ನವದೆಹಲಿ(ಸೆ.18): ಹಣ ವರ್ಗಾವಣೆ, ಬಿಲ್ ಪಾವತಿ ಸೇರಿದಂತೆ ಹಣಕಾಸು ವ್ಯವಹಾರಕ್ಕೆ ಇದೀಗ ಹೆಚ್ಚಿನವರೆಲ್ಲಾ ಆ್ಯಪ್ ಬಳಸುತ್ತಿದ್ದಾರೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ ಸೇರಿದಂತೆ ಹಲವು ಆ್ಯಪ್ ಆಧಾರಿತ ಮನಿ ಟ್ರಾನ್ಸಾಕ್ಷನ್ ಲಭ್ಯವಿದೆ. ಇದರಲ್ಲಿ ಅತ್ಯಂತ ಜನಪ್ರಿಯವಾಗಿರುವ ಪೇಟಿಎಂ ಇದೀಗ ನಿಯಮ ಉಲ್ಲಂಘಿಸಿದ ಆರೋಪದಡಿ ಗೂಗಲ್ ಪ್ಲೇ ಸ್ಟೋರ್‌ನಿಂದ ಡಿಲೀಟ್ ಮಾಡಲಾಗಿದೆ.

ಪೇಟಿಎಂ ಮಾಲ್‌ ಡೇಟಾ ಹ್ಯಾಕ್!..

ಗೂಗಲ್ ನಿಯಮದ ಪ್ರಕಾರ ಬಳಕೆದಾರರ ಸುರಕ್ಷತೆಗೆ ಪ್ರಮುಖ ಆದ್ಯತೆ. ಆದರೆ ಪೇಟಿಎಂ ಆ್ಯಪ್ ಈ ನಿಯಮ ಉಲ್ಲಂಘಿಸಿದೆ ಎಂದು ಗೂಗಲ್ ಹೇಳಿದೆ. ಪೇಟಿಎಂ ಆ್ಯಪ್ ಮೂಲಕ ಆನ್‌ಲೈನ್ ಬೆಟ್ಟಿಂಗ್, ಆನ್‌ಲೈನ್ ಜೂಜು, ಆನ್ ಮನಿ ಗ್ಯಾಬ್ಲಿಂಗ್ ನಡೆಸಲು ಅವಕಾಶ ನೀಡಿದೆ. ಇದು ಗೂಗಲ್ ನಿಯಮಕ್ಕೆ ವಿರುದ್ಧವಾಗಿದೆ. ಇದರಿಂದ ಬಳಕೆದಾರರ ಹಣ ಅಥವಾ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಗೂಗಲ್ ಪಾಲಿಸಿಗೆ ವಿರುದ್ಧವಾಗಿರುವ ಪೇಟಿಎಂ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕುವುದಾಗಿ ಹೇಳಿದೆ.

ಪೇಟಿಎಂ ಗ್ರಾಹಕರೇ ಯಾಮಾರೋಕು ಮುನ್ನ ಎಚ್ಚರ: ನಿಮಗೂ ಕರೆ ಬರಬಹುದು!.

ಇದೇ ಮೊದಲ ಬಾರಿಗೆ ಪೇಟಿಎಂ ಮುಖ್ಯ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಿಂದ ಹೊರಬಿದ್ದಿದೆ. ಆದರೆ ಪೇಟಿಎಂ ಮನಿ, ಪೇಟಿಎಂ ಫಾರ್ ಬ್ಯುಸಿನೆಸ್, ಮರ್ಚೆಂಟ್ ಆ್ಯಪ್, ಪೇಟಿಎಂ ಇನ್ಸೈಡರ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಂ ಆ್ಯಪ್ ಡಿಲೀಟ್ ಆಗುತ್ತಿದ್ದಂತೆ ಬಳಕೆದಾರರ ಆತಂಕ ಹೆಚ್ಚಾಗಿದೆ. ತಮ್ಮ ಹಣದ ಕುರಿತು ಚಿಂತೆ ಎದ್ದಿದೆ. ಈ ಬೆಳವಣಿಗೆ ಬೆನ್ನಲ್ಲೇ ಪೇಟಿಎಂ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ. ಗ್ರಾಹಕರ ಹಣ ಸುರಕ್ಷಿತವಾಗಿರಲಿದೆ. ಅಪ್‌ಡೇಟ್ ಹಾಗೂ ಕೆಲ ಬದಲಾವಣೆಗಳಿಂದ ಗೂಗಲ್ ಪ್ಲೇ ಸ್ಟೋರ್‌ಲ್ಲಿ ಪೇಟಿಎಂ ಆ್ಯಪ್ ಲಭ್ಯವಿಲ್ಲ. ಇದರಿಂದ ಆತಂಕ ಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಮರಳಲಿದ್ದೇವೆ ಎಂದು ಟ್ವೀಟ್ ಮಾಡಿದೆ.