ನೈಯಾ ಪೈಸೆ ಇಲ್ಲದ ಈ ಐದು ಮಂದಿಗೆ ದೊಡ್ಡ ಮೊತ್ತದ ಸಂಪತ್ತು ಸಿಕ್ಕರೆ ಅಥವಾ ಆ ಸಂಪತ್ತಿನ ಮಾಹಿತಿ ಗೊತ್ತಾದರೆ ಏನಾಗುತ್ತದೆ ಎನ್ನುವುದು ಚಿತ್ರದ ಕತೆಯ ಒಂದು ಸಾಲು. 

ಆರ್‌. ಕೇಶವಮೂರ್ತಿ

ಹಾರರ್‌ ಎಂದ ಮೇಲೆ ದೆವ್ವನೋ, ಆತ್ಮವೋ ಅಥವಾ ಪ್ರೇಮತವೋ ಇರಬೇಕು. ಇದಕ್ಕೊಂದು ಅಡ್ವಂಚರ್‌ ಇಮೇಜ್‌ ಕೊಟ್ಟರೆ ಅಲ್ಲೊಂದು ಕಾಡು ಇರಲೇಬೇಕು. ಕಾಡು, ಅಡ್ವೆಂಚರ್‌, ಆತ್ಮ ಈ ಮೂರರ ಸುಳಿಯಲ್ಲಿ ಐದು ಮಂದಿ ಸಿಕ್ಕೊಳ್ಳುತ್ತಾರೆ. ಯಾಕೆ, ಹೇಗೆ, ಏನು ಎನ್ನುವ ಕುತೂಹಲಗಳ ನಿರೂಪಣೆಯ ತಿರುವುಗಳಲ್ಲಿ ಇಡೀ ಸಿನಿಮಾ ಸಾಗುತ್ತದೆ. ರೋಚಕತೆ, ಥ್ರಿಲ್ಲರ್‌ ಮತ್ತು ಮನುಷ್ಯನ ಆಸೆಬುರುಕತನದ ಜೊತೆಗೆ ನಿರ್ದೇಶಕ ಚಂದ್ರ ಮೋಹನ್‌ ಅವರ ಟ್ರಂಪ್‌ ಕಾರ್ಡ್‌ ಎನಿಸಿಕೊಂಡಿರುವ ಹಾಸ್ಯದ ನೆರಳು ಕೂಡ ನಾನ್‌ ವೆಜ್‌ ಊಟದಲ್ಲಿ ಸಿಗೋ ನಲ್ಲಿ ಮೂಳೆಯಂತೆ ರುಚಿಯಾಗಿ, ಶುಚಿಯಾಗಿ ಹದವಾಗಿ ಬೆರೆತಿರುವುದರಿಂದ ಚಿತ್ರಕ್ಕೆ ‘ನೋಡುವ ಗುಣ’ ಎನ್ನುವ ಟಾನಿಕ್‌ ನೀಡಿದಂತಾಗಿದೆ.

ಅವರ ಐದು ಮಂದಿ. ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ. ಈ ಸಮಸ್ಯೆಗೆ ಹಣ ಪರಿಹಾರ. ನೈಯಾ ಪೈಸೆ ಇಲ್ಲದ ಈ ಐದು ಮಂದಿಗೆ ದೊಡ್ಡ ಮೊತ್ತದ ಸಂಪತ್ತು ಸಿಕ್ಕರೆ ಅಥವಾ ಆ ಸಂಪತ್ತಿನ ಮಾಹಿತಿ ಗೊತ್ತಾದರೆ ಏನಾಗುತ್ತದೆ ಎನ್ನುವುದು ಚಿತ್ರದ ಕತೆಯ ಒಂದು ಸಾಲು. ಆದರೆ, ಈ ಒಂದು ಸಾಲನ್ನು ಅಚ್ಚುಕಟ್ಟಾಗಿ ನಿರೂಪಿಸಲು ನಿರ್ದೇಶಕರು ನಾನಾ ನಿರೂಪಣೆಯ ತಂತ್ರಗಳನ್ನು ಬಳಸುತ್ತಾರೆ. ಚಿತ್ರದಲ್ಲಿ ಪ್ರೇಕ್ಷಕರಲ್ಲಿ ನಗು ಮೂಡಿಸುವುದು ರಂಗಾಯಣ ರಘು ಹಾಗೂ ಚಿಕ್ಕಣ್ಣ ಪಾತ್ರಧಾರಿಗಳು.

ಚಿತ್ರ: ಫಾರೆಸ್ಟ್‌
ತಾರಾಗಣ: ಅನೀಶ್ ತೇಜೇಶ್ವರ್, ಚಿಕ್ಕಣ್ಣ, ಗುರುನಂದನ್, ಅರ್ಚನಾ ಕೊಟ್ಟಿಗೆ, ಶರಣ್ಯ ಶೆಟ್ಟಿ, ರಂಗಾಯಣ ರಘು
ನಿರ್ದೇಶನ: ಚಂದ್ರ ಮೋಹನ್‌
ರೇಟಿಂಗ್‌ : 3

ಡ್ರೈ ಫಾರೆಸ್ಟ್‌ನಲ್ಲಿ ಸ್ಪೈಸಿ ಆಗಿ ನೋಡುಗನ ಕ್ರಶ್‌ ಎನಿಸಿಕೊಂಡಿದ್ದಾರೆ ಅರ್ಚನಾ ಕೊಟ್ಟಿಗೆ. ರೆಗ್ಯೂಲರ್‌ ಕಮರ್ಷಿಯಲ್‌ ಆಚೆಗೂ ಅನೀಶ್ ತೇಜೇಶ್ವರ್ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. ಗುರುನಂದನ್ ಅದೇ ಇನೋಸೆನ್ಸ್‌ನಲ್ಲಿ ಸೆನ್ಸಿಬಲ್‌ ಆಗಿ ಕಾಣುತ್ತಾರೆ. ಇವರೆಲ್ಲರನ್ನೂ ಆಟ ಆಡಿಸುವ ಮೂಲಕ ಥ್ರಿಲ್ಲಿಂಗ್‌ ಅನುಭ ಕೊಟ್ಟು ಕತೆಯ ಅರ್ಧ ಹೀರೋ ಎನಿಸಿಕೊಂಡಿರುವುದು ಬೀರ ಹೆಸರಿನ ಆತ್ಮದ ಪಾತ್ರಧಾರಿ. ಶರಣ್ಯ ಶೆಟ್ಟಿ ಅವರ ಪಾತ್ರ ಮಲ್ಲಿಗೆ ಇಡ್ಲಿಯಂತೆ ಸರಾಗವಾಗಿ ಬಂದು ಹೋಗುತ್ತದೆ.