ಜಿಯೋನಿಂದ ದೀಪಾವಳಿಗೆ 498 ರೂ. ಉಚಿತ ರೀಚಾರ್ಜ್!? ಆಫರ್ ಹೌದೋ? ಅಲ್ವೋ? #FactCheck
ದೀಪಾವಳಿ ಪ್ರಯುಕ್ತ ನೀಡಲಾಗುವ ಈ ಆಫರ್ ಸೀಮಿತಾವಧಿಗೆ ಮಾತ್ರ ಅನ್ವಯ, ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತುವ ಮೂಲಕ ಆ ಆಫರನ್ನು ಪಡೆದುಕೊಳ್ಳಬಹುದು. ಈ ಆಫರ್ ಅ.17ರವರೆಗೆ ಮಾತ್ರ ಎಂದು ಹೇಳುವ ಮೆಸೇಜ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿದೆ ಸತ್ಯಾಸತ್ಯತೆ।
ಬೆಂಗಳೂರು (ಅ.18): "ದೀಪಾವಳಿ ಹಬ್ಬಕ್ಕೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ. 50 ಕೋಟಿ ಗ್ರಾಹಕರನ್ನು ಪಡೆದಿರುವ ಖುಷಿಯಲ್ಲಿ ಕಂಪನಿಯು ಪ್ರೀಪೇಯ್ಡ್ ಗ್ರಾಹಕರಿಗೆ ಉಚಿತವಾಗಿ 498 ರೂಪಾಯಿಯ ರೀಚಾರ್ಜ್ ಮಾಡಲಿದೆ" ಎಂದು ಹೇಳುವ ಮೆಸೇಜ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದೀಪಾವಳಿ ಪ್ರಯುಕ್ತ ನೀಡಲಾಗುವ ಈ ಆಫರ್ ಸೀಮಿತಾವಧಿಗೆ ಮಾತ್ರ, ಎಂದು ಕೂಡಾ ಆ ಮೆಸೇಜ್‌ನಲ್ಲಿ ಹೇಳಲಾಗಿದೆ. ಈ ಕೆಳಗೆ ಕೊಟ್ಟಿರುವ ಲಿಂಕನ್ನು ಒತ್ತುವ ಮೂಲಕ ಆ ಆಫರನ್ನು ಪಡೆದುಕೊಳ್ಳಬಹುದು. ಈ ಆಫರ್ ಅ.17ರವರೆಗೆ ಮಾತ್ರ ಎಂದು ಗ್ರಾಹಕರಿಗೆ ತಿಳಿಸಲಾಗಿದೆ.
ಏನಿದರ ಸತ್ಯಾಸತ್ಯತೆ?
ಈ ಬಗ್ಗೆ ಜಿಯೋ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ. ಜಿಯೋ ವೆಬ್‌ಸೈಟ್‌ನಲ್ಲೂ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ದೀಪಾವಳಿ-2019ರ ಪ್ರಯುಕ್ತ ಒಂದೇ ಒಂದು ಆಫರನ್ನು ಜಿಯೋ ಪ್ರಕಟಿಸಿದ್ದು, ಅದರ ವಿವರ ಇಲ್ಲಿದೆ. ಮೆಸೇಜ್‌ನಲ್ಲಿ ಹೇಳಿರುವುದಕ್ಕೂ ಇದಕ್ಕೂ ಯಾವುದೇ ಸಾಮ್ಯತೆಯಿಲ್ಲ.
ಅಲ್ಲದೇ ಈ ಲಿಂಕ್‌ಗಳು ತಲೆಬುಡ ಇಲ್ಲದಂಥವುಗಳು. ಲಿಂಕನ್ನು ಕ್ಲಿಕ್ ಮಾಡಿದಾಗ ಯಾವುದೋ ಅನಗತ್ಯ ಸೈಟ್‌ಗಳಲ್ಲಿ ಲ್ಯಾಂಡ್ ಆಗುತ್ತೆ ಅಥವಾ ಎಲ್ಲೂ ಹೋಗಲ್ಲ.
ಇನ್ನೊಂದು ವಿಷಯ, ಜಿಯೋ 50 ಕೋಟಿ (500 ಮಿಲಿಯನ್) ಗ್ರಾಹಕರನ್ನು ಪಡೆದಿರೋದು ಹೌದಾ? ಇತ್ತೀಚೆಗೆ ಪ್ರಕಟವಾಗಿರುವ ವರದಿಗಳ ಪ್ರಕಾರ ಜಿಯೋ 350 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಭಾರತದ ಅತೀ ದೊಡ್ಡ ಟೆಲಿಕಾಂ ಕಂಪನಿಯಾಗಿದೆ.
ಈ ಕುರಿತು ಸುವರ್ಣನ್ಯೂಸ್.ಕಾಂ, ರಿಲಯನ್ಸ್ ಜಿಯೋ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ಮಾಹಿತಿ ಸುಳ್ಳು, ಗ್ರಾಹಕರು ಅಂತಹ ಯಾವುದೇ ಮೆಸೇಜ್‌ಗಳಿಗೆ ಮರುಳಾಗಬಾರದು, ಕಂಪನಿಯ ಆಫರ್‌ಗಳ ಬಗ್ಗೆ ಮಾಹಿತಿಗಾಗಿ ಜಿಯೋ ವೆಬ್‌ಸೈಟ್, ಅಥವಾ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳನ್ನು ಅವಲಂಬಿಸಬೇಕೆಂದು ತಿಳಿಸಿದರು.