ಚಿತ್ರದಲ್ಲಿ ಬರುವ ಹತ್ತು ಹದಿನಾರು ಮಂದಿ ಹುಡುಗರ ಅಭಿನಯ ಕೂಡ ಮೆಚ್ಚುಗೆಗೆ ಅರ್ಹ. ಅನೇಕ ಹೊಸಬರನ್ನು ಒಳಗೊಂಡಿದ್ದರೂ ಒಬ್ಬನೇ ಒಬ್ಬ ನಾನ್ ಆ್ಯಕ್ಟರ್ ಕೂಡ ಈ ಚಿತ್ರದಲ್ಲಿಲ್ಲ.

ಗಿರಿ

ಪಡುವಾರಹಳ್ಳಿ ಪಾಂಡವರು ಮಾದರಿಯ ಸಿನಿಮಾ. ಗ್ರಾಮೀಣ ಪ್ರದೇಶದ ಕಷ್ಟಗಳ ಚಿತ್ರಣ. ದುರಹಂಕಾರಿ ಲಂಚಕೋರ ಅಧಿಕಾರಿ. ಅವನಿಗೆ ಅಂಜಿ ನಡೆಯುವ ಕೂಲಿ ಕಾರ್ಮಿಕರು. ಬಿಸಿರಕ್ತದ ತರುಣರ ದಂಗೆ ಏಳುವ ಆಶೆ. ಅಧಿಕಾರಿಯ ಅಹಂಕಾರ ಮಟ್ಟಹಾಕುವ ಹುನ್ನಾರಗಳನ್ನು ದಸ್ಕತ್ತು ಚಿತ್ರಿಸುತ್ತದೆ.ದಸ್ಕತ್ತು ಅಂದರೆ ಸಹಿ. ರೇಷನ್ ಕಾರ್ಡಿನಿಂದ ಹಿಡಿದು ಸರ್ಕಾರದ ಎಲ್ಲಾ ಸೌಲಭ್ಯಗಳನ್ನೂ ಪಡೆಯಲು ಗ್ರಾಮಲೆಕ್ಕಾಧಿಕಾರಿಯೋ ಅದೇ ಹೆಸರಿನ ಬೇರೊಬ್ಬ ಅಧಿಕಾರಿಯೋ ಸಹಿ ಮಾಡಬೇಕು. 

ಅದಕ್ಕೋಸ್ಕರ ಇಪ್ಪತ್ತು ರುಪಾಯಿ ಲಂಚ ಪಡೆಯುವ ಅಧಿಕಾರಿ, ವೈಯಕ್ತಿಕ ಬದುಕಿನಲ್ಲೂ ಕ್ರೂರಿ. ಅವನನ್ನು ಮಟ್ಟ ಹಾಕುವ ಹುಡುಗರ ಗುಂಪು ಮತ್ತು ಹುಡುಗರನ್ನು ತನ್ನ ಅಧಿಕಾರದಿಂದ ಸದೆಬಡಿಯುವ ಅಧಿಕಾರಿಯ ನಡುವೆಯೇ ಗ್ರಾಮದೇವತೆ, ಹಬ್ಬ, ಆಚರಣೆ, ತಮಾಷೆ, ಸಣ್ಣದೊಂದು ಪ್ರೇಮ, ಪ್ರೇಮವೋ ಆತ್ಮಾಭಿಮಾನವೋ ಎಂಬ ಪ್ರಶ್ನೆ ಎಲ್ಲವೂ ಇದೆ. ಈ ಕಥಾವಸ್ತು ಹೊಸದೇನಲ್ಲ. ಅದನ್ನು ಕಟ್ಟಿರುವ ರೀತಿ ಆಪ್ಯಾಯಮಾನ. ದಕ್ಷಿಣ ಕನ್ನಡದ ಪುಟ್ಟ ಊರನ್ನು ಅದರ ಎಲ್ಲ ಸ್ವಾದ ಮತ್ತು ಸ್ವಾರಸ್ಯದೊಂದಿಗೆ ತೆರೆಯ ಮೇಲೆ ತಂದಿರುವುದನ್ನು ನೋಡುವುದೇ ಚೆಂದ. 

ಚಿತ್ರ: ದಸ್ಕತ್
ನಿರ್ದೇಶನ: ಅನೀಶ್ ಪೂಜಾರಿ

ಚಿತ್ರದಲ್ಲಿ ಬರುವ ಹತ್ತು ಹದಿನಾರು ಮಂದಿ ಹುಡುಗರ ಅಭಿನಯ ಕೂಡ ಮೆಚ್ಚುಗೆಗೆ ಅರ್ಹ. ಅನೇಕ ಹೊಸಬರನ್ನು ಒಳಗೊಂಡಿದ್ದರೂ ಒಬ್ಬನೇ ಒಬ್ಬ ನಾನ್ ಆ್ಯಕ್ಟರ್ ಕೂಡ ಈ ಚಿತ್ರದಲ್ಲಿಲ್ಲ. ಕತೆಯ ಅಂತರಂಗದಲ್ಲಿರುವ ಕೌರ್ಯ ಮತ್ತು ಕರುಣೆಯೇ ಚಿತ್ರದ ಆತ್ಮ. ಯಾವುದಕ್ಕೂ ಶಾಶ್ವತ ಪರಿಹಾರ ಇಲ್ಲ. ಎಲ್ಲವನ್ನೂ ಮತ್ತೆ ಮತ್ತೆ ಸರಿಪಡಿಸುತ್ತಲೇ ಇರಬೇಕು ಅನ್ನುವುದನ್ನು ಈ ಸಿನಿಮಾ ಹೇಳುತ್ತದೆ. ದಸ್ಕತ್ತಿಗೆ ಹಣ ಪಡೆಯುವ ಅಧಿಕಾರಿ ಮತ್ತೆ ಮತ್ತೆ ತಲೆಯೆತ್ತುತ್ತಲೇ ಇರುತ್ತಾನೆ. ಅವನನ್ನು ಮಟ್ಟ ಹಾಕುವ ತರುಣ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತಾನೆ ಎನ್ನುವುದನ್ನು ದಸ್ಕತ್ ಸಮರ್ಥವಾಗಿ ಹೇಳಿದೆ. ಪ್ರಾದೇಶಿಕತೆಯ ಅಸಲಿ ದಸ್ಕತ್ ಇರುವ ಸಿನಿಮಾ ಇದು.