ಬೆಂಗಳೂರು (ಡಿ. 05): ಎತ್ತರದ ಶಿಖರ ಏರುವುದೆಂದರೆ ಕೊಡಗಿನ ಈ ಯುವತಿಗೆ ಅಚ್ಚುಮೆಚ್ಚು. ಈಕೆಯ ಸಾಧನೆಗೆ ಪೋಷಕರು ಹುರಿದುಂಬಿಸುತ್ತಿದ್ದಾರೆ. ಇತ್ತೀಚೆಗೆ ರಷ್ಯಾದ 5,642 ಮೀ ಎತ್ತರದ ಮೌಂಟ್ ಎಲ್‌ಬ್ರಸ್ ಶಿಖರವನ್ನು ವೇಗದಿಂದ ಏರಿದ ದೇಶದ ಪ್ರಥಮ ಯುವತಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಸರ್ಕಾರ ಈಕೆಗೆ ಪ್ರಾಯೋಜಕತ್ವ ನೀಡಿದರೆ ವಿಶ್ವ ದಾಖಲೆ ಮಾಡುವ ಗುರಿ ಹೊಂದಿದ್ದಾರೆ.

ಭವಾನಿ ಪರಿಚಯ

ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಪೆರೂರು ಗ್ರಾಮದ ನಂಜುಂಡ-ಪಾರ್ವತಿ ದಂಪತಿಯ ಪುತ್ರಿ ಭವಾನಿ. ಮಂಗಳೂರಿನಲ್ಲಿ ಪದವಿ ಪೂರೈಸಿದ್ದು, ಪ್ರಸ್ತುತ ಡಾರ್ಜಲಿಂಗ್ನ ಹಿಮಾಲಯ ಮೌಂಟೇನಿಯರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಬೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭ ಎನ್‌ಸಿಸಿ ಕೆಡೆಟ್ ಆಗಿದ್ದ ಭವಾನಿಗೆ ಎನ್‌ಸಿಸಿ ಅಧಿಕಾರಿಯೊಬ್ಬರು ಶಿಬಿರಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದ್ದರು. ಕಂಪ್ಯೂಟರ್ ವಿದ್ಯಾಭ್ಯಾಸ ಮಾಡಿ ಐಟಿ ಕಂಪನಿಯಲ್ಲಿ ಭವಾನಿ ಕೆಲಸಕ್ಕೆ ಸೇರಬೇಕಿತ್ತು. ಆದರೆ ತನ್ನ ಸ್ವ ಆಸಕ್ತಿಯಿಂದ ಪರ್ವತಾರೋಹಿಯಾಗಿ ತೊಡಗಿಸಿಕೊಂಡರು.

ಎಲ್‌ಬ್ರಸ್ ಜರ್ನಿ

ರಷ್ಯಾದ ಅತಿ ಎತ್ತರದ ಎಲ್‌ಬ್ರಸ್ ಪರ್ವತವನ್ನು ಮೆಕ್ಸಿಕೋ, ಫ್ರೆಂಚ್, ರೋಮಿನಿಯಾ ಪರ್ವತಾ ರೋಹಿಗಳೊಂದಿಗೆ ಭಾರತದ ಭವಾನಿ, ಕಠಿಣ ಸವಾಲುಗಳ ನಡುವೆ ಅ.18 ರಂದು ನಡುರಾತ್ರಿ ಪರ್ವತಾರೋಹಣ ಆರಂಭಿಸಿದ್ದು, -50 ಡಿಗ್ರಿಯ ನಡುವೆ. ಅ.19 ರಂದು ಬೆಳಗ್ಗೆ 9.30ಕ್ಕೆ ಬೆಟ್ಟದ ತುತ್ತ ತುದಿಗೆ ತಲುಪುವ ಮೂಲಕ ಭಾರತ ಹಾಗೂ ಕರ್ನಾಟಕದ ಧ್ವಜವನ್ನು ಎತ್ತಿ ಹಿಡಿದ ಕೀರ್ತಿ ಗಳಿಸಿದ್ದಾರೆ.

ಈ ಹಿಂದೆ ದೇಶದ ಉತ್ತರಾಖಂಡ್, ಡಾರ್ಜಲಿಂಗ್, ಹಿಮಾಲಯ, ಸಿಕ್ಕಿಂ, ಮನಾಲಿ, ಲೇಲೆಬಾಕ್, ಜಮ್ಮುಕಾಶ್ಮೀರದಲ್ಲಿ ಸೇರಿದಂತೆ ಹತ್ತಕ್ಕೂ ಅಧಿಕ ಶಿಖರವನ್ನು ಏರಿದ್ದಾರೆ. ಮೊದಲ ಬಾರಿಗೆ ವಿದೇಶದಲ್ಲಿ ಅಂದರೆ ರಷ್ಯಾದಲ್ಲಿ ಅತಿ ಎತ್ತರದ ಶಿಖರ ಏರಿದ ವೇಗದ ಭಾರತೀಯ ಮಹಿಳಾ ಪರ್ವತಾರೋಹಿ ಎಂಬ ಖ್ಯಾತಿ ಗಳಿಸಿದ್ದಾರೆ.

ಅಪ್ಪ ಮಾಡಿದ ಸಾಲದಿಂದ ದಾಖಲೆ ಬರೆದೆ

ಶಿಖರ ಏರಲು ದೈಹಿಕ ಹಾಗೂ ಮಾನಸಿಕ ಫಿಟ್ನೆಸ್ ಅಗತ್ಯ. ರಷ್ಯಾದಲ್ಲಿ ಪರ್ವತಾರೋಹಣ ಮಾಡುವ ಸಂದರ್ಭ ಅಲ್ಲಿ -50 ಡಿಗ್ರಿ ಉಷ್ಠಾಂಶ ಇತ್ತು. ಈ ಸವಾಲಿನ ನಡುವೆ ಶಿಖರವೇರಲು ಮಾನಸಿಕ ಸ್ಥೈರ್ಯ ಅಗತ್ಯ. ಮಂಜುಗಡ್ಡೆಗಳಿಂದ ಕೂಡಿದ್ದ ಶಿಖರದಲ್ಲಿ ಮೈಕೊರೆಯುವ ಚಳಿ. ಅಲ್ಲಿ ಮೆದುಳು ಕೆಲಸ ಮಾಡುವುದಿಲ್ಲ. ಮೂರು ದಿನ ತರಬೇತಿ ಪಡೆದ ನಂತರ ನಾನು ಸೇರಿದಂತೆ ನಾಲ್ಕು ಮಂದಿ ಕಠಿಣ ಹಾದಿಯ ನಡುವೆ ಶಿಖರ ಏರಿದೆವು. ಇದು ಮರೆಯಲಾಗದ ಒಂದು ಸುಂದರ ಅನುಭವ.

ಶಿಖರ ಏರಲು ಹೆಚ್ಚು ಖರ್ಚಾಗುತ್ತದೆ. ಈ ಹಿನ್ನೆಲೆ ಪ್ರಾಯೋಜಕರಿಗಾಗಿ ಎದುರು ನೋಡುತ್ತಿದ್ದೆ. ಆದರೆ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿತ್ತು. ಈ ಹಿನ್ನೆಲೆ ಅಪ್ಪ ಸಾಲ ಮಾಡಿಕೊಟ್ಟ ಹಣದಲ್ಲಿ ಶಿಖರ ಏರಿದೆ ಎಂದು ಭವಾನಿ ತಿಳಿಸಿದರು. ವಿಶ್ವ ದಾಖಲೆ ಮಾಡುವ ಗುರಿ ಮಂಜಿನ ಶಿಖರದಲ್ಲಿ ಸ್ಕೈ ಡೈವ್ ಮಾಡಿಕೊಂಡು ಬರುವುದನ್ನು ಜಮ್ಮು ಕಾಶ್ಮೀರದಲ್ಲಿ ತರಬೇತಿ ಪಡೆದಿದ್ದೇನೆ. ರಷ್ಯಾದ ಶಿಖರದಲ್ಲಿ ಸ್ಕೈ ಡೈವ್ ಮಾಡಿ ವಿಶ್ವ ದಾಖಲೆ ಮಾಡಬೇಕೆಂದಿದ್ದೆ. ಆದರೆ ಹಣದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ.

ವಿದೇಶಿಗರು ಈಗಾಗಲೇ ಸಾಧನೆ ಮಾಡಿದ್ದಾರೆ. ಆದರೆ ಭಾರತೀಯರು ಇದುವರೆಗೂ ಯಾರು ಸಾಧನೆ ಮಾಡಿಲ್ಲ. ಆದ್ದರಿಂದ ಕರ್ನಾಟಕ ಸರ್ಕಾರದಿಂದ ಪ್ರಾಯೋಜಕತ್ವ ದೊರೆತರೆ ಈ ತರಬೇತಿಯನ್ನು ನ್ಯೂಜಿಲ್ಯಾಂಡ್ ಅಥವಾ ಕೆನಡಾದಲ್ಲಿ ಮಾಡಬೇಕೆನ್ನುವುದು ಭವಾನಿ ಅವರ ಕನಸಾಗಿದೆ. ದಾಖಲೆ ಬರೆದು ರಾಜ್ಯದ ಕೀರ್ತಿ ಹೆಚ್ಚಿಸಬೇಕು ಪರ್ವತ ಏರುವ ಮೂಲಕ ದೈಹಿಕ ಫಿಟ್ನೆಸ್ ಹೆಚ್ಚುತ್ತದೆ. ಪ್ರಕೃತಿ ಹಾಗೂ ಶಿಖರ ಮಧ್ಯೆ ಇರಬಹುದು. ಈ ಹಿನ್ನೆಲೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ.

ಉತ್ತರ ಭಾರತದಲ್ಲಿ ಈ ರೀತಿ ಹಲವು ಮಂದಿ ದಾಖಲೆ ಮಾಡಿದವರಿದ್ದಾರೆ. ಅವರಿಗೆ ಸರ್ಕಾರವೂ ಪ್ರೋತ್ಸಾಹ ನೀಡುತ್ತಿದೆ. ಆದರೆ ದಕ್ಷಿಣ ಭಾರತದಲ್ಲಿ ಈ ಬಗ್ಗೆ ಹೆಚ್ಚು ಮಂದಿಗೆ ಗೊತ್ತಿಲ್ಲ. ಖರ್ಚು ಹೆಚ್ಚು ಇರುವುದರಿಂದ ಯಾರೂ ಅಷ್ಟಾಗಿ ಹೆಚ್ಚು ತೊಡಗಿಸಿಕೊಳ್ಳುವುದಿಲ್ಲ. ಕರ್ನಾಟಕದಿಂದ ಒಂದು ದಾಖಲೆ ಮಾಡಬೇಕು. ಇದರಿಂದ ಜನರು ನನ್ನನ್ನು ಗುರುತಿಸಬೇಕು. ಇದಕ್ಕೆ ಎಲ್ಲರ ಪ್ರೋತ್ಸಾಹ ಬೆಂಬಲ ಇದ್ದರೆ ಸಾಧಿಸಿವುದಾಗಿ ಭವಾನಿ ಹೇಳುತ್ತಾರೆ. 

-ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ