ಧಾರವಾಡ (ಜ.18): ಸಾಹಿತ್ಯದ ತವರೂರು, ಪೇಡಾ ನಗರಿ 7ನೇ ಸಾಹಿತ್ಯ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಪ್ರತಿ ಸಂಕ್ರಮಣದ ಸಂದರ್ಭದಲ್ಲಿಯೇ ನಡೆಯುವ ಧಾರವಾಡ ಸಾಹಿತ್ಯ ಸಂಭ್ರಮ ಈ ಬಾರಿಯೂ ಇದೇ ಹೊತ್ತಿಗೆ ನಡೆಯುತ್ತಿದೆ. ಮೂರು ದಿನಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ನಡೆಯುತ್ತಿರುವ ಈ ಸಮಾರಂಭವನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು. 

ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ದಲಿತ ಸಂಕಥನ ಗೋಷ್ಠಿಯಲ್ಲಿ ಮಹಾರಾಷ್ಟ್ರದ ಖ್ಯಾತ ಲೇಖಕರಾದ ಲಕ್ಷ್ಮಣ ಗಾಯಕವಾಡ್ ಅವರು ಮಾತನಾಡಿ, ಕೆಲವು ವಿಚಾರಧಾರೆಗಳನ್ನು ಅಭಿವ್ಯಕ್ತಗೊಳಿಸಿದ್ದಾರೆ. ಸಾಹಿತ್ಯ ಸಂಭ್ರಮದ ಪ್ರತಿಧ್ವನಿಯಂತೆ ಅವರು ಹೇಳಿದ್ದೇನು?

- ಗೋಮೂತ್ರ ಪವಿತ್ರ ಎಂದು ಸೇವಿಸುವವರು ವಿಷ್ಣುವಿನ ಅವತಾರವಾದ ಹಂದಿ ಮೂತ್ರವನ್ನೇಕೆ ಸೇವಿಸುವುದಿಲ್ಲ. ಸೇವಿಸಬಹುದಲ್ಲವೇ?

-ಗೋಮಾತೆಯನ್ನು ತಾಯಿ ಅನ್ನುತ್ತಾರೆ. ಆದರೆ ತಮ್ಮ ತಾಯಿಯನ್ನು ಮನೆಯಿಂದ ಹೊರಗೆ ಹಾಕುತ್ತಾರೆ.

- ರಾಮ ಪ್ರಶ್ನಾತೀತನಲ್ಲ. ಸೀತೆಯನ್ನು ಕಾಡಿಗೆ ಅಟ್ಟಿದಾಗ ಲಕ್ಷ್ಮಣನೂ ಪ್ರಶ್ನಿಸಿದ್ದ. ತಪಸ್ಸು ಮಾಡುತ್ತಿದ್ದ ಶೂದ್ರನನ್ನು ಕೊಂದ ರಾಮ. ಆ ಬಗ್ಗೆಯೂ ಚರ್ಚೆ ಮಾಡುವಂತಿಲ್ಲ!! ಅಂಥಾ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಮನ ಬಗ್ಗೆ ಯಾಕೆ ಪ್ರಶ್ನೆ ಮಾಡಬಾರದು?

- ಕಲ್ಬುರ್ಗಿ, ಪನ್ಸಾರೆಯನ್ನು ಕೊಲೆ ಮಾಡಲಾಯಿತು. ಅವರೇನು ಅಂಬಾನಿ ಥರ, ವಿಜಯ ಮಲ್ಯ ಥರ ಲೂಟಿಕೋರರಲ್ಲ. ಆದರೆ ಅವರ ಸಾಹಿತ್ಯ ಇವರಿಗೆ ಭಯ ಮೂಡಿಸಿತ್ತು. ಇಂಥದೆಲ್ಲಾ ಆಗುವುದು ಸರಿಯಲ್ಲ
 

ಸಂಭ್ರಮ ಏನು, ಹೇಗೆ?

ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು 425 ಸಾಹಿತಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದು, ಸುಮಾರು 250 ಸಾಹಿತಿ ಹಾಗೂ ಕಲಾವಿದರು ತಮ್ಮ ವಿಷಯಗಳ ಕುರಿತು ಚರ್ಚೆ, ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಸಂಭ್ರಮದಲ್ಲಿ ಮೂರು ದಿನ ಮಧ್ಯಾಹ್ನ ಉತ್ತರ ಕರ್ನಾಟಕ ವಿಶೇಷ ಊಟದ ವ್ಯವಸ್ಥೆಯೂ ಆಗಿದೆ. ಸಭಾ ಭವನ ಹೊರತು ಪಡಿಸಿ ಹೊರಗಡೆ ಪರದೆ ಹಾಕಲಾಗಿದ್ದು, ಸಾವಿರಾರು ಮಂದಿ ಈ ಸಂಭ್ರಮವನ್ನು ಅಲ್ಲಿಯೂ ಕಣ್ತುಂಬಿಕೊಳ್ಳಬಹುದು.

ಸಾಹಿತ್ಯ ಸಂಭ್ರಮ ಟ್ರಸ್ಟ್ ಅಧ್ಯಕ್ಷರಾಗಿದ್ದ ಡಾ.ಗಿರಡ್ಡಿ ಗೋವಿಂದರಾಜ್ ಅವರ ನಿಧನದ ಹಿನ್ನೆಲೆಯಲ್ಲಿ ಸಂಭ್ರಮವನ್ನು ಅವರಿಗೆ ಸಮರ್ಪಿಸಲಾಗಿದೆ. ಹಿಂದಿನ ಆರೂ ಆವೃತ್ತಿಗಳ ವಿಷಯಗಳಿಗಿಂತಲೂ ವಿಭಿನ್ನವಾಗಿ ಈ ಬಾರಿ ಸಂಭ್ರಮದಲ್ಲಿ ವಿಷಯಗಳನ್ನು ಆರಿಸಲಾಗಿದೆ. ಮಹಾತ್ಮ ಗಾಂಧಿ ಅವರ 150ನೇ ವರ್ಷವಿದು. ಈ ಕಾರಣಕ್ಕಾಗಿ ಗಾಂಧಿಯವರ ಚಿಂತನೆಗಳಲ್ಲಿನ ಅನೇಕ ಅಂಶಗಳು ಸಮಕಾಲೀನ ಗೊಂದಲಗಳಿಗೆ ಪರಿಹಾರವಾಗಬಲ್ಲದು ಎಂಬ ಕಾರಣಕ್ಕೆ ಗಾಂಧಿ-150-ಹಿಂದ್ ಸ್ವರಾಜ್‌ದ ಆಯ್ದ ಭಾಗಗಳ ನಿವೇದನೆ ಹಾಗೂ ರಾಜಕಾರಣದಲ್ಲಿ ಗಾಂಧೀಜಿಯವರ ತಾತ್ವಿಕತೆಯನ್ನು ಜೀವಂತಗೊಳಿಸು ಸಾಧ್ಯವೇ ಎಂಬೆರಡು ಗೋಷ್ಠಿಯನ್ನು ಆಯೋಜಿಸಿರುವುದು ಸಂಭ್ರಮದ ವಿಶೇಷ.