ತಿಂಗಳಿಗೊಮ್ಮೆ SIP ಮಾಡುವ ಬದಲು ಪ್ರತಿದಿನ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಈ ಲೇಖನ ಉತ್ತರಿಸುತ್ತದೆ. ವೈಟ್‌ಓಕ್ ಕ್ಯಾಪಿಟಲ್ ಅಧ್ಯಯನದ ಪ್ರಕಾರ, ಹೂಡಿಕೆಯ ಅವಧಿಗಿಂತ ಶಿಸ್ತುಬದ್ಧವಾಗಿ ದೀರ್ಘಕಾಲ ಹೂಡಿಕೆ ಮಾಡುವುದೇ ಸಂಪತ್ತು ಸೃಷ್ಟಿಗೆ ಮುಖ್ಯವಾಗಿದೆ. ದಿನನಿತ್ಯ ಮತ್ತು ಮಾಸಿಕ ಎಸ್‌ಐಪಿಗಳ ಆದಾಯದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಅಧ್ಯಯನವು ಸ್ಪಷ್ಟಪಡಿಸಿದೆ.
ತಿಂಗಳಿಗೊಮ್ಮೆ SIP ಮಾಡೋ ಬದಲು, ಪ್ರತಿದಿನ ದುಡ್ಡು ಹಾಕಿದ್ರೆ ಜಾಸ್ತಿ ಲಾಭ ಸಿಗುತ್ತಾ? ಹೂಡಿಕೆದಾರರ ವಲಯದಲ್ಲಿ ಈ ಪ್ರಶ್ನೆ ಯಾವಾಗಲೂ ಕೇಳಿಬರುತ್ತಿರುತ್ತದೆ. ಪ್ರತಿದಿನ ಹೂಡಿಕೆ ಮಾಡಿದರೆ ಮಾರುಕಟ್ಟೆಯ ಏರಿಳಿತಗಳ ಲಾಭ ಪಡೆದು, ಒಳ್ಳೆ ರಿಟರ್ನ್ಸ್ ಗಳಿಸಬಹುದು ಅಂತಾ ಹಲವರು ನಂಬಿದ್ದಾರೆ. ಇತ್ತೀಚೆಗೆ ದಿನನಿತ್ಯದ ಎಸ್‌ಐಪಿಗಳು (Daily SIP) ಜನಪ್ರಿಯ ಆಗೋಕೆ ಇದೇ ಕಾರಣ. ಆದರೆ, ಸತ್ಯ ಏನಂದ್ರೆ ಎಸ್‌ಐಪಿ ಅವಧಿಗೆ ಅಷ್ಟೊಂದು ಮಹತ್ವ ಇಲ್ಲ. ನೀವು ಎಷ್ಟು ಸಮಯಕ್ಕೊಮ್ಮೆ ಹೂಡಿಕೆ ಮಾಡ್ತೀರಿ ಅನ್ನೋದಕ್ಕಿಂತ, ಎಷ್ಟು ಶಿಸ್ತಿನಿಂದ ಹೂಡಿಕೆಯಲ್ಲಿ ಮುಂದುವರೆಯುತ್ತೀರಿ ಅನ್ನೋದೇ ಮುಖ್ಯ ಅಂತ ಹೊಸ ಅಧ್ಯಯನವೊಂದು ಸಾಬೀತು ಮಾಡಿದೆ.
ವೈಟ್‌ಓಕ್ ಕ್ಯಾಪಿಟಲ್ ಅಧ್ಯಯನ ಏನು ಹೇಳುತ್ತೆ?
ಬಿಎಸ್‌ಇ ಸೆನ್ಸೆಕ್ಸ್ ಟೋಟಲ್ ರಿಟರ್ನ್ ಇಂಡೆಕ್ಸ್ (BSE Sensex Total Return Index) ಆಧಾರದ ಮೇಲೆ ವೈಟ್‌ಓಕ್ ಕ್ಯಾಪಿಟಲ್ ಮ್ಯೂಚುವಲ್ ಫಂಡ್ ಒಂದು ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಆಗಸ್ಟ್ 1996 ರಿಂದ ಜೂನ್ 2026 ರವರೆಗಿನ ಎಸ್‌ಐಪಿ ಹೂಡಿಕೆಗಳನ್ನು ವಿಶ್ಲೇಷಿಸಲಾಗಿದೆ. ದಿನನಿತ್ಯ, ವಾರಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಮಾಡುವ ಹೂಡಿಕೆಗಳಲ್ಲಿ ಒಂದೇ ಪ್ರಮಾಣದ ಹಣವನ್ನು ಹೂಡಿಕೆ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲಾಗಿತ್ತು.
ಅಧ್ಯಯನದ ವರದಿ ಪ್ರಕಾರ, ದಿನನಿತ್ಯ ಮತ್ತು ವಾರಕ್ಕೊಮ್ಮೆ ಮಾಡಿದ ಎಸ್‌ಐಪಿಗಳಿಂದ ಸಿಕ್ಕ ಒಟ್ಟು ಮೊತ್ತ 12.33 ಕೋಟಿ ರೂಪಾಯಿ. ಅದೇ ಸಮಯದಲ್ಲಿ, ತಿಂಗಳಿಗೊಮ್ಮೆ ಮಾಡಿದ ಎಸ್‌ಐಪಿಯಿಂದ ಸಿಕ್ಕಿದ್ದು 12.45 ಕೋಟಿ ರೂಪಾಯಿ. ಈ ಮೂರೂ ವಿಧಾನಗಳಲ್ಲಿ ಸಿಕ್ಕ ವಾರ್ಷಿಕ ಆದಾಯ (annual return) ಶೇ. 13.47 ಆಗಿದೆ. ಅಂದರೆ, ತಿಂಗಳಿಗೊಮ್ಮೆ ಹೂಡಿಕೆ ಮಾಡುವುದಕ್ಕಿಂತ ದಿನಾ ಹೂಡಿಕೆ ಮಾಡುವುದರಿಂದ ಅಂಥ ದೊಡ್ಡ ಲಾಭವೇನೂ ಸಿಗುವುದಿಲ್ಲ. ಹಾಗಾಗಿ, ಯಾವ ದಿನ ಹೂಡಿಕೆ ಮಾಡ್ತೀರಿ ಅನ್ನೋದಕ್ಕಿಂತ, ಎಷ್ಟು ವರ್ಷ ಹೂಡಿಕೆಯನ್ನು ಮುಂದುವರಿಸುತ್ತೀರಿ ಅನ್ನೋದು ಹೆಚ್ಚು ಮುಖ್ಯ. ವೈಟ್‌ಓಕ್ ಅಧ್ಯಯನವೂ ಇದನ್ನೇ ಸ್ಪಷ್ಟಪಡಿಸಿದೆ.
ಯಾವ ಎಸ್‌ಐಪಿ ಆಯ್ಕೆ ಮಾಡಿಕೊಳ್ಳಬೇಕು?
ನಿಮಗೆ ಯಾವುದು ಹೆಚ್ಚು ಅನುಕೂಲಕರ ಮತ್ತು ತಪ್ಪದೆ ಮುಂದುವರಿಸಲು ಸಾಧ್ಯವೋ, ಆ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಸಂಬಳ ಪಡೆಯುವ ಉದ್ಯೋಗಿಗಳಿಗೆ, ತಿಂಗಳ ಸಂಬಳ ಖಾತೆಗೆ ಬಂದಾಗ ಮಾಸಿಕ ಎಸ್‌ಐಪಿ ಮಾಡುವುದು ಹೆಚ್ಚು ಅನುಕೂಲಕರ. ಆದರೆ, ನಿಗದಿತ ಆದಾಯ ಇಲ್ಲದ ಫ್ರೀಲ್ಯಾನ್ಸರ್‌ಗಳು ಅಥವಾ ಉದ್ಯಮಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ವಾರಕ್ಕೊಮ್ಮೆ ಅಥವಾ ದಿನನಿತ್ಯದ ಎಸ್‌ಐಪಿ ಆಯ್ಕೆ ಮಾಡಿಕೊಳ್ಳಬಹುದು.
ನೆನಪಿಡಿ, ನಿರಂತರವಾಗಿ ಹೂಡಿಕೆ ಮಾಡಿ, ತಾಳ್ಮೆಯಿಂದ ಕಾಯುವುದರಿಂದ ಮಾತ್ರ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸಲು ಸಾಧ್ಯ. ದಿನನಿತ್ಯದ ಎಸ್‌ಐಪಿ ಮತ್ತು ಮಾಸಿಕ ಎಸ್‌ಐಪಿ ನಡುವಿನ ವ್ಯತ್ಯಾಸ ತಕ್ಷಣಕ್ಕೆ ಗಮನ ಸೆಳೆಯಬಹುದು. ಆದರೆ ನಿಮ್ಮ ಸಂಪತ್ತನ್ನು ಹೆಚ್ಚಿಸುವುದು ಹೂಡಿಕೆಯ ಅವಧಿಯಲ್ಲ, ಬದಲಾಗಿ ಹೂಡಿಕೆಯಲ್ಲಿನ ನಿಮ್ಮ ಶಿಸ್ತು.


