Micromax In 2: ಸ್ವದೇಶಿ ಕಂಪನಿ ಮೈಕ್ರೋಮ್ಯಾಕ್ಸ್ ಮತ್ತೊಂದು ಫೋನ್? ಏನೆಲ್ಲ ವಿಶೇಷತೆ?
*ಇತ್ತೀಚೆಗಷ್ಟೇ ಇನ್ ನೋಟ್ 2 ಬಿಡುಗಡೆ ಮಾಡಿದ್ದ ಮೈಕ್ರೋಮ್ಯಾಕ್ಸ್‌ನಿಂದ ಮತ್ತೊಂದು ಫೋನ್
*ಆನ್‌ಲೈನ್‌ನಲ್ಲಿ ಮೈಕ್ರೋಮ್ಯಾಕ್ಸ್ ಇನ್ 2 ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿರುವ ಟಿಪ್ಟಟರ್ಸ್
*ಈ ಫೋನ್‌ನಲ್ಲಿ ಮೀಡಿಯಾ ಟೆಕ್ ಹೆಲಿಯೋ ಪ್ರೊಸೆಸರ್ ಬಳಕೆಯಾಗಿರುವ ಸಾಧ್ಯತೆ
Tech Desk: ಭಾರತೀಯ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಮೈಕ್ರೋಮ್ಯಾಕ್ಸ್ (Micromax) ಮತ್ತೊಂದು ಹೊಸ ಫೋನ್ ಮೂಲಕ ಮಾರುಕಟ್ಟೆಗೆ ಲಗ್ಗೆ ಹಾಕಲು ಯೋಚಿಸುತ್ತಿದೆ. ಇತ್ತೀಚೆಗಷ್ಟೇ ಮೈಕ್ರೋಮ್ಯಾಕ್ಸ್ ಕಂಪನಿಯು ಮೈಕ್ರೋಮ್ಯಾಕ್ಸ್ ಇನ್ ನೋಟ್ 2 (Micromax In Note 2) ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಕಂಪನಿಯು ಮೈಕ್ರೋಮ್ಯಾಕ್ಸ್ ಇನ್ 2 (Micromax In 2) ಲಾಂಚ್ ಮಾಡುವ ಸಂಬಂಧ ಯೋಜನೆ ಹಾಕಿಕೊಂಡಿದೆ. ಈಗ ಗೊತ್ತಾಗಿರುವ ಮಾಹಿತಿಗಳ ಪ್ರಕಾರ ಕಂಪನಿಯು ಉದ್ದೇಶಿತ ಮೈಕ್ರೋಮ್ಯಾಕ್ಸ್ ಇನ್ 2 ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾ ಟೆಕ್ ಹೆಲಿಯೋ ಚಿಪ್ ಬಳಸುವ ಸಾಧ್ಯತೆ ಇದೆ.
ಹಾಗೆಯೇ ಈ ಫೋನ್ 6.5 ಇಂಚ್ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹಾಗೂ , 48 ಮೆಗಾ ಪಿಕ್ಸೆಲ್ ಮುಖ್ಯಕ್ಯಾಮೆರಾದೊಂದಿಗೆ ಮೂರು ಕ್ಯಾಮೆರಾಗಳ ಸೆಟ್ ಅಪ್ ಕೂಡ ಇರಲಿದೆ ಎನ್ನಲಾಗುತ್ತಿದೆ. ಮೈಕ್ರೋಮ್ಯಾಕ್ಸ್ ಇನ್ 2 ಸ್ಮಾರ್ಟ್‌ಫೋನ್ ಬಗ್ಗೆ ಕೆಲವು ಟಿಪ್ಸಟರ್‌ಗಳು ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಕಂಪನಿ ಯಾವುದೇ ಮಾಹಿತಿಯನ್ನು ಈ ವರೆಗೂ ಹೇಳಿಕೊಂಡಿಲ್ಲ.
ಕಳೆದ ವರ್ಷ ಚೀನಾ ಉತ್ಪನ್ನಗಳಿಗೆ ಬಹಿಷ್ಕಾರ ಅಭಿಯಾನ ಹೆಚ್ಚಾದ ಬೆನ್ನಲ್ಲೇ ಸ್ವದೇಶಿ ಕಂಪನಿಯಾಗಿರುವ ಮೈಕ್ರೋಮ್ಯಾಕ್ಸ್ ಫೋನುಗಳಿಗೆ ಭಾರೀ ಬೇಡಿಕೆಯು ಸೃಷ್ಟಿಯಾಗಿತ್ತು. ಪರಿಣಾಮ, ಕಂಪನಿಯು ಅನೇಕ ಸ್ಮಾರ್ಟ್‌ಫೋನ್, ಟ್ಯಾಬ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇದೆ.
ಇದನ್ನೂ ಓದಿ: Google Duo Milestone: ಪ್ಲೇ ಸ್ಟೋರ್‌ನಲ್ಲಿ ವೀಡಿಯೋ ಕಾಲಿಂಗ್ ಆ್ಯಪ್ 500 ಕೋಟಿ ಡೌನ್‌ಲೋಡ್!
ಮೈಕ್ರೋಮ್ಯಾಕ್ಸ್ ಇನ್ 2 ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಇಶಾಂತ್ ರಾಜ್ ಎಂಬುವವರು ಟ್ವೀಟ್ ಮಾಡಿದ್ದು, ಆ ಪ್ರಕಾರ ಈ ಹೊಸ ಫೋನು ಬೆಲೆ ಅಂದಾಜು ಹತ್ತು ಸಾವಿರ ರೂಪಾಯಿಯಿಂದ ಹನ್ನೋಂದು ಸಾವಿರ ರೂ.ವರೆಗೆ ಇರಲಿದೆ. ಇದೇ ಟ್ವೀಟ್ ಅನ್ನು ಮತ್ತೊಬ್ಬ ಟಿಪ್ಸಟರ್ ಅಭಿಷೇಕ್ ಯಾದವ್ ಕೂಡ ರಿಟ್ವೀಟ್ ಮಾಡಿದ್ದಾರೆ. ಆದರೆ, ಈ ಬಗ್ಗೆ ಕಂಪನಿಯು ಯಾವುದೇ ಪ್ರಕಟಣೆ ಅಥವಾ ಘೋಷಣೆ ಮಾಡಿಲ್ಲ. 14,490 ರೂ.ಬೆಲೆಯ ಇನ್ ನೋಟ್ 2 ಅನ್ನು ಕಂಪನಿಯು ಇತ್ತೀಚೆಗಷ್ಟೇ ಲಾಂಚ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಏನೆಲ್ಲ ವಿಶೇಷತೆಗಳಿರಬಹುದು?: ನಿರೀಕ್ಷಿತ ಮೈಕ್ರೋಮ್ಯಾಕ್ಸ್ ಇನ್ 2 ಸ್ಮಾರ್ಟ್‌ಫೋನ್ ಏನೆಲ್ಲ ವಿಶೇಷತೆಗಳನ್ನು ಹೊಂದಿರಬಹುದು ಎಂಬ ಕುತೂಹಲವಿದೆ. ಕೆಲವು ಮಾಹಿತಿಗಳ ಪ್ರಕಾರ, ಈ ಫೋನ್ 6.5 ಇಂಚ್ ಫುಲ್ ಎಚ್‌ಡಿ ಪ್ಲಸ್ ಐಪಿಎಸ್ ಎಲ್‌ಸಿಡಿ ಪ್ರದರ್ಶಕವನ್ನು ಹೊಂದಿರಲಿದೆ. ಹಾಗೆಯೇ, ಮೀಡಿಯಾ ಟೆಕ್ ಹೆಲಿಯೋ ಜಿ88 (MediaTek Helio G88) ಪ್ರೊಸೆಸರ್ ಇರಲಿದೆ ಎನ್ನಲಾಗುತ್ತಿದೆ. ಆದರೆ, RAM ಬಗ್ಗೆ ಯಾವುದೇ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಷೇರ್ ಮಾಡಿಕೊಂಡಿಲ್ಲ. ಆಂಡ್ರಾಯ್ಡ್ 11 ಒಎಸ್ ಆಧಾರಿತವಾಗಿರಲಿದೆ ಎನ್ನಲಾಗುತ್ತಿದೆ.
ಕ್ಯಾಮೆರಾ ಬಗ್ಗೆ ಹೇಳುವುದಾದರೆ, ಕೆಲವು ವರದಿಗಳ ಪ್ರಕಾರ ಈ ಹೊಸ ಫೋನಿನಲ್ಲಿ ಕಂಪನಿಯು ಮೂರು ಕ್ಯಾಮೆರಾಗಳನ್ನು ಒದಗಿಸಲಿದೆ. ಈ ಪೈಕಿ ಮೊದಲನೆಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಇರಲಿದೆ ಎನ್ನಲಾಗುತ್ತಿದೆ. ಉಳಿದೆರಡು ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಕ್ಯಾಮೆರಾಗಳಾಗಿರಲಿವೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕಾಲಿಂಗ್‌ಗಾಗಿ ಕಂಪನಿಯು 8 ಮೆಗಾ ಪಿಕ್ಸೆಲ್ ಕ್ಯಾಮೆರಾ ನೀಡಲಿದೆ. ಈ ಫೋನ್‌ನಲ್ಲಿ 5,000mAh ಬ್ಯಾಟರಿಯನ್ನು ನಿರೀಕ್ಷಿಸಬಹುದಾಗಿದೆ. ಇದು 18 ವ್ಯಾಟ್ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡಲಿದೆ.
ಇದನ್ನೂ ಓದಿ: Poco M4 Pro 5G: ಫೆ.15ಕ್ಕೆ ಪೋಕೋದ ಹೊಸ ಸ್ಮಾರ್ಟ್‌ಫೋನ್ ಲಾಂಚ್, ಏನೆಲ್ಲ ವಿಶೇಷತೆಗಳಿವೆ?
ಮೈಕ್ರೋಮ್ಯಾಕ್ಸ್ ಇನ್ ನೋಟ್ 2: ಮೈಕ್ರೋಮ್ಯಾಕ್ಸ್ ಇತ್ತೀಚೆಗಷ್ಟೇ ಅಂದರೆ ಜನವರಿ 25 ರಂದು ಇನ್ ನೋಟ್ 2 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಮೈಕ್ರೋಮ್ಯಾಕ್ಸ್ ಇನ್ ನೋಟ್ 450 nits ನ ಗರಿಷ್ಠ ಹೊಳಪು ಮತ್ತು 21:9 ಆಕಾರ ಅನುಪಾತದೊಂದಿಗೆ 16.43-ಇಂಚಿನ Full HD+ AMOLED ಡಿಸ್ಪ್ಲೇಯನ್ನು ಹೊಂದಿದೆ. 5000 mAh ಬ್ಯಾಟರಿ ಜೊತೆಗೆ 30W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಅಳವಡಿಸಲಾಗಿದೆ. ಹಿಂಬದಿಯ ಕ್ಯಾಮರಾ ಮಾಡ್ಯೂಲ್ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಒಳಗೊಂಡಂತೆ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಳಿಗಾಗಿ, ಇನ್ ನೋಟ್ 2, 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ನೀಡುತ್ತದೆ. ಹಿಂದಿನ ಕ್ಯಾಮೆರಾ ಸೆಟಪ್ Samsung Galaxy S21 ಕ್ಯಾಮೆರಾ ಮಾಡ್ಯೂಲ್ ರೀತಿಯಲ್ಲೇ ಇದೆ.