ಕೊಲೆ ಎಂದಾಕ್ಷಣವೇ ಮೈ ಒಮ್ಮೆ ಜುಂ ಎಂದು ಬಿಡುತ್ತದೆ. ಕೆಲವು ಕೊಲೆಗಳಂತೂ ಬರ್ಬರವಾಗಿರುತ್ತವೆ. ಕೊಲೆ ಮಾಡುವುದು ಅತ್ಯಂತ ಹೇಯ ಕೃತ್ಯ. ಕೊಲೆಯನ್ನು ಮಾನವ ಸಮಾಜ ಒಪ್ಪಲು ಸಾಧ್ಯವಿಲ್ಲ. ಈ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ನಾನಾ ಕಸರತ್ತು ನಡೆಸಿ ಪ್ರಕರಣ ಬಯಲುಗೊಳಿಸಿದ ರೋಚಕ ಘಟನೆಗಳನ್ನು ನಾವೆಲ್ಲ ಕಂಡಿದ್ದೇವೆ. 

ಆದರೆ ಕೆಲವು ಕೊಲೆ ಪ್ರಕರಣಗಳು ನೂರಾರು ವರ್ಷ ಕಳೆದರೂ ಇದುವರೆಗೆ ಕೊಲೆಗಾರನನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆಗಳಿಗೆ ಸಾಧ್ಯವಾಗಿಲ್ಲ. ಜಗತ್ತಿನಾದ್ಯಂತ ಸಾಕಷ್ಟು ಸುದ್ದಿ ಮಾಡಿದ ಹೈ ಪ್ರೊಫೈಲ್ ಪ್ರಕರಣಗಳ ಕಥೆಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ. 

ಜಗತ್ತಿನಾದ್ಯಂತ ಸುದ್ದಿಮಾಡಿದ ನಿಗೂಢ ಕೊಲೆ ಪ್ರಕರಣದ ಮೊದಲ ಕಥೆ ನಿಮಗಾಗಿ..

ಶತಮಾನದ ಹಿಂದೆ ಇಡೀ ಲಂಡನ್ ನಗರವೇ ಬೆಚ್ಚಿ ಬೀಳಿಸಿದ ಪ್ರಕರಣವಿದು. ಜೇಕ್ ದಿ ರಿಪ್ಪರ್ ಎಂದೇ ಕುಖ್ಯಾತಿ ಪಡೆದ ಕೊಲೆಗಾರನ ಸಂಚು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ನಗರದ ಈಸ್ಟ್ ಎಂಡ್’ನಲ್ಲಿ ಮೂರು ತಿಂಗಳ ಅಂತರದಲ್ಲಿ ನಡೆದ ಸರಣಿ ಕೊಲೆ ಪ್ರಕರಣ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತ್ತು.

ಐವರು ವೇಶ್ಯಾವೃತ್ತಿಯಲ್ಲಿ ತೊಡಗಿದ್ದ ಐವರು ಮಹಿಳೆಯರನ್ನು ಒಂದೇ ರೀತಿ ಬರ್ಬರವಾಗಿ ಕೊಲೆ ಮಾಡುವ ಮೂಲಕ ಕೊಲೆಗಾರ ತನ್ನನ್ನು ತಾನು ಜಾಕ್ ದ ರಿಪ್ಪರ್ ಎಂದು ಗುರುತಿಸಿಕೊಳ್ಳುತ್ತಾನೆ. 1888ರಲ್ಲಿ ಮೂರು ತಿಂಗಳೊಳಗೆ ಆ ಶವಗಳನ್ನೆಲ್ಲ ಒಂದೆಡೆ ಗುಡ್ಡೆಹಾಕುವ ಮೂಲಕ ಕೊಲೆಗಾರ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದ್ದ. ಎರಡನೇ ಮಹಿಳೆ ಬರ್ಬರವಾಗಿ ಕೊಲೆಯಾದಾಗ ದ ಮಾರ್ನಿಂಗ್ ಪೋಸ್ಟ್ ಪತ್ರಿಕೆ ಈ ಕೊಲೆ ಪ್ರಕರಣವನ್ನು ವರದಿ ಮಾಡುವ ಜಗತ್ತಿನ ಗಮನ ಸೆಳೆಯಿತು. ಸ್ಥಳೀಯ ಪತ್ರಿಕೆ ಈ ಕೊಲೆಯನ್ನು ಅನಾಗರಿಕರೇ ಮಾಡಿದ್ದಾರೆ. ಏಕೆಂದರೆ ಈ ಕೊಲೆಯನ್ನು ವಿವರಿಸಲು ಸಾಧ್ಯವಿಲ್ಲದಷ್ಟು ಬರ್ಬರವಾಗಿದೆ ಎಂದು ವಿವರಿಸಿತ್ತು.

ಕೊಲೆ ಮಾಡಿದ ಗುರುತು ಹಾಗೂ ಚಾಕುವನ್ನು ಕೊಲೆ ಮಾಡಲು ಬಳಸಿದ ರೀತಿಯನ್ನು ಗಮನಿಸಿದ ಸ್ಥಳೀಯ ಅಧಿಕಾರಿಗಳು ಕೊಲೆಗಾರ ಒಬ್ಬ ಕಟುಕನಾಗಿರಬೇಕು ಇಲ್ಲವೇ ಡಾಕ್ಟರ್ ಆಗಿರಬೇಕು ಎಂದು ಶಂಕೆ ವ್ಯಕ್ತಪಡಿಸಿದ್ದರು. ವೈಟ್’ಚಾಪೆಲ್’ನಲ್ಲಿ ಕೊಲೆಯಾದ ಮೇರಿ ಅನ್-ನಿಕೋಲ್ಸ್, ಅನ್ನಿ ಚಾಂಪ್ಮನ್, ಎಲಿಜಬೆತ್ ಸ್ಟ್ರೈಡ್, ಕ್ಯಾಥರೀನ್ ಎಡ್ಡೋವ್ಸ್ ಮತ್ತು ಮೇರಿ ಜೇನ್ ಕೆಲ್ಲಿ ಇವರೆಲ್ಲರ ಗಂಟಲನ್ನು ಸೀಳಲಾಗಿತ್ತು. ಜತೆಗೆ ಹೊಟ್ಟೆಯನ್ನು ಕತ್ತರಿಸಿ ಅಂಗಾಂಗಗಳನ್ನು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಚೆಲ್ಲಾಡಲಾಗಿತ್ತು ಎಂದು ಲೇಖಕ ಡೇವ್ ಯೋಸ್ಟ್ ತಮ್ಮ ಪತ್ತೇದಾರಿ ಕಾದಂಬರಿ ’ಎಲಿಜಬೆತ್ ಸ್ಟ್ರೈಡ್ ಅಂಡ್ ಜಾಕ್ ದಿ ರಿಪ್ಪರ್’ನಲ್ಲಿ ಉಲ್ಲೇಖಿಸಿದ್ದರು.

ಚಲನಚಿತ್ರ ತಯಾರಿಕ ಕಂಪನಿಯ ಕೋರಿಕೆ ಮೇರೆಗೆ 1988ರಲ್ಲಿ ತನಿಖೆ ನಡೆಸಿದ ಅಮೆರಿಕಾದ ಖ್ಯಾತ ತನಿಖಾ ಸಂಸ್ಥೆ FBI ಪ್ರಕಾರ, ಕೊಲೆಯಾದವರೆಲ್ಲರೂ ವೃತ್ತಿಯಲ್ಲಿ ವೇಶ್ಯೆಯರಾಗಿದ್ದು, ಅತಿಯಾಗಿ ಮದ್ಯ ಸೇವಿಸುತ್ತಿದ್ದರು. ವೇಶ್ಯೆಯರಾಗಿದ್ದರಿಂದ ಹಾಗೆಯೇ ಸುಲಭವಾಗಿ ಎಲ್ಲರಿಗೂ ಸಿಗುತ್ತಿದ್ದರಿಂದ ಇವರನ್ನೇ ಗುರಿಯಾಗಿಟ್ಟುಕೊಂಡು ಕೊಲೆಗಾರ ಸಂಚು ಮಾಡಿ ಮುಂಜಾನೆ ವೇಳೆಗೆ ಕೊಲೆ ಮಾಡಿದ್ದಾನೆ ಎಂದು ವರದಿ ನೀಡಿತು.

ಇಷ್ಟೆಲ್ಲಾ ಸುದ್ದಿಯಾದರೂ ಪೊಲೀಸರಿಗೆ ಕೊನೆಗೂ ಕೊಲೆಗಾರನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಫೋರೆನ್ಸಿಕ್ ತಂತ್ರಜ್ಞಾನದಂತಹ ಅತ್ಯಾಧುನಿಕ ಸೌಲಭ್ಯಗಳಿಲ್ಲದೇ  ಇದ್ದಿದ್ದರಿಂದ ಸ್ಥಳೀಯ ತನಿಖಾಧಿಕಾರಿಗಳಿಗೆ ಈ ಸರಣಿ ಕೊಲೆ ಪ್ರಕರಣ ಬೇಧಿಸಲು ಸಾಧ್ಯವಾಗಲಿಲ್ಲ. ಅಸಂಖ್ಯಾತ ಇತಿಹಾಸಕಾರರು, ಅಪರಾಧ ತಜ್ಞರು ಸೇರಿದಂತೆ ವೃತ್ತಿ ನಿರತ ಹಾಗೂ ಹವ್ಯಾಸಿ ತಜ್ಞರು ಕೊಲೆಗಾರನ ಬಗ್ಗೆ ಊಹಾಪೋಹಗಳನ್ನು ಹರಿಬಿಟ್ಟರು, ಆದರೆ ಜೇಕ್ ದಿ ರಿಪ್ಪರ್ ಎಂಬ ಕೊಲೆಗಾರ ನಿಗೂಢವಾಗಿಯೇ ಕೊಲೆ ರಹಸ್ಯದೊಂದಿಗೆ ಗೋರಿ ಸೇರಿದ.

ಇನ್ನೂ 5 ರೋಚಕ ನಿಗೂಢ ಕೊಲೆ ಪ್ರಕರಣಗಳು ಶೀಘ್ರದಲ್ಲೇ ನಿರೀಕ್ಷಿಸಿ....