ನವದೆಹಲಿ(ಡಿ.29): ಕೇಂದ್ರ ಕೃಷಿ ಕಾನೂನು ವಿರೋಧಿಸಿ ಪಂಜಾಬ್ ನಲ್ಲಿ ಪ್ರತಿಭಟನೆ ರೂಪವಾಗಿ 1500ಕ್ಕೂ ಹೆಚ್ಚು ಮೊಬೈಲ್ ಟವರ್ ಗಳನ್ನು ಮತ್ತು ಟೆಲಿಕಾಂ ನೆಟ್ ವರ್ಕ್ ಮೂಲಸೌಕರ್ಯ ನಾಶಗೊಳಿಸಿದ ಕ್ರಮವನ್ನು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) "ಪ್ರಬಲವಾಗಿ ಖಂಡನೆ" ಮಾಡಿದೆ.

ಪ್ರತಿಭಟನಾ ನಿರತ ರೈತರ ಒಂದು ನಿರ್ಧಾರ, ಸಂಕಷ್ಟದಲ್ಲಿ ಒಂದು ರಾಜ್ಯದ ಜನ!.

ಲಕ್ಷಾಂತರ ಗ್ರಾಹಕರ ಪಾಲಿಗೆ ಟೆಲಿಕಾಂ ಸೇವೆ "ಜೀವನಾಡಿ' ಇದ್ದಂತೆ ಎಂದಿರುವ ಸಿಒಎಐನ ಮಹಾ ನಿರ್ದೇಶಕ ಎಸ್.ಪಿ. ಕೊಚ್ಚರ್, ಟೆಲಿಕಾಂ ಸೇವೆ ವ್ಯತ್ಯಯದಿಂದಾಗಿ ಜನ ಸಾಮಾನ್ಯರಿಗೆ ಬಹಳ ಸಮಸ್ಯೆಯಾಗುತ್ತಿದೆ. ಇದು "ಅಗತ್ಯ ಸೇವೆಗಳಲ್ಲಿ" ಒಂದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಯಾವುದೇ ವಿಚಾರಕ್ಕೆ ಪ್ರತಿಭಟನೆ ಮಾಡುವ ಜನರ ಹಕ್ಕನ್ನು ನಾವು ಗೌರವಿಸುತ್ತೇವೆ. ಟೆಲಿಕಾಂ ನೆಟ್ ವರ್ಕ್ ಮೂಲಸೌಕರ್ಯವನ್ನು ನಾಶ ಪಡಿಸುವುದು ಹಾಗೂ ಪ್ರತಿಭಟನೆ ರೂಪದಲ್ಲಿ ಟೆಲಿಕಾಂ ಸೇವೆಗೆ ಅಡೆತಡೆ ಮಾಡುವುದನ್ನು ಬಲವಾಗಿ ಖಂಡಿಸುತ್ತೇವೆ," ಎಂದು ಸಿಒಎಐ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ)ದಲ್ಲಿ ರಿಲಯನ್ಸ್ ಜಿಯೋ, ಭಾರ್ತಿ ಏರ್ ಟೆಲ್ ಹಾಗೂ ವೊಡಾಫೋನ್ ಐಡಿಯಾದ ಸದಸ್ಯರು ಒಳಗೊಂಡಿದ್ದಾರೆ.

ಕೇಂದ್ರದ ಹೊಸ ಕೃಷಿ ಕಾನೂನಿನ ವಿರುದ್ಧ ಪಂಜಾಬ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 1500ಕ್ಕೂ ಹೆಚ್ಚು ಟೆಲಿಕಾಂ ಟವರ್ ಗಳಿಗೆ ಹಾನಿಯಾಗಿದೆ. ಕೆಲವು ಕಡೆ ಸೇವೆ ವ್ಯತ್ಯಯವಾಗಿದೆ.

ಟೆಲಿಕಾಂ ಸಿಗ್ನಲ್ ಗಳಿಗೆ ಪೂರಕವಾಗಿ ಆಗುವ ವಿದ್ಯುತ್ ಪೂರೈಕೆಗೆ ತಡೆಯಾಗಿದೆ ಮತ್ತು ಪಂಜಾಬ್ ನ ಹಲವು ಭಾಗಗಳಲ್ಲಿ ಕೇಬಲ್ ಕತ್ತರಿಸಲಾಗಿದೆ. ಕೇಂದ್ರ ಸರ್ಕಾರದ ಹೊಸ ಕಾನೂನಿನಿಂದ ಮುಕೇಶ್ ಅಂಬಾನಿಗೆ ಅನುಕೂಲ ಆಗುತ್ತದೆ ಎಂದು ಆರೋಪಿಸಿ, ಅವರ ಒಡೆತನದ ಜಿಯೋಗೆ ಸೇರಿದ ಮೂಲಸೌಕರ್ಯ ವ್ಯವಸ್ಥೆಗೆ ಹಾನಿ ಮಾಡಲಾಗುತ್ತಿದೆ. ಇದರ ಜತೆಗೆ ಗೌತಮ್ ಅದಾನಿ ಅವರನ್ನೂ ಪ್ರಮುಖ ಫಲಾನುಭವಿ ಎಂದು ಆರೋಪಿಸಲಾಗುತ್ತಿದೆ.

ಮೊಬೈಲ್ ಟವರ್ ಗಳನ್ನು ನಾಶಪಡಿಸಿ, ಟೆಲಿಕಾಂ ಸೇವೆ ವ್ಯತ್ಯಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಎಚ್ಚರಿಸಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಗಳಲ್ಲಿ ಕಲಿಯುತ್ತಿದ್ದಾರೆ, ವೃತ್ತಿಪರರು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಆನ್ ಲೈನ್ ಹೆಲ್ತ್ ಕನ್ಸಲ್ಟೇಷನ್ ಸೌಲಭ್ಯ ಪಡೆಯುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಸಾಮಾನ್ಯ ಜನರ ಜೀವನಾಡಿಯಾದ ಟೆಲಿಕಾಮ್ ಸೇವೆಗೆ ತಡೆಯೊಡ್ಡುವುದು ಖಂಡನೀಯ ಎಂದು ಸಿಒಎಐ ತಿಳಿಸಿದೆ.

ಕೊರೊನಾ ಸಂದರ್ಭದಲ್ಲಿ ಟೆಲಿಕಾಂ ವಲಯದ ಸಿಬ್ಬಂದಿ ದಣಿವರಿಯದೆ ದುಡಿಯುತ್ತಿದ್ದಾರೆ. ಸೇವೆಯಲ್ಲಿ ವ್ಯತ್ಯಯ ಆಗದಂತೆ ಶ್ರಮಿಸುತ್ತಿದ್ದಾರೆ ಎಂದು ಕೊಚ್ಚರ್ ಹೇಳಿದ್ದಾರೆ.