ಈ ಕತೆಯಲ್ಲಿ ಸಾಕಷ್ಟು ಕ್ರೋಧವಿದೆ. ಕ್ರೌರ್ಯವಿದೆ. ಆ ಬಿಸಿಯನ್ನು ತಣ್ಣಗಾಗಿಸಲು ಪ್ರೇಮವಿದೆ. ಕೈಹಿಡಿದು ಜಗ್ಗಲು ಸೆಂಟಿಮೆಂಟ್ ಇದೆ. ತಿರುವುಗಳು ಒದಗಿಸುವ ಕುತೂಹಲವಿದೆ.
ಆರ್.ಬಿ.
ಚಿಕ್ಕಂದಿನಲ್ಲಿಯೇ ಅಮ್ಮನನ್ನು ಕಳೆದುಕೊಂಡು ಭೂಗತ ಲೋಕವನ್ನು ಸೇರುವ ಅಪಾರ ಆಕ್ರೋಶದ ತರುಣನ ಕತೆ ಇದು. ಭೂಗತ ಲೋಕದ ಪಾತ್ರಧಾರಿಯ ಕತೆ ಹೊಸದೇನೂ ಅಲ್ಲ, ಆದರೆ ಆ ಕತೆಯನ್ನು ಆಸಕ್ತಿದಾಯಕ ಮಾಡುವುದಕ್ಕೆ ನಿರ್ದೇಶಕರು ಸಾಕಷ್ಟು ಅಂಶಗಳನ್ನು ಇಲ್ಲಿ ತಂದಿದ್ದಾರೆ. ಜೊತೆಗೆ ಸಂದೇಶವನ್ನೂ ಇಟ್ಟಿದ್ದಾರೆ. ಭೂಗತ ಲೋಕದ ಪಾತ್ರಧಾರಿಯ ಕತೆ ಆಗಿರುವುದರಿಂದ ತಲ್ವಾರ್ ಆತನ ಕೈಯಲ್ಲಿ ನರ್ತನ ಮಾಡುತ್ತಿರುತ್ತದೆ. ಜೊತೆಗೆ ನಾಯಕನಿಗೆ ತಲ್ವಾರ್ ಎಂಬ ಅಡ್ಡ ಹೆಸರೂ ಇರುತ್ತದೆ. ಈ ತಲ್ವಾರ್ ಅನ್ನು ಶಾಂತಗೊಳಿಸಲು ಯತ್ನಿಸುವುದು ಪ್ರೇಮ.
ಆದರೆ ಪ್ರೇಮದ ಕೊಳದಲ್ಲಿ ಈಜಾಡುತ್ತಿರುವಾಗಲೇ ಅವಘಡಗಳೆಲ್ಲಾ ಜರುಗಿ ಶಾಂತ ಕೊಳದಲ್ಲಿ ತರಂಗಗಳೇಳುತ್ತವೆ. ಈ ಕತೆಯಲ್ಲಿ ಸಾಕಷ್ಟು ಕ್ರೋಧವಿದೆ. ಕ್ರೌರ್ಯವಿದೆ. ಆ ಬಿಸಿಯನ್ನು ತಣ್ಣಗಾಗಿಸಲು ಪ್ರೇಮವಿದೆ. ಕೈಹಿಡಿದು ಜಗ್ಗಲು ಸೆಂಟಿಮೆಂಟ್ ಇದೆ. ತಿರುವುಗಳು ಒದಗಿಸುವ ಕುತೂಹಲವಿದೆ. ಒಟ್ಟಾರೆ ಹಲವು ಭಾವಗಳು ಸೇರಿ ಈ ಕತೆಯನ್ನು ಮುಂದಕ್ಕೆ ಕೊಂಡೊಯ್ಯುತ್ತವೆ. ಆ್ಯಕ್ಷನ್ ಪ್ರಿಯರಿಗೆ ಈ ಚಿತ್ರ ಮೆಚ್ಚುಗೆಯಾಗುವಂತಿದೆ. ನಾಯಕನಾಗಿ ನಟಿಸಿರುವ ಧರ್ಮ ಕೀರ್ತಿರಾಜ್, ಭೂಗತ ಲೋಕದ ಭಾಯ್ ಆಗಿ ನಟಿಸಿರುವ ಶರತ್ ಲೋಹಿತಾಶ್ವ ಇಷ್ಟವಾಗುತ್ತಾರೆ.
ಚಿತ್ರ: ತಲ್ವಾರ್
ನಿರ್ದೇಶನ: ಮುರಳಿ
ತಾರಾಗಣ: ಧರ್ಮ ಕೀರ್ತಿರಾಜ್, ಅದಿತಿ, ಶರತ್ ಲೋಹಿತಾಶ್ವ
ರೇಟಿಂಗ್: 3
ಸಂದೇಶ ಇರುವ ಸಿನಿಮಾ ಇದು: ಮಕ್ಕಳ ಬಗ್ಗೆ ಪೋಷಕರ ಜವಾಬ್ದಾರಿ ಹಾಗೂ ಕುಡಿತದ ದುಷ್ಪರಿಣಾಮಗಳ ಕುರಿತು ಹೇಳಿರುವ ಸಿನಿಮಾ ಇದು. ಎಂ ಆರ್ ಶ್ರೀನಿವಾಸ್, ‘ಮಕ್ಕಳಿಗೆ ತಂದೆಯ ಪ್ರೀತಿ ಮತ್ತು ಬೆಂಬಲ ಇಲ್ಲದೆ ಹೋದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ’ ಎಂದರು. ನಟ ಧರ್ಮ ಕೀರ್ತಿರಾಜ್, ‘ಒಂದು ಒಳ್ಳೆಯ ಸಂದೇಶ ಇಟ್ಟುಕೊಂಡು ಮಾಡಿರುವ ಸಿನಿಮಾ ಇದು. ಕುಡಿತದಿಂದ ಏನೆಲ್ಲ ಅನಾಹುತಗಳು ಆಗುತ್ತವೆ. ಅವು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು’ ಎಂದರು. ನಾಯಕಿ ನೇಹಾ, ಹಿರಿಯ ನಟ ಉಮೇಶ್ ಇದ್ದರು.
