ಬಿಸಿಲು, ಸ್ಕಾಚ್, ಸಪ್ಪೆ ಊಟ.. ಜೈಪುರ ಸಾಹಿತ್ಯೋತ್ಸವದ ಮೊದಲ ದಿನದ ಸ್ವಾರಸ್ಯ

ಚಳಿ ಬಿಸಿಲಿನ ಗೊಂದಲ, ಸಪ್ಪೆ ಊಟವನ್ನು ಕಾಂಪೆನ್ಸೇಟ್ ಮಾಡಿದ ಸ್ಕಾಚ್, ಭಾವುಕ ಮಾತುಗಳು.. ಮೊದಲ ದಿನದ ಜೈಪುರ ಸಾಹಿತ್ಯ ಉತ್ಸವದ ಸ್ವಾರಸ್ಯಗಳಿವು..

Sneak peak into 1st day of Jaipur Literature Festival

ವರದಿ: ಜೋಗಿ

ಮನೆ ಬದಲಾಗಿತ್ತು

Sneak peak into 1st day of Jaipur Literature Festival
ಜೈಪುರ(Jaipur) ಸಾಹಿತ್ಯೋತ್ಸವ ಮನೆ ಬದಲಾಯಿಸಿದೆ. ಹಲವಾರು ವರುಷಗಳಿಂದ ಜೈಪುರದ ಡಿಗ್ಗಿ ಪ್ಯಾಲೇಸಿನಲ್ಲಿ ನಡೆಯುತ್ತಿದ್ದ ಜಾತ್ರೆ ಈಗ ಊರಾಚೆಯ ಕ್ಲಾರ್ಕ್ಸ್ ಅಮೀರ್ ಹೊಟೇಲಿಗೆ ಸ್ಥಳಾಂತರಗೊಂಡಿದೆ. ಡಿಗ್ಗಿ ಪ್ಯಾಲೇಸಿ(Diggi palace)ನ ಜತೆಗೆ ಆಪ್ತ ಸಂಬಂಧ ಹೊಂದಿದ್ದವರಿಗೆ ಇದು ತಡೆದುಕೊಳ್ಳಲಾರದ ಆಘಾತ. ಹುಟ್ಟಿದೂರು ಬದಲಾದಾಗ ಆಗುವಂಥ ವಿಷಾದವನ್ನು ಅನೇಕರು ಅನುಭವಿಸಿ ಅದನ್ನು ಮುಕ್ತವಾಗಿ ತೋಡಿಕೊಂಡರು. ಮುಂದಿನ ಸಲ ಮತ್ತೆ ಡಿಗ್ಗಿ ಪ್ಯಾಲೇಸಿಗೆ ಮರಳುವಂತೆ ಮವವಿ ಮಾಡಿಕೊಂಡರು. ಆದರೆ ಕ್ರಮೇಣ ಕ್ಲಾರ್ಕ್ಸ್ ಅಮೀರ್(Clarks Amer) ಕೂಡ ಸಾಹಿತ್ಯಪ್ರಿಯರಿಗೆ ಇಷ್ಟವಾಗಬಹುದು, ಯಾರಿಗೆ ಗೊತ್ತು?

ಬಿಸಿಲೂರಿನ ಮಹಿಮೆ
ಬೆಳಗ್ಗೆ ಜೈಪುರದ ಹವಾಮಾನ ನೋಡಿ, ಇದು ಎಷ್ಟು ತಣ್ಣಗಿದೆ ಎಂದು ಖುಷಿ ಪಟ್ಟವರನ್ನು ಮಧ್ಯಾಹ್ನದ ಹೊತ್ತಿಗೆ ಸೂರ್ಯ ಕಂಗೆಡಿಸಿಬಿಟ್ಟದ್ದು ಕಾಣಿಸುತ್ತಿತ್ತು. ಬೆಚ್ಚಗಿರಲೆಂದು ಓವರ್ ಕೋಟು, ಸ್ವೆಟರು, ಹಾಫ್ ಕೋಟು ಹಾಕಿಕೊಂಡು ಬಂದ ಮಂದಿ ಅದನ್ನೆಲ್ಲ ಮಡಿಚಿ ಕಂಕುಳಲ್ಲಿಟ್ಟುಕೊಂಡು ನಿಟ್ಟುಸಿರು ಬಿಡುತ್ತಾ ಆಕಾಶ ನೋಡುತ್ತಿದ್ದರು. ಸಾಮಾನ್ಯವಾಗಿ ಪ್ರಧಾನ ವೇದಿಕೆ ತುಂಬಿ ತುಳುಕುತ್ತಿತ್ತು. ಆದರೆ ಸೆಕೆಯಿಂದಾಗಿ ಮಂದಿ, ಏರ್ ಕಂಡೀಶನ್ಡ್ ಕೋಣೆಗಳ ಮೊರೆ ಹೋಗಿದ್ದರು. ಹೀಗಾಗಿ ಪ್ರಮುಖ ಗೋಷ್ಠಿಗಿಂತ ಅಷ್ಟೇನೂ ಸ್ವಾರಸ್ಯವಿಲ್ಲದ ಸಂವಾದವೇ ತುಂಬಿ ತುಳುಕುತ್ತಿತ್ತು.

ಜೈಪುರ ಸಾಹಿತ್ಯ ಉತ್ಸವದ ಆನ್‌ಗ್ರೌಂಡ್ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಸ್ಕಾಚ್ ಸಾಹಿತ್ಯ ಜಾತ್ರೆ
ಈ ಸಲದ ಜೈಪುರ ಸಾಹಿತ್ಯ ಜಾತ್ರೆಯಲ್ಲಿ ವಿಶೇಷ ಆಹ್ವಾನಿತರಿಗೆ ಅಚ್ಚರಿ ಕಾದಿತ್ತು. ಮಧ್ಯಾಹ್ನದ ಊಟದ ಜತೆಗೆ ಒಂದು ಬಿಯರ್(beer) ಕೊಡುವ ಸಂಪ್ರದಾಯ ಪ್ರತಿ ವರುಷವೂ ಇತ್ತು. ಈ ಸಲ ಬಿಯರಿನ ಜತೆಗೆ ಬ್ಲಾಕ್ ಲೇಬಲ್ ಸ್ಕಾಚ್(scotch) ವಿಸ್ಕಿಯ ಭಾಗ್ಯವೂ ಇತ್ತು. ಆದರೆ ಅದರ ಪ್ರಮಾಣ ಎಷ್ಟು ಕಡಿಮೆ ಇತ್ತು ಎಂದರೆ ಭೀಮನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಆಗಿಬಿಟ್ಟಿತ್ತು. ಹೀಗಾಗಿ ವಿಸ್ಕಿ ಭಾಗ್ಯ ಸಿಕ್ಕರೂ ಕೈಗೆ ಬಂದದ್ದು ಬಾಯಿಗೆ ಬರಲಿಲ್ಲ ಎಂಬಂತಾಗಿ ಮಂದಿ ರೊಚ್ಚಿಗೆದ್ದು ನಾಲ್ಕಾರು ಲೋಟ ಲಸ್ಸಿ ಕುಡಿದು ಸೇಡು ತೀರಿಸಿಕೊಂಡರು.

ಹೋಟೆಲುಗಳು ಅಗ್ಗ, ಬಿಸಿಲು ದುಬಾರಿ
ಈ ಬಾರಿ ಹೋಟೆಲುಗಳು ಒಂದೂವರೆ ಸಾವಿರಕ್ಕೆಲ್ಲ ಬಾಡಿಗೆಗೆ ಸಿಗುತ್ತಿದ್ದವು. ಕೊರೋನಾದಿಂದ ರಾಜಸ್ಥಾನದ ಪ್ರವಾಸೋದ್ಯಮ(Rajastan tourism) ಎಷ್ಟು ನಲುಗಿದೆ ಎಂಬುದಕ್ಕೆ ಹೋಟೆಲ್ ಬಾಡಿಗೆ, ಆಟೋಗಳ ದರ ಕುಸಿದದ್ದೂ ಸಾಕ್ಷಿಯಾಗಿತ್ತು. ಏನಾದರೂ ಸರಿಯೇ, ಮತ್ತೆ ಪ್ರವಾಸಿಗಳು ಬರಲು ಶುರುವಾಗಲಿ ಎಂದು ಇಡೀ ರಾಜಸ್ಥಾನವೇ ಕಾಯುತ್ತಿರುವಂತಿತ್ತು. ಅದಕ್ಕಾಗಿ ಸರ್ಕಾರವೂ ಪಣ ತೊಟ್ಟಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಪ್ರವಾಸೋದ್ಯಮದ ಹುರುಪು ಹೆಚ್ಚಿಸಲು ಯತ್ನಿಸುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ವಿಶ್ವೇಂದ್ರ ಸಿಂಗ್ ಬಹಿರಂಗವಾಗಿಯೇ ಹೇಳಿಕೊಂಡರು.

Jaipur Literature Festival 2022: ಅನುಭವಿ ಕಂಡಂತೆ ಸಾಹಿತ್ಯ ಜಾತ್ರೆ

ಮೂರನೆ ಮಹಾಯುದ್ದ(3rd world war) ಎನ್ನದಿರಿ
ಯುದ್ಧ ಮತ್ತು ಶಾಂತಿಯ ವಿಪರ್ಯಾಸ ಎಂಬ ಗೋಷ್ಠಿಯ ಆರಂಭದಲ್ಲಿ ನಿರೂಪಕಿ ಮೂರನೇ ಮಹಾಯುದ್ಧ ಸನ್ನಿಹಿತವಾಗಿದೆ ಎಂಬ ಆರಂಭಿಕ ನುಡಿಗಳನ್ನು ಆಡಿದರು. ಅದಕ್ಕೆ ಉತ್ತರವಾಗಿ ಭಾರತದ ಜರ್ಮನ್ ರಾಯಭಾರಿ ವಾಲ್ಟರ್ ಲಿಂಡ್‌ನರ್ ದಯವಿಟ್ಟು ಮೂರನೇ ಮಹಾಯುದ್ಧ ಎಂಬ ಪದವನ್ನು ಬಳಸಬೇಡಿ. ಅದರ ಪರಿಣಾಮ ಏನು ಎಂಬುದು ಅದನ್ನು ಬಳಸುವ ಯಾರಿಗೂ ಗೊತ್ತಿಲ್ಲ. ಎರಡನೇ ಮಹಾಯುದ್ಧದಲ್ಲಿ ಎಷ್ಟು ಮಂದಿ ರಷ್ಯನ್ನರು ಯಹೂದಿಗಳು ಸತ್ತಿದ್ದಾರೆ ಎಂದು ಯಾರಿಗಾದರೂ ಗೊತ್ತಿದ್ದರೆ, ಅಂಥವರು ಮಹಾಯುದ್ಧ ಎಂಬ ಪದ ಉಚ್ಚರಿಸಲು ಹಿಂಜರಿಯುತ್ತಾರೆ ಎಂದು ಆತಂಕದಿಂದ ಮಾತಾಡಿದ್ದು ಎಲ್ಲರನ್ನೂ ಕಲಕಿತು.

ಸಪ್ಪೆ ಊಟ ಚಪ್ಪೆ ಸಾರು
ಜೈಪುರ್ ಲಿಟ್ ಫೆಸ್ಟ್(JLF) ಭೂರಿ ಭೋಜನಕ್ಕೆ ಹೆಸರುವಾಸಿ. ಸುದೀರ್ಘ ಮೆನು, ಘಮಘಮಿಸುವ ಜೈಪುರದ ಅಡುಗೆಗಳ ಗಮ್ಮತ್ತು ಈ ಸಲ ಇರಲಿಲ್ಲ. ಈ ಬಾರಿ ಬಾಯಿರುಚಿ ತಣಿಸಿದ್ದು ಜೀರಿಗೆ ಅನ್ನ ಮತ್ತು ತೊವ್ವೆ. ಕನ್ನಡ ಸಾಹಿತ್ಯ ಸಮ್ಮೇಳನದ ಅದ್ದೂರಿಯ ಮುಂದೆ ಜೈಪುರ ಸಾಹಿತ್ಯ ಉತ್ಸವ ಸೊರಗಿತೇನೋ ಅನ್ನಿಸಿದ್ದು ಮೊದಲ ದಿನದ ಅನುಭವ. ವಾರದ ನಡುವಿನ ದಿನವೇ ಸಾಹಿತ್ಯೋತ್ಸವ ಆರಂಭವಾಗಿದ್ದರಿಂದ, ವಾರಾಂತ್ಯದ ಹೊತ್ತಿಗೆ ಜನ ಜಂಗುಳಿ ನೆರೆಯುತ್ತದೆ ಎಂಬುದು ಆಯೋಜಕರ ನಂಬುಗೆ.

Latest Videos
Follow Us:
Download App:
  • android
  • ios