Asianet Suvarna News Asianet Suvarna News

ಥ್ಯಾಂಕ್ಯೂ ಕೋರೋನ : ಸುವರ್ಣ ಸಂಪಾದಕ ಶ್ಯಾಮಸುಂದರ್ ಟಿಪ್ಪಣಿಗಳು

ಕೊರೋನಾ ವೈರಸ್ ಅನೇಕರಿಗೆ ಅನೇಕ ಮರೆಯಲಾಗದ ಪಾಠಗಳನ್ನು ಕಲಿಸಿದೆ. ಸುವರ್ಣ ನ್ಯೂಸ್ ಡಾಟ್ ಕಾಂ ಸಂಪಾದಕ ಎಸ್ ಕೆ ಶಾಮಸುಂದರ ಅವರು ಕಲಿತುಕೊಂಡ ಕೆಲವು ಪಾಠಗಳು ನಿಮಗಾಗಿ, ನಿಮ್ಮ ಮಕ್ಕಳು, ಮೊಮ್ಮಕ್ಕಳಿಗಾಗಿ..

Thanks Covid19 SK Shamasundara Kannada news room class teacher
Author
Bangalore, First Published May 17, 2020, 1:02 PM IST

- ಎಸ್‌ ಕೆ ಶಾಮಸುಂದರ

ಒಂಭತ್ತು - ಹತ್ತನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ಪಠ್ಯಕ್ರಮದಲ್ಲಿ ಚರಿತ್ರೆ - ಭೂಗೋಳ ಅಂತ ಇತ್ತು. ಸಿವಿಕ್ಸೂ ಇತ್ತು. ಎಸ್ಸೆಸ್ಸೆಲ್ಸಿ ಪಾಸಾದದ್ದೇ ತಪ್ಪಾಗಿ, ಈ ಎರಡೂ ಸಬ್‌ ಸಬ್ಜೆಕ್ಟುನನ್ನ ಕಲಿಕಾಪರ್ವದ ಇತಿಹಾಸಕ್ಕೆ ಜಾರಿತು. ಪತ್ರಕರ್ತ ವೃತ್ತಿಗೆ ಬಂದಾದನಂತರ ಚಿತ್ರ ಬದಲಾಯಿತು. ನಾನು ಹೋದ ಊರೇ ಭೂಗೋಳ, ವಾಪಸು ಬಂದು ಬರೆದ ಲೇಖನವೇ ಚರಿತ್ರೆ ಎಂದಾಗಿತ್ತು. ಈ ಐವತ್ತೆರಡು ದಿನಗಳಲ್ಲಿ ಕೊರೋನಾ ನನಗೆ ಮತ್ತೆ ಚರಿತ್ರೆ - ಭೂಗೋಳದ ಕ್ಲಾಸ್‌ ಟೀಚರ್‌ ಆದರು. ಮೇಡ್‌ ಇನ್‌ ಚೈನಾ ಪದಾರ್ಥ ಬಳಸಿದ್ದು ಬಿಟ್ಟರೆ ಚೀನಾ ಬಗ್ಗೆ ಏನೇನೂ ಗೊತ್ತಿಲ್ಲದಿದ್ದರೂ, ಆ ದೇಶದಲ್ಲಿ ವುಹಾನ್‌ ಎಂಬ ನಗರವಿದೆಯೆಂದೂ, ಒಂದು ಕೋಟಿ ಹನ್ನೊಂದು ಲಕ್ಷ ಜನ ವಾಸಿಸುವ ನಗರವೆಂದೂ ಗೊತ್ತಾಯಿತು. ವುಹಾನ್‌ ನಮ್ಮ ಬೆಂಗಳೂರಿನ ಥರವೇ. ನಗರದ ತುಂಬ ಹರಡಿರುವ ಕೆರೆ, ಪಾರ್ಕು, ಸುಂದರ ನೋಟಗಳು ಮೇಳವಿಸಿದ ವುಹಾನ್‌ ಚೀನಾದ ಉದ್ಯಾನನಗರ. ಈ ಊರಿಗೆ ಹತ್ತಾರು ಬಾರಿ ಟಿಕೆಟ್‌ ರಹಿತ ಪ್ರವಾಸ ಮಾಡಿಸಿದ ಕೊರೋನಾಗೆ ಥ್ಯಾಂಕ್ಸ್‌ .

***

ಹತ್ತನೇ ಕ್ಲಾಸಿನವರೆಗೆ ಗಣಿತ ಪಾಠಗಳೂ ಇದ್ದವು. ಅಂಕಗಣಿತ, ಬೀಜಗಣಿತ ಜತೆಗೆ ಜಾಮಿತಿ. ಎಸ್ಸೆಸ್ಸೆಲ್ಸಿ ಪಾಸಾದದ್ದೇ ತಪ್ಪಾಯಿತು ನೋಡಿ, ಅಂಕಿ ಜ್ಞಾನಕ್ಕೆ ಮರೆವು ಆವರಿಸಿತು. ಪತ್ರಕರ್ತ ನೌಕರಿಗೆ ಬಂದಾದ ನಂತರ, ಮತ್ತೆಲ್ಲ ನೆನಪಾಯಿತು. ಗ್ರಾಮೀಣ ಹೆದ್ದಾರಿಯಲ್ಲಿ ಅಪಘಾತ. ಎರಡು ಸಾವು ಆರು ಜನಕ್ಕೆ ಗಂಭೀರ ಗಾಯ ಸುದ್ದಿ ಬರೆಯುವದಕ್ಕೆ ಅಂಕಿ ಶಾಸ್ತ್ರ ಸಹಕಾರಿಯಾದವು. ಅಲ್ಲಿಯವರಗೆ, ಅಂಕಿಗಳ ಜ್ಞಾನ ಇಲ್ಲದ ಬರೀ ವೆಂಕಿ ಆಗಿದ್ದೆ. ಈಗ ಕೇಳಿ. ವಿಶ್ವದಲ್ಲಿ ಎಷ್ಟುದೇಶಗಳಿವೆ, ದೇಶದಲ್ಲಿ ಸೋಂಕಿತರ ಲೆಕ್ಕ, ಶಂಕಿತರ ಲೆಕ್ಕ, ಅಸುನೀಗಿದವರ ಲೆಕ್ಕ. ನನಗೆ ಗೊತ್ತಿದೆ. ಈ 52 ದಿನಗಳಲ್ಲಿ ನಾನು ಬರೆದ ಸುದ್ದಿ - ಲೇಖನಗಳಲ್ಲಿ ಅಕ್ಷರಗಳ ಪಾಲು 40, ಅಂಕಿಗಳ ಪಾಲು 60. ಥ್ಯಾಂಕ್ಯೂ ಕೊರೋನಾ.

ಬೆಳಕಿಲ್ಲದ ದಾರಿಯಲ್ಲಿ ಬೆಳಕು ಹೆಕ್ಕಿದ ಅರುಂಧತಿ ನಾಗ್‌!

***

ದೇಶ ಸುತ್ತು, ಕೋಶ ಓದು. ಯಾಕೆ? ಈ ಎರಡನ್ನೂ ನಾನು ಸರಿಯಾಗಿ ಮಾಡಲೇಯಿಲ್ಲ. ಮಾಡಲಾರೆ ಕೂಡ. ಇವತ್ತು ಕುಳಿತರೆ ಚರಿತ್ರೆ, ನಡೆದಾಡಿದರೆ ವೈರಸ್ಸು, ಹೆಚ್ಚು ಬರೆದರೆ ವೈಮನಸ್ಸು, ಸುತ್ತಿದರೆ ಭೂಗೋಳ. ದಿನಕ್ಕೆ ಮೂರು ಬಾರಿ ವಿಶ್ವ ಭೂಪಟ, ಭಾರತ ಭೂಪಟ, ಕರ್ನಾಟಕ ಭೂಪಟ, ಬೆಂಗಳೂರು ಭೂಪಟಗಳನ್ನು ತೋರಿಸಿದ್ದು ಇದೇ ಕೊರೋನಾ. ಯಾವುದಾವುದೋ ದೇಶಗಳ ಸುತ್ತಿ ಬಂದೆ. ಆದರೆ, ನನ್ನೀ ಊರಿನ ಪಾದರಾಯನಪುರ, ಹೊಂಗಸಂದ್ರ, ಮಂಗಮ್ಮನಪಾಳ್ಯದ ಭೂಪಟಗಳನ್ನು ಇದೇ ಮೊದಲ ಬಾರಿಗೆ ತೋರಿಸಿದ್ದು ಇದೇ ಕೊರೋನಾ. ಥ್ಯಾಂಕ್ಯೂ ಕೊರೋನಾ.

***

ಚರಿತ್ರೆ- ಭೂಗೋಳದ ಜತೆಗೆ ಎಸ್ಸೆಸ್ಸೆಲ್ಸಿಯಲ್ಲಿ ವಿಜ್ಞಾನದ ಪಾಠಗಳೂ ಇದ್ದವು. ಕರ್ಮ ಕರ್ಮ. ಬಾಳೆಹಣ್ಣು, ಜೇನು, ಒಣಕೊಬ್ಬರಿ ಹದವಾಗಿ ಬೆರೆತರೆ ಅದು ರಸಾಯನ ಶಾಸ್ತ್ರ. ಬಚ್ಚಲು ಮನೆಯಲ್ಲಿ ಮೋರಿ ಕಟ್ಟಿಕೊಂಡು ನೀರು ಸರಿಯಾಗಿ ಹೋಗದಿದ್ದರೆ ಅದು ಫಿಜಿಕ್ಸು. ರಿಪೇರಿ ಮಾಡಿಸುವುದಕ್ಕೆ ಇವತ್ತಿನ ಮಾರ್ಕೆಟ್‌ ಕಂಡೀಶನ್ನಿನಲ್ಲಿ ಎಷ್ಟುವೆಚ್ಚ ತಗುಲುತ್ತದೆ ಎಂದು ಗೊತ್ತಿದ್ದರೆ ಅದು ಮ್ಯಾಥಮೆಟಿಕ್ಸ್‌. ಈ ಪತ್ರಕರ್ತ ನೌಕರಿಗೆ ಬಂದು ವಕ್ಕರಿಸಿಕೊಂಡನಂತರ ಈಗೀಗ ವಿಜ್ಞಾನದಲ್ಲಿ ಆಸಕ್ತಿಯೇನೋ ಮೂಡುತ್ತಿದೆ. ಆನ್‌ ಲೈನಿನಲ್ಲಿ ಕೋರ್ಸುಗಳಿವೆ. ಮೈಕ್ರೋ ಬಯಾಲಜಿ ಸೆಲೆಕ್ಟ್ ಮಾಡ್ಕೊ ಅಂತಾ ಇದೆ ಕೊರೋನಾ. ಕೋರ್ಸ್‌ ಸರ್ಟಿಫಿಕೋಟ್‌ ತಂದು ನಿನ್ನ ಮುಖಕ್ಕೆ ಹಿಡಿದರೆ ಜಾಬ್‌ ಕೊಡ್ತೀಯಾ ಅಂತ ಕೇಳಿದರೆ, ನಾನು ಹೇಳಿದಷ್ಟುಮಾಡು, ಮನೆಯಲ್ಲಿ ಸುಮ್ಮನೆ ಬಿದ್ದುಕೊಂಡಿರು. ಜಾಸ್ತಿ ತಲೆಹರಟೆ ಬೇಡಾ ಅಂತ ಗದರಿಸುತ್ತಾಳೆ, ಕೊರೋನಾ.

ಹೇಗಿದ್ದೀರಿ? ರಾತ್ರಿ ನಿದ್ದೆ ಚೆನ್ನಾಗಿ ಆಯ್ತೇ! ಇಲ್ಲವಾದರೆ ನಿದ್ದೆಗೇನು ಮಾಡಬೇಕು?

***

ಈ ವರಾತ ಬರೆಯುತ್ತಿರುವ ಹೊತ್ತಿಗೆ, ನೀವಿದನ್ನು ಓದುತ್ತಿರುವ ಟೈಮಿಗೆ ಅಂದಾಜು ಲೆಕ್ಕ - ಸೋಂಕಿತರು 3,950,185, ಸಾವು 3,950,185, ಗುಣಮುಖ 1,359,291. ಜಗತ್ತಿಗೆ ಏನೇ ಆಗಲಿ. ನನಗೇನೂ ಆಗುವುದಿಲ್ಲ ಎನ್ನುವುದು ಮನೋಭಾವ. ಅದು ಆತ್ಮ ವಿಶ್ವಾಸವೂ ಹೌದು. ನಿಮ್ಮ ವಿಶ್ವಾಸ ಹೀಗೇ ಇರಲಿ .

***

ಪತ್ರಕರ್ತನಾಗಿ ಸುದ್ದಿ ಬರೆಯುವಾಗ ಉದಾಹರಣೆಗಳು ಸಿಕ್ಕಾಪಟ್ಟೆಸಿಗುತ್ತವೆ. ಉದಾಹರಣೆಗಳು ಉದಾಹರಣೆಗಳಷ್ಟೇ. ಯಾವೊಬ್ಬ ಸೋಂಕಿತನೂ ತನಗೆ ವೈರಸ್‌ ಅಮರಿಕೊಳ್ಳತ್ತೆ ಎಂದು ನಿರೀಕ್ಷಿಸಲಿರಲಿಲ್ಲ. ಹಾಗೊಬ್ಬನಿದ್ದರೆ, ಹಾಗೊಬ್ಬಳಿದ್ದರೆ ನನಗೆ ಗೊತ್ತಿಲ್ಲ. ಓದಿಲ್ಲ. ಯಾರಿಗೆ ಬೇಡದಿದ್ದರೂ ಕೊರೋನಾ ಯಾರನ್ನು, ಯಾವಾಗ ಬೇಕಾದರೂ ಅಪ್ಪಿಕೊಳ್ಳಬಹುದು. ಶ್ವಾಸಕೋಸ ಇಲ್ಲದ ಇರುವೆಯನ್ನು ಬಿಟ್ಟು.

***

ಆಯ್ತು ಸ್ವಾಮಿ. ಮುಂದೇನು. ಬಾಳಿಗೊಂದು ನಂಬಿಕೆ ಬೇಡವೇ ಎಂದು ಕೇಳದಿರಿ. We will never go back to normal. The new is normal..

Follow Us:
Download App:
  • android
  • ios