ಮಂಡ್ಯ(ಅ.29): ಭಿಕ್ಷಾಟನೆಯಲ್ಲಿ ತೊಡಗಿದ್ದ ನಾಲ್ವರು ಬಾಲಕಿಯರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಮದ್ದೂ​ರಿ​ನಲ್ಲಿ ಸೋಮ​ವಾರ ಜರುಗಿದೆ.

ಮದ್ದೂರು ಪಟ್ಟಣದ ಟಿಬಿ ವೃತ್ತದ ಸಿಗ್ನಲ್‌ನಲ್ಲಿ ಭಿಕ್ಷಾಟನೆ ತೊಡಗಿದ್ದ ಪಲ್ಲವಿ, ರುಕ್ಮಿಣಿ, ದೇವಿ ಹಾಗೂ ಪಲ್ಲವಿಯನ್ನು ವಶಕ್ಕೆ ಪಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಬರ್ಡ್ಸ್ ಸಂಸ್ಥೆಯ ಪದಾಧಿಕಾರಿಗಳು ಮಂಡ್ಯದ ಬಾಲಕಿಯರ ಬಾಲ ಮಂದಿರಕ್ಕೆ ಹಸ್ತಾಂತರಿಸಿದ್ದಾರೆ.

ವಿಜಯಪುರ ಜಿಲ್ಲೆಯ 5 ಕಡೆ ಉಗ್ರಾಣ ನಿರ್ಮಾಣಕ್ಕೆ ಚಿಂತ​ನೆ: ಯತ್ನಾ​ಳ

ಮೈಸೂರು- ಬೆಂಗಳೂರು ಹೆದ್ದಾರಿಯ ಟಿ.ಬಿ.ವೃತ್ತದಲ್ಲಿ 7 ಮಂದಿ ಪೆನ್‌ ಮಾಡಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದರು. ದಾಳಿ ವೇಳೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಮೂವರು ಪರಾರಿಯಾದರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚೇತನ್‌ಕುಮಾರ್‌ ತಿಳಿಸಿದ್ದಾರೆ.

ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ವಶಕ್ಕೆ ಪಡೆದಿರುವ ದೇವಿ ಈಗಾಗಲೇ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮೂಲತಃ ಮೈಸೂರಿನವರಾದ ಇವರು ಹೊಸ ಬೂದನೂರು ಬಳಿ ವಾಸ್ತವ್ಯ ಹೂಡಿದ್ದರು. ಪೆನ್‌ ಮಾರಿಕೊಂಡು ಭಿಕ್ಷಾಟನೆ ಮಾಡುತ್ತಿದ್ದುದಾಗಿ ತಿಳಿಸಿದ್ದಾರೆ. ವಶಕ್ಕೆ ಪಡೆದಿರುವ ಬಾಲಕಿಯರನ್ನು ಮಂಡ್ಯದ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ತಿಳಿ​ಸಿ​ದ್ದಾರೆ.

'ಡಿಕೆಶಿ ಪ್ರಕರಣದ ಲಾಭ ಪಡೆಯುತ್ತಿದೆ ಜೆಡಿಎಸ್'..!

ಬಾಲಮಂದಿರದಲ್ಲಿ ದಾಖಲಾತಿ ಮಾಡುವುದರ ಜತೆಗೆ ತಾತ್ಕಾಲಿಕವಾಗಿ ಆಶ್ರಯ ನೀಡಲಾಗಿದೆ. ಪೋಷಕರೊಂದಿಗೆ ಮಾತುಕತೆ ನಡೆಸಿ, ಶಿಕ್ಷಣ ಇನ್ನಿತರರ ಸೌಲಭ್ಯಗಳ ಬಗ್ಗೆ ಚರ್ಚಿಸಿ ಅಗತ್ಯ ಕ್ರಮವಹಿಸುವುದಾಗಿ ಸಿಡಿಪಿಒ ಚೇತನ್‌ಕುಮಾರ್‌ ತಿಳಿಸಿದರು. ಈ ಸಂದರ್ಭದಲ್ಲಿ ಮಂಡ್ಯದ ವಿಕಸನ ಸಂಸ್ಥೆಯ ಮಕ್ಕಳ ಸಹಾಯವಾಣಿ ಸಂಯೋಜಕಿ ಮಾನಸ, ಸಹನಾ, ಬರ್ಡ್ಸ್ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.