ನವದೆಹಲಿ(ಆ.31): ಭಾರತದ ಪ್ರಮುಖ ಇ-ಕಾಮರ್ಸ್‌ ಪಾವತಿ ವ್ಯವಸ್ಥೆ ಹಾಗೂ ಹಣಕಾಸು ಸಂಸ್ಥೆಯಾದ ಪೇಟಿಎಂ ಮಾಲಿಕತ್ವದ ಪೇಟಿಎಂ ಮಾಲ್‌ನ ದತ್ತಾಂಶಕ್ಕೆ ಸೈಬರ್‌ ಹ್ಯಾಕರ್‌ಗಳು ಕನ್ನ ಹಾಕಿದ್ದಾರೆ. ಮಾಹಿತಿಯನ್ನು ಮರಳಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಿವಿಧ ಕಂಪನಿಗಳ ತಾಂತ್ರಿಕ ವ್ಯವಸ್ಥೆಯಲ್ಲಿರುವ ದೋಷಗಳನ್ನು ಸರಿಪಡಿಸಲು ಸಹಾಯ ಮಾಡುವ ಸೋಗಿನಲ್ಲಿ ಮಾಹಿತಿ ಕದಿಯುವ ಜಾನ್‌ ವಿಕ್‌ ಎಂಬ ಹ್ಯಾಕರ್‌ ಗ್ರೂಪ್‌ ಈ ಕೃತ್ಯ ಎಸಗಿದೆ ಎಂದು ಹೇಳಲಾಗಿದೆ. ಹಿಂಬಾಗಿಲ ಮೂಲಕ ಪೇಟಿಎಂ ಮಾಲ್‌ನ ದತ್ತಾಂಶವನ್ನು ಈ ಗುಂಪು ಹ್ಯಾಕ್‌ ಮಾಡಿದೆ. ಪೇಟಿಎಂ ಮಾಲ್‌ನಲ್ಲಿ ಖಾತೆಗಳ ವಿವರವನ್ನು ಪಡೆದುಕೊಂಡಿದೆ ಎಂದು ಅಮೆರಿಕ ಮೂಲದ ಸೈಬರ್‌ ಸಂಶೋಧನಾ ಸಂಸ್ಥೆ ಸೈಬಲ್‌ ತಿಳಿಸಿದೆ.

ಎಷ್ಟುಮಾಹಿತಿ ಸೋರಿಕೆಯಾಗಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಆದರೆ ಮಾಹಿತಿಯನ್ನು ಮರಳಿಸಲು ಹಣಕ್ಕೆ ಹ್ಯಾಕರ್‌ಗಳು ಬೇಡಿಕೆ ಇಟ್ಟಿದ್ದಾರೆ. ಈ ಮೂಲಕ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ ತನ್ನ ಮಾಹಿತಿ ಹ್ಯಾಕ್‌ ಆಗಿದೆ ಎಂಬ ವರದಿಗಳನ್ನು ಪೇಟಿಎಂ ಮಾಲ್‌ ನಿರಾಕರಿಸಿದ್ದು, ಗ್ರಾಹಕರ ಮಾಹಿತಿ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.