ಮಂಡ್ಯ(ಅ.17): ಹೆಜ್ಜಾಲದಿಂದ - ಚಾಮರಾಜನಗರ ಸೇರುವ ರೈಲು ಮಾರ್ಗದಲ್ಲಿ ಮಳವಳ್ಳಿ, ಕೊಳ್ಳೇಗಾಲ ನಡುವೆ 142 ಕಿಮೀ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯನ್ನು ಸಂಸದೆ ಸುಮಲತಾರವರು ಪ್ರಾರಂಭಿಸಿ, ಅಂತಿಮಗೊಳಿಸಿದರೇ ಪ್ರಧಾನ ಮಂತ್ರಿ ನರೇಂದ್ರಮೋದಿ ಜೊತೆ ಮಾತನಾಡಿ ರೈಲಿಗೆ ಸುಮಲತಾ ಪೋಟೊ ಹಾಕಿಸುವುದಾಗಿ ಶಾಸಕ ಡಾ. ಕೆ. ಅನ್ನದಾನಿ ಬುಧವಾರ ಹೇಳಿದ್ದಾರೆ.

ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅನ್ನದಾನಿ, ಸಂಸದೆ ಸುಮಲತಾ ಅಂಬರೀಶ್‌ರವರು ಕೇಂದ್ರದಲ್ಲಿ ಹೋರಾಟ ಮಾಡಿ ಕಾಮಗಾರಿಯನ್ನು ಪೂರ್ಣ ಮಾಡುತ್ತಾರೆಂಬ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಅಭಿವೃದ್ಧಿಯೇ ಗುರಿ, ರಾಜಕಾರಣ ಮಾಡಲ್ಲ: ಸುಮಲತಾ

ಮೊನ್ನೆ ನಡೆದ ರೈಲ್ವೆ ಸಲಹಾ ಸಮಿತಿ ಸಭೆಯಲ್ಲಿ ಸುಮಲತಾರವರು ಈ ಬಗ್ಗೆ ಕೇಂದ್ರದ ಅಧಿಕಾರಿಗಳ ಬಳಿ ಪ್ರಸ್ತಾಪ ಮಾಡಿದ್ದಾರೆ, ಕೆಲಸ ಆದ ಮೇಲೆ ಅವರಿಗೆ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ಈಗ ಅವರ ಪ್ರಸ್ತಾಪವನ್ನು ಸ್ವಾಗತ ಮಾಡುತ್ತೇನೆ. ದೇವೇಗೌಡರು ಪ್ರಧಾನಿ, ಕುಮಾರಸ್ವಾಮಿ ಮಳವಳ್ಳಿ- ಕನಕಪುರ ಭಾಗದ ಸಂಸತ್‌ ಸದಸ್ಯರಾಗಿದ್ದಾಗ ರೈಲ್ವೆ ಹಳಿ ಕಾಮಗಾರಿಗೆ ಸರ್ವೇ ಮಾಡಲಾಗಿತ್ತು ಎಂದರು.

ನಾವು ಖಾಲಿ ಓಡಾಡ್ತಿದ್ದೀವಾ?

ಜೆಡಿಎಸ್‌ ಶಾಸಕರು ಎಲ್ಲಾ ಜವಾಬ್ದಾರಿ ನನ್ನ ಮೇಲೆ ಹಾಕುತ್ತಿದ್ದಾರೆ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅನ್ನದಾನಿ. ಜೆಡಿಎಸ್‌ ಶಾಸಕರು ಏನೂ ಕೆಲಸ ಮಾಡುತ್ತಿಲ್ಲ. ಬಿಳಿ ಪಂಚೆ- ಶರ್ಟ್‌ ಹಾಕಿಕೊಂಡು ಓಡಾಡುತ್ತಿದ್ದೇವೆ. ಪ್ರತಿ ದಿನ ಜನರ ಕಷ್ಟಸುಖವನ್ನು ಸುಮಲತಾ ಅವರೇ ನೋಡುತ್ತಿರುವುದು. ತಾಲೂಕು ಕಚೇರಿ, ಪೊಲೀಸ್‌ ಠಾಣೆ ಸೇರಿದಂತೆ ಎಲ್ಲಿ ಏನೇ ಕೆಲಸ ಇದ್ದರೂ ಅವರೇ ಮಾಡುತ್ತಾ ಇದ್ದಾರೆ. ಕೆರೆ ತುಂಬಿಸಿ ಪಿಂಚಿಣಿ ಕೊಡಿಸುತ್ತಿರೊದು ಮೇಡಂ ಅವರೇ. ಜಗಳಗಳು ಆದರೂ ರಾಜಿ ಮಾಡ್ತಾ ಇರೋದು ಅವರೇ ಎಂದು ವ್ಯಂಗ್ಯಭರಿತವಾಗಿ ಮಾತನಾಡಿದ್ದಾರೆ.

ನಮ್ಮ ಹೊರೆ ಇಳಿಸಿ:

7 ಮಂದಿ ಶಾಸಕರು ಏನು ಕೆಲಸ ಮಾಡುತ್ತಿಲ್ಲ, ಊಟ ಮಾಡಿಕೊಂಡು ತಿರುಗಾಡುತ್ತಿದ್ದೇವೆ. ದಯವಿಟ್ಟು ಸುಮಲತಾ ಇನ್ನೂ ಹೆಚ್ಚಿನ ರೀತಿ ಕೆಲಸ ಮಾಡಬೇಕು, ನಮ್ಮ ಹೊರೆಯನ್ನು ಇಳಿಸಬೇಕೆಂದು ಕೈ ಜೋಡಿಸಿ ಮನವಿ ಮಾಡುತ್ತೇನೆ. ಅವರ ಕೆಲಸ ನಾನೇ ಮಾಡುತ್ತಿದ್ದೇನೆ ಅಂತಾ ಅವರುಗಳೇ(ಸುಮಲತಾ) ಹೇಳಿದ್ದಾರಲ್ಲ. ನಮ್ಮ ಜವಾಬ್ದಾರಿಯನ್ನು ಮೇಡಂ ಅವರೇ ತೆಗೆದುಕೊಂಡಿದ್ದಾರಂತೆ. ನಾವು ಜಬಾಬ್ದಾರಿಯಿಲ್ಲದೆ ತಿರುಗಾಡಿಕೊಂಡು ಇದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

ಮನೆಗೆ ಹೋದ ಅಧಿಕಾರಿಗಳನ್ನು ವಾಪಸ್ ಕರೆಸಿ ಸಂಸದೆ ತರಾಟೆ

ಸುಮಲತಾ ಅಂಬರೀಶ್‌ ಅವರಿಗೆ ರಾಜಕೀಯ ಪ್ರಬುದ್ಧತೆ ಇದೆ. ಅದಕ್ಕೆ ಅವರು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದವರು ಯಾರೇ ಕರೆದರೂ ಹೋಗುತ್ತೇನೆ ಅಂತಾರೆ. ಈ ಪ್ರಬುದ್ಧತೆಯಿಂದಲೇ ಈ ಬಾರಿ ಆಯ್ಕೆಯಾಗಿರುವುದು, ಅವರು ಎಲ್ಲಾ ಪಾರ್ಟಿಗಳಿಗೂ ಹೋಗಲಿ, ಎಲ್ಲರನ್ನು ಮಾತಾನಾಡಿಸಲಿ ಎಂದು ನಗು ನಗುತ್ತಲೇ ವ್ಯಂಗ್ಯವಾಗಿ ಸುಮಲತಾ ವಿರುದ್ಧ ಹರಿಹಾಯ್ದರು.