Asianet Suvarna News Asianet Suvarna News

ಸಂಗೀತ ಲೋಕದ ಹೊಸ ಸೆನ್ಸೇಶನ್! ಉಡುಪಿಯ ಅಂಜಲಿ

‘ಇಂಡಿಯಾ ಗಾಟ್ ಟಾಲೆಂಟ್’ ರಿಯಾಲಿಟಿ ಶೋ ನಲ್ಲಿ ಉಡುಪಿಯ ಅಂಜಲಿ ಶ್ಯಾನುಭೋಗ್ ನುಡಿಸಿದ ಸ್ಯಾಕ್ಸೋಫೋನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅನುರಣಿಸುತ್ತಿದೆ. ರಾತ್ರಿ ಹಗಲಾಗೋದರಲ್ಲಿ ವೈರಲ್ ಆದ ಕರುನಾಡಿನ ಅಪ್ಪಟ ದೇಸೀ ಪ್ರತಿಭೆಯ ಪರಿಚಯ ಮಾಡಿಕೊಳ್ಳೋಣ ಬನ್ನಿ
 

Interview Saxophonist Anjali Shanbhogue Music Sensation Udupi
Author
Bengaluru, First Published Dec 3, 2018, 8:12 PM IST

ಅದೊಂದು ಕನಸಿನ ಸಾಮ್ರಾಜ್ಯ, ಅಲ್ಲಿ ನಿಂತು ಹೆಜ್ಜೆಗುರತು ಮೂಡಿಸಬೇಕು ಅನ್ನೋದು ಸಾಧಕರ ಕನಸು, ಕರುನಾಡಿನ ಹುಡುಗಿಯೊಬ್ಬಳು, ಈ ಕನಸು ನನಸಾಗಿಸಿಕೊಂಡು ಬಂದಿದ್ದಾಳೆ. ನಾನು ನವಭಾರತದ ಅಪ್ಪಟ ಪ್ರತಿಭೆ ಅನ್ನೋದನ್ನು ದೇಶಕ್ಕೆ ಸಾಬಿತು ಮಾಡಿದ್ದಾಳೆ. 

‘ಇಂಡಿಯಾ ಗಾಟ್ ಟಾಲೆಂಟ್’ ರಿಯಾಲಿಟಿ ಶೋ ನಲ್ಲಿ ಉಡುಪಿಯ ಅಂಜಲಿ ಶ್ಯಾನುಭೋಗ್ ನುಡಿಸಿದ ಸ್ಯಾಕ್ಸೋಫೋನ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಅನುರಣಿಸುತ್ತಿದೆ. ರಾತ್ರಿ ಹಗಲಾಗೋದರಲ್ಲಿ ವೈರಲ್ ಆದ ಕರುನಾಡಿನ ಅಪ್ಪಟ ದೇಸೀ ಪ್ರತಿಭೆಯ ಪರಿಚಯ ಮಾಡಿಕೊಳ್ಳೋಣ ಬನ್ನಿ.

ನಾಲ್ಕೂ ದಿಕ್ಕಿನಿಂದ ಹೊರಚಿಮ್ಮುವ ಕಣ್ಣು ಕೋರೈಸುವ ಬೆಳಕು, ಅದರ ನಡುವಲ್ಲಿ ನಿಂತು ಮಿಂಚುವುದು ಅಷ್ಟು ಸುಲಭದ ಮಾತಲ್ಲ. ದೇಶದ ನಾನಾ ಭಾಗಳಿಂದ ಬರುವ ಅಪರೂಪದ ಪ್ರತಿಭೆಗಳ ನಡುವೆ ಉಡುಪಿಯ ಅಂಜಲಿ ಶ್ಯಾನುಭೋಗ್ ನೆನಪಿನಲ್ಲುಳಿಯುವ ಸಾಧನೆ ಬರೆದು ಬಂದಿದ್ದಾಳೆ. ಕರ್ನಾಟಕ ಶಾಸ್ತ್ರೀಯ ಕಲಿತ ಯುವ ಪ್ರತಿಭೆಯಾದ ಈಕೆ, ಬಾಲಿವುಡ್ ಮೆಲೋಡಿ ಬೀಟ್ ಗೆ ಸ್ಯಾಕ್ಸೋಫೋನ್ ನುಡಿಸಿ ಅಪಾರ ಮೆಚ್ಚುಗೆಪಡೆದಿದ್ದಾಳೆ. ಅಂಜಲಿ ಅಂದೆಂಥಾ ಪ್ರತಿಭೆ ಅನ್ನೋದಕ್ಕೆ ಇದೊಂದು ಈ ಒಂದು ವಿಡಿಯೋ ಸಾಕು ಅಲ್ವಾ, ಈಕೆ ಕೈಗೆ ಸ್ಯಾಕ್ಸೋಪೋನ್ ತಗೊಂಡ ಐದೇ ಸೆಕುಂಡುಗಳಲ್ಲಿ ಪ್ರೇಕ್ಷಕರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಲಾರಂಭಿಸಿದ್ದಾರೆ.

ಪ್ರತೀ ಬೀಟ್ ಗೂ ಹೆಜ್ಜೆ ಹಾಕುತ್ತಾ ನಾದ ಹೊರಡಿಸುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಿಂದ ಸಿಳ್ಳೆಗಳ ಸುರಿಮಳೆಯಾಗಿದೆ. ‘ಗುಲಾಬೀ ಆಂಖೇ, ಜೋ ತೇರೇ ದೇಖೇ..’ಇದು ಬಾಲಿವುಡ್ ನ ಆಲ್ ಟೈಂ ಫೇವರೇಟ್ ಮಧುರಗೀತೆ. ನಿರ್ಣಾಯಕ ಸ್ಥಾನದಲ್ಲಿ ಕುಳಿತಿದ್ದ ಮೂವರಿಗೂ ಈ ಹಾಡು ಅಂದ್ರೆ ಪಂಚ ಪ್ರಾಣ. ಬಾಲಿವುಡ್ ನ ಲೆಜೆಂಡರಿ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅಂತೂ ಅಂಜಲಿ ಹಾಡು ಕೇಳಿ ಅದೆಷ್ಟು ಫೀದಾ ಆದ್ರು ಗೊತ್ತಾ? ತನ್ನ ‘ಸ್ಟೂಡೆಂಟ್ ಆಫ್ ಇಯರ್’ ಸಿನಿಮಾದಲ್ಲೂ ಗುಲಾಬಿ ಹಾಡು ಬಳಸಿದ್ದ ಕರಣ್ ಅಂಜಲಿಯ, ವಾದನ ಕೇಳಿ ಮೂಕ ವಿಸ್ಮಿತರಾಗಿದ್ರು.

ಅಂಜಲಿ ನೀಡಿದ ಪರ್ ಫಾರ್ಮೆನ್ಸ್ ಇಷ್ಟು ಜನಪ್ರಿಯ ಆಗೋದಿಕ್ಕೆ ಆಕೆಯ ಔಟ್ ಫಿಟ್ ಕೂಡಾ ಕಾರಣ. ಅಪ್ಪಟ ಪಾಶ್ಚಾತ್ಯ ವಾದನ, ಆದ್ರೆ ಮೈಸೂರು ರೇಷ್ಮೆಯ ಸೀರೆಯುಟ್ಟ ದೇಸೀ ಚೆಲುವೆ ಅಂಜಲಿ, ಈ ಕಾಂಬಿನೇಷನ್ನೇ ಈ ಪ್ರದರ್ಶನದ ಹೈಲೈಟ್ ಆಯ್ತು. ಇನ್ನು ಮಲೈಕಾ ಅರೋರಾ ಅಂತೂ ಅಂಜಲಿಯನ್ನು ಹೊಗಳಿದ್ದೇ ಹೊಗಳಿದ್ದು, ಕಾರ್ಯಕ್ರಮ ಮುಗಿಯುವಷ್ಟರಲ್ಲಿ ವನ್ಸ್ ಮೋರ್ ವನ್ಸ್ ಮೋರ್ ಬೇಡಿಕೆ ಬೇರೆ. ಹೀಗೆ ರಾತ್ರಿ ಬೆಳಗಾಗೋದರಲ್ಲಿ ಕರುನಾಡಿನ ಅಂಜಲಿ, ದೇಶದ ಕಣ್ಮಣಿ ಆಗಿಬಿಟ್ರು. ಈಕೆಯ ಪರ್ ಫಾರ್ಮೆನ್ಸ್ ಟೆಲಿಕಾಸ್ಟ್ ಆಗ್ತಿದ್ದಂತೆ, ವಿಡಿಯೋ ವೈರಲ್ ಆಗಿ, ಅಂಜಲಿ ಬಾಲಿವುಡ್ ನ ಮೆಲೋಡಿ ಪ್ರಿಯರ ಅಚ್ಚುಮೆಚ್ಚಿನ ಕಲಾವಿದೆ ಆಗಿಬಿಟ್ರು.

ಅಷ್ಟಕ್ಕೂ ಈ ಅಂಜಲಿ, ನಮ್ಮ ಕರ್ನಾಟಕ ಕರಾವಳಿಯ ಅಪ್ಪಟ ಪ್ರತಿಭೆ, ಸ್ಯಾಕ್ಸೋಫೋನ್ ನುಡಿಸುವ ಮಹಿಳೆಯರೇ ಇಲ್ಲದ ಕಾಲದಲ್ಲಿ ತನ್ನ ಎಂಟನೇ ವಯಸ್ಸಿನಲ್ಲಿ ಶಾಸ್ತ್ರೀಯವಾಗಿ ಸ್ಯಾಕ್ಸೋಫೋನ್ ಕಲಿತ ಸಾಧಕಿ. ಉಡುಪಿಯ ಸುಂದರ ಸೇರಿಗಾರ್ ಎಂಬವರಿಂದ ನಿರಂತರ ಅಭ್ಯಾಸ ಮಾಡಿ, ಅದೆಷ್ಟೋ ಶುಭಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನೀಡಿ, ಬಾಲಪ್ರತಿಭೆಯಾಗಿ ಗಮನ ಸೆಳೆದವರು ಅಂಜಲಿ. ಇಂಜಿನಿಯರಿಂಗ್ ಪದವಿ ಪಡೆದರೂ, ಐ.ಟಿ ಮೋಹಕ್ಕೆ ಬಲಿಯಾಗದೆ ಸಂಗೀತವನ್ನೇ ಉಸಿರಾಗಿಸಿಕೊಂಡಾಕೆ ಇವರು. 

ಶಾಸ್ತ್ರೀಯ ಕಲಿಕೆಯ ನಂತರ, ಸ್ವರಜ್ಞಾನದಲ್ಲಿ ಹಿಡಿತ ಸಾಧಿಸಿ ತಾನೇ ತಾನಾಗಿ ಯೂಟ್ಯೂಬ್ ನೋಡಿ ಪಾಶ್ಚಾತ್ಯ ಸಂಗೀತ ಅಭ್ಯಾಸ ಮಾಡಿದ ಅಪರೂಪದ ಪ್ರತಿಭೆ. ಈಕೆಯ ಪಾಶ್ಚಾತ್ಯ ಸಂಗೀತಕ್ಕೆ ಯೂಟ್ಯೂಬೇ ಗುರು. ಅದೇ ಯೂಟ್ಯೂಬ್ ನಲ್ಲಿ ಈಕೆ ತನ್ನ ಮೂರೇ ಮೂರು ಪರ್ಫಾರ್ಮೆನ್ಸ್ ಹಾಕಿ, ಸಂಗೀತ ಲೋಕದ ಗಮನಸೆಳೆದರು. ಐವತ್ತು ಸಾವಿರಕ್ಕೂ ಅಧಿಕ ಮಂದಿ ಈಕೆಯ ಈ ಮೂರು ಹಾಡಿಗೆ ಮನಸೋತು, ಯೂಟ್ಯೂಬ್ ಪೇಜ್ ಸಬ್ ಸ್ಕ್ರೈಬ್ ಮಾಡಿದ್ದಾರೆ. ಇಂಡಿಯಾ ಗಾಟ್ ಟ್ಯಾಲೆಂಟ್ ನವರು ಕೂಡಾ ಯೂಟ್ಯೂಬ್ ನೋಡಿಯೇ ಈಕೆಗೆ ಆಹ್ವಾನ ನೀಡಿದ್ದು!

ಅಂಜಲಿ ಪಾಲಿಗೆ ಸಾಮಾಜಿಕ ಜಾಲತಾಣ ಒಂದು ಇಂದ್ರಜಾಲವೇ ಆಯ್ತು. ಈಕೆಗೆ ಪಾಶ್ಚಾತ್ಯ ಸಂಗೀತ ಕಲಿಸಿದ್ದು ಯೂಟ್ಯೂಬ್, ಈಕೆಗೆ ಅವಕಾಶದ ಬಾಗಿಲು ತೆರೆದದ್ದು ಯೂಟ್ಯೂಬ್, ಇನ್ನು ಅಂಜಲಿ ತನ್ನದೇ ಮ್ಯೂಸಿಕಲ್ ಬ್ಯಾಂಡ್ ಮಾಡಿಕೊಂಡು ರಿಯಾಲಿಟಿ ಶೋಗೆ ಹೋಗಲು ಸಹಾಯ ಮಾಡಿದ್ದು ಕೂಡಾ ಫೇಸ್ ಬುಕ್. ತನ್ನ ಸ್ಯಾಕ್ಸೋಫೋನ್ ಗೆ ಸಹವಾದನ ನೀಡೋಕೆ ಫೇಸ್ ಬುಕ್ ಮೂಲಕ ಆಹ್ವಾನ ನೀಡಿದಾಗ, ಕರ್ನಾಟಕದ ಮೂಲೆ ಮೂಲೆಯಿಂದ ಯುವ ಕಲಾವಿದರು ಸ್ಪಂದಿಸಿದರು. ಇದರಲ್ಲಿ ಆಯ್ದ ಮಂದಿ ಜೊತೆಯಾಗಿ ಅಖಂಡ ಭಾರತಕ್ಕೆ ತಮ್ಮ ಪ್ರತಿಭೆ ತೋರಿಸಿ ಬಂದದ್ದು ಈಗ ಯೂತ್ ಸನ್ ಸೇಶನ್ ಆಗಿಬಿಟ್ಟಿದ್ದಾರೆ.

ಅಂಜಲಿಯ ಪರ್ಫಾರ್ಮೆನ್ಸ್‌ನ ಝಲಕ್ ಇಲ್ಲಿದೆ:

ವರದಿ: ಶಶಿಧರ್ ಮಾಸ್ತಿಬೈಲು

ಕ್ಯಾಮೆರಾ: ಹರೀಶ್

Follow Us:
Download App:
  • android
  • ios