ಮಂಡ್ಯ(ಅ.29): ಎಲ್ಲರೂ ಒಂದಾಗಿ ಹಬ್ಬವನ್ನು ಆಚರಿಸಿದರೆ ಸಿಗುವಂತಹ ಸಂತೋಷ, ನೆಮ್ಮದಿಯ ಬದುಕು ಯಾವುದರಲ್ಲೂ ಕೂಡ ಸಿಗುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಗೃಹ ಕಚೇರಿಯಲ್ಲಿ ಜ್ಞಾನಸಿಂಧು ಹಾಗೂ ಸೇವಾ ಕಿರಣ ವೃದ್ದಾಶ್ರಮದಲ್ಲಿರುವ ವೃದ್ಧರು ಹಾಗೂ ಬಾಲಮಂದಿರದ ಮಕ್ಕಳೊಂದಿಗೆ ದೀಪಾವಳಿ ಆಚರಿಸಿ ಮಾತನಾಡಿದ ಅವರು, ಎಲ್ಲರಿಗೂ ಖುಷಿ ಕೊಡುವಂತಹ ಹಬ್ಬ ದೀಪಾವಳಿ. ಸಂಭ್ರಮದ ಹಬ್ಬವಾಗಿದೆ ಎಂದಿದ್ಧಾರೆ.

ಭಿಕ್ಷಾಟನೆಯಲ್ಲಿ ತೊಡಗಿದ್ದ ನಾಲ್ವರು ಬಾಲಕಿಯರ ರಕ್ಷಣೆ

ಪ್ರತಿಯೊಬ್ಬರು ಕೂಡ ಖುಷಿಯಿಂದ ಇರಬೇಕು. ಜೀವನದಲ್ಲಿ ವಿವಿಧ ರೀತಿಯ ಸಮಸ್ಯೆಗಳಿಂದ ಒಂದಲ್ಲ ಒಂದು ರೀತಿಯ ದುಃಖ ಎಲ್ಲರಲ್ಲೂ ಇರುತ್ತದೆ. ಆ ದುಃಖವನ್ನು ನಿವಾರಣೆ ಮಾಡಲು ನಾವು ಎಲ್ಲರೊಂದಿಗೂ ಮುಕ್ತವಾಗಿ ಬೆರೆಯವುದನ್ನು ಕಲಿಯಬೇಕು. ಮುಕ್ತರಾಗಿ ಯಾವಾಗ ಬೆರೆಯುತ್ತೇವೆಯೋ ಆಗ ನಮ್ಮ ಮಾನಸಿಕ ಒತ್ತಡಗಳು ಕಡಿಮೆಯಾಗುತ್ತವೆ ಎಂದಿದ್ದಾರೆ.

ಭಾರತೀಯ ಹಬ್ಬಗಳು ನಮ್ಮ ಪರಂಪರೆ ಸಂಸ್ಕೃತಿ ಕೊಟ್ಟಂತಹ ಕೊಡುಗೆ. ನಾನು ಪ್ರತಿ ವರ್ಷ ಅನಾಥಶ್ರಮದ ಮಕ್ಕಳು ಹಾಗೂ ಹಿರಿಯ ನಾಗರಿಕರೊಂದಿಗೆ ಹಬ್ಬವನ್ನು ಆಚರಿಸುತ್ತೇನೆ. ಮಕ್ಕಳಾದ ನೀವು ಕೂಡ ಕಷ್ಟಪಟ್ಟು ಓದಿ ಏಕಾಗ್ರತೆ ಪಡೆದುಕೊಂಡರೆ ನೀವು ಕೂಡ ನೂರಾರು ಸಾವಿರಾರು ಜನರಿಗೆ ಸಹಾಯ ಮಾಡುವಂತಹ ಸ್ಥಾನಮಾನವನ್ನು ನಿಮಗೂ ಕೂಡ ಸಿಗುತ್ತದೆ. ಆದ್ದರಿಂದ ಚೆನ್ನಾಗಿ ಓದಬೇಕು ಖುಷಿಯಾಗಿರಬೇಕು. ಎಲ್ಲರಿಗೂ ಗೌರವ ಕೊಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.

'ಡಿಕೆಶಿ ಪ್ರಕರಣದ ಲಾಭ ಪಡೆಯುತ್ತಿದೆ ಜೆಡಿಎಸ್'..!

ಕೆಲವರಿಗೆ ತಂದೆತಾಯಿ ಇದ್ದರೆ, ಕೆಲವರಿಗೆ ತಂದೆತಾಯಿಗಳಿಲ್ಲ. ಕೆಲವರಿಗೆ ಊರೆ ಗೊತ್ತಿಲ್ಲ. ಶೋಷಿತರು ಮುಖ್ಯ ವಾಹಿನಿಗೆ ಬರುವಂತಾಗಲು ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಇದು ಸರಿಯಾದ ರೀತಿಯಲ್ಲಿ ಅನುಷ್ಟಾನವಾದರೆ ಎಲ್ಲರಿಗೂ ಎಲ್ಲಾ ರೀತಿಯ ಸೌಲಭ್ಯಗಳಿರುವಂತಹ ಮಕ್ಕಳಂತೆಯೇ ಓದಿ ಮುಂದಿನ ದಿನಗಳಲ್ಲಿ ಒಳ್ಳೆ ಸ್ಥಾನಮಾನಗಳನ್ನು ಪಡೆಯುವುದಕ್ಕೆ ಅವಕಾಶವಿದೆ. ಎಲ್ಲರೂ ಬುದ್ದಿವಂತರಾಗಿ ಶಿಸ್ತನ್ನು ಮತ್ತು ಏಕಾಗ್ರತೆ ಕಲಿಯಬೇಕು. ಹಿರಿಯರಿಗೆ, ದೇಶಕ್ಕೆ, ಕಾನೂನಿಗೆ ಗೌರವಕೊಡಬೇಕು ಎಂದು ತಿಳಿಸಿದರು. ವೃದ್ಧರಿಗೆ ಬಟ್ಟೆಗಳನ್ನು ವಿತರಿಸಿದರು. ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಗಾಯತ್ರಿ ದೇವಿ, ಕೆ.ಪರಶುರಾಮ… ಹಾಗೂ ಅನ್ನದಾನಿ ಉಪಸ್ಥಿತರಿದ್ದರು.