ಒಬ್ಬ ಒಳ್ಳೆ ಮನುಷ್ಯ. ಅವನೇ ಸಾಕಿದ ಗಿಣಿ ಗಾಂಜಾ ಜಗತ್ತಿನೊಳಗೆ ಹೋಗಿ ದೊಡ್ಡದಾಗಿ ಬೆಳೆಯುತ್ತಾನೆ. ಅದೇ ಒಳ್ಳೆ ಮನುಷ್ಯನ ಮನೆಯಲ್ಲೇ ಮತ್ತೊಬ್ಬ ಒಳ್ಳೆಯವನು ಬರುತ್ತಾನೆ.  

ರಾಜೇಶ್ ಶೆಟ್ಟಿ

ಹಸಿ ಹಸಿ ಬೆಂಗಳೂರನ್ನು ತೋರಿಸುವುದರಲ್ಲಿ ದುನಿಯಾ ವಿಜಯ್‌ ಯಾವತ್ತಿಗೂ ಮುಂದು. ಈ ಸಿನಿಮಾದಲ್ಲಿ ಕೂಡ ಆ ಗುಣ ಮುಂದುವರಿದಿದೆ. ಇಲ್ಲಿ ಮಚ್ಚುಗಳಿವೆ, ಫೈಟುಗಳಿವೆ, ಹಾಲಿದೆ, ಆಲ್ಕೋಹಾಲಿದೆ, ಬೈಕುಗಳಿವೆ, ವೀಲಿಂಗ್‌ ಇದೆ, ರಕ್ತವಿದೆ, ಕಣ್ಣೀರಿದೆ, ಕ್ರೋಧವಿದೆ, ಕೋಪವಿದೆ, ಅನ್ಯಾಯವಿದೆ, ಅಂತಿಮವಾಗಿ ನೋವಿದೆ ಮತ್ತು ಗಾಢ ವಿಷಾದವಿದೆ. ಬೆಂಗಳೂರಿನ ಒಂದು ಗಲ್ಲಿಯಲ್ಲಿ ಕತೆ ಶುರುವಾಗುತ್ತದೆ. ಒಬ್ಬ ಒಳ್ಳೆ ಮನುಷ್ಯ. ಅವನೇ ಸಾಕಿದ ಗಿಣಿ ಗಾಂಜಾ ಜಗತ್ತಿನೊಳಗೆ ಹೋಗಿ ದೊಡ್ಡದಾಗಿ ಬೆಳೆಯುತ್ತಾನೆ. ಅದೇ ಒಳ್ಳೆ ಮನುಷ್ಯನ ಮನೆಯಲ್ಲೇ ಮತ್ತೊಬ್ಬ ಒಳ್ಳೆಯವನು ಬರುತ್ತಾನೆ. 

ಆ ಒಳ್ಳೆಯತನಕ್ಕೂ ದುಷ್ಟತನಕ್ಕೂ ಮಧ್ಯದ ಹೋರಾಟ ಸಿನಿಮಾ. ಆದರೆ ಇಲ್ಲೊಂದು ಒಳ್ಳೆಯ ಉದ್ದೇಶ ಇದೆ. ಬೆಂಗಳೂರಿನ ವೀಲಿಂಗ್‌ ಮಾಡುವ ಯುವ ಪಡೆ ಏನು ಮಾಡುತ್ತಿದೆ, ಅವರ ಜಗತ್ತಲ್ಲಿ ಏನಾಗುತ್ತಿದೆ, ಅವರನ್ನು ಕಡುಗಪ್ಪು ದಾರಿಗೆ ಕರೆದೊಯ್ಯುವವರಾರು.. ಇವೆಲ್ಲವನ್ನೂ ದಾಟಿಸುವ ಪ್ರಯತ್ನ ಆಗಿದೆ. ಅದು ಸಹಜವಾಗಿದೆ ಮತ್ತು ಅಷ್ಟೇ ಭೀಕರವೂ ಆತಂಕದಾಯಕವೂ ಆಗಿದೆ. ಅದನ್ನು ಹೇಳುವುದಕ್ಕೆ ಮಾಸ್ತಿ ಬರೆದಿರುವ ಒಂದು ಡೈಲಾಗು ಚಿಂತನಾರ್ಹ. ಯುವಪಡೆ ಬೆಂಕಿಪಟ್ಣದಲ್ಲಿರೋ ಕಡ್ಡಿಗಳಂತೆ. ಒಂದು ಉರಿದರೆ ಸಾಕು ಎಲ್ರಿಗೂ ಬೆಂಕಿ ಹತ್ತತ್ತೆ. ಇಲ್ಲೊಂದು ಪ್ರಶ್ನೆ ಹುಟ್ಟು ಹಾಕಲು ಭೀಮ ಗೆಲ್ಲುತ್ತಾನೆ. 

ಚಿತ್ರ: ಭೀಮ
ನಿರ್ದೇಶನ: ದುನಿಯಾ ವಿಜಯ್
ತಾರಾಗಣ: ದುನಿಯಾ ವಿಜಯ್, ಅಶ್ವಿನಿ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್‌ ಮಂಜು, ಪ್ರಿಯಾ ಷಟಮರ್ಶನ
ರೇಟಿಂಗ್: 3

ಆದರೆ ಇಲ್ಲಿ ಕೊಂಚ ಅಬ್ಬರ ಇದೆ. ಯಾವುದನ್ನೂ ಮೃದುಗೊಳಿಸಲು ನಿರ್ದೇಶಕರು ಹೋಗಿಲ್ಲ. ಕಟುವಾಗಿ ಜಗತ್ತನ್ನು ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಪಿಸುಮಾತು ಕೇಳಿಸುವುದಿಲ್ಲ. ಗಟ್ಟಿ ದನಿ ಇದೆ. ಅಬ್ಬಾ ಅನ್ನಿಸುವ ದುನಿಯಾ ಇದೆ. ದುನಿಯಾ ವಿಜಯ್‌, ಪ್ರಿಯಾ ಷಟಮರ್ಶನ ತಮ್ಮ ನಿಲುವಿನಲ್ಲಿಯೇ ಮೆಚ್ಚುಗೆ ಗಳಿಸುತ್ತಾರೆ. ಚರಣ್‌ರಾಜ್‌ ಸಂಗೀತ ಈ ಸಿನಿಮಾದ ಮತ್ತೊಂದು ಹೀರೋ. ಅವರು ಸಂಗೀತದಲ್ಲಿ ಇಡೀ ಸಿನಿಮಾ ಎತ್ತಿದ್ದಾರೆ. ಪಾಶ್ಚಾತ್ಯ, ಶಾಸ್ತ್ರೀಯ, ಜಾನಪದ ಎಲ್ಲಾ ಧ್ವನಿಗಳನ್ನು ಬೆರೆಸಿ ಅವರು ಹೊಸತೊಂದು ದನಿಯನ್ನು ಈ ಚಿತ್ರಕ್ಕೆ ನೀಡಿದ್ದಾರೆ. ಭೀಮ ಒಂದು ಒಳ್ಳೆಯ ಉದ್ದೇಶ ಹೊಂದಿರುವ ಪಕ್ಕಾ ಮಾಸ್‌ ಕಮರ್ಷಿಯಲ್‌ ಸಿನಿಮಾ.