ಬೃಹತ್ 7,550 mAh ಬ್ಯಾಟರಿಯೊಂದಿಗೆ ಪೋಕೊ F7 ಭಾರತದಲ್ಲಿ ಬಿಡುಗಡೆಯಾಗಲಿದೆ. ಡ್ಯುಯಲ್ ರಿಯರ್ ಕ್ಯಾಮೆರಾ, ಸ್ನಾಪ್‌ಡ್ರಾಗನ್ 8+ Gen 1 ಚಿಪ್‌ಸೆಟ್ ಮತ್ತು ಇತರ ಆಕರ್ಷಕ ವೈಶಿಷ್ಟ್ಯಗಳನ್ನು ಈ ಫೋನ್ ಹೊಂದಿರುತ್ತದೆ.
ದೆಹಲಿ (ಜೂ.16) : ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವಸ್ಮಾರ್ಟ್‌ಫೋನ್ ಬ್ರ್ಯಾಂಡ್ ಪೋಕೊ ತನ್ನ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಪೋಕೊ F7 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬೃಹತ್ 7,550 mAh ಬ್ಯಾಟರಿಯೊಂದಿಗೆ ಪೋಕೊ F7 ಭಾರತಕ್ಕೆ ಬರುತ್ತಿದೆ ಎಂದು ಟೀಸರ್ ಸ್ಪಷ್ಟಪಡಿಸುತ್ತದೆ. ಈ ಫೋನಿನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾಗಳಿವೆ.
ಚೀನಾದಲ್ಲಿ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ Redmi ಟರ್ಬೊ 4 ಪ್ರೊದ ರಿಬ್ರಾಂಡ್ ಆವೃತ್ತಿಯೇ ಪೋಕೊ F7 ಎಂಬ ವದಂತಿಗಳು ಕೂಡ ಕೇಳಿ ಬರುತ್ತಿವೆ. ಜೂನ್‌ನ ಮೂರನೇ ಅಥವಾ ನಾಲ್ಕನೇ ವಾರದಲ್ಲಿ ಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪೋಕೋ ಸ್ಮಾರ್ಟ್ ಫೋನ್‌ನ ಟೀಸರ್ ಪ್ರಕಾರ, ಪೋಕೊ F7 ಸ್ಮಾರ್ಟ್‌ಫೋನ್ 7,550 mAh ಬ್ಯಾಟರಿಯನ್ನು ಹೊಂದಿದೆ.
ಟೀಸರ್‌ನಲ್ಲಿ ಕೊಟ್ಟ ಸಂದೇಶ ನಿಜವಾಗಿದ್ದರೆ ಇದು ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಅತಿ ದೊಡ್ಡ ಬ್ಯಾಟರಿ ಹೊಂದಿರುವ ಸ್ಮಾರ್ಟ್ ಫೋನ್ ಆಗಿರುತ್ತದೆ. ಅಂದರೆ ಈ ಮೊಬೈಲ್ ಬಳಕೆದಾರರಿಗೆ ಸರಾಸರಿ ಎರಡು ದಿನಗಳ ಬ್ಯಾಟರಿ ಬಾಳಿಕೆ ನೀಡುತ್ತದೆ ಎಂದು ಚೀನೀ ಮಾಧ್ಯಮಗಳು ವರದಿ ಮಾಡಿವೆ. 90W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 22.5W ರಿವರ್ಸ್ ವೈರ್ಡ್ ಚಾರ್ಜಿಂಗ್ ಅನ್ನು ಪೋಕೊ F7 ಹೊಂದಿರಬಹುದು.
ಕನಿಷ್ಠ ಎರಡು ಬಣ್ಣಗಳಲ್ಲಿ ಪೋಕೊ F7 ಬಿಡುಗಡೆಯಾಗುವ ಸಾಧ್ಯತೆಯಿದೆ. ಇದರಲ್ಲಿ ಒಂದು ಕಪ್ಪು ಬಣ್ಣದಲ್ಲಿ ಪಿಲ್-ಆಕಾರದ ಡ್ಯುಯಲ್ ಕ್ಯಾಮೆರಾ ಮಾಡ್ಯೂಲ್ ಮತ್ತು ಲಂಬವಾದ ಎಲ್‌ಇಡಿ ಸ್ಟ್ರಿಪ್ ಅನ್ನು ಹೊಂದಿರುತ್ತದೆ. ಭಾರತೀಯ ಮಾರುಕಟ್ಟೆಗಾಗಿ ಪೋಕೊ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.
6.83 ಇಂಚಿನ 1.5K AMOLED ಡಿಸ್‌ಪ್ಲೇಯೊಂದಿಗೆ ಬರುವ ಪೋಕೊ F7 120Hz ರಿಫ್ರೆಶ್ ದರವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8+ Gen 1 ಚಿಪ್‌ಸೆಟ್ ಅನ್ನು ಪೋಕೊ F7 ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 12GB RAM, 512GB ಸ್ಟೋರೇಜ್, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್‌ನೊಂದಿಗೆ 50MP ಪ್ರೈಮರಿ ಸೆನ್ಸರ್, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 20MP ಸೆಲ್ಫಿ ಕ್ಯಾಮೆರಾಗಳು ಭಾರತದಲ್ಲಿ ಬಿಡುಗಡೆಯಾಗಲಿರುವ ಪೋಕೊ F7 ಸ್ಮಾರ್ಟ್‌ಫೋನಿನ ನಿರೀಕ್ಷಿತ ವೈಶಿಷ್ಟ್ಯಗಳಾಗಿವೆ. ಪೋಕೊ F7 ನ ಹೆಚ್ಚಿನ ವೈಶಿಷ್ಟ್ಯಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು.
