S. R. Ekkundi ಜನ್ಮ ಶತಮಾನೋತ್ಸವ; ಮರೆಯಲಾರದ ಮರೆಯಬಾರದ ಸು ರಂ ಎಕ್ಕುಂಡಿ

ಸು. ರಂ. ಎಕ್ಕುಂಡಿ ಹುಟ್ಟಿದ್ದು ಜನವರಿ 20, 1923. ಇದು ಅವರ ಜನ್ಮ ಶತಮಾನೋತ್ಸವದ ವರ್ಷ. ಅವರ ಕುರಿತು ಅವರ ಮಗನೇ ಬರೆದ ಒಂದು ಆಪ್ತಚಿತ್ರ.

S. R. Ekkundi birth centenary year portrait of him written by his son Ranganatha Ekkundi vcs

ರಂಗನಾಥ ಎಕ್ಕುಂಡಿ

ನಮ್ಮ ತಂದೆಯವರಿಗೆ ನಾವು ಮೂರು ಜನ ಮಕ್ಕಳು. ನನ್ನ ಅಕ್ಕ ಭಾರತಿ, ನಾನು ಮತ್ತು ತಮ್ಮ ವಾದಿರಾಜ. ಶಿಕ್ಷಣದ ಮಹತ್ವವನ್ನು ಅರಿತಿದ್ದ, ಸ್ವತಃ ಶಿಕ್ಷಕರಾಗಿದ್ದ ಅವರು ನಮಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸಿದರು. ನಾವಿದ್ದ ಹಳ್ಳಿ ಬಂಕಿಕೊಡ್ಲದಲ್ಲಿ 10ನೇ ತರಗತಿಯವರೆಗೂ ಓದಲು ಉತ್ತಮ ಶಾಲಾ ವ್ಯವಸ್ಥೆ ಇತ್ತು. ಪಟ್ಟಣಗಳಲ್ಲಿನ ಅಕ್ಕಪಕ್ಕದ ಆಕರ್ಷಣೆ ಅಲ್ಲಿರಲಿಲ್ಲ. ಹೀಗಾಗಿ ಹುಬ್ಬಳ್ಳಿ ಮತ್ತು ಸುತ್ತಲಿನ ಊರುಗಳಲ್ಲಿದ್ದ ನಮ್ಮ ಸಂಬಂಧಿಕರು, ತಮ್ಮ ಮಕ್ಕಳನ್ನು ಹೈಸ್ಕೂಲ್‌ ಶಿಕ್ಷಣ ಪಡೆದುಕೊಳ್ಳಲು ನಮ್ಮ ಮನಗೆ ಕಳಿಸಿದ್ದರು. ನಮ್ಮ ತಂದೆಯವರ ಶಿಸ್ತಿನ ಉಸ್ತುವಾರಿಯಲ್ಲಿ ಅವರೆಲ್ಲರೂ ಕಲಿತು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡರು. ನಮ್ಮ ಊರಿನಲ್ಲಷ್ಟೇ ಅಲ್ಲ, ನಮ್ಮೆಲ್ಲ ಸಂಬಂಧಿಕರ ಮನೆಯಲ್ಲೂ ನಮ್ಮ ತಂದೆಯವರು ‘ಎಕ್ಕುಂಡಿ ಮಾಸ್ತರ’ ಎಂದೇ ಪರಿಚಿತರಾಗಿದ್ದಾರೆ. ಅವರು ಶಾಲೆಯಲ್ಲಿ ನನಗೆ ಕನ್ನಡ ಮತ್ತು ಇಂಗ್ಲಿಷ್‌ ಪಾಠಗಳನ್ನು ಚೆನ್ನಾಗಿ ಮನವರಿಕೆಯಾಗುವ ಹಾಗೆ ಹೇಳಿಕೊಟ್ಟಿದ್ದಾರೆ. ಹೀಗಾಗಿ ಅವರು ನನಗೆ ತಂದೆಯೂ ಹೌದು, ಗುರುಗಳೂ ಹೌದು.

ನಮ್ಮ ತಂದೆಯವರಿಂದ ಕೇವಲ ಪಠ್ಯ ಪುಸ್ತಕಗಳಿಂದ ಮಾತ್ರವಲ್ಲ, ಅವರ ನಡೆ ನುಡಿಗಳಿಂದಲೂ ನಾನು ಪಾಠಗಳನ್ನು ಕಲಿತಿದ್ದೇನೆ. ಅವರು ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅವರು ತಮ್ಮ ಕಾರ್ಯಕ್ಷೇತ್ರದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಕಾಪಾಡಿಕೊಂಡಿರಬೇಕು ಎಂದು ಸದಾ ಹೇಳುತ್ತಿದ್ದರು. ಒಮ್ಮೆ ಹೀಗೊಂದು ಘಟನೆ ನಡೆಯಿತು. ನಮ್ಮ ತಂದೆಯವರು ಶಾಲೆಯ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಾಂಕ ಮಾಡುತ್ತಿದ್ದರು. ಆಗ ಒಬ್ಬ ವಿದ್ಯಾರ್ಥಿಯ ತಂದೆ ನಮ್ಮ ಮನೆಗೆ ಬಂದರು. ತಮ್ಮ ಮಗನಿಗೆ ಹೆಚ್ಚಿನ ಅಂಕಗಳನ್ನು ಕೊಡಬೇಕು ಎಂದು ವಿನಂತಿಸಿ ಹಣದ ರೂಪದಲ್ಲಿ ನಮ್ಮ ತಂದೆಯವರಿಗೆ ಲಂಚವನ್ನು ಕೊಡಲು ಮುಂದಾದರು. ಕೂಡಲೇ ಕೋಪಗೊಂಡ ನಮ್ಮ ತಂದೆಯವರು ಅವರನ್ನು ಬೈದು ಕಳಿಸಿಬಿಟ್ಟರು. ಇದರ ಪ್ರತ್ಯಕ್ಷದರ್ಶಿಯಾದ ನನಗೆ ಬಾಲಕನಿದ್ದಾಗಲೇ ಪ್ರಾಮಾಣಿಕತೆಯ ನೇರ ನಿದರ್ಶನ ದೊರೆತು ಅದನ್ನು ರೂಢಿಸಿಕೊಳ್ಳಲು ಅನುವಾಯಿತು.

ಪ್ರೀತಿಗಾಗಿ.. ಚಪ್ಪಾಳೆಗಾಗಿ..ಶಿವಮೊಗ್ಗ ಸುಬ್ಬಣ್ಣ ನೆನಪಲ್ಲಿ ಪ್ರತಿಷ್ಠಾನ; ಗಾಯಕಿ ಅರ್ಚನಾ ಹಂಚಿಕೊಂಡ ನೆನಪು

ನಮ್ಮ ತಂದೆಯವರಿಗೆ ಓದುವ ಹವ್ಯಾಸವಿತ್ತು. ಬಂಕಿಕೊಡ್ಲಕ್ಕೆ ದಿನಪತ್ರಿಕೆ ಸಾಯಂಕಾಲ ಬರುತ್ತಿತ್ತು. ಅವರು ಶಾಲೆಯಿಂದ ಬಂದ ಮೇಲೆ ಒಂದು ಆರಾಮ್‌ ಕುರ್ಚಿಯನ್ನು ಮನೆಯ ಅಂಗಳದಲ್ಲಿ ಹಾಕಿಕೊಂಡು ಆ ದಿನದ ಪೇಪರ್‌ ಓದುತ್ತಿದ್ದರು. ನಮ್ಮ ಮನೆಗೆ ಹಲವು ನಿಯತಕಾಲಿಕೆಗಳೂ ಬರುತ್ತಿದ್ದವು. ನಮಗೂ ಕೂಡ ಪಠ್ಯ ಪುಸ್ತಕಗಳಲ್ಲದೆ ಇತರ ಹೊತ್ತಿಗೆಗಳನ್ನು ಓದಲು ಪ್ರೇರೆಪಿಸುತ್ತಿದ್ದರು. ಒಂದೆಡೆ ಅವರು ‘ಪುಸ್ತಕದ ಕಿಟಕಿಯಿಂದ ನಾನು ಜಗತ್ತನ್ನು ನೋಡುತ್ತೇನೆ’ ಎಂದು ಹೇಳಿದ್ದು ನನಗೆ ನೆನಪಿದೆ. ಆಂಗ್ಲ ಸಾಹಿತ್ಯವನ್ನು ಅವರು ಚೆನ್ನಾಗಿ ಅರಿತಿದ್ದರು. ಅಗಾಥ ಕ್ರಿಸ್ಟಿಹಾಗೂ ಪಿ ಜಿ ವುಡ್‌ ಹೌಸ್‌ ಅವರ ಕಾದಂಬರಿಗಳು ಅವರಿಗೆ ಇಷ್ಟವಾಗಿದ್ದವು.

ಬಂಕಿಕೊಡ್ಲದಲ್ಲಿದ್ದಾಗ ಅವರು ಯಾವಾಗ ಮತ್ತು ಹೇಗೆ ಕವಿತೆಗಳನ್ನು ಬರೆಯುತ್ತಿದ್ದರು ಎಂಬುದರ ಬಗ್ಗೆ ನನಗಷ್ಟುಗಮನವಿಲ್ಲ. ಆದರೆ, ಒಮ್ಮೊಮ್ಮೆ ಕವಿತೆ ಬರೆದಾಗ ನಂತರ ಅದನ್ನು ನಮ್ಮ ತಾಯಿಯವರಿಗೆ ಓದಿ ತೋರಿಸುತ್ತಿದ್ದರು. ನಿವೃತ್ತಿಯ ನಂತರ ಅವರು ನನ್ನ ಜೊತೆಯಿರಲು ಬೆಂಗಳೂರಿಗೆ ಬಂದರು. ಇಲ್ಲಿ ಸಾಮಾನ್ಯವಾಗಿ ಚಾಪೆಯ ಮೇಲೆ ಕುಳಿತು ಬರೆಯುತ್ತಿದ್ದರು.

ಹಳ್ಳಿಯಿಂದ ಬೆಂಗಳೂರಿನಂತಹ ದೊಡ್ಡ ಪಟ್ಟಣಕ್ಕೆ ಬಂದ ಮೇಲೆ ಸಹಜವಾಗಿಯೇ ಅವರಿಗೆ ನಮ್ಮೆಲ್ಲ ವೈಯಕ್ತಿಕ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿಯಿತ್ತು. ತಾವೂ ಕೂಡ ಹೊರಗೆ ಹೋಗುವಾಗ ಮನೆಯ ವಿಳಾಸದ ಚೀಟಿಯನ್ನು ಅಂಗಿಯ ಕಿಸೆಯಲ್ಲಿಟ್ಟುಕೊಂಡಿದ್ದರು.

ನಮ್ಮ ತಂದೆಯವರ ಒಂದು ವಿಶೇಷ ಗುಣವೆಂದರೆ ಸರಳತೆ. ಮನೆಗೆ ಬಂದ ಅತಿಥಿಗಳನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇದು ಅವರ ಸಾಹಿತಿ ಮಿತ್ರರಿಗೆ ಹಾಗೂ ಸಾಹಿತಿಗ ಬಳಗದ ಅನುಭವಕ್ಕೆ ಬಂದ ಸಂಗತಿ. ಅವರೆಲ್ಲ ನಮ್ಮ ತಂದೆಯವರನ್ನು ಭೇಟಿಯಾಗಲು ನಮ್ಮ ನಮಗೆ ಬಂದಾಗ ಸಾಮಾನ್ಯವಾಗಿ ನಾನು ಮನೆಯಲ್ಲಿರುತ್ತಿರಲಿಲ್ಲ. ನನ್ನ ಶ್ರೀಮತಿ ವೇದಾ ಯಾವಾಗಲೂ ಇರುತ್ತಿದ್ದರು. ಅವರೆಲ್ಲರನ್ನೂ ನಮ್ಮ ತಂದೆಯವರು ವೇದಾಳಿಗೆ ಪರಿಚಯಿಸುತ್ತಿದ್ದರು. ಹೀಗಾಗಿ ವೇದಾ ಅವರಿಗೆ ಹಲವಾರು ಗಣ್ಯ ವ್ಯಕ್ತಿಗಳ ನೇರ ಪರಿಚಯವಿರುವ ಬಗ್ಗೆ ಹೆಮ್ಮೆ ಇದೆ. ಅಲ್ಲದೇ ನಮ್ಮ ತಂದೆಯವರು ಬಂದವರಿಗೆ ತೋರಿಸುತ್ತಿದ್ದ ಆದರದ ಆತಿಥ್ಯಕ್ಕೆ ಕೈಜೋಡಿಸಿರುವ ಬಗ್ಗೆ ಸಂತಸವೂ ಇದೆ.

Mukhyamantri Chandru: ಮುಖ್ಯಮಂತ್ರಿ ಚಂದ್ರು ಎರಡು ಪ್ರಸಂಗಗಳು

ಬೆಂಗಳೂರಿನಲ್ಲಿದ್ದಾಗ ಅವರು ಹಲವು ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು. ಇಲ್ಲಿದ್ದಾಗಲೇ ಅವರ ಮೂರು ಕವನ ಸಂಕಲನಗಳು (ಬೆಳ್ಳಕ್ಕಿಗಳು, ಕಥನ ಕವನಗಳು, ಬಕುಲದ ಹೂವುಗಳು) ಪ್ರಕಟಣೆಗೊಂಡವು. ಮುಂದೆ 1995ರಲ್ಲಿ ಅವರ ನಿಧನದ ನಂತರವೂ ಕೂಡ ನಮ್ಮ ತಂದೆಯವರ ಸಾಹಿತ್ಯ ಪ್ರೇಮಿಗಳ ಒಡನಾಟ ನಮ್ಮೊಡನಿದ್ದುದು ಅವರು ಮರೆಯಲಾಗದ ಮತ್ತು ಮರೆಯಬಾರದ ಕವಿ ಎಂಬ ಗುರುತಿಗೆ ಸಾಕ್ಷಿಯಾಗಿದೆ.

Latest Videos
Follow Us:
Download App:
  • android
  • ios