ಆ್ಯಪಲ್ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ 'ಐಫೋನ್ ಡುಯೋ' ರಿಪೇರಿ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ರಿಪೇರಿ ವೆಚ್ಚವು ಎಷ್ಟೊಂದು ದುಬಾರಿಯಾಗಿದೆ ಎಂದರೆ, ಆ ಹಣದಲ್ಲಿ ಹೊಸ 'ಐಫೋನ್ 18 ಪ್ರೋ' ಖರೀದಿಸಬಹುದಾಗಿದೆ.

ಬೆಂಗಳೂರು (ಅ,16): ಜಾಗತಿಕ ತಂತ್ರಜ್ಞಾನ ದೈತ್ಯ 'ಆ್ಯಪಲ್' (Apple) ಸಂಸ್ಥೆಯು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿದ ತನ್ನ ಪ್ರಪ್ರಥಮ ಫೋಲ್ಡಬಲ್ ಸ್ಮಾರ್ಟ್‌ಫೋನ್ 'ಆ್ಯಪಲ್ ಐಫೋನ್ ಡುಯೋ' (Apple iPhone Duo) ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಅಕ್ಟೋಬರ್ 23 ರಿಂದ ಅಧಿಕೃತ ಮಾರಾಟ ಹಾಗೂ ಅಕ್ಟೋಬರ್ 16 ರಿಂದ ಪ್ರೀ-ಆರ್ಡರ್ ಆರಂಭವಾಗುತ್ತಿರುವ ಬೆನ್ನಲ್ಲೇ, ಆ್ಯಪಲ್ ಸಂಸ್ಥೆಯು ಈ ಐಷಾರಾಮಿ ಫೋಲ್ಡಬಲ್ ಫೋನ್‌ನ ಸಂಪೂರ್ಣ ರಿಪೇರಿ ವೆಚ್ಚದ (Repair Costs) ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದರಲ್ಲಿನ ಕೆಲ ರಿಪೇರಿ ವೆಚ್ಚಗಳು ಎಷ್ಟೊಂದು ದುಬಾರಿಯಾಗಿವೆ ಎಂದರೆ, ಆ ಹಣದಲ್ಲಿ ಗ್ರಾಹಕರು ನೂತನವಾಗಿ ಬಿಡುಗಡೆಯಾಗಿರುವ 'ಆ್ಯಪಲ್ ಐಫೋನ್ 18 ಪ್ರೋ' (iPhone 18 Pro) ಫೋನನ್ನೇ ನೇರವಾಗಿ ಖರೀದಿಸಬಹುದಾಗಿದೆ. 2026 ರ ಸೆಪ್ಟೆಂಬರ್ 9 ರಂದು ಈ ಐಫೋನ್ ಡುಯೋ ಅನ್ನು ಜಾಗತಿಕವಾಗಿ ಅನಾವರಣಗೊಳಿಸಿತ್ತು. ಭಾರತದಲ್ಲಿ ಇದರ ಆರಂಭಿಕ ಬೆಲೆ ₹2,99,900 ಆಗಿದೆ.

ಐಫೋನ್ ಡುಯೋ ರಿಪೇರಿ ದರ ಪಟ್ಟಿ (iPhone Duo Repair Price List India)

ಫೋಲ್ಡಬಲ್ ಫೋನ್‌ನ ಒಳಭಾಗದ ಡಿಸ್ಪ್ಲೇ ಮೇಲಿರುವ ತೆಳುವಾದ ಕವರ್ ಲೇಯರ್‌ನಿಂದ ಹಿಡಿದು ಪ್ರಮುಖ ಬಿಡಿಭಾಗಗಳವರೆಗೆ ಆ್ಯಪಲ್ ನಿಗದಿಪಡಿಸಿರುವ ಸರಿಪಡಿಸುವಿಕೆಯ ವೆಚ್ಚ ಹೀಗಿದೆ.

ರಿಪೇರಿ/ಸೇವೆ ವಿವರ (Repair Service)ರಿಪೇರಿ ವೆಚ್ಚ (ಭಾರತೀಯ ರೂಪಾಯಿಗಳಲ್ಲಿ)
ಕವರ್ ಲೇಯರ್ ರಿಪೇರಿ (Cover layer damage₹5,900
ಹಿಂಭಾಗದ ಗ್ಲಾಸ್ ಡ್ಯಾಮೇಜ್ (Back glass damage)₹20,900
ಬ್ಯಾಟರಿ ಸರ್ವಿಸ್ (Battery service)₹24,900
ಹಿಂಬದಿಯ ಕ್ಯಾಮೆರಾ ಡ್ಯಾಮೇಜ್ (Rear camera damage)₹26,900
ಹೊರಭಾಗದ ಡಿಸ್ಪ್ಲೇ ಡ್ಯಾಮೇಜ್ (Outer display damage)₹42,900
ಹೊರ ಡಿಸ್ಪ್ಲೇ ಹಾಗೂ ಹಿಂಭಾಗದ ಗ್ಲಾಸ್ ಡ್ಯಾಮೇಜ್ (Outer display & back glass)₹55,900
ಒಳಭಾಗದ ಡಿಸ್ಪ್ಲೇ ಡ್ಯಾಮೇಜ್ (Inner display damage)₹1,49,900
ಇತರ ಪ್ರಮುಖ ಹಾನಿ/ಸಂಕೀರ್ಣ ರಿಪೇರಿ (Other damage)₹2,24,900

ಒಳಭಾಗದ ಫೋಲ್ಡಬಲ್ ಡಿಸ್ಪ್ಲೇ ಮೇಲಿರುವ ರಕ್ಷಣಾತ್ಮಕ 'ಕವರ್ ಲೇಯರ್' ಅನ್ನು ಯಾವುದೇ ಕಾರಣಕ್ಕೂ ಗ್ರಾಹಕರು ತೆಗೆದು ಹಾಕದಂತೆ ಆ್ಯಪಲ್ ಸಲಹೆ ನೀಡಿದೆ. ಒಂದು ವೇಳೆ ಅದು ಹಾಳಾದರೆ ಅದನ್ನು ಬದಲಾಯಿಸಲು ₹5,900 ವೆಚ್ಚವಾಗಲಿದೆ. ಇನ್ನು ಮುಖ್ಯವಾದ ಒಳಭಾಗದ ಫೋಲ್ಡಬಲ್ ಡಿಸ್ಪ್ಲೇ (Inner Display) ಹಾಳಾದರೆ ಅದನ್ನು ಬದಲಾಯಿಸಲು ಬರೋಬ್ಬರಿ ₹1,49,900 ಪಾವತಿಸಬೇಕಾಗುತ್ತದೆ. ಯಾವುದೇ ಸಂಕೀರ್ಣ ಅಥವಾ ಪಟ್ಟಿಯಲ್ಲಿ ಉಲ್ಲೇಖವಿಲ್ಲದ ಪ್ರಮುಖ ಹಾನಿ ಸಂಭವಿಸಿದರೆ (Other Damage) ಗ್ರಾಹಕರು ಬರೋಬ್ಬರಿ ₹2,24,900 ರಿಪೇರಿ ವೆಚ್ಚ ತೆರಬೇಕಾಗುತ್ತದೆ!

ಐಫೋನ್ ಡುಯೋ ಭಾರತದಲ್ಲಿ ಮಾರಾಟವಾಗುವ ಮೂಲ ಬೆಲೆಗಳು:

  • 256 GB ಆವೃತ್ತಿ: ₹2,99,900
  • 512 GB ಆವೃತ್ತಿ: ₹3,24,900
  • 1 TB ಆವೃತ್ತಿ: ₹3,74,900
  • 2 TB ಆವೃತ್ತಿ: ₹4,49,900

ಭಾರತದಲ್ಲಿ ಐಫೋನ್ ಡುಯೋ ರಿಪೇರಿ ವೆಚ್ಚ ಇಷ್ಟೊಂದು ದುಬಾರಿಯೇಕೆ?

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಐಫೋನ್ ಡುಯೋ ಮೂಲ ಬೆಲೆ ಹಾಗೂ ರಿಪೇರಿ ದರ ಎರಡೂ ತೀರಾ ಹೆಚ್ಚಾಗಿದೆ. ಉದಾಹರಣೆಗೆ, ದುಬೈನಲ್ಲಿ ಇದರ ಆರಂಭಿಕ ಬೆಲೆ AED 8,499 (ಸುಮಾರು ₹2,20,000) ಇದ್ದರೆ, ಅಮೆರಿಕದಲ್ಲಿ (USA) $1,999 (ಸುಮಾರು ₹1,90,000) ನಿಗದಿಯಾಗಿದೆ.

ಈ ಭಾರಿ ಬೆಲೆ ವ್ಯತ್ಯಾಸಕ್ಕೆ ಮುಖ್ಯ ಕಾರಣ ಆ್ಯಪಲ್ ಸಂಸ್ಥೆಯ ಉತ್ಪಾದನಾ ನೀತಿ. ಆ್ಯಪಲ್ ಸಂಸ್ಥೆಯು ಐಫೋನ್ ಡುಯೋ ಫೋನ್ ಅನ್ನು ಚೀನಾದಲ್ಲಿರುವ ಫಾಕ್ಸ್‌ಕಾನ್ (Foxconn) ಕಾರ್ಖಾನೆಯಲ್ಲಿ ಮಾತ್ರ ಪ್ರತ್ಯೇಕವಾಗಿ ತಯಾರಿಸಿ ಜೋಡಿಸುತ್ತದೆ (Assemble). ಫೋಲ್ಡಬಲ್ ಡಿಸ್ಪ್ಲೇ ಹಾಗೂ ಅತ್ಯಂತ ಸಂಕೀರ್ಣ ಹಿಂಜ್ (Hinge System) ತಂತ್ರಜ್ಞಾನವನ್ನು ತಯಾರಿಸುವುದು ಕಷ್ಟಕರವಾದ್ದರಿಂದ ಚೀನಾದಲ್ಲೇ ಸಂಪೂರ್ಣ ಉತ್ಪಾದನೆ ನಡೆಯುತ್ತಿದೆ. ಭಾರತ ಸೇರಿದಂತೆ ಇತರ ದೇಶಗಳಿಗೆ ಆ್ಯಪಲ್ ಇದನ್ನು 'ಕಂಪ್ಲೀಟ್ಲಿ ಬಿಲ್ಟ್ ಯುನಿಟ್' (CBU) ರೂಪದಲ್ಲಿ ಆಮದು ಮಾಡಿಕೊಳ್ಳುತ್ತದೆ. ಇದರಿಂದಾಗಿ ಭಾರಿ ಪ್ರಮಾಣದ ಆಮದು ಸುಂಕ (Import Duties) ಮತ್ತು ತೆರಿಗೆಗಳು ವಿಧಿಸಲ್ಪಡುತ್ತವೆ. ಈ ಆಮದು ಸುಂಕದ ಬಿಸಿಯು ಬಿಡಿಭಾಗಗಳ ಮೇಲೆಯೂ ಬೀರುವುದರಿಂದ ರಿಪೇರಿ ವೆಚ್ಚ ಶೇ. 30 ರಿಂದ 40 ರಷ್ಟು ಹೆಚ್ಚಾಗಿದೆ.

ರಿಪೇರಿ ಬದಲು ಹೊಸ 'ಐಫೋನ್ 18 ಪ್ರೋ' ಕೊಳ್ಳುವುದೇ ಜಾಣತನ

ಭಾರತದಲ್ಲಿ ನೂತನವಾಗಿ ಅನಾವರಣಗೊಂಡಿರುವ ಆ್ಯಪಲ್‌ನ 'ಐಫೋನ್ 18 ಪ್ರೋ' (iPhone 18 Pro) ಫೋನ್‌ನ ಆರಂಭಿಕ ಬೆಲೆ ₹1,64,900 ಆಗಿದೆ. ಹೀಗಿರುವಾಗ ಐಫೋನ್ ಡುಯೋದ ಇತರ ಹಾನಿಗಳಿಗೆ ₹2,24,900 ಅಥವಾ ಒಳ ಡಿಸ್ಪ್ಲೇ ರಿಪೇರಿಗೆ ₹1,49,900 ಪಾವತಿಸುವ ಬದಲು, ಸಲ್ಪ ಹಣ ಸೇರಿಸಿ ಗ್ರಾಹಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರೀಮಿಯಂ ಹಾಗೂ ಬ್ರಾಂಡ್ ನ್ಯೂ 'ಐಫೋನ್ 18 ಪ್ರೋ' ಫೋನನ್ನೇ ಹೊಸದಾಗಿ ಖರೀದಿ ಮಾಡುವುದು ಜಾಣತನದ ನಿರ್ಧಾರವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.