ನಾವು ಪ್ರತಿದಿನ ಮೊಬೈಲ್ ಫೋನ್ ಬಳಸುತ್ತೇವೆ. ಕರೆ ಮಾಡುವುದು, ಮೆಸೇಜ್ ಕಳುಹಿಸುವುದು, ಫೋಟೋ ತೆಗೆಯುವುದು, ವಿಡಿಯೋ ನೋಡುವುದು ಸೇರಿದಂತೆ ಬಹುತೇಕ ಎಲ್ಲ ಕೆಲಸಗಳಿಗೂ ಸ್ಮಾರ್ಟ್ಫೋನ್ ಬೇಕೇ ಬೇಕು. ಆದರೆ, ಮೊಬೈಲ್ ಬಳಸುವಾಗ ಅದರ ಸರಿಯಾದ ಆರೈಕೆಯ ಬಗ್ಗೆ ಹೆಚ್ಚಿನವರು ಗಮನ ಹರಿಸುವುದಿಲ್ಲ.
ನಾವು ಪ್ರತಿದಿನ ಮೊಬೈಲ್ ಫೋನ್ ಬಳಸುತ್ತೇವೆ. ಕರೆ ಮಾಡುವುದು, ಮೆಸೇಜ್ ಕಳುಹಿಸುವುದು, ಫೋಟೋ ತೆಗೆಯುವುದು, ವಿಡಿಯೋ ನೋಡುವುದು ಸೇರಿದಂತೆ ಬಹುತೇಕ ಎಲ್ಲ ಕೆಲಸಗಳಿಗೂ ಸ್ಮಾರ್ಟ್ಫೋನ್ ಬೇಕೇ ಬೇಕು. ಆದರೆ, ಮೊಬೈಲ್ ಬಳಸುವಾಗ ಅದರ ಸರಿಯಾದ ಆರೈಕೆಯ ಬಗ್ಗೆ ಹೆಚ್ಚಿನವರು ಗಮನ ಹರಿಸುವುದಿಲ್ಲ. ನಮ್ಮ ಕೆಲವು ಸಣ್ಣ ಅಭ್ಯಾಸಗಳೇ ಫೋನ್ನ ಬ್ಯಾಟರಿ ಸಾಮರ್ಥ್ಯ ಕಡಿಮೆಯಾಗಲು ಕಾರಣವಾಗಬಹುದು.
1. ಬಿಸಿಲಿನಲ್ಲಿ ಮೊಬೈಲ್ ಇಡುವ ಅಭ್ಯಾಸ
ಕೆಲವರು ಕಾರಿನ ಡ್ಯಾಶ್ಬೋರ್ಡ್ ಮೇಲೆ ಅಥವಾ ಕಿಟಕಿಯ ಪಕ್ಕದಲ್ಲಿ ನೇರ ಬಿಸಿಲು ಬೀಳುವ ಜಾಗದಲ್ಲಿ ಮೊಬೈಲ್ ಇಡುತ್ತಾರೆ. ಸ್ವಲ್ಪ ಸಮಯ ಇಟ್ಟರೆ ಏನೂ ಆಗುವುದಿಲ್ಲ ಎಂದುಕೊಳ್ಳಬಹುದು. ಆದರೆ, ಅತಿಯಾದ ಬಿಸಿಯು ಮೊಬೈಲ್ನ ಬ್ಯಾಟರಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಪದೇಪದೇ ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಳ್ಳುವುದರಿಂದ ಬ್ಯಾಟರಿ ಸಾಮರ್ಥ್ಯ ಕುಸಿಯುವ ಸಾಧ್ಯತೆಯಿದೆ. ವಿಶೇಷವಾಗಿ ಬಿಸಿಲಿನಲ್ಲಿ ನಿಲ್ಲಿಸಿರುವ ಕಾರಿನೊಳಗೆ ಮೊಬೈಲ್ ಬಿಟ್ಟು ಹೋಗುವುದು ಅಪಾಯಕಾರಿ.
2. ದಿಂಬಿನ ಕೆಳಗೆ ಇಟ್ಟು ಮೊಬೈಲ್ ಚಾರ್ಜ್ ಮಾಡುವುದು
ರಾತ್ರಿ ಮಲಗುವಾಗ ಮೊಬೈಲ್ ಅನ್ನು ಹಾಸಿಗೆಯ ಮೇಲೆ ಇಟ್ಟು ಚಾರ್ಜ್ ಮಾಡುವ ಅಭ್ಯಾಸ ಹಲವರಿಗಿದೆ. ಕೆಲವರು ಫೋನ್ ಅನ್ನು ದಿಂಬಿನ ಕೆಳಗೆ ಅಥವಾ ಹೊದಿಕೆಯೊಳಗೆ ಇಟ್ಟುಕೊಂಡೇ ಚಾರ್ಜ್ ಮಾಡುತ್ತಾರೆ. ಆದರೆ, ಇದು ಅಪಾಯಕಾರಿಯಾದ ಅಭ್ಯಾಸವಾಗಬಹುದು. ದಿಂಬು ಮತ್ತು ಹೊದಿಕೆಗಳು ಮೊಬೈಲ್ನಿಂದ ಹೊರಬರುವ ಶಾಖವನ್ನು ಹಿಡಿದಿಟ್ಟುಕೊಳ್ಳಬಹುದು. ಇದರಿಂದ ಫೋನ್ ಹೆಚ್ಚು ಬಿಸಿಯಾಗುವ ಸಾಧ್ಯತೆಯಿದ್ದು, ಬ್ಯಾಟರಿ ಮೇಲೆ ಪರಿಣಾಮ ಬೀರಬಹುದು.
3. ಚಾರ್ಜಿಂಗ್ ಪೋರ್ಟ್ನಲ್ಲಿರುವ ಧೂಳನ್ನು ನಿರ್ಲಕ್ಷಿಸುವುದು
ನಿಮ್ಮ ಮೊಬೈಲ್ ಚಾರ್ಜರ್ ಸರಿಯಾಗಿ ಸಂಪರ್ಕವಾಗುತ್ತಿಲ್ಲವೇ? ಕೇಬಲ್ ಸ್ವಲ್ಪ ಅಲುಗಾಡಿಸಿದಾಗ ಮಾತ್ರ ಚಾರ್ಜ್ ಆಗುತ್ತಿದೆಯೇ? ಹಾಗಾದರೆ, ಚಾರ್ಜಿಂಗ್ ಪೋರ್ಟ್ನಲ್ಲಿ ಧೂಳು ಅಥವಾ ಬಟ್ಟೆಯ ನಾರುಗಳು ಸೇರಿಕೊಂಡಿರುವ ಸಾಧ್ಯತೆಯಿದೆ. ಮೊಬೈಲ್ ಅನ್ನು ಜೇಬಿನಲ್ಲಿ ಅಥವಾ ಬ್ಯಾಗ್ನಲ್ಲಿ ಇಟ್ಟುಕೊಂಡು ಓಡಾಡುವಾಗ ಸಣ್ಣ ಧೂಳಿನ ಕಣಗಳು ಚಾರ್ಜಿಂಗ್ ಪೋರ್ಟ್ನಲ್ಲಿ ಸೇರಿಕೊಳ್ಳಬಹುದು. ಕಾಲಕ್ರಮೇಣ ಇದು ಚಾರ್ಜಿಂಗ್ ಸಂಪರ್ಕಕ್ಕೆ ಅಡ್ಡಿಯಾಗಬಹುದು. ಇಂತಹ ಸಂದರ್ಭದಲ್ಲಿ ಬಲವಂತವಾಗಿ ಕೇಬಲ್ ತೂರಿಸುವುದರಿಂದ ಪೋರ್ಟ್ ಹಾನಿಗೊಳಗಾಗುವ ಸಾಧ್ಯತೆಯಿದೆ.
4. ಸಾಫ್ಟ್ವೇರ್ ಅಪ್ಡೇಟ್ಗಳನ್ನು ಪದೇಪದೇ ಮುಂದೂಡುವುದು
ಮೊಬೈಲ್ನಲ್ಲಿ ಸಾಫ್ಟ್ವೇರ್ ಅಪ್ಡೇಟ್ ಸೂಚನೆ ಬಂದಾಗ ಅನೇಕರು ಅದನ್ನು ಮುಂದೂಡುತ್ತಲೇ ಇರುತ್ತಾರೆ. ಅಪ್ಡೇಟ್ ಮಾಡಿದರೆ ಸಮಯ ಹಿಡಿಯುತ್ತದೆ ಅಥವಾ ಫೋನ್ ನಿಧಾನವಾಗಬಹುದು ಎಂಬ ಭಯವೂ ಕೆಲವರಲ್ಲಿರುತ್ತದೆ. ಆದರೆ, ಅಧಿಕೃತ ಅಪ್ಡೇಟ್ಗಳನ್ನು ದೀರ್ಘಕಾಲ ನಿರ್ಲಕ್ಷಿಸುವುದು ಸರಿಯಾದ ಅಭ್ಯಾಸವಲ್ಲ. ಸಾಫ್ಟ್ವೇರ್ ಅಪ್ಡೇಟ್ಗಳಲ್ಲಿ ಭದ್ರತಾ ದೋಷಗಳನ್ನು ಸರಿಪಡಿಸುವ ವ್ಯವಸ್ಥೆಗಳು ಮತ್ತು ಸಾಫ್ಟ್ವೇರ್ ಸಮಸ್ಯೆಗಳಿಗೆ ಪರಿಹಾರಗಳು ಇರಬಹುದು. ಅವುಗಳನ್ನು ಇನ್ಸ್ಟಾಲ್ ಮಾಡದಿದ್ದರೆ ನಿಮ್ಮ ಸಾಧನವು ಕೆಲವು ಭದ್ರತಾ ಅಪಾಯಗಳಿಗೆ ಹೆಚ್ಚು ಒಳಗಾಗಬಹುದು.
5. ಮೊಬೈಲ್ಗೆ ಕವರ್ ಮತ್ತು ಸ್ಕ್ರೀನ್ ಪ್ರೊಟೆಕ್ಟರ್ ಬಳಸದೇ ಇರುವುದು
ಮೊಬೈಲ್ ಕೈಯಿಂದ ಜಾರಿಬೀಳುವುದು ಸಾಮಾನ್ಯ. ನಡೆಯುವಾಗ, ಕಾರಿನಿಂದ ಇಳಿಯುವಾಗ ಅಥವಾ ಅವಸರದಲ್ಲಿ ಫೋನ್ ಬಳಸುವಾಗ ಅದು ಕೆಳಗೆ ಬೀಳಬಹುದು. ಸ್ಕ್ರೀನ್ ಒಡೆಯದಿದ್ದರೂ ಬಲವಾದ ಹೊಡೆತದಿಂದ ಒಳಗಿನ ಭಾಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಇನ್ನು, ಮೊಬೈಲ್ ಅನ್ನು ಕೀಲಿ ಅಥವಾ ಇತರ ಗಟ್ಟಿಯಾದ ವಸ್ತುಗಳ ಜೊತೆ ಒಂದೇ ಜೇಬಿನಲ್ಲಿ ಇಟ್ಟುಕೊಂಡರೆ ಸ್ಕ್ರೀನ್ ಮತ್ತು ಫೋನ್ನ ಹೊರಭಾಗದಲ್ಲಿ ಗೀರುಗಳು ಬೀಳಬಹುದು.





