Mandya : ಮಂಡ್ಯ ಬಂದ್ ಯಶಸ್ವಿ : ರೈತರ ಹೋರಾಟಕ್ಕೆ ಜನತೆಯೂ ಸಾಥ್
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಕರೆಕೊಟ್ಟಿದ್ದ ಮಂಡ್ಯ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ವಿವಿಧ ಸಂಘಟನೆಗಳು, ವರ್ತಕರು, ವಿದ್ಯಾರ್ಥಿಗಳು ಸೇರಿದಂತೆ ರೈತರ ಹೋರಾಟಕ್ಕೆ ಮಂಡ್ಯ ಜನರು ಸಾಥ್ ನೀಡಿದರು.

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ಡಿ.19): ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಕರೆಕೊಟ್ಟಿದ್ದ ಮಂಡ್ಯ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ವಿವಿಧ ಸಂಘಟನೆಗಳು, ವರ್ತಕರು, ವಿದ್ಯಾರ್ಥಿಗಳು ಸೇರಿದಂತೆ ರೈತರ ಹೋರಾಟಕ್ಕೆ ಮಂಡ್ಯ ಜನರು ಸಾಥ್ ನೀಡಿದರು. ಸತತ 8 ಗಂಟೆಗಳ ಕಾಲ ಮಂಡ್ಯ ನಗರವನ್ನು ಸ್ಥಬ್ದವಾಗಿಸುವ ಮೂಲಕ ರೈತರು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಪ್ರತಿ ಲೀಟರ್ ಹಾಲಿಗೆ 40ರೂ ನಿಗಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಡ್ಯ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕಳೆದ 43 ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಹೋರಾಟ ನಡೆಯುತ್ತಿದೆ. ಒಂದೂವರೆ ತಿಂಗಳು ಕಳೆದರು ರೈತರ ಕಡೆ ತಿರುಗಿಯೂ ನೋಡದ ಸರ್ಕಾರದ ವಿರುದ್ಧ ಇಂದು ಅನ್ನದಾತರು ರಸ್ತೆಗಿಳಿದಿದ್ದರು. ಮಂಡ್ಯ ನಗರ ಬಂದ್ ಕರೆ ನೀಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.
ಡಿ.19ಕ್ಕೆ ಮಂಡ್ಯ ಬಂದ್ : ಬಡಗಲಪುರ ನಾಗೇಂದ್ರ
8 ಗಂಟೆಗಳ ಕಾಲ ಬಂದ್ ಯಶಸ್ವಿ: ಬೆಳಿಗ್ಗೆ 6 ಗಂಟೆಯಿಂದ ಆರಂಭವಾದ ಬಂದ್ ಮಧ್ಯಾಹ್ನ 2 ಗಂಟೆಯವರೆಗೆ ಸತತ 8 ಗಂಟೆಗಳ ಕಾಲ ಯಶಸ್ವಿಯಾಗಿ ನಡೆಯಿತು. ಬಂದ್ ವೇಳೆ ಮಂಡ್ಯ ನಗರ ಸಂಪೂರ್ಣ ಸ್ಥಬವಾದಂತೆ ಕಾಣುತ್ತಿತ್ತು. ಆಟೋ, ಲಾರಿ ಚಾಲಕರು, ವರ್ತಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರಗತಿಪರ ಹಾಗೂ ಕನ್ನಡ ಸಂಘಟನೆಗಳು ರೈತರ ಪರ ಬೀದಿಗೆ ಇಳಿದಿದ್ದರು. ಬೈಕ್ ರ್ಯಾಲಿ ಮೂಲಕ ನಗರದ ರಸ್ತೆ ಸುತ್ತಿದ ಪ್ರತಿಭಟನಾಕಾರರು ಅಂಗಡಿ ಬಾಗಿಲು ಮುಚ್ಚಿ ರೈತರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಕಾಲೇಜು ವಿದ್ಯಾರ್ಥಿಗಳ ಸಾಥ್: ರೈತರ ಮನವಿಗೆ ಓಗೊಟ್ಟ ವರ್ತಕರು ಅಂಗಡಿ ಬಾಗಿಲು ಹಾಕಿ ಬಂದ್ ಯಶಸ್ವಿಯಾಗಲು ಸಹಕರಿಸಿದರೆ, ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ಧನಿಯಾದರು. ಮಂಡ್ಯದ ಸಂಜಯ ವೃತ್ತಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ನೂರಾರು ವಿದ್ಯಾರ್ಥಿಗಳು ರೈತರೊಂದಿಗೆ ಪ್ರತಿಭಟನೆ ನಡೆಸಿದರು. ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಕುಳಿತು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ರು, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
Mandya: ಡಿ.24ಕ್ಕೆ ಮೇಲುಕೋಟೆಗೆ ಪಂಚರತ್ನ ರಥಯಾತ್ರೆ: ಶಾಸಕ ಸಿ.ಎಸ್.ಪುಟ್ಟರಾಜು
ಪಟಾಪಟಿ ಚಡ್ಡಿ ಪ್ರತಿಭಟನೆ: ಬಂದ್ ವೇಳೆ ಕೆಲ ರೈತರು ವಿನೂತನ ಪ್ರತಿಭಟನೆಗೆ ಮುಂದಾದರು. ಮಂಡ್ಯದ ಸಂಪ್ರದಾಯ ಉಡುಗೆ ಪಟಾಪಟಿ ಚಡ್ಡಿ ತೊಟ್ಟು ಅರೆಬೆತ್ತಲ ಪ್ರತಿಭಟನೆ ನಡೆಸಿದರು. ಮಂಡ್ಯದ ಸಂಜಯ ವೃತ್ತದಲ್ಲಿ ರೈತರ ಚಡ್ಡಿ ಪ್ರತಿಭಟನೆ ಕಂಡು ಬಂತು. ಕಬ್ಬು ತುಂಬಿದ ಟ್ರಾಕ್ಟರ್ ಮೇಲೆ ಹತ್ತಿದ್ದ ಹತ್ತಕ್ಕೂ ಹೆಚ್ಚು ರೈತರು ಪಟಾಪಟಿ ಚಡ್ಡಿ ಧರಿಸಿ ತಮಟೆ ಸದ್ದಿಗೆ ಕುಣಿಯುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.