Repo Rate : ಆರ್ ಬಿಐ ರೆಪೋ ದರಕ್ಕೆ ಸಂಬಂಧಿಸಿದಂತೆ ಸಭೆ ತೀರ್ಪನ್ನು ಪ್ರಕಟಿಸಿದೆ. ಈ ಬಾರಿ ರೆಪೋ ದರದಲ್ಲಿ ಯಾವ ಬದಲಾವಣೆ ಆಗಿದೆ? ನಿಮ್ಮ ಇಎಂಐಗೆ ಹೊಡೆತ ಬೀಳುತ್ತಾ ಎನ್ನುವ ಮಾಹಿತಿ ಇಲ್ಲಿದೆ.
ಗೃಹ ಸಾಲ ಅಥವಾ ವಾಹನ ಸಾಲ ತೆಗೆದುಕೊಂಡಿದ್ರೆ ನಿಮಗೊಂದು ಮಹತ್ವದ ಸುದ್ದಿ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿ ಸಮಿತಿಯ (RBI MPC) ಫಲಿತಾಂಶಗಳನ್ನು ಪ್ರಕಟಿಸಿದೆ. ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ರೆಪೊ ದರದ ಬಗ್ಗೆ ಮಾಹಿತಿ ನೀಡಿದ್ದಾರೆ.
ರೆಪೋ ದರದಲ್ಲಿ ಬದಲಾವಣೆ ?
ಈ ಬಾರಿಯೂ ರೆಪೋ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ , ಶೇಕಡಾ 5.25ರ ದರವನ್ನೇ ಉಳಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಹಾಗಾಗಿ ನಿಮ್ ಗೃಹ ಹಾಗೂ ವಾಹನ ಸಾಲದ ಮೇಲಿನ ಇಎಂಐನಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಹಿಂದಿನ ಇಎಂಐ ಮುಂದುವರೆಯಲಿದೆ.
RBI MPC ಫಲಿತಾಂಶಗಳನ್ನು ಪ್ರಕಟಿಸಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ, ತಟಸ್ಥ ನಿಲುವನ್ನು ಕಾಯ್ದುಕೊಳ್ಳಲು ಮತ್ತು ದರವನ್ನು ಶೇಕಡಾ 5.25 ರಲ್ಲಿ ಸ್ಥಿರವಾಗಿಡಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಇದಲ್ಲದೆ, ಸ್ಟ್ಯಾಂಡಿಂಗ್ ಠೇವಣಿ ಸೌಲಭ್ಯ (SDF) ದರವನ್ನು ಶೇಕಡಾ 5 ರಲ್ಲಿ ಇರಿಸಲಾಗಿದೆ. ಆದ್ರೆ ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ (MSF) ದರವನ್ನು ಶೇಕಡಾ 5.50 ರಲ್ಲಿ ಸ್ಥಿರವಾಗಿ ಇರಿಸಲಾಗಿದೆ.
ಆರ್ ಬಿಐ ಗವರ್ನರ್ ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಉಲ್ಲೇಖಿಸಿದ್ದಾರೆ. ಪಶ್ಚಿಮ ಏಷ್ಯಾದಿಂದಾಗಿ ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆ ಇದೆ. ಕಚ್ಚಾ ತೈಲ ಬೆಲೆಗಳಲ್ಲಿ ನಿರಂತರ ಏರಿಳಿತವಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ವರ್ಷ ರೆಪೊ ದರದಲ್ಲಿ ಯಾವ ಬದಲಾವಣೆ ?
ಈ ವರ್ಷ ಈವರೆಗೂ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜೂನ್ನಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ (RBI) MPC ಸಭೆಯು ರೆಪೊ ದರವನ್ನು ಸ್ಥಿರವಾಗಿ ಕಾಯ್ದುಕೊಂಡಿದೆ. ಪ್ರಸ್ತುತ ಅದು ಶೇಕಡಾ 5.25 ರಲ್ಲಿಯೇ ಉಳಿದಿದೆ. ಇದಕ್ಕೂ ಮೊದಲು, 2025 ರಲ್ಲಿ, RBI ಹಲವಾರು ಬಾರಿ ರೆಪೊ ದರವನ್ನು ಕಡಿತಗೊಳಿಸುವ ಮೂಲಕ ಸಾಲಗಾರರಿಗೆ ಗಿಫ್ಟ್ ನೀಡಿತ್ತು. ರೆಪೊ ದರವನ್ನು ಒಟ್ಟು 125 ಅಂಕಗಳಷ್ಟು ಕಡಿಮೆ ಮಾಡಿತ್ತು.
ಜಾಗತೀಕ ಉದ್ವಿಗ್ನತೆ ಮಧ್ಯೆಯೂ ಭಾರತೀಯ ಆರ್ಥಿಕತೆಯು ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಗವರ್ನರ್ ಹೇಳಿದ್ದಾರೆ. FY27 ಗಾಗಿ GDP ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.6 ರಿಂದ ಶೇಕಡಾ 6.7 ಕ್ಕೆ ಹೆಚ್ಚಿಸಲಾಗಿದೆ.
ರೆಪೋ ದರ ಎಂದ್ರೇನು?
ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳಿಗೆ ನೀಡುವ ಸಾಲದ ದರವೇ ರೆಪೊ ದರ. ಆರ್ಥಿಕತೆಯಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸಹ ಇದನ್ನು ಬಳಸಲಾಗುತ್ತದೆ. ರೆಪೊ ದರ ಹೆಚ್ಚಾದಾಗ, ಸಾಲ ಪಡೆಯುವುದು ಬ್ಯಾಂಕುಗಳಿಗೆ ಹೆಚ್ಚು ದುಬಾರಿಯಾಗುತ್ತದೆ. ಇದು ಸಾಮಾನ್ಯ ಜನರ ಮನೆ ಮತ್ತು ವಾಹನ ಸಾಲದ ಇಎಂಐ ಹೆಚ್ಚಳಕ್ಕೆ ಕಾರಣವಾಗುತ್ತದೆ.


