ಹಾಸ್ಯ ನಟರಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ತರಂಗ ವಿಶ್ವ ಈಗ ಹೀರೋ ಆಗಿದ್ದಾರೆ. ವಿಲೋಕ್‌ ಮತ್ತೊಬ್ಬ ನಾಯಕ. ಚಿತ್ರದ ಹೆಸರು ‘ಗಿರ್ಕಿ’. 

ಆರ್‌ಕೆ

ಪೊಲೀಸು, ಕ್ರೈಮು, ರೇಪು, ಇದರ ನಡುವೆ ಪ್ರೀತಿ... ಇವಿಷ್ಟುಹಳೆಯ ಸೂತ್ರಗಳನ್ನು ಇಟ್ಟುಕೊಂಡು ಮೂಡಿ ಬಂದಿರುವ ಮತ್ತೊಂದು ಸಿನಿಮಾ ‘ಗಿರ್ಕಿ’. ಬಾರ್‌ನಲ್ಲಿ ಕೆಲಸ ಮಾಡುವ ಹುಡುಗ, ಬಟ್ಟೆಶೋ ರೂಮ್‌ನಲ್ಲಿ ಉದ್ಯೋಗಿ ಹುಡುಗಿ ನಡುವೆ ಪ್ರೀತಿ. ಈ ಪ್ರೀತಿ ಅಡ್ಡ ಆಗುವುದು ನಿಗೂಢವಾಗಿ ಸಾಯುತ್ತಿರುವ ಹಾಗೂ ನಾಪತ್ತೆಯಾಗುತ್ತಿರುವ ಅನಾಥ ಯುವತಿಯರು. ಇದಕ್ಕೂ ಬಟ್ಟೆಶೋ ರೂಮ್‌ನಲ್ಲಿ ಕೆಲಸ ಮಾಡುವ ನಾಯಕಿಗೂ ಏನು ಸಂಬಂಧ ಎನ್ನುವ ಒಂದು ಎಳೆಯನ್ನು ಇಟ್ಟುಕೊಂಡು ಇಡೀ ಸಿನಿಮಾ ಸುತ್ತಿದ್ದಾರೆ ನಿರ್ದೇಶಕ ವೀರೇಶ್‌ ಪಿ ಎಂ.

ನಿರ್ದೇಶನ: ವೀರೇಶ್‌ ಪಿ ಎಂ

ತಾರಾಗಣ: ತರಂಗ ವಿಶ್ವ, ವಿಲೋಕ್‌ ರಾಜ್‌, ದಿವ್ಯಾ ಉರುಡುಗ

ರೇಟಿಂಗ್‌: 2

ಒಂದು ಸಾಧಾರಣ ಕತೆಯನ್ನು ಧಾರಾವಾಹಿಯಂತೆ ಹಿಗ್ಗಿಸಿ, ಸರಳವಾಗಿ ಹೇಳಬಹುದಾಗಿದ್ದ ಎಲ್ಲಾ ಅವಕಾಶಗಳನ್ನು ಸ್ಕ್ರೀನ್‌ ಪ್ಲೇ ವಿಭಾಗ ಕಳೆದುಕೊಂಡಿರುವುದು ಈ ಚಿತ್ರದ ಬಹು ದೊಡ್ಡ ಕೊರತೆ. ಕತೆಯ ಹೊರತಾಗಿರುವ ಸಂಭಾಷಣೆಗಳು, ಅಸ್ತವ್ಯಸ್ಥ ಚಿತ್ರಕಥೆಯ ನಡುವೆ ಗಮನ ಸೆಳೆಯುವುದು ವಿಲೋಕ್‌ ರಾಜ್‌. ಮಾಸ್‌ ಹಾಗೂ ಆ್ಯಕ್ಷನ್‌ ಚಿತ್ರಗಳಿಗೆ ಇವರ ಬಾಡಿ ಲ್ಯಾಂಗ್ವೇಜ್‌ ಹೇಳಿ ಮಾಡಿಸಿದಂತಿದೆ. ಜತೆಗೆ ದಿವ್ಯಾ ಉರುಡುಗ ಅವರ ಸಹಜ ನಟನೆ ಹಾಗೂ ಕ್ರಿಮಿನಲ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಾಲ್ವರ ನಟನೆ ಚಿತ್ರ ಮುಗಿದ ಮೇಲೂ ನೆನಪಿನಲ್ಲಿ ಉಳಿಯುತ್ತದೆ.

ಸಿನಿಮಾ ಬಗ್ಗೆ ಸಣ್ಣ ಮಾಹಿತಿ

ಹಾಸ್ಯ ನಟರಾಗಿ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ತರಂಗ ವಿಶ್ವ (Taranga Vishwa) ಈಗ ಹೀರೋ ಆಗಿದ್ದಾರೆ. ವಿಲೋಕ್‌ ಮತ್ತೊಬ್ಬ ನಾಯಕ. ಚಿತ್ರದ ಹೆಸರು ‘ಗಿರ್ಕಿ’ (Girki). ಇತ್ತೀಚೆಗಷ್ಟೆ ಈ ಚಿತ್ರದ ಟೀಸರ್‌ (Teaser) ಬಿಡುಗಡೆ ಆಗಿದೆ. ನಟ ಶರಣ್‌ (Sharan) ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಟೀಸರ್ ಬಿಡುಗಡೆ ಮಾಡಿ ಶರಣ್ ಮಾತನಾಡುತ್ತಾ ವಿಶ್ವ ನನ್ನ ಬಹುಕಾಲದ ಗೆಳೆಯ, ಇಬ್ಬರೂ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಾಸ್ಯನಟನಾಗಿ ಚಿತ್ರರಂಗ ಪ್ರವೇಶಿಸಿ, ಈಗ ಚಿತ್ರ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ. ಇದು ಸುಲಭ ಅಲ್ಲ. ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ನಾನು ನೂರು ಚಿತ್ರಗಳಲ್ಲಿ ನಟಿಸಿದ ಮೇಲೆ ನಿರ್ಮಾಪಕನಾದೆ. 

ವಿಶ್ವ ಕೂಡ ಅಷ್ಟೇ ಚಿತ್ರಗಳ ನಂತರ ನಿರ್ಮಾಪಕನಾಗಿದ್ದಾನೆ. ನಿರ್ದೇಶಕ ವೀರೇಶ್ ಕೂಡ ನನಗೆ ಪರಿಚಿತರು. ಚಿತ್ರತಂಡದ ಪರಿಶ್ರಮ ಟೀಸರ್ ನಲ್ಲಿ ಎದ್ದುಕಣುತ್ತಿದೆ. ಒಳ್ಳೆಯದಾಗಲಿ ಎಂದು ಶರಣ್ ಹಾರೈಸಿದರು. ನಮ್ಮ ಸ್ನೇಹಕ್ಕೆ ಬೆಲೆಕೊಟ್ಟು ಬಂದಿರುವ ಶರಣ್‌ಗೆ ಧನ್ಯವಾದ. ನಾನು ಈ ಬೆಳವಣಿಗೆಗೆ ನನ್ನ ತಂದೆಯ ಪ್ರೋತ್ಸಾಹ ಕಾರಣ. ನಿರ್ಮಾಣದ ಜೊತೆಗೆ ನಾನು ಪ್ರಮುಖಪಾತ್ರದಲ್ಲೂ ನಟಿಸಿದ್ದೇನೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮೇನಲ್ಲಿ ಬಿಡುಗಡೆಯಾಗಲಿದೆ ಎಂದರು ವಿಶ್ವ. 'ಗಿರ್ಕಿ' ಎಂದರೆ ಸುತ್ತಾಟ ಹಾಗೂ ಪರ್ಯಟನೆ. ಒಂದೇ ಥರಹದ ಕಥೆಯಲ್ಲ.