ಸ್ವಯಂಘೋಷಿತ ದೇವಮಾನವ ಬಾಬಾ ನಿರಾಲಾನ ಗೋಮುಖವ್ಯಾಘ್ರದ ಅನಾವರಣ
ashram web series: ಸ್ವಯಂಘೋಷಿತ ದೇವಮಾನವ ಬಾಬಾ ನಿರಾಲಾನ ಆಶ್ರಮದಲ್ಲಿ ನಡೆಯುವ ಕರಾಳ ಘಟನೆಗಳನ್ನು ಬಿಚ್ಚಿಡುವ ಕಥೆ. ಕುಸ್ತಿಪಟು ಪಮ್ಮಿ, ಪತ್ರಕರ್ತ, ಪೊಲೀಸ್ ಮತ್ತು ವೈದ್ಯೆಯ ತಂಡವು ಬಾಬಾನ ನಿಜವಾದ ಮುಖವನ್ನು ಬಯಲಿಗೆಳೆಯಲು ಹೋರಾಡುತ್ತದೆ.

ಪ್ರಕಾಶ್ ಝಾ ನಿರ್ಮಿಸಿ ನಿರ್ದೇಶಿಸಿರುವ ವೆಬ್ ಸೀರೀಸ್ ಆಶ್ರಮ್ ಪ್ರೈಮ್ ವೀಡಿಯೋದಲ್ಲಿ ಸ್ಕ್ರೀಂ ಆಗುತ್ತಿದೆ.
ಕಲಾವಿದರು: ಬಾಬ್ಬಿ ಡಿಯೋಲ್, ಅದಿತಿ ಪೋಹನ್ ಕರ್ ಮುಖ್ಯ ಭೂಮಿಕೆಯಲ್ಲಿ ಇರುವ ಈ ಸೀರೀಸ್ ನ ಇತರ ಪೋಷಕ ಪಾತ್ರದಲ್ಲಿ ಚಂದನ್ ರಾಯ್ ಸನ್ಯಾಲ್, ತುಷಾರ್ ಪಾಂಡೆ, ದರ್ಶನ್ ಕುಮಾರ್, ಅನುಪ್ರಿಯಾ ಗೋಯೆಂಕಾ, ತ್ರಿಧಾ ಚೌಧರಿ ಮುಂತಾದವರು ನಟಿಸಿದ್ದಾರೆ.
ಈ ಹಿಂದೆ ಹೀರೋ ಆಗಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಆಕ್ಷನ್ ಹೀರೋ ಬಾಬ್ಬಿ ಡಿಯೋಲ್ ಅನಿಮಲ್ ಸಿನಿಮಾದಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡು ಪ್ರಸಿದ್ಧಿಯಾಗಿದ್ದರು. ಈಗ ಬಾಬಾ ನಿರಾಲ ನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಮೂರು ಸೀಸನ್ನಲ್ಲಿ ಬಂದಿರುವ ಈ ಸೀರೀಸ್ 28 ಎಪಿಸೋಡುಗಳಿವೆ. ಸ್ವಯಂ ಘೋಷಿತ ದೇವಮಾನವ ಎಂದು ಹೇಳಿಕೊಂಡ ಎಷ್ಟೋ ಜನ ಸ್ವಾಮೀಜಿಗಳ ಕರಾಳ ಮುಖಗಳು ಸಮಾಜದಲ್ಲಿ ಅನಾವರಣ ಆಗಿದೆ, ಆಗುತ್ತಲೇ ಇದೆ. ಹಾಗೆಯೇ ಶಿಕ್ಷೆಯೂ ಆಗಿದೆ. ಇವೆಲ್ಲ ನಾವು ದಿನನಿತ್ಯ ಪತ್ರಿಕೆಯಲ್ಲಿ ಓದುತ್ತಲೇ ಇರುತ್ತೇವೆ. ಇದೂ ಕೂಡ ಅಂತಹುದೇ ಕಥೆ ಹೊಂದಿದೆ. ಶಿ ಎನ್ನುವ ವೆಬ್ ಸೀರೀಸ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಹೆಸರು ಪಡೆದಿದ್ದ ಅದಿತಿ ಪೋಹನಕರ್ ಇಲ್ಲಿ ಪಮ್ಮಿ ಪರವಿಂದರ್ ಕೌರ್ ಆಗಿ ಪ್ರಬುದ್ಧ ಅಭಿನಯ ನೀಡಿದ್ದಾಳೆ.
ಪಮ್ಮಿ ಹಿಂದುಳಿದ ವರ್ಗಕ್ಕೆ ಸೇರಿದ ಯುವತಿ. ತಂದೆ ತಾಯಿ ಅಣ್ಣನೊಂದಿಗೆ ಪುಟ್ಟ ಸಂಸಾರ ಅವರದು. ಪಮ್ಮಿ ಕುಸ್ತಿ ಪಟು. ಬಹಳಷ್ಟು ಕುಸ್ತಿಗಳಲ್ಲಿ ಭಾಗವಹಿಸಿದ್ದರೂ ಮೇಲ್ವರ್ಗದವರ ಆಟಾಟೋಪದಿಂದ ಅವಳಿಗೆ ಎಲ್ಲಿಯೂ ರೆಕಗ್ನಿಷನ್ ಸಿಕ್ಕಿರುವುದಿಲ್ಲ. ಅವಳು ಗೆದ್ದರೂ ಪಾರಿತೋಷಕ ನೀಡದೆ ಸ್ಟೇಟ್ ಲೆವೆಲ್ ಗೆ ಆಯ್ಕೆ ಮಾಡದೆ ಸತಾಯಿಸುತ್ತಿರುತ್ತಾರೆ. ಪಮ್ಮಿಗೆ ಇದರಿಂದ ರೋಷ ಮತ್ತು ದುಃಖ ಎರಡೂ ಇರುತ್ತದೆ. ಒಮ್ಮೆ ಅವರ ಸಮುದಾಯದ ಒಂದು ಮದುವೆ ಮೆರವಣಿಗೆಯಲ್ಲಿ ಮೇಲ್ವರ್ಗಕ್ಕೂ ಇವರ ಸಮುದಾಯಕ್ಕೂ ಮಾರಾಮರಿ ಆಗಿ ಪಮ್ಮಿಯ ಅಣ್ಣ ಸತ್ತಿ ಮಾರಣಾಂತಿಕವಾಗಿ ಗಾಯಗೊಳ್ಳುತ್ತಾನೆ. ಅಣ್ಣನನ್ನು ಹಲ್ಲೆ ಮಾಡಿದವರ ವಿರುದ್ಧ ಪೊಲೀಸ್ ದೂರು ಕೊಡಲು ಠಾಣೆಗೆ ಹೋದರೂ ಅಲ್ಲಿನ ಪೊಲೀಸ್ ಅಧಿಕಾರಿ ಉಜಾಗರ್ ಸಿಂಗ್ ದೂರು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ಗಾಯಗೊಂಡ ಸತ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವನಿಗೆ ಚಿಕಿತ್ಸೆ ನೀಡಲು ಡಾಕ್ಟರ್ ಗಳನ್ನು ಮೇಲ್ವರ್ಗದ ಜನ ಬಿಡುವುದಿಲ್ಲ. ಒಂದು ಕೋಣೆಯಲ್ಲ ಕೂಡಿಹಾಕುತ್ತಾರೆ. ಆಗ ಹಠಾತ್ತನೆ ಆ ಪ್ರದೇಶದ ಸ್ವಯಂಘೋಷಿತ ದೇವಮಾನವ ಬಾಬಾ ನಿರಾಲನ ಪ್ರವೇಶವಾಗುತ್ತದೆ. ಬಾಬಾ ನಿರಾಲಾ ಪಮ್ಮಿಯ ಮನೆಯವರ ನೆರವಿಗೆ ನಿಲ್ಲುತ್ತಾನೆ. ಮೇಲ್ವರ್ಗದವರ ಬೆನ್ನು ಮುರಿಯುತ್ತಾನೆ.
ಪಮ್ಮಿ ಕುಸ್ತಿ ಪಟು ಎಂದು ತಿಳಿದು ಅವಳಿಗೆ ತನ್ನ ಆಶ್ರಮದಲ್ಲಿ ಆಶ್ರಯ ಕಲ್ಪಿಸುತ್ತಾನೆ. ಅವಳಿಗೆ ಆಶ್ರಮದ ಹಾಸ್ಟೆಲ್ ನಲ್ಲಿ ಇರಲು ಜಾಗ ಕೊಟ್ಟು ಓದುವುದಕ್ಕೂ ಕುಸ್ತಿ ಪಂದ್ಯಗಳಿಗೆ ಅಭ್ಯಾಸ ಮಾಡಲು ಅವಕಾಶ ಕಲ್ಪಿಸುತ್ತಾನೆ. ಮೇಲ್ವರ್ಗದ ಶೋಷಣೆಯಿಂದ ನೊಂದಿದ್ದ ಪಮ್ಮಿಗೆ ಬಾಬಾ ನಿರಾಲಾ ದೇವರಂತೆ ಕಂಡಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಪಮ್ಮಿಯ ಅಣ್ಣ ಸತ್ತಿಗೂ ಬಾಬಾನ ಆಶ್ರಮದಲ್ಲಿ ಕೆಲಸ ಕೊಡುತ್ತಾರೆ. ಕೈತುಂಬಾ ಸಂಬಳ ಬರುವ ಕೆಲಸದಿಂದ ಸತ್ತಿ ಫುಲ್ ಖುಷ್ ಆಗಿ ಬಾಬಾನ ದಾಸಾನುದಾಸನಗಿಬಿಡುತ್ತಾನೆ. ಅಲ್ಲಿ ಒಮ್ಮೆ ಆಶ್ರಮಕ್ಕೆ ಹೋದವರು ಮತ್ತೆ ಮತ್ತೆ ಮನೆಗೆ ಹೋಗಿಬರುವಂತಿಲ್ಲ. ಆಶ್ರಮದಲ್ಲಿ ಬಾಬಾ ಹೇಳಿದ್ದೇ ಕಾನೂನು ಮಾಡಿದ್ದೇ ಆಜ್ಞೆ. ಬಾಬಾನ ಬಲಗೈ ಬಂಟ ಭೂಪೇನ್ ಆಶ್ರಮದ ಸಮಸ್ತ ಆಡಳಿತವನ್ನೂ ನಿಯಂತ್ರಿಸುವ ಸರ್ವಾಧಿಕಾರಿ. ಬಾಬಾ ನಿರಾಲಾ ಸಾಮ್ರಾಜ್ಯದ ಆಗುಹೋಗುಗಳೆಲ್ಲ ಭೂಪೇನ್ ನ ಕೈಯಲ್ಲಿರುತ್ತದೆ. ಆಶ್ರಮದ ಏಕೈಕ ಮಂತ್ರ ಜಪನಾಮ್. ಎಲ್ಲರ ಬಾಯಲ್ಲೂ ಜಪನಾಮ್ ಮಂತ್ರ ನಾಟ್ಯವಾಡುತ್ತಿರುತ್ತದೆ. ಬಾಬಾ ಆಶ್ರಮದಲ್ಲಿ ಯಾವುದೇ ದೇವರಿಲ್ಲ. ಬಾಬಾನೇ ಸ್ವಯಂ ದೇವರು. ಅಲ್ಲಿ ಮಹಿಳೆಯರ ಕಾರ್ಯಗಾರ, ಹೆಣ್ಣುಮಕ್ಕಳ ವಸತಿಗೃಹ, ವಿಧವೆಯರು ನಿರ್ಗತಿಕರ ಆಶ್ರಯತಾಣ ಎಲ್ಲವೂ ಇರುತ್ತದೆ. ಅಲ್ಲಿ ಗಂಡಸರೂ ಕೆಲಸ ಮಾಡುತ್ತಿರುತ್ತಾರೆ. ಅಲ್ಲಿನ ವಾಪಾರ ವ್ಯವಹಾರಗಳೇನು ಅಲ್ಲಿನ ಆದಾಯ ಏನು ಎಂಬುದು ಯಾರಿಗೂ ತಿಳಿದಿಲ್ಲ. ಒಂದು ವಿಧದ ನಿಗೂಢ ವಾತಾವರಣ ಆಶ್ರಮದಲ್ಲಿ ಇರುತ್ತದೆ. ಅಲ್ಲಿರುವ ಹೆಣ್ಣುಮಕ್ಕಳ ವಸತಿ ಗೃಹದಲ್ಲಿ ಖೋಜಾಗಳು ಕಾವಲುಗಾರರು. ಅಲ್ಲಿನ ಕಾರ್ಖಾನೆಯಲ್ಲಿ ಏನನ್ನು ತಯಾರಿಸುತ್ತಾರೆ ಎಲ್ಲಿ ಮಾರುತ್ತಾರೆ ಎಲ್ಲವೂ ರಹಸ್ಯ.
ಅಲ್ಲಿ ವಸತಿಗೃಹದಲ್ಲಿ ಇರುವ ಕೆಲವು ಹೆಣ್ಣುಮಕ್ಕಳಿಗೆ ಆಶ್ರಮದ ಬಗ್ಗೆ ಬಾಬಾನ ಬಗ್ಗೆ ಅಸಮಾಧಾನ ಆದರೆ ಪಮ್ಮಿಗೆ ಇವೆಲ್ಲದರ ಬಗ್ಗೆ ಕೇರ್ ಇಲ್ಲ. ಅವಳಿಗೆ ತಾನು ಅನುಭವಿಸುತ್ತಿದ್ದ ಜಾತೀಯತೆಯೆಂಬ ಹಿಂಸೆಯಿಂದ ಹೊರಬಂದು ಸರ‍್ವಸಮಾನಳಾಗಿ ಇರುವಂತ ಅವಕಾಶ ಬಾಬಾ ಮಾಡಿಕೊಟ್ಟಿದ್ದಾರೆ ಹಾಗಾಗಿ ಅವಳಿಗೆ ಆಶ್ರಮದ ಬಗ್ಗೆ ತುಂಬ ಪ್ರೀತಿ ಹಾಗೂ ಬಾಬಾ ಬಗ್ಗೆ ಅತಿಶಯವಾದ ಭರವಸೆ ಹಾಗೂ ಭಕ್ತಿ. ಆಶ್ರಮದ ಬಗ್ಗೆ ಕೆಲವು ಒಡಕುಮಾತುಗಳು ಅವಳ ಕಿವಿಗೆ ಬಿದ್ದರೂ ತಲೆಕೆಡಿಸಿಕೊಳ್ಳದೆ ತನ್ನಪಾಡಿಗೆ ತಾನು ಇದ್ದುಬಿಡುತ್ತಾಳೆ. ಆಶ್ರಮದಲ್ಲಿ ಉಚಿತ ಮದುವೆಗಳನ್ನೂ ಮಾಡಿಸುತ್ತಾರೆ. ವೇಶ್ಯಾಗೃಹದಿಂದ ಬಿಡಿಸಿ ತಂದ ಹೆಣ್ಣುಗಳೊಡನೆ ಅಲ್ಲಿ ಕೆಲವರ ಮದುವೆ ಆಗುತ್ತದೆ. ಇಂಥ ಉಚಿತ ಮದುವೆ ಒಮ್ಮೆ ನಡೆದಾಗ ಪಮ್ಮಿಯ ಅಣ್ಣ ಸತ್ತಿಯ ಮದುವೆಯೂ ಒಬ್ಬ ಚೆಂದುಳ್ಳಿ ಚೆಲುವೆಯೊಡನೆ ಆಗುತ್ತದೆ. ಇದರಿಂದ ಸತ್ತಿ ಜೊತೆ ಪಮ್ಮಿಯೂ ಆನಂದಿತಳಾಗುತ್ತಾಳೆ. ಅತ್ತಿಗೆಯನ್ನು ಅಕ್ಕನಂತೆ ಪ್ರೀತಿಸುತ್ತಾಳೆ. ಅತ್ತಿಗೆ ಬಬಿತಾ ಕೂಡ ಒಳ್ಳೆಯ ಹೆಣ್ಣುಮಗಳಾಗಿ ಪಮ್ಮಿಗೆ ಪ್ರೀತಿ ತೋರಿಸುವುದರ ಜೊತೆಗೆ ಸತ್ತಿಯ ಮನೆಮನ ಬೆಳಗುತ್ತಾಳೆ.
ನಿಧಾನವಾಗಿ ಆಶ್ರಮದ ಒಂದೊಂದೆ ಬಣ್ಣಗಳನ್ನು ನಿರ್ದೇಶಕ ನಮಗೆ ತೋರಿಸುತ್ತಾ ರೋಚಕತೆ ನೀಡುತ್ತಾ ಸಾಗುತ್ತಾನೆ. ಮೂರೂ ಸೀಸನ್ ಎಲ್ಲಿಯೂ ಬೋರ್ ಎನಿಸುವುದಿಲ್ಲ. ೨೮ ಎಪಿಸೋಡ್ ಗಳು ಸರಾಗವಾಗಿ ನೋಡಿಕೊಂಡು ಹೋಗುತ್ತದೆ. ಅಶ್ಲೀಲ ದೃಶ್ಯಗಳು ಇದ್ದರೂ ಮಿತಿಮೀರಿಲ್ಲ. ಒಂದು ಹಂತಕ್ಕೆ ಸಹ್ಯವಾಗಿಯೇ ಇದೆ. ಸ್ವಾಮೀಜಿಯ ಹೆಣ್ಣುಬಾಕತನ, ಆಶ್ರಮದಲ್ಲಿ ನಡೆಯುವ ಕಾಳಸಂತೆ ವ್ಯಾಪಾರ, ಡ್ರಗ್ಸ್ ದಂಧೆ, ಎದುರು ತಿರುಗಿದವರ ಕೊಲೆ ಸ್ವಾಮೀಜಿಯ ರಾಜಕೀಯ ದಾಳಗಳು ಎರಡೂ ಪಕ್ಷದ ಮುಖ್ಯರೊಡನೆ ಸೇರಿ ತನ್ನ ಬೇಳೆ ಬೇಯಿಸಿಕೊಳ್ಳುವುದು ಎಲ್ಲವನ್ನೂ ಪ್ರೇಕ್ಷಕ ನೋಡುತ್ತಾ ಮಜಾ ಅನುಭವಿಸುತ್ತಾನೆ. ಎಲ್ಲಕ್ಕಿಂತ ಸ್ವಾರಸ್ಯ ಆಶ್ರಮದ ಲಡ್ಡುಪ್ರಸಾದ. ಲಡ್ಡುವಿನಲ್ಲಿ ಡ್ರಗ್ಸ್ ಬೆರೆಸಿ ಕೊಟ್ಟು ಭಕ್ತರನ್ನು ತಾನು ಹೇಳಿದ ಹಾಗೆ ಕೇಳುವ ಹಾಗೆ ಮಾಡಿಕೊಳ್ಳುವ ಬಾಬಾ ನಿರಾಲ.
ಸ್ವಾಮೀಜಿಗೆ ದಿನಕ್ಕೊಂದು ಹೆಣ್ಣು ಬೇಕು. ಸಾಧುಮಾತಾ ಎಂಬ ಸ್ವಾಮೀಜಿಯ ಖಾಸಾ ಸೆಕ್ರೆಟರಿ ಇವನ್ನೆಲ್ಲ ನೋಡಿಕೊಳ್ಳುತ್ತಾಳೆ. ಅವನು ಯಾರನ್ನು ಇಷಾರ ಮಾಡಿರುತ್ತಾನೋ ಆ ಹೆಣ್ಣನ್ನು ರಾತ್ರಿ ಬಾಬಾನ ಶಯ್ಯಾಗಾರಕ್ಕೆ ತಲುಪಿಸುವ ಹೋಣೆ ಇವಳದ್ದು. ಹೊಸಬರಾದರೆ ಅವರು ರಾತ್ರಿ ತಿನ್ನುವ ಆಹಾರದಲ್ಲಿ ಮತ್ತು ಬರಿಸುವ ಔಷಧಿ ನೀಡಿ ಜ್ಞಾನ ತಪ್ಪಿಸಿ ಇಬ್ಬರು ಖೂಳರು ಅವಳನ್ನು ಹೊತ್ತೊಯ್ದು ಶಯ್ಯಾಗಾರ ತಲುಪಿಸುತ್ತಾರೆ. ಹಳಬರಾಗುತ್ತ ಬಂದAತೆ ಅನಿವಾರ್ಯದಿಂದ ಅಲ್ಲೇ ಇರಬೇಕಾದ ಕೆಲವರು ಸ್ವಾಮೀಜಿಯನ್ನು ಇಷ್ಟಪಟ್ಟೇ ತಾವೇ ಹೋಗಿ ಸೇರುತ್ತಾರೆ, ಇಷ್ಟಪಡದವರು ಪ್ರತಿಭಟಿಸಿದರೆ ಗಲಾಟೆಮಾಡಿದರೆ ಅವರ ದನಿ ಅಡಗಿಸಲಾಗುತ್ತದೆ. ಅವರು ಎಲ್ಲಿ ಮಾಯವಾಗುತ್ತಾರೋ ಬಾಬಾಗೆ ಮತ್ತು ಭೂಪೇನ್ ಗೆ ಮಾತ್ರ ತಿಳಿದಿರುತ್ತದೆ
ಆಶ್ರಮವಾಸಿಯಾದ ಪಮ್ಮಿ ಶುರುವಿನಲ್ಲಿ ಬಹಳ ಖುಷಿಯಿಂದಲೇ ಇರುತ್ತಾಳೆ. ಬಾಬಾ ಎಂದರೆ ಅಪರಿಮಿತ ಭಕ್ತಿ. ಒಮ್ಮೆ ಬಾಬಾ ಪಮ್ಮಿಯ ಅತ್ತಿಗೆಯನ್ನು ನೋಡುತ್ತಾನೆ. ಬಾಬಾಗೆ ಬಬಿತಾಳನ್ನು ಸತ್ತಿಗೆ ತಾನೆ ಮದುವೆ ಮಾಡಿಸಿದ್ದು ಎಂದು ಮರೆತುಬಿಟ್ಟಿರುತ್ತಾನೆ. ಆದಿನ ಅವಳನ್ನು ನೋಡಿದಾಗ ಅವನಿಗೆ ಷಾಕ್ ಆಗುತ್ತದೆ. ಇಂಥ ಚೆಲುವೆಯನ್ನು ತಾನು ನೋಡದೆ ಅನುಭವಿಸದೆ ಬಿಟ್ಟದ್ದು ಹೇಗೆ ಎಂದು ಚಡಪಡಿಸುತ್ತಾನೆ. ಸತ್ತಿಯನ್ನು ಕರೆದು ಅವನಿಗೆ ದೂರದ ಊರಿನ ಆಶ್ರಮದ ಬ್ರಾಂಚಿನಲ್ಲಿ ಮೇನೇಜರ್ ಹುದ್ದೆ ಕೊಡಿಸಿ ಅಲ್ಲಿಗೆ ಈಗಿಂದೀಗಲೇ ಹೋಗು ಎಂದು ಹೇಳುತ್ತಾನೆ. ಹೆಂಡತಿಯನ್ನು ಕರೆದುಕೊಂಡು ಹೋಗುತ್ತೇನೆ ಎಂದರೆ ಒಪ್ಪುವುದಿಲ್ಲ. ಇವನಿಗೆ ಹೆಂಡತಿಯ ಆಸೆಯನ್ನು ಬಿಡಿಸಬೇಕೆಂದು ಯೋಚಿಸಿ ಸತ್ತಿಗೆ ಪುರುಷತ್ವಹರಣದ ಆಪರೇಷನ್ ಮಾಡಿಸಿಬಿಡುತ್ತಾನೆ. ಕಾರಣ ಕೇಳಿದರೆ ನೀನು ಈಗ ನನ್ನ ಕಮಾಂಡೋ ಆಗಿದ್ದೀಯ ಹೀಗೆ ಮಾಡಿಕೊಳ್ಳುವುದು ಇಲ್ಲಿ ಕಾನೂನು, ನನಗೆ ಹತ್ತಿರದವನಾಗಿ ಇರುತ್ತೀಯ ಎನ್ನುತ್ತಾನೆ. ಭಕ್ತಿಯ ಪರವಶತೆಯಲ್ಲಿ ಸತ್ತಿ ಇದನ್ನು ತಪ್ಪುತಿಳಿಯುವುದಿಲ್ಲ. ಆದರೆ ಬಬಿತಾಳಿಗೆ ಸತ್ತಿ ನಪುಂಸಕ ನಾಗಿರುವುದು ತಿಳಿಯುತ್ತದೆ. ಅವಳು ಬಹಳ ನೊಂದುಕೊಳ್ಳುತ್ತಾಳೆ. ಈ ಬಾಬಾ ಢೋಂಗಿ ಇವನನ್ನು ನಂಬಬೇಡ ಎಂದು ಎಷ್ಟು ಹೇಳಿದರೂ ಸತ್ತಿ ಬಬಿತಾಳ ಮಾತನ್ನು ನಂಬುವುದಿಲ್ಲ. ಹೆಂಡತಿಯನ್ನು ಅಲ್ಲಿಯೇ ಬಿಟ್ಟು ಬಾಬಾನ ಆದೇಶದಂತೆ ಬೇರೆ ಬ್ರಾಂಚಿಗೆ ಹೊರಟುಬಿಡುತ್ತಾನೆ.
ಅವನು ಹೊರಟ ನಂತರ ಬಬಿತಾ ಒಂದು ರಾತ್ರಿ ಸ್ವಾಮೀಜಿಯ ಕಾಮದಾಹಕ್ಕೆ ಆಹಾರವಾಗುತ್ತಾಳೆ. ಪ್ರತಿಭಟಿಸಿದಾಗ ನಿನ್ನನ್ನು ವಾಪಸ್ ವೇಶ್ಯಾಗೃಹಕ್ಕೇ ಕಳಿಸುತ್ತೇನೆ ಎಂದು ಬಾಬಾ ಹೆದರಿಸುತ್ತಾನೆ. ಬಬಿತಾ ವಿಧಿಯಿಲ್ಲದೆ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾಳೆ. ತನ್ನ ಸಂಸಾರ ಹಾಳುಮಾಡಿದ ಬಾಬಾನ ಬಗ್ಗೆ ಕೋಪವಿದ್ದರೂ ಸಮಯಕ್ಕಾಗಿ ಕಾಯುತ್ತಾಳೆ. ಬಾಬಾನನ್ನು ಇನ್ನಿಲ್ಲದಂತೆ ಪ್ರೀತಿಸುವ ನಾಟಕ ಮಾಡುತ್ತ ಆಶ್ರಮದ ಕೆಲವು ಅಧಿಕಾರಗಳನ್ನು ಕೈಗೆತ್ತಿಕೊಳ್ಳುತ್ತಾಳೆ.
ಒಮ್ಮೆ ಆ ಪ್ರದೇಶದ ಹಾಲಿ ಮುಖ್ಯ ಮಂತ್ರಿ ಸುಂದರಲಾಲ್ ಬಾಬಾನ ನೆರವಿನೊಂದಿಗೆ ಆಶ್ರಮದ ಹಿಂದಿರುವ ಸರ್ಕಾರಿ ಅರಣ್ಯ ಪ್ರದೇಶವನ್ನು ಒಂದು ಗ್ಲೋಬಲ್ ಸಂಸ್ಥೆಗೆ ಕೊಡುತ್ತಾನೆ. ಅಲ್ಲಿ ಕಾಮಗಾರಿ ನಡೆಯುವಾಗ ಅಲ್ಲಿ ಒಂದು ಅಸ್ಥಿಪಂಜರ ದೊರೆಯತ್ತದೆ. ಪೊಲೀಸ್ ನವರು ಬರುತ್ತಾರೆ. ಅಸ್ತಿಪಂಜರದ ಪೋಸ್ಟ್ ಮರ‍್ಟಂ ಆಗುತ್ತದೆ. ಅದು ಒಂದು 24-25 ವಯಸ್ಸಿನ ಹೆಣ್ಣಿನ ಅಸ್ತಿಪಂಜರ ಐದು ವರ್ಷಗಳ ಹಿಂದಿನದು ಎಂದು ಅಲ್ಲಿನ ವೈದ್ಯಾಧಿಕಾರಿ ಡಾ. ನತಾಶಾ ಹೇಳುತ್ತಾಳೆ. ಆ ಅಸ್ತಿಪಂಜರ ಯಾರದ್ದು ಎಂಬ ಹುಡುಕಾಟದಲ್ಲಿ ಇರುವಾಗ ಒಂದು ಹೆಣ್ಣುಮಗಳು ಬಂದು ಅದನ್ನು ಗುರ್ತಿಸಿ ಅದು ತನ್ನ ಅಕ್ಕ ಮೋಹಿನಿಯದು ಎಂದು ಹೇಳುತ್ತಾಳೆ. ತನ್ನ ಅಕ್ಕ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದಳು ತಂದೆ ತಾಯಿ ಇಲ್ಲದ ನಾವು ಬಹಳ ಒಗ್ಗಟ್ಟಿನಿಂದ ಇದ್ದೆವು ಒಂದು ಅಕ್ಕ ಮಾಯವಾದವಳು ಮತ್ತೆ ಸಿಗಲೇ ಇಲ್ಲ ಎಂದು ಅಳುತ್ತಾಳೆ. ಅವಳ ಡಿಎನ್ ಎ ಅಸ್ಥಿಪಂಜರದ ಡಿಎನ್ ಎ ಜೊತೆ ಹೊಂದಿಕೊಳ್ಳುತ್ತದೆ. ಈ ಅಸ್ತಿಪಂಜರದ ರಹಸ್ಯ ಬೇಧಿಸಬೇಕೆಂದು ನತಾಶಾಳಿಗೆ ಅನಿಸುತ್ತದೆ. ನತಾಶಾಳ ಪ್ರಾಮಾಣಿಕತೆ ಇನ್ಸ್ ಪೆಕ್ಟರ್ ಉಜಾಗರನ ಕಣ್ಣು ತೆರೆಸುತ್ತದೆ. ಉಜಾಗರ್ ಮತ್ತು ಅವನ ಸಹಾಯಕ ಸಾಧು ಇಬ್ಬರೂ ನತಾಶ ನೆರವಿಗೆ ನಿಲ್ಲುತ್ತಾರೆ. ಅಲ್ಲಿನ ಲೋಕಲ್ ಚಾನಲ್ ನ ಪತ್ರಕಾರನೊಬ್ಬ ಇವರಿಗೆ ಸಹಾಯ ಮಾಡಲು ಕೈಜೋಡಿಸುತ್ತಾನೆ. ಹೀಗೆ ಆಶ್ರಮದ ವಿರುದ್ಧ ನಾಲ್ವರ ಒಂದು ಪಡೆ ತಯಾರಾಗುತ್ತದೆ. ಇವರು ಆಶ್ರಮದ ಒಂದೊಂದೇ ರಹಸ್ಯಗಳನ್ನು ಅನಾವರಣ ಮಾಡಲು ಉದ್ಯುಕ್ಯರಾಗುತ್ತಾರೆ. ಅಸ್ತಿಪಂಜರವಾದ ಮೋಹಿನಿಯತಂಗಿ ಸೋಹಿನಿಯನ್ನು ಬಚ್ಚಿಡುವುದು ಇವರಿಗೆ ದೊಡ್ಡ ಸವಾಲಾಗುತ್ತದೆ. ಯಾವ ಸರ್ಕಾರಿ ಕಚೇರಿಯಲ್ಲೂ ಬಾಬಾನ ಶಿಷ್ಯರೇ ತುಂಬಿರುತ್ತಾರೆ. ಸರ್ಕಾರವೇ ಬಾಬಾ ನಿರಾಲನ ಕಪಿಮುಷ್ಟಿಯಲ್ಲಿ ಇರುತ್ತದೆ. ಬಾಬಾನ ಅನುಯಾಯಿಗಳಿಗೆ ಎದುರೆಂಬುದೇ ಇಲ್ಲ. ಹೀಗಾಗಿ ಅವರು ಸೋಹಿನಿಯನ್ನು ಹುಡುಕತೊಡಗುತ್ತಾರೆ. ಸೋಹಿನಿ ಹೊರಗೆ ಇದ್ದರೆ ಬಾಬಾಬನ ರಹಸ್ಯ ಬಯಲಾಗುವ ಭಯ. ಪತ್ರಕಾರ ಸೋಹಿನಿಯನ್ನು ಎಲ್ಲೋ ದೂರದ ಊರಿನಲ್ಲಿರುವ ತನ್ನ ತಾಯಿಯೊಂದಿಗೆ ಇರಿಸುತ್ತಾನೆ. ತಾನು ಎಲೆಕ್ಟ್ರಿಷಿಯನ್ ವೇಷಧರಿಸಿ ಆಶ್ರಮದಲ್ಲಿ ಕೆಲಸಕ್ಕೆ ಸೇರುತ್ತಾನೆ. ಉಜಾಗರ್ ಹಾಗೂ ಅವನ ಸಹಾಯಕ ಸಾಧು ಕೂಡ ವ್ಯಸನಿಗಳಾಗಿ ನಾಟಕವಾಡುತ್ತ ವ್ಯಸನದಿಂದ ದೂರವಾಗಲು ಆಶ್ರಮ ಸೇರುತ್ತಾರೆ. ನಿಧಾನವಾಗಿ ಆಶ್ರಮದ ರಹಸ್ಯಗಳನ್ನು ಅಲ್ಲಿ ನಡೆಯುವ ಕಳ್ಳವ್ಯಾಪಾರ ಡ್ರಗ್ಸ್ ದಂಧೆ ಎಲ್ಲವನ್ನು ಪತ್ತೆ ಹಚ್ಚುತ್ತಾರೆ. ಉಜಾಗರ್ ಒಮ್ಮೆ ರಹಸ್ಯವಾಗಿ ಕಡತಗಳನ್ನು ಇಟ್ಟಿರುವ ಕೋಣೆಗೆ ಹೋಗಿ ಎಲ್ಲವನ್ನು ಪೋಟೋ ತೆಗೆದುಕೊಳ್ಳುತ್ತಾನೆ. ಸಾಧುವಿನ ತಂದೆ ತೀರಿಹೋಗಿದ್ದಾರೆ ಆದ್ದರಿಂದ ತಾವು ಈಗ ಜರೂರಾಗಿ ಮನೆಗೆ ಹೋಗಬೇಕು ಎಂದು ನಾಟಕವಾಡಿ ಆಶ್ರಮದಿಂದ ಹೊರಬೀಳುತ್ತಾರೆ. ಪತ್ರಕಾರ ಕೂಡ ಯಾವುದೋ ನೆಪದಿಂದ ಆಶ್ರಮದಿಂದ ಹೊರಬೀಳುತ್ತಾನೆ. ಆದರೆ ಅಷ್ಟರಲ್ಲಿ ಸೋಹಿನಿಯನ್ನು ಬಾಬಾನ ಶಿಷ್ಯರು ಮುಗಿಸಿಬಿಡುತ್ತಾರೆ. ಪ್ರತ್ರಕಾರನ ತಾಯಿಯನ್ನು ಸಾಯಿಸುತ್ತಾರೆ. ಉಜಾಗರ್ ಸಾಧು ಪತ್ರಕಾರ ಡಾ. ನತಾಶ ಈಗ ಆಶ್ರಮದ ಬಣ್ಣ ಬಯಲಿಗೆಳೆಯಲು ಬೇರೊಂದು ಉಪಾಯದ ಹುಡುಕಾಟ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಅಕೇಲಿ: ಯುದ್ಧಭೂಮಿಯಲ್ಲಿ ಸಿಲುಕಿದ ಯುವತಿಯ ಕಥೆ
ಈ ಮಧ್ಯೆ ಪಮ್ಮಿ ಕುಸ್ತಿಯಲ್ಲಿ ಸ್ಟೇಟ್ ಚಾಂಪಿಯನ್ ಆಗುತ್ತಾಳೆ. ಬಾಬಾಗೆ ಅವಳು ಚಾಂಪಿಯನ್ ಆಗಿದ್ದು ಖುಷಿ ನೀಡುತ್ತದೆ. ಅವಳಿಗೆ ಪ್ರತ್ಯೇಕ ಕೋಣೆಯ ಸೌರ‍್ಯ ಕೊಡಿಸುತ್ತಾನೆ. ಪಮ್ಮಿಯ ಮುಗ್ಧತೆ ಅವಳ ಚೆಲುವಿಕೆ ಬಾಬಾನ ಕಣ್ಣು ಕುಕ್ಕುತ್ತದೆ. ಅವನ ನಿದ್ರೆ ಹಾಳು ಮಾಡುತ್ತದೆ. ಸರಿ ಬಾಬಾನ ಸೆಕ್ರೆಟರಿ ಸಾಧುಮಾತಾಗೆ ಬುಲಾವಾ ಹೋಗುತ್ತದೆ. ಆ ರಾತ್ರಿ ಊಟದಲ್ಲಿ ಪಮ್ಮಿಗೆ ಡ್ರಗ್ಸ್ ಬೆರೆಸಿ ಕೊಡಲಾಗುತ್ತದೆ. ಪಮ್ಮಿ ಮೈಮೇಲೆ ಪ್ರಜ್ಞೆಯಿಲ್ಲದಂತೆ ನಿದ್ರಿಸುತ್ತಾಳೆ. ರಾತ್ರಿ ಬಾಬಾನ ಚೇಲಾಗಳು ಪಮ್ಮಿಯನ್ನು ಹೊತ್ತೊಯ್ಯುತ್ತಾರೆ. ಬಾಬಾ ಪಮ್ಮಿಯ ಮೇಲೆ ಅತ್ಯಾಚಾರ ಮಾಡುತ್ತಾನೆ. ಬೆಳಗಿನ ಜಾವ ಪಮ್ಮಿಯನ್ನು ರೂಮಿಗೆ ತಂದು ಮಲಗಿಸುತ್ತಾರೆ. ಬೆಳಗ್ಗೆ ಎದ್ದ ಪಮ್ಮಿಗೆ ಆಘಾತ ಆಶ್ಚರ್ಯ, ತನ್ನ ಮೇಲೆ ಅತ್ಯಾಚಾರ ನಡೆದಿದೆಯೆಂದು ಗೊತ್ತಾಗುತ್ತದೆ. ಅಲ್ಲೇ ಇರುವ ಕವಿತಾ ಎಂಬ ಹೆಣ್ಣು ಬಾಬಾದೇ ಕೆಲಸ ಇದು ಎಂದು ಹೇಳಿದರೂ ಪಮ್ಮಿ ನಂಬುವುದಿಲ್ಲ. ಈ ಅತ್ಯಾಚಾರ ಎರಡುಮೂರುಬಾರಿ ಪುನರಾವರ್ತನೆಯಾಗುತ್ತದೆ. ರಾತ್ರಿ ಅವರು ವಿಶೇಷವಾಗಿ ಬಡಿಸುವ ಖಾದ್ಯ ತಿನ್ನಬೇಡ ಎಂದು ಕವಿತಾ ಹೇಳಿಕೊಡುತ್ತಾಳೆ. ಅದರಂತೆ ಪಮ್ಮಿ ಮತ್ತುಬರಿಸಿದ ಆಹಾರ ಸೇವಿಸದೆ ಪರೀಕ್ಷಿಸುತ್ತಾಳೆ. ಅವಳಿಗೆ ಬಾಬಾ ಆಟ ತಿಳಿದುಬಿಡುತ್ತದೆ. ಬಾಬಾನನ್ನು ಚೆನ್ನಾಗಿ ಬೈಯುತ್ತಾಳೆ. ಎಲ್ಲರಿಗೂ ಹೇಳುತ್ತೇನೆ ಎಂದು ಹೆದರಿಸುತ್ತಾಳೆ. ಆದರೆ ಬಾಬಾ ಅವಳ ಮಾತಿಗೆ ಸೊಪ್ಪು ಹಾಕುವುದಿಲ್ಲ. ಪಮ್ಮಿಯನ್ನು ನೋಡಲು ಬರುವ ಅವಳ ತಂದೆಗೆ ಅಪಘಾತ ಮಾಡಿಸಿ ಸಾಯಿಸುತ್ತಾನೆ. ಪಮ್ಮಿಯ ಅಣ್ಣನನ್ನು ಹಿಂಸಿಸಿ ಸಾಯಿಸುತ್ತಾನೆ. ಪಮ್ಮಿಯ ರೋಷಾವೇಷ ಬಾಬಾನ ವಿರುದ್ಧ ಮೇರೆ ಮೀರುತ್ತದೆ. ಬಾಬಾನಿಗೆ ಒಂದು ಪಾಠ ಕಲಿಸಲೇ ಬೇಕು ಎಂದು ನಿರ್ಧಾರ ಮಾಡುತ್ತಾಳೆ. ಬಾಬಾನಿಗೆ ಅಧೀನಳಾದಂತೆ ನಟಿಸುತ್ತಾ ಆಶ್ರಮದ ಒಳಹೊರಗೆಲ್ಲ ಅರಿತುಕೊಂಡು ಒಂದು ದಿನ ಆಶ್ರಮದಿಂದ ನಾಪತ್ತೆಯಾಗುತ್ತಾಳೆ. ಅವಳ ನಾಪತ್ತೆಗೆ ಪತ್ರಕಾರ ನೆರವಾಗುತ್ತಾನೆ. ಒಂದು ದಿನ ಅವರಿಬ್ಬರೂ ಆಶ್ರಮದಿಂದ ಮಾಯವಾಗುತ್ತಾರೆ.
ನಾಪತ್ತೆಯಾದ ಪಮ್ಮಿಯನ್ನು ಹುಡುಕಲು ಇಡೀ ಪೊಲೀಸ್ ಡಿಪಾರ್ಟ್‌ಮೆಂಟ್ ನಡುಬಗ್ಗಿಸಿ ಬಾಬಾನ ಮುಂದೆ ನಿಲ್ಲುತ್ತದೆ. ಎಲ್ಲಕಡೆ ಜಾಲ ಬೀಸುತ್ತಾರೆ. ಪಮ್ಮಿಯ ಚಿತ್ರಗಳನ್ನು ಎಲ್ಲೆಡೆ ಅಂಟಿಸುತ್ತಾರೆ. ಅವಳು ಕೊಲೆಪಾತಕಿ ಎಂದು ಬಿಂಬಿಸುತ್ತಾರೆ. ಈಗ ಉಜಾಗರ್ ಹಾಗೂ ನತಾಶಾ ಚುರುಕಾಗುತ್ತಾರೆ. ಬಾಬಾನನ್ನು ಹಣಿಯಲು ಅವರೂ ಪಮ್ಮಿ ಹಾಗೂ ಪತ್ರಕಾರ ಜೊತೆ ಸೇರಿ ಜಾಲ ಹೆಣೆಯುತ್ತಾರೆ. ಈಕಡೆ ಬಾಬಾ ಹಾಗೂ ಭೂಪೇನ್ ಕೂಡಾ ಪಮ್ಮಿಯನ್ನು ಮುಗಿಸಲು ಇನ್ನಿಲ್ಲದಂತೆ ಪ್ರಯತ್ನ ಮಾಡುತ್ತಾರೆ. ಪ್ರತಿಸಲ ಬಾಬಾನ ಪಡೆಯವರಿಂದ ಪಮ್ಮಿ ಪತ್ರಕಾರ ತಪ್ಪಿಸಿಕೊಳ್ಳುತ್ತಾರೆ. ಈ ಕಳ್ಳಪೊಲೀಸ್ ಆಟದಲ್ಲಿ ಯಾರು ಗೆಲ್ಲುತ್ತಾರೆ? ರೋಚಕ ತಿರುವುಗಳು ಜೀವ ಬಿಗಿಹಿಡಿದು ನೋಡುವಂಥ ದೃಶ್ಯಗಳು ಪ್ರೇಕ್ಷಕನನ್ನು ಕುತೂಹಲದ ತುಟ್ಟತುದಿಗೆ ಒಯ್ಯುತ್ತದೆ.
ಇದನ್ನೂ ಓದಿ: Kishkindha Kaandam: ಕಾಡಿನ ಒಂಟಿ ಮನೆಯಲ್ಲಿನ ರಹಸ್ಯಗಳ ರೋಚಕ ತಿರುವಿನ ಕಣ್ಣೀರು ತರಿಸೋ ಭಾವನಾತ್ಮಕ ಕಥೆ
ಇದರಲ್ಲಿ ಅಮೋಘ ನಟನೆ ಎಂದರೆ ಬಾಬ್ಬಿ ಡಿಯೋಲ್. ಹೀರೋ ಆಗಿ ಬಾಬ್ಬಿಯನ್ನು ನೋಡಿರುವ ನಮಗೆ ಬಾಬ್ಬಿಯ ಈ ಅವತಾರ ಹೊಸದು ಮತ್ತು ಅಷ್ಟೇ ರೋಚಕ. ಪಮ್ಮಿಯಾಗಿ ಅದಿತಿಯ ಅಭಿನಯ ಭೇಷ್ ಎನ್ನುವಹಾಗಿದೆ. ಅದಿತಿ ಶಿ ಎಂಬ ವೆಬ್ ಸೀರೀಸ್ ನಲ್ಲೂ ಅಮೋಘವಾಗಿ ಅಭಿನಯಿಸಿದ್ದಳು. ದರ್ಶನ್ ಕುಮಾರ್ ಉಜಾಗರ್ ಆಗಿ, ಅನುಪ್ರಿಯ ಗೋಯೆಂಕಾ ಡಾ. ನತಾಶಾ ಆಗಿ ಬಿಗಿಯಾಗಿ ಅಭಿನಯಿಸಿದ್ದಾರೆ. ನಾನು ಪೂರ್ತಿ ಕಥೆ ಬರೆದಿಲ್ಲ. ನೀವೂ ನೋಡಿ ಎಂಜಾಯ್ ಮಾಡಿ.
ಏಕ್ ಬದನಾಮ್ ಆಶ್ರಮ್