ಕಳೆದ ತಿಂಗಳು ಭಾರತದಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳು ಭರ್ಜರಿ ಮಾರಾಟ ಕಂಡಿದ್ದು, ಮಾರುತಿ ಸುಜುಕಿ ವ್ಯಾಗನ್ ಆರ್ 16,952 ಯುನಿಟ್ ಮಾರಾಟವಾಗಿದ್ದು, ಅಗ್ರಸ್ಥಾನದಲ್ಲಿದೆ. ಕಡಿಮೆ ಬೆಲೆ, ಅಧಿಕ ಮೈಲೇಜ್ ಮತ್ತು ಉತ್ತಮ ಸ್ಥಳಾವಕಾಶದಿಂದಾಗಿ ಇದು ಜನಪ್ರಿಯವಾಗಿದ್ದು, ಸ್ವಿಫ್ಟ್, ಬಲೆನೊ ಮತ್ತು ಆಲ್ಟೊ ಕೂಡ ಟಾಪ್-5 ಪಟ್ಟಿಯಲ್ಲಿವೆ.
ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಎಸ್‌ಯುವಿ ಕಾರುಗಳ ಹವಾ ಜೋರಾಗಿದ್ದರೂ, ಬಜೆಟ್ ಬೆಲೆಯಲ್ಲಿ ಕಾರು ಕೊಳ್ಳಲು ಬಯಸುವ ಭಾರತೀಯ ಕುಟುಂಬಗಳಿಗೆ ಹ್ಯಾಚ್‌ಬ್ಯಾಕ್ (ಸಾಮಾನ್ಯ ಗಾತ್ರದ ಸಣ್ಣ ಕಾರುಗಳು) ಕಾರುಗಳೇ ಮೊದಲ ಆಯ್ಕೆಯಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಕಳೆದ ತಿಂಗಳು ಭಾರತದಲ್ಲಿ ಟಾಪ್-10 ಹ್ಯಾಚ್‌ಬ್ಯಾಕ್ ಕಾರುಗಳು ಬರೋಬ್ಬರಿ 76,264 ಯುನಿಟ್‌ಗಳಷ್ಟು ಮಾರಾಟವಾಗಿ ಹೊಸ ದಾಖಲೆ ಬರೆದಿವೆ. ಈ ಸಾಲಿನಲ್ಲಿ ಎಂದಿನಂತೆ ಮಾರುತಿ ಸುಜುಕಿ ಸಂಸ್ಥೆಯ ವ್ಯಾಗನ್ ಆರ್ ಕಾರು ಅಗ್ರಸ್ಥಾನದಲ್ಲಿದ್ದು, ಜನರ ನೆಚ್ಚಿನ ಫ್ಯಾಮಿಲಿ ಕಾರ್ ಎನಿಸಿಕೊಂಡಿದೆ. ಕಳೆದ ತಿಂಗಳೊಂದರಲ್ಲೇ 16,952 ವ್ಯಾಗನ್ ಆರ್ ಕಾರುಗಳು ಮಾರಾಟವಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದರ ಮಾರಾಟದಲ್ಲಿ ಶೇ.31ರಷ್ಟು ಏರಿಕೆ ಕಂಡುಬಂದಿದೆ.
ಏನಿದರ ವಿಶೇಷತೆ?
ಕಡಿಮೆ ಬೆಲೆ, ಹೆಚ್ಚು ಜಾಗ (ಕ್ಯಾಬಿನ್ ಸ್ಪೇಸ್) ಹಾಗೂ ಅತ್ಯುತ್ತಮ ಮೈಲೇಜ್ ನೀಡುವುದು ಈ ಕಾರಿನ ದೊಡ್ಡ ಪ್ಲಸ್ ಪಾಯಿಂಟ್. ಇದರ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ. 1 ಲೀಟರ್ ಹಾಗೂ 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಳಲ್ಲಿ ಲಭ್ಯವಿರುವ ಈ ಕಾರು, ಪೆಟ್ರೋಲ್‌ನಲ್ಲಿ ಲೀಟರ್‌ಗೆ 23 ರಿಂದ 25 ಕಿ.ಮೀ ಮೈಲೇಜ್ ನೀಡುತ್ತದೆ. ಸಿಎನ್‌ಜಿ ರೂಪಾಂತರದಲ್ಲಂತೂ 33 ಕಿ.ಮೀಗೂ ಹೆಚ್ಚು ಮೈಲೇಜ್ ಕೊಡುವ ಮೂಲಕ ಗ್ರಾಹಕರ ಜೇಬಿಗೆ ಆಸರೆಯಾಗಿದೆ. ಅಲ್ಲದೇ 6 ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ಹಿಲ್-ಹೋಲ್ಡ್ ಕಂಟ್ರೋಲ್‌ನಂತಹ ಭದ್ರತಾ ವೈಶಿಷ್ಟ್ಯಗಳಿವೆ. ಒಳಗಡೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ, ಕೀಲೆಸ್ ಎಂಟ್ರಿ ವ್ಯವಸ್ಥೆಯೂ ಇದೆ. ಇಷ್ಟೆಲ್ಲಾ ಫೀಚರ್ಸ್‌ಗಳಿದ್ದರೂ ಇದರ ಆರಂಭಿಕ ಬೆಲೆ ₹4,98,900 (ಎಕ್ಸ್-ಶೋರೂಮ್) ಆಗಿರುವುದು ವಿಶೇಷ.
ಇತರ ಜನಪ್ರಿಯ ಕಾರುಗಳ!
ಮಾರುಕಟ್ಟೆಯಲ್ಲಿ ಕೇವಲ ವ್ಯಾಗನ್ ಆರ್ ಮಾತ್ರವಲ್ಲದೆ, ಇನ್ನು ಕೆಲವು ಕಾರುಗಳು ಬಂಪರ್ ಮಾರಾಟ ಕಾಣುತ್ತಿವೆ;
1. ಮಾರುತಿ ಸುಜುಕಿ ಸ್ವಿಫ್ಟ್; ಯುವಕರ ನೆಚ್ಚಿನ ಕಾರಾಗಿರುವ ಸ್ವಿಫ್ಟ್, ತನ್ನ ಆಕರ್ಷಕ ಲುಕ್ ಮತ್ತು ಹೊಸ ಎಂಜಿನ್‌ನಿಂದಾಗಿ 15,215 ಯುನಿಟ್ ಮಾರಾಟವಾಗಿ ಎರಡನೇ ಸ್ಥಾನದಲ್ಲಿದೆ.
2. ಮಾರುತಿ ಬಲೆನೊ; ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದ ಈ ಕಾರು 12,488 ಯುನಿಟ್ ಮಾರಾಟದೊಂದಿಗೆ ಶೇ. 39 ರಷ್ಟು ಬೆಳವಣಿಗೆ ಕಂಡು ಮೂರನೇ ಸ್ಥಾನದಲ್ಲಿದೆ.
3. ಮಾರುತಿ ಆಲ್ಟೊ; ದೇಶದ ಅತ್ಯಂತ ಅಗ್ಗದ ಕಾರು ಎನಿಸಿಕೊಂಡಿರುವ ಆಲ್ಟೊ, ಮೊದಲ ಬಾರಿಗೆ ಕಾರು ಕೊಳ್ಳುವವರನ್ನು ಆಕರ್ಷಿಸುತ್ತಿದ್ದು, 10,388 ಯುನಿಟ್ ಮಾರಾಟದೊಂದಿಗೆ ಬರೋಬ್ಬರಿ ಶೇ. 106 ರಷ್ಟು ಬೃಹತ್ ಜಿಗಿತ ಕಂಡಿದೆ.
4. ಟಾಟಾ ತಿಯಾಗೊ; ಸುರಕ್ಷತೆಗೆ ಹೆಸರಾಗಿರುವ (4-ಸ್ಟಾರ್ NCAP ರೇಟಿಂಗ್) ತಿಯಾಗೊ 7,329 ಯುನಿಟ್ ಮಾರಾಟವಾಗಿ ಟಾಪ್-5 ನಲ್ಲಿದೆ.
ಮಾರುಕಟ್ಟೆಯಲ್ಲಿ ಭದ್ರಸ್ಥಾನ ಹೊಂದಿದ ಬ್ರ್ಯಾಂಡ್!
ಇವುಗಳ ಹೊರತಾಗಿ ಹುಂಡೈ ಗ್ರ್ಯಾಂಡ್ ಐ10, ಟೊಯೋಟಾ ಗ್ಲಾಂಜಾ, ಟಾಟಾ ಆಲ್ಟ್ರೋಜ್, ಹುಂಡೈ ಐ20 ಮತ್ತು ಮಾರುತಿ ಸೆಲೆರಿಯೊ ಕಾರುಗಳು ಕೂಡ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಒಟ್ಟಿನಲ್ಲಿ, ಕಡಿಮೆ ನಿರ್ವಹಣಾ ವೆಚ್ಚ, ಸುಲಭ ಚಾಲನೆ ಮತ್ತು ನಂಬಿಕಸ್ಥ ಬ್ರ್ಯಾಂಡ್‌ಗಳು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಇಂದಿಗೂ ಭದ್ರವಾದ ಸ್ಥಾನ ಹೊಂದಿವೆ ಎಂಬುದನ್ನು ಈ ಮಾರಾಟದ ವರದಿ ತೋರಿಸುತ್ತದೆ.


