ಎಡ-ಬಲ ಚಿಂತನೆಗಳು ಎಂದೂ ಒಂದಾಗಲ್ಲ: ಜೋಗಿ
ಎಡ ಮತ್ತು ಬಲದ ನಡುವೆ ಈಗಾಗಲೇ ಒಂದು ಸೇತುವೆ ಅಸ್ತಿತ್ವದಲ್ಲಿದೆ. ಅದರ ಮೂಲಕ ಎಡಪಂಥೀಯರು ಬಲಕ್ಕೂ ಬಲಪಂಥೀಯರೂ ಎಡಕ್ಕೂ ನಡೆದಾಡಿದ್ದಾರೆ’ ಎಂದು ಹೇಳಿದ ಮಕರಂದ ಪರಾಂಜಪೆ, ‘ಅವೆರಡನ್ನೂ ಬೆಸೆಯುವುದು ಅಸಾಧ್ಯ’ ಎಂದು ಅಭಿಪ್ರಾಯಪಟ್ಟರು.
ಜೋಗಿ
ಜೈಪುರ(ಜ.24): ಭಾರತೀಯ ಸಮಾಜದಲ್ಲಿ ನೆಲೆಯೂರಿರುವ ಎಡ ಮತ್ತು ಬಲಪಂಥೀಯ ಚಿಂತನೆಗಳು ಒಂದುಗೂಡಲು ಸಾಧ್ಯವೇ ಎಂಬ ಬಹುಮುಖ್ಯ ಪ್ರಶ್ನೆ ಕೊನೆಗೆ ಸಮರ್ಪಕ ಉತ್ತರ ಪಡೆಯುವಲ್ಲಿ ವಿಫಲವಾಯಿತು. ‘ಎಡ ಮತ್ತು ಬಲಪಂಥೀಯತೆ ಎರಡು ಧ್ರುವಗಳಿದ್ದಂತೆ. ಅವು ಒಂದಾಗಲು ಸಾಧ್ಯವಿಲ್ಲ’ ಎಂದು ಚಿಂತಕ, ಲೇಖಕ ಮಕರಂದ ಪರಾಂಜಪೆ ಹೇಳಿದರು. ಅದಕ್ಕೆ ಪ್ರೇಕ್ಷಕರಿಂದಲೇ ವ್ಯಾಪಕ ವಿರೋಧ ವ್ಯಕ್ತವಾಯಿತು. ಆದರೆ ಕೊನೆಯಲ್ಲಿ ಕೇಳುಗರು ಎಡ-ಬಲ ಒಂದಾಗುವುದು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯಕ್ಕೆ ದನಿಗೂಡಿಸಿದರು.
‘ಎಡ ಮತ್ತು ಬಲದ ನಡುವೆ ಈಗಾಗಲೇ ಒಂದು ಸೇತುವೆ ಅಸ್ತಿತ್ವದಲ್ಲಿದೆ. ಅದರ ಮೂಲಕ ಎಡಪಂಥೀಯರು ಬಲಕ್ಕೂ ಬಲಪಂಥೀಯರೂ ಎಡಕ್ಕೂ ನಡೆದಾಡಿದ್ದಾರೆ’ ಎಂದು ಹೇಳಿದ ಮಕರಂದ ಪರಾಂಜಪೆ, ‘ಅವೆರಡನ್ನೂ ಬೆಸೆಯುವುದು ಅಸಾಧ್ಯ’ ಎಂದು ಅಭಿಪ್ರಾಯಪಟ್ಟರು. ಎಡಪಂಥ ಮತ್ತು ಬಲಪಂಥವನ್ನು ಬೆಸೆಯಲಾಗದು ಎಂಬ ಅಭಿಪ್ರಾಯವನ್ನು ಜವಾಹರ್ ಸರ್ಕಾರ್, ಪುರುಷೋತ್ತಮ ಅಗರವಾಲ್ ಮತ್ತು ವಂದನಾ ಶಿವ ವ್ಯಕ್ತಪಡಿಸಿದರು.
ಆರೋಗ್ಯಪೂರ್ಣ ಚರ್ಚೆಯೇ ಪ್ರಜಾಪ್ರಭುತ್ವದ ಮೂಲಾಧಾರ; ಶಶಿ ತರೂರ್!
‘ಎಡಪಂಥೀಯ ಕಲ್ಪನೆ ಮೂಲತಃ ಭಾರತದ್ದು ಅಲ್ಲವೇ ಅಲ್ಲ. ಅದು ಪ್ಯಾರಿಸ್ಸಿನಲ್ಲಿ ಹುಟ್ಟಿದ್ದು. ಎಡ ಎಂದಿಗೂ ಬದಲಾವಣೆಯ ಪರ. ಬಲ ಬದಲಾವಣೆಗೆ ವಿರೋಧಿ. ಎಡ ನಾಳೆಯ ಬಗ್ಗೆ ಚಿಂತಿಸುತ್ತದೆ, ಬಲ ಚರಿತ್ರೆಯ ಮೆಲುಕು ಹಾಕುತ್ತದೆ’ ಎಂದು ಜವಾಹರ್ ಸರ್ಕಾರ್ ವಾದಿಸಿದರು.
ಅದನ್ನು ವಿರೋಧಿಸಿದ ಪವನ್ ವರ್ಮ, ‘ಭಾರತೀಯ ಸಂಸ್ಕೃತಿಯು ಸತ್ಯ ಒಂದೇ. ಅದನ್ನು ಹಲವು ರೀತಿ ಹೇಳಲಾಗುತ್ತದೆ ಎನ್ನುತ್ತದೆ. ಒಳ್ಳೆಯದು ಎಲ್ಲಾ ದಿಕ್ಕಿನಿಂದಲೂ ಬರಲಿ ಎಂದು ಹೇಳುತ್ತದೆ. ಒಂದು ಕಾಲದಲ್ಲಿ ಇಂದಿರಾ ಗಾಂಧಿ ಕೂಡ ಸಾವರ್ಕರ್ ಬೆಂಬಲಿಸಿದ್ದರು. ಶಂಕರ ಮತ್ತು ಮಂಡನ ಮಿಶ್ರ ವಾದ ಮಾಡಿದರೂ ಒಂದಾಗಿದ್ದರು. ನಮಗೆ ಬೆಕ್ಕು ಬಿಳಿಯೋ ಕಪ್ಪೋ ಮುಖ್ಯವಲ್ಲ. ಅದು ಇಲಿ ಹಿಡಿಯುತ್ತದೋ ಇಲ್ಲವೋ ಎನ್ನುವುದನ್ನು ನೋಡಬೇಕು’ ಎಂದರು.
‘ಈ ಜಗತ್ತಿನಲ್ಲಿ ಲೆಫ್ಟ್ ಮತ್ತು ರೈಟ್ ಎಂಬುದೇ ಇಲ್ಲ. ಇರುವುದು ಕೇವಲ ರೈಟ್ ಮತ್ತು ರಾಂಗ್’ ಎಂದು ಮಕರಂದ ಪರಾಂಜಪೆ ಹೇಳಿದರೆ, ವಂದನಾ ಶಿವ, ‘ಲೆಫ್ಟ್ ಈಸ್ ರೈಟ್, ರೈಟ್ ಈಸ್ ರಾಂಗ್’ ಎಂದು ಪ್ರತಿವಾದ ಹೂಡಿದರು. ‘ಎಡಕ್ಕೂ ಬಲಕ್ಕೂ ತುಂಬ ದೊಡ್ಡ ವ್ಯತ್ಯಾಸವಿದೆ. ಬಲಪಂಥ ಸಾಂಸ್ಕೃತಿಕ ಅಸಮಾನತೆಯನ್ನು ಹೇರುತ್ತದೆ. ಎಡಪಂಥ ಸಮಾನತೆಯನ್ನು ಪ್ರತಿಪಾದಿಸುತ್ತದೆ’ ಎಂದು ವಾದ ಹೂಡಿದರು.
ಎಡ ಮತ್ತು ಬಲಪಂಥೀಯತೆಯ ಕುರಿತು ಕೇಳುಗರು ಕೂಡ ತೀವ್ರವಾದ ಅಭಿಪ್ರಾಯ ವ್ಯಕ್ತಪಡಿಸಿದರು. ಕೊನೆಯಲ್ಲಿ ಎಡ ಮತ್ತು ಬಲವನ್ನು ಬೆಸೆಯುವುದು ಸಾಧ್ಯವಿಲ್ಲ. ಎರಡೂ ವಿರುದ್ಧ ಧ್ರುವಗಳು ಮತ್ತು ಇಬ್ಬರ ಸಿದ್ಧಾಂತವೂ ಬೇರೆ. ಆದರೂ ಎರಡೂ ಪಂಥಗಳು ಈ ಸಿದ್ಧಾಂತವನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತವೆ ಎಂದು ಸಭೆ ತೀರ್ಮಾನಿಸಿತು.
ವೀರ್ ಸಾಂಘ್ವಿ ಅವರು ಚರ್ಚೆಯನ್ನು ನಡೆಸಿಕೊಟ್ಟು ಮಾತುಗಾರರನ್ನು ಸಮರ್ಥವಾಗಿ ನಿಯಂತ್ರಿಸಿದರು. ಚರ್ಚೆ ಬೇರೆ ದಾರಿ ಹಿಡಿಯುತ್ತಿದ್ದಾಗ ಮತ್ತೆ ಅದನ್ನು ಹಳಿಗೆ ತಂದರು. ತುಂಬಿದ ಸಭೆ ಸುಮಾರು 90 ನಿಮಿಷಗಳ ಕಾಲ ನಡೆದ ಬಿಸಿಬಿಸಿ ಚರ್ಚೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಿತು. ಪ್ರತಿಯೊಬ್ಬ ಸಂವಾದಕರೂ ಚಪ್ಪಾಳೆಗೂ ಗೇಲಿಗೂ ಒಳಗಾದರು.
ಜೈಪುರ ಲಿಟ್‌ಫೆಸ್ಟ್‌ಗೆ ಅರ್ಥಪೂರ್ಣ ವಿದಾಯ
ದಿನಕ್ಕೆ ಒಂದು ಲಕ್ಷ ಸಾಹಿತ್ಯಾಸಕ್ತರು, ಒಟ್ಟು ಐನೂರಕ್ಕೂ ಹೆಚ್ಚು ಲೇಖಕರು, 242 ಗೋಷ್ಠಿಗಳು, 350 ಪುಸ್ತಕಗಳು, ಒಂದು ಲಕ್ಷ ಪುಸ್ತಕಗಳ ಮಾರಾಟದೊಂದಿಗೆ 16ನೇ ಜೈಪುರ ಸಾಹಿತ್ಯೋತ್ಸವ ಸಂಪನ್ನಗೊಂಡಿತು. ಕಳೆದ ವರ್ಷಕ್ಕೆ ಹೋಲಿಸಿದರೆ, ಐದು ಪಟ್ಟು ಹೆಚ್ಚು ಸಾಹಿತ್ಯಾಸಕ್ತರು ಸಾಹಿತ್ಯೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ದೇಶ-ವಿದೇಶಗಳಿಂದ ಬಂದ ಸಾಹಿತಿಗಳು, ಓದುಗರು, ವಿಮರ್ಶಕರು ಮತ್ತು ಕೇಳುಗರು- ಎಲ್ಲ ಕಾರ್ಯಕ್ರಮಗಳೂ ತುಂಬಿ ತುಳುಕುವ ಹಾಗೆ ಮಾಡುವುದರಲ್ಲಿ ಯಶಸ್ವಿಯಾದರು.
ಶಶಿ ತರೂರ್, ಜಾವೇದ್ ಅಖ್ತರ್, ಸುಧಾ ಮೂರ್ತಿ ಮತ್ತು ಗುಲ್ಜಾರ್ ಭಾಗವಹಿಸಿದ ಕಾರ್ಯಕ್ರಮಗಳು ಎಂದಿನಂತೆ ಅಪೂರ್ವ ಜನಪ್ರಿಯತೆ ಗಳಿಸಿದವು. ಸಾಹಿತ್ಯೋತ್ಸವದ ನಿಲಯದ ಕಲಾವಿದರ ಜತೆಗೇ ಸೂರಜ್ ಯಂಗ್ಡೆ ಮುಂತಾದ ಹೊಸಬರು ಕೂಡ ಈ ಸಲ ಸಿಕ್ಸರ್ ಹೊಡೆದು ಸಾಹಿತ್ಯಪ್ರಿಯರ ಮನರಂಜಿಸಿದರು.
ಜೈಪುರದಲ್ಲಿ ಜೋಗಿ; ಸಾಹಿತ್ಯೋತ್ಸವದ ಟಿಟ್ ಬಿಟ್ಸ್
ಒಂದು ಗಂಟೆಗೆ 12000 ಕೇಳುಗರು ಸಾಹಿತ್ಯೋತ್ಸವಕ್ಕೆ ಕಾಲಿಡುತ್ತಿದ್ದರು. ಅವರಲ್ಲಿ ಶೇ.80ರಷ್ಟುಮಂದಿ 27 ವರ್ಷಕ್ಕಿಂತ ಕಿರಿಯರು. ‘ಈ ಸಮ್ಮೇಳನ ಆರಂಭವಾದಾಗ ನಾವು ಕಂಡ ಜಗತ್ತಿಗೂ ಈ ಜಗತ್ತಿಗೂ ಬಹಳ ವ್ಯತ್ಯಾಸವಿದೆ. ಒಂದು ಲಕ್ಷ ಪುಸ್ತಕಗಳು ಮಾರಾಟವಾಗಿವೆ. ಸುಮಾರು ಐದು ಕೋಟಿ ರುಪಾಯಿಯ ಪುಸ್ತಕ ವ್ಯಾಪಾರವೇ ನಡೆದಿದೆ. ಇದು ಓದುಗರಿಗೂ ಪ್ರಕಾಶಕರಿಗೂ ಅಪೂರ್ವ ಅವಕಾಶ’ ಎಂದು ಟೀಮ್ ವರ್ಕ್ ನಿರ್ದೇಶಕ ಸಂಜಯ್ ಕೆ. ರಾಯ್ ಹೇಳಿದರು.
ಐದೂ ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು, ಪುಸ್ತಕ ಬಿಡುಗಡೆ ಮತ್ತು ಸಾಹಿತ್ಯ ಸಂವಾದಗಳು ನಡೆದವು. ‘ಮುಂದಿನ ಜೈಪುರ ಸಾಹಿತ್ಯ ಉತ್ಸವ ಈ ಸಲದ ಎರಡರಷ್ಟುಕೇಳುಗರನ್ನು ಕರೆತರಲಿದೆ’ ಎಂಬ ಭರವಸೆಯ ಮಾತುಗಳನ್ನು ಸಂಜಯ್ ರಾಯ್ ಆಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆದರು.