗಳಿವೆ ನೆರವಾಯಿತು. ಆ್ಯಕ್ಷನ್ ಸನ್ನಿವೇಶಗಳನ್ನು ಶೂಟ್ ಮಾಡಿಕೊಳ್ಳುವ ಎರಡು ದಿನ ಮೊದಲೇ ಅಭ್ಯಾಸ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದೆ.
ಕನ್ನಡ ಸಿನಿಮಾ ಮಾಡುವುದು ಅಪ್ಪನ ಆಸೆಯೂ ಆಗಿತ್ತು: ಧನ್ಯಾ ಬಾಲಕೃಷ್ಣನ್
ಯಾವ ನಂಬಿಕೆ ಮೇಲೆ ಹೊಸ ನಿರ್ದೇಶಕನಿಗೆ ಇಷ್ಟುದೊಡ್ಡ ಜವಾಬ್ದಾರಿ ಕೊಟ್ಟಿದ್ದು?
ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ದೇಶಕ ಸಚಿನ್ ಹೊಸಬರು. ಅವರಿಗೆ ಇದು ಮೊದಲ ಸಿನಿಮಾ ಹೌದು. ಆದರೆ, ಸಚಿನ್ ನನಗೆ ಅಪರಿಚಿತನಲ್ಲ. ಚಿತ್ರರಂಗಕ್ಕೆ ಹೊಸಬನಲ್ಲ. ಆತ ಒಬ್ಬ ಅದ್ಭುತ ತಂತ್ರಜ್ಞ. ಸಿನಿಮಾ ಕೆಲಸಗಳು ಅವನಿಗೆ ಹೊಸದಲ್ಲ. ಚಿತ್ರದ ಪ್ರತಿಯೊಂದು ವಿಭಾಗವೂ ಗೊತ್ತಿದೆ. ನನ್ನ ಜತೆಗೆ ಎಲ್ಲ ಸಿನಿಮಾಗಳಿಗೂ ಕೆಲಸ ಮಾಡಿದ್ದಾನೆ. ಅಲ್ಲದೆ ಎಡಿಟರ್, ವಿಎಫ್‌ಎಕ್ಸ್ ಹಾಗೂ ಬರವಣಿಗೆ ಗೊತ್ತಿರುವ ವ್ಯಕ್ತಿ. ಹೀಗಾಗಿ ನನಗೆ ಸಚಿನ್, ಇಷ್ಟುದೊಡ್ಡ ಸಿನಿಮಾ ನಿರ್ದೇಶನಕ್ಕೆ ಸೂಕ್ತ ಆಯ್ಕೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.
ನಿಮ್ಮ ಸಿನಿಮಾ ಹಾಗೂ ನಿಮ್ಮ ನಟನೆಯ ಶಕ್ತಿ ಏನು?
ಬರವಣಿಗೆ, ಓದು ಮತ್ತು ಅಧ್ಯಯನ. ಇದೇ ನನ್ನ ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ಸಿನಿಮಾ ಅನ್ನುವುದು ಒಬ್ಬನೇ ಕೂತಾಗ ಆಗುವ ಕೆಲಸವಲ್ಲ. ಹತ್ತಾರು ಮಂದಿ ಜತೆಯಾಗಬೇಕು. ಎಲ್ಲರ ಕ್ರಿಯೇಟಿವ್ ಇಲ್ಲಿ ತೆರೆದುಕೊಳ್ಳಬೇಕು. ಬರವಣಿಗೆ- ಕತೆ ನಂಬಿಕೊಂಡು ಸಿನಿಮಾಗಳು ಸೋತಿಲ್ಲ. ನನ್ನೂ ಒಳಗೊಂಡಂತೆ ನನ್ನ ರೈಟಿಂಗ್ ಟೀಮು ದಿ ಬ್ರೈನ್ ಬಿಹೈಂಡ್ ಅವನೇ ಶ್ರೀಮನ್ನಾರಾಯಣ. ಅನಿರುದ್ಧ ಕೊಡಗಿ, ಅಭಿಜಿತ್ ಮಹೇಶ್, ಚಂದ್ರಜಿತ್, ನಾಗರ್ಜುನ್, ಸಚಿನ್, ಅಭಿಲಾಷ್ ಇವರೇ ನಮ್ಮ ರೈಟಿಂಗ್ ತಂಡ.
ಇಂದು ದರ್ಶನೋತ್ಸವ;ಒಡೆಯ ಪಕ್ಕಾ ಕಮರ್ಷಿಯಲ್ ಸಿನಿಮಾ!
ಈ ಸಿನಿಮಾ ನಿಮಗೆ ಕಲಿಸಿದ್ದೇನು?
ಕನ್ನಡದ ಹೊರತಾಗಿಯೂ ಭಾರತದ ಸಿನಿಮಾ ಮಾರುಕಟ್ಟೆ, ವ್ಯಾಕರಣ ಮತ್ತಷ್ಟುಕಲಿತುಕೊಂಡೆ. ಮೂರು ವರ್ಷ ಇದೊಂದೇ ಸಿನಿಮಾ ಮೇಲೆ ಕೆಲಸ ಮಾಡಿರಬಹುದು. ಆದರೆ, ಮೂವತ್ತು ವರ್ಷಕ್ಕೆ ಆಗುವಷ್ಟುಪಾಠಗಳು, ನೆನಪುಗಳು ಈ ಸಿನಿಮಾದಿಂದ ಸಿಕ್ಕಿವೆ. 20- 30 ವರ್ಷಗಳ ನಂತರ ನನ್ನ ಚಿತ್ರವನ್ನು ನಾನೇ ನೋಡಿಕೊಂಡಾಗ ಹೆಮ್ಮೆ ಮೂಡಿಸಬೇಕು ಅಂಥ ಸಿನಿಮಾಗಳನ್ನು ಮಾಡಬೇಕೆಂಬ ಹಠವನ್ನು ಈ ಚಿತ್ರದಿಂದ ಕಲಿತೆ. ಇದರ ಹೊರತಾಗಿಯೂ ಈ ಸಿನಿಮಾ ಕಲಿಸಿದ ಫೀಲಿಂಗ್ ಮಾತಿನಲ್ಲಿ ಹೇಳಲಾಗದು.
ಒಂದು ದೊಡ್ಡ ಯಶಸ್ಸಿನ ನಂತರವೂ ಒಂದೇ ಚಿತ್ರಕ್ಕೆ ಮೂರು ವರ್ಷ ವ್ಯಯಿಸಬೇಕಿತ್ತೇ?
ಹೊರಗೆ ನಿಂತು ನೋಡಿದಾಗ ನಿಮಗೆ ಮೂರು- ನಾಲ್ಕು ವರ್ಷ ಅನಿಸುತ್ತದೆ. ನನಗೆ ಯಾವತ್ತೂ ಹಾಗೆ ಅನಿಸಲಿಲ್ಲ. ಯಾಕೆಂದರೆ ನಾನು ಕಂಡ ಕನಸು ಇದು. ಯಾರದ್ದೇ ಪ್ರೇರಣೆ, ಸ್ಫೂರ್ತಿಯಿಂದ ಕಂಡಿದ್ದಲ್ಲ. ಹೀಗಾಗಿ ಎಷ್ಟೇ ವರ್ಷವಾದರೂ ನಾನೇ ಸಾಕಿ, ಬೆಳೆಸಬೇಕು. ನನ್ನ ಕನಸನ್ನು ಬೇರೆಯವರು ನೋಡಿದಾಗ ತುಂಬಾ ಮುದ್ದಾಗಿ ಕಾಣಬೇಕು. ಅದಕ್ಕೆ ಸಮಯ ಹಿಡಿದಿರಬಹುದು. ಅಲ್ಲದೆ ‘ಕಿರಿಕ್ ಪಾರ್ಟಿ’ ಚಿತ್ರದ ನಂತರ ನನಗೆ ತುಂಬಾ ಅವಕಾಶಗಳು ಬಂದವು. ಆದರೆ, ನನ್ನ ಒಂದಕ್ಕೆ ಬ್ರಾಂಡ್ ಮಾಡುವ ಅಥವಾ ನಾನೇ ಮಾಡಿಕೊಳ್ಳುವ ಅಪಾಯವಿತ್ತು. ಅದು ಬೇಡ ಅಂದುಕೊಂಡೆ. ಇನ್ನೂ ಸೇಫ್ ಜೋನ್‌ನಿಂದ ಆಚೆ ಬಂದು ಸಾಹಸ ಮಾಡುವ ಪ್ರವೃತ್ತಿ ನನ್ನದು. ಅಂಥ ಸಾಹಸವನ್ನು ಪ್ರೀತಿಯಿಂದ ಮೂರು ವರ್ಷ ಮಾಡಿದ್ದರ ಫಲವೇ ಈ ‘ಅವನೇ ಶ್ರೀಮನ್ನಾರಾಯಣ’ ಚಿತ್ರ.
ಸಿನಿಮಾ ಬಿಡುಗಡೆಯ ಹೊತ್ತಿನಲ್ಲಿರುವಾಗ ನಿಮ್ಮ ಪಾತ್ರಗಳ ಬಗ್ಗೆ ಹೇಳುವುದಾದರೆ?
ನಾನು ಪೋಲೀಸ್. ಡಮ್ಮಿ ಪೊಲೀಸ್ ಅಂತೂ ಅಲ್ಲ. ಹೆಸರು ನಾರಾಯಣ. ನನಗಾಗಿ ಯಾರಾರಯರೋ ಕಾಯುತ್ತಿದ್ದಾರೆ. ಅವನು ಬಂದೇ ಬರುತ್ತಾನೆ ಅಂತ. ಹಾಗೆ ಯಾಕೆ ಕಾಯುತ್ತಾರೆ ಎಂಬುದು ಸಿನಿಮಾ. ಇನ್ನೂ ನಾಯಕಿ ಪತ್ರಕರ್ತೆ. ಆಕೆಯೂ ನನ್ನ ವಿರುದ್ಧವೇ ಯಾಕೆ, ಇದೇ ಸಿನಿಮಾ.
ಅವನೇ ಶ್ರೀಮನ್ನಾರಾಯಣ, ಕನ್ನಡದ ಶೋಲೆನಾ?
ಶೋಲೆ ಸಿನಿಮಾ ಬಗ್ಗೆ ನಿಮಗೆ ಗೊತ್ತಿದೆ. ಭಾರತೀಯ ಚಿತ್ರರಂಗದ ಕ್ಲಾಸಿಕ್ ಸಿನಿಮಾ. ಆದರೂ ಎಲ್ಲ ವರ್ಗದವರು ಸ್ವೀಕರಿಸಿದ ಸಿನಿಮಾ. ಅಂಥ ಸಿನಿಮಾ ಸಿನಿಮಾದ ಜತೆ ನಮ್ಮ ಶ್ರೀಮನ್ನಾರಾಯಣ ಚಿತ್ರವನ್ನು ನಿಲ್ಲಿಸುತ್ತಿದ್ದಾರೆ ಅಂದರೆ ಅದು ಕನ್ನಡದ ನಟನಾಗಿ, ಕನ್ನಡದ ಸಿನಿಮಾದವನಾಗಿ ನಾನು ಹೆಮ್ಮೆ ಪಡುತ್ತೇನೆ. ಆದರೆ, ಇದು ಆ ಶೋಲೆ ಥರನಾ ಅಂದರೆ ಅಂದು ಸಿನಿಮಾ ನೋಡುವ ಪ್ರೇಕ್ಷಕರಿಗೆ ಬಿಟ್ಟಿದ್ದು.
ಈ ಚಿತ್ರದ ಪ್ರಚಾರದ ಭಾಗವಾಗಿ ಬೇರೆ ರಾಜ್ಯಗಳಿಗೆ ಹೋದಾಗ ರಶ್ಮಿಕಾ ಮಂದಣ್ಣ ಸುತ್ತ ಪ್ರಶ್ನೆ ಬಂದಾಗ ನಿಮಗೇ ಏನನಿಸಿತು?
ಖಂಡಿತ ನನಗೆ ಏನೂ ಅನಿಸಿಲ್ಲ. ಬೇರೆ ರಾಜ್ಯಗಳಲ್ಲಿ ಮಾತ್ರವಲ್ಲ, ಕನ್ನಡದಲ್ಲೂ ಹಲವು ಪತ್ರಕರ್ತರು ಈ ಪ್ರಶ್ನೆ ಕೇಳಿದ್ದಾರೆ. ರಶ್ಮಿಕಾ ಮತ್ತು ನಿಮ್ಮದು ಮುಗಿದ ಅಧ್ಯಾಯನಾ? ನಿಮ್ಮ ಬೆಸ್ಟ್ ಕೋ ಸ್ಟಾರ್ ರಶ್ಮಿಕಾ ಅಥವಾ ಶಾನ್ವಿನಾ?... ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ವೈಯಕ್ತಿಕ ಜೀವದಲ್ಲಿ ನಾವು ಏನೇ ಆಗಿರಬಹುದು. ಆದರೆ, ರಶ್ಮಿಕಾ ಕೂಡ ಒಳ್ಳೆಯ ನಟಿ. ಹೀಗಾಗಿ ನಾನು ನಟನಾಗಿಯೇ ಉತ್ತರಿಸಿದ್ದೇನೆ. ಇದರಲ್ಲಿ ಮುಜುಗರ, ಬೇಸರ ಪಟ್ಟುಕೊಳ್ಳುವಂತದ್ದೇನು ಇಲ್ಲ.
ದರ್ಶನ್ ಬಗ್ಗೆ ಈ ರೀತಿ ಹೇಳಿದ್ರಾ 'ಒಡೆಯ' ನಟಿ?
ಒಬ್ಬ ನಟರಾಗಿ ಬೇರೆಯ ಭಾಷೆಗಳಿಗೆ ಹೋದಾಗ ನೀವು ಕಂಡಿದ್ದೇನು?
ಸಿನಿಮಾ ಮಾಧ್ಯಮಕ್ಕೆ ಭಾಷೆಯ ಬೇಲಿ ಇಲ್ಲ. ಒಳ್ಳೆಯ ಸಿನಿಮಾಗಳನ್ನ ಪ್ರೀತಿಸುವ ಮತ್ತು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಒಂದು ದೊಡ್ಡ ಪ್ರೇಕ್ಷಕ ಸಮೂಹ ಎಲ್ಲ ಭಾಷೆಗಳಲ್ಲೂ ಇದ್ದಾರೆ. ನಾವು ಬೇರೆ ಬೇರೆ ರಾಜ್ಯಗಳಿಗೆ ಭೇಟಿ ಕೊಟ್ಟಾಗ ಅಲ್ಲಿನವರು ನಮ್ಮನ್ನು ಮಾತನಾಡಿಸಲಿಕ್ಕೆ ಬಂದಾಗ ತೋರಿದ ಪ್ರೀತಿ, ನನ್ನ ಸಂದರ್ಶನಕ್ಕೆ ಅವರು ಮಾಡಿಕೊಂಡ ತಯಾರಿಗಳು ಕಂಡು ‘ಅವನೇ ಶ್ರೀಮನ್ನಾರಾಯಣ’ ನನ್ನ ಜೀವನದ ಬಹು ದೊಡ್ಡ ಹೆಮ್ಮೆ ಎನ್ನುವ ಅಭಿಪ್ರಾಯವನ್ನು ಮತ್ತಷ್ಟುಗಟ್ಟಿಮಾಡಿತು.