Asianet Suvarna News Asianet Suvarna News

Mandya: ಡಿ.24ಕ್ಕೆ ಮೇಲುಕೋಟೆಗೆ ಪಂಚರತ್ನ ರಥಯಾತ್ರೆ: ಶಾಸಕ ಸಿ.ಎಸ್‌.ಪುಟ್ಟರಾಜು

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಡಿ.24ರಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಆಗಮಿಸುವ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ಸಿ.ಎಸ್‌.ಪುಟ್ಟರಾಜು ಮನವಿ ಮಾಡಿದರು. 

JDS Pancharatna Rathayatra to Melukote on December 24th Says Mla CS Puttaraju gvd
Author
First Published Dec 19, 2022, 1:00 AM IST

ಪಾಂಡವಪುರ (ಡಿ.19): ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಡಿ.24ರಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ರಥಯಾತ್ರೆ ಆಗಮಿಸುವ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ಸಿ.ಎಸ್‌.ಪುಟ್ಟರಾಜು ಮನವಿ ಮಾಡಿದರು. ತಾಲೂಕಿನ ಬೇಬಿಬೆಟ್ಟದಲ್ಲಿ ಚಿನಕುರಳಿ ಜಿಪಂ ಕ್ಷೇತ್ರ, ಎಲೆಕೆರೆ ಹ್ಯಾಂಡ್‌ ಪೋಸ್ಟ್‌ ಅಕ್ಷಯ ಕನ್ವೆನ್ಷನ್‌ ಹಾಲ್‌ನಲ್ಲಿ ಕ್ಯಾತನಹಳ್ಳಿ ಜಿಪಂ, ಕುಂತಿಬೆಟ್ಟದಲ್ಲಿ ಚಿಕ್ಕಾಡೆ ಜಿಪಂ ಕ್ಷೇತ್ರ, ತೊಣ್ಣೂರುಕೆರೆ ಏರಿಯಲ್ಲಿ ಲಕ್ಷ್ಮೀಸಾಗರ ಜಿಪಂ ಕ್ಷೇತ್ರದ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಿದರು. 

ಪಟ್ಟಣದ ತಮ್ಮ ನಿವಾಸದಲ್ಲಿ ಪುರಸಭೆ ವ್ಯಾಪ್ತಿಯ ಕಾರ್ಯಕರ್ತರ ಸಭೆ ನಡೆಸಿ ಪಂಚರತ್ನ ಯಾತ್ರೆ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಡಿ.24ರಂದು ಬೆಳಗ್ಗೆ 9ಗಂಟೆಗೆ ಕೆಆರ್‌ಎಸ್‌ನಿಂದ ಪಂಚರತ್ನ ಯಾತ್ರೆ ನಾಥ್‌ರ್‍ಬ್ಯಾಂಕ್‌, ಕಟ್ಟೇರಿ, ಅರಳಕುಪ್ಪೆ, ಹರವು, ಕ್ಯಾತನಹಳ್ಳಿ, ಕೆನ್ನಾಳು ಮಾರ್ಗವಾಗಿ ಪಟ್ಟಣ ಪ್ರವೇಶಿಸಲಿದೆ. ಪಟ್ಟಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಲಿದ್ದಾರೆ ಎಂದರು. ಬಳಿಕ ಚಿಕ್ಕಾಡೆ, ಚಿಕ್ಕಬ್ಯಾಡರಹಳ್ಳಿ ಸರ್ಕಲ್, ಕನಗನಮರಡಿ, ಹುಲಿಕೆರೆ ಮಾರ್ಗವಾಗಿ ಶಿವಳ್ಳಿ ತಲುಪಿ ವಾಸ್ತವ್ಯ ಇರಲಿದ್ದಾರೆ. 

Mandya: ನನ್ನ ಜೀವನೋತ್ಸಾಹ ಕುಂದಿಲ್ಲ: ಎಸ್‌.ಎಂ.ಕೃಷ್ಣ

ಶಿವಳ್ಳಿಯಲ್ಲಿ ದೊಡ್ಡಮಟ್ಟದ ಸಭೆ ನಡೆಯಲಿದೆ. ಬಳಿಕ ಡಿ.25ರಂದು ಬೆಳಗ್ಗೆ ಶಿವಳ್ಳಿಯಿಂದ ಹೊರಟು ದುದ್ದ ಮಾರ್ಗವಾಗಿ ಜಕ್ಕನಹಳ್ಳಿ ಸರ್ಕಲ್, ಮೇಲುಕೋಟೆ, ನಾರಾಯಣಪುರ, ಚಿನಕುರಳಿ ಮಾರ್ಗವಾಗಿ ಕೆ.ಆರ್‌ .ಪೇಟೆ ತಾಲೂಕಿನ ಅಶೋಕ ನಗರಕ್ಕೆ ತಲುಪಲಿದೆ ಎಂದರು. ಪ್ರತಿ ಗ್ರಾಪಂ ಮಟ್ಟದಲ್ಲೂ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲೂ ಸಹ ಊಟದ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದ ಕಾರ್ಯಕರ್ತರು ಎಲ್ಲರು ದಾರಿಯುದ್ದಕ್ಕೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಲೀಡ್‌ ಕೊಡಿಸಲು ಸಾಧ್ಯವಾಗದ ನೋವಿದೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದರೂ ಸಹ ಮೇಲುಕೋಟೆ ಕ್ಷೇತ್ರದಿಂದ ನಮ್ಮ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಲೀಡ್‌ ಕೊಡಿಸಲು ಸಾಧ್ಯವಾಗಲಿಲ್ಲ ಎನ್ನುವ ನೋವುವಿದೆ. ಸಂಸದರಾದವರು ಜನರ ಕ್ಷೇತ್ರದ ಅಭಿವೃದ್ಧಿಗೆ ಏನು ಕೊಡುಗೆ ನೀಡಿದ್ದಾರೆ ಎನ್ನವುದು ಜನರಿಗೆ ಅರಿವಿದೆ. ಸೋಲಿನ ನೋವನ್ನು ತೀರಿಸಿಕೊಳ್ಳುವ ಸಂದರ್ಭ ಈಗ ಬಂದಿದೆ. ಮುಂದಿನ 2023ರ ಚುನಾವಣೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಗೆಲ್ಲಿಸಿಕೊಡುವ ಮೂಲಕ ನೋವು ಮರೆಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಹೊಸದಾಗಿ ಬಂದ ಬಿಜೆಪಿ ಸರ್ಕಾರ ಹಿಂದಿನ ಸರ್ಕಾರದ ಯೋಜನೆಗಳನ್ನು ತಡೆಹಿಡಿದರು. ಆದರೆ, ಯಡಿಯೂರಪ್ಪನವರಿಗೆ ನನ್ನ ಮೇಲಿದ್ದ ಪ್ರೀತಿಯಿಂದಾಗಿ ನನ್ನ ಕ್ಷೇತ್ರದ ಯಾವುದೇ ಯೋಜನೆ ತಡೆಹಿಡಿಯಲಿಲ್ಲ. ಬೇಬಿಗ್ರಾಮದ ಮಠದ ಕಾರ್ಯಕ್ರಮಕ್ಕೆ ಬಂದ ಯಡಿಯೂರಪ್ಪನವರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು ನನಗಷ್ಟುಸಾಕು ಎಂದರು. ಕ್ಷೇತ್ರದ ಕುರುಬ ಸಮುದಾಯದ ದೇವಸ್ಥಾನ ಉದ್ಘಾಟನೆಗೆ ಸಿದ್ದರಾಮಯ್ಯನವರನ್ನು ಆಹ್ವಾನಿಸಲು ಹೋದಾಗ ಪುಟ್ಟರಾಜು ಕಾಂಗ್ರೆಸ್‌ ಸೇರೋಕೆ ಬಂದಿದ್ದಾರೆ ಎಂದು ಸುಳ್ಳು ಹಬ್ಬಿಸಿದರು. ನನಗೆ ಬೇರೆ ಪಕ್ಷಕ್ಕೆ ಮತ ಹಾಕಿ ಅಭ್ಯಾಸವಿಲ್ಲ. ನಾನು ಕೊನವರೆಗೂ ಜೆಡಿಎಸ್‌ನಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ಬಾರಿಗೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಅಧಿಕಾರಕ್ಕೆ ಬರುವುದು ಖಚಿತ. ಈಗಾಗಲೇ ರಾಜ್ಯದಲ್ಲಿ ಜೆಡಿಎಸ್‌ ಪರವಾದ ಅಲೆ ಸೃಷ್ಟಿಯಾಗಿದೆ. ಜಿಲ್ಲಾ ನಾಯಕನಾಗಿ ಮುಂದಿನ ದಿನಗಳಲ್ಲಿ ನಾನು ಕುಮಾರಸ್ವಾಮಿ ಜತೆಯಲ್ಲಿ ಇದ್ದು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಕಾರ್ಯಕರ್ತರು ನಿಮಗೆ ನೀವೇ ಪುಟ್ಟರಾಜು ಆಗಿ ಪಕ್ಷ ಸಂಘಟನೆ ಮಾಡಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಯಡಿಯೂರಪ್ಪಗೆ ಆಮಂತ್ರಣ ನೀಡಬೇಕಾ?: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಸಿ.ಅಶೋಕ್‌, ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ಎಂ.ಸಿ.ಯಶ್ವಂತ್‌ಕುಮಾರ್‌, ತಾಪಂ ಮಾಜಿ ಸದಸ್ಯ ಸಿ.ಎಸ್‌. ಗೋಪಾಲಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ಉದ್ಯಮಿ ಮಧುಸೂದನ್‌, ರಾಮಕೃಷ್ಣೇಗೌಡ(ಆರ್‌ ಕೆ), ಬಿ.ಪಿ.ಶ್ರೀನಿವಾಸ್‌, ಪ್ರವೀಣ್‌ , ಚೇತನ್‌, ವಡ್ಡರಹಳ್ಳಿ ನಿಂಗೇಗೌಡ, ಚಿಕ್ಕಾಡೆ ಚೇತನ್‌ ತಿಮ್ಮೇಗೌಡ, ಪ್ರಸನ್ನ, ಬೊಮ್ಮರಾಜು, ಎಚ್‌ಎಸ್‌ವಿ ಸ್ವಾಮೀಗೌಡ, ಎಚ್‌.ಎಲ್.ನಂಜೇಗೌಡ, ಪುರಸಭೆ ಅಧ್ಯಕ್ಷೆ ಅರ್ಚನಚಂದ್ರು, ಗ್ರಾಪಂ ಅಧ್ಯಕ್ಷರಾದ ಚಂದ್ರಶೇಖರಯ್ಯ, ಮಿಥುನ್‌, ಮಹದೇವು, ಶ್ವೇತ, ಸಿಂಧೂ ಗ್ರಾಪಂ ಸದಸ್ಯರು, ಪುರಸಭೆ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.

Follow Us:
Download App:
  • android
  • ios