ಆರ್‌ ಕೇಶವಮೂರ್ತಿ

ನಿಮ್ಮ ಮೊದಲ ಕನ್ನಡ ಸಿನಿಮಾ ತೆರೆಗೆ ಬರುತ್ತಿರುವ ಹೊತ್ತಿನಲ್ಲಿ ಏನಿಸುತ್ತಿದೆ?

ನನ್ನ ತಂದೆಯವರ ಆಸೆ ಈಡೇರುತ್ತಿದೆ ಎನ್ನುವ ಖುಷಿ ಇದೆ. ನಾನು ಕನ್ನಡದ ಹುಡುಗಿ. ಬೆಂಗಳೂರಿನ ಮಲ್ಲೇಶ್ವರಂನಲ್ಲೇ ಇರೋದು. ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದರೂ ಕನ್ನಡದಲ್ಲಿ ನಟಿಸಬೇಕು ಎಂಬುದು ನನ್ನಷ್ಟೆನನ್ನ ತಂದೆಗೂ ಆಸೆ ಇತ್ತು. ಅದು ‘ಸಾರ್ವಜನಿಕರಲ್ಲಿ ಸುವರ್ಣಾವಕಾಶ’ದ ಮೂಲಕ ಈಡೇರಿದೆ.

'ಸಾರ್ವಜನಿಕರಿಗೆ ಸುವರ್ಣಾವಕಾಶ' ಟ್ರೇಲರ್ ಲಾಂಚ್

ಕನ್ನಡದಲ್ಲಿ ಯಾಕೆ ನಿಮಗೆ ಇಷ್ಟುತಡವಾಗಿ ಗುರುತಿಸಿದ್ದು?

ನನಗೆ ಗೊತ್ತಿಲ್ಲ. ಆದರೆ, ಒಳ್ಳೆಯ ಕತೆ, ಪಾತ್ರಕ್ಕಾಗಿ ಕಾಯುತ್ತಿದ್ದೆ. ಕನ್ನಡದಲ್ಲಿ ನಾನು ನಟಿಸುವ ಸಿನಿಮಾ ನನಗೆ ಹೆಚ್ಚು ಪ್ರಾಮುಖತೆ ಕೊಡಬೇಕು, ನನ್ನ ಪಾತ್ರ ಎಲ್ಲರಿಗೂ ಇಷ್ಟವಾಗಬೇಕು ಎಂದುಕೊಂಡಿದ್ದೆ. ನಾನು ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ತಡವಾಗಿ ಸಿಗಲು ಇದೂ ಒಂದು ಕಾರಣ ಇರಬಹುದು.

ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರದಲ್ಲಿ ನಿಮಗೆ ಮಹತ್ವದ ಪಾತ್ರವೇ?

ಹೌದು. ಈ ಸಿನಿಮಾ ನನಗೊಂದು ಸುವರ್ಣ ಅವಕಾಶ ಅಂತಲೇ ಹೇಳಬೇಕು. ನಾನು ಚಿತ್ರರಂಗಕ್ಕೆ ಬಂದು 7 ವರ್ಷ ಆಯ್ತು. ಇಷ್ಟುವರ್ಷಗಳ ನಂತರ ಕನ್ನಡದಲ್ಲಿ ಒಂದು ಒಳ್ಳೆಯ ಕತೆ ಇರೋ ಚಿತ್ರದ ಮೂಲಕ ಬರುತ್ತಿದ್ದೇನೆ. ಶೇ.40 ಭಾಗ ಕತೆ ನನ್ನ ಪಾತ್ರದ ಸುತ್ತ ತಿರುಗುತ್ತದೆ. ರಿಷಿ ಒಳ್ಳೆಯ ನಟ. ನಿರ್ದೇಶಕ ಅನೂಪ್‌ ಚಿತ್ರದ ಪ್ರತಿಯೊಂದು ಪಾತ್ರವನ್ನು ನೀಟಾಗಿ ರೂಪಿಸಿದ್ದಾರೆ.

ರಿಷಿ ಜತೆಗಿನ ನಟನೆಯ ಅನುಭವ ಹೇಗಿತ್ತು?

ತುಂಬಾ ಒಳ್ಳೆಯ ಕಲಾವಿದ. ಒಳ್ಳೆಯ ತಂಡ ಮತ್ತು ರಿಷಿಯಂತಹ ಸಹ ನಟನ ಜತೆಗೆ ತೆರೆ ಹಂಚಿಕೊಂಡಿರುವ ಸಂಭ್ರಮ ನನ್ನದು.

 

ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾ ಒಪ್ಪಲು ಮುಖ್ಯ ಕಾರಣ?

ಈ ಹಿಂದೆ ‘ಗುಳ್ಟು’ ಚಿತ್ರ ಮಾಡಿದ್ದ ತಂಡವೇ ಸೇರಿಕೊಂಡು ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾ ಮಾಡುತ್ತಿದೆ ಎಂದಾಗ ನಾನು ಖುಷಿಯಿಂದಲೇ ಒಪ್ಪಿ ಮಾಡಿದ ಸಿನಿಮಾ ಇದು.

ಬೇರೆ ಭಾಷೆಗಳಲ್ಲಿ ಎಷ್ಟುಸಿನಿಮಾ ಮಾಡಿದ್ದೀರಿ? ನಿಮಗೆ ಹೆಸರು ತಂದುಕೊಟ್ಟಚಿತ್ರ ಯಾವುದು?

ತೆಲುಗಿನಲ್ಲಿ 13, ತಮಿಳಿನಲ್ಲಿ 4, ಮಲಯಾಳಂನಲ್ಲಿ ಮೂರು, ಮೂರು ವೆಬ್‌ ಸರಣಿಯಲ್ಲಿ ನಟಿಸಿದ್ದೇನೆ. ಈ ಪೈಕಿ ಕನ್ನಡದ ‘ರಕ್ತಚಂದನ’ ಎನ್ನುವ ವೆಬ್‌ ಸರಣಿಯಲ್ಲೂ ಕಾಣಿಸಿಕೊಂಡಿರುವೆ. ನನಗೆ ಎಲ್ಲ ಚಿತ್ರಗಳಲ್ಲೂ ಒಳ್ಳೆಯ ಪಾತ್ರ ಸಿಕ್ಕಿದೆ. ಜತೆಗೆ ನಾನು ನಟಿಸಿದ ಬಹುತೇಕ ಸಿನಿಮಾಗಳು ಹಿಟ್‌ ಆಗಿವೆ.