Asianet Suvarna News Asianet Suvarna News

ಜೈಪುರದಲ್ಲಿ ಅಕ್ಷರದಾಹಿಗಳಿಗೆ ಕಾದಿದೆ ಓಯಸಿಸ್‌!

ಐನೂರಕ್ಕೂ ಹೆಚ್ಚು ಸಾಹಿತಿಗಳು ಜೈಪುರದಲ್ಲಿ ಎದುರಾಗುತ್ತಾರೆ. ವಿದೇಶಗಳ ಸಾಹಿತಿಗಳು ಬರುತ್ತಾರೆ. ಅವರೆಲ್ಲಾ ತಮ್ಮ ತಮ್ಮ ಕತೆಗಳ ವ್ಯಥೆಗಳ ಬಗ್ಗೆ ಮಾತನಾಡುತ್ತಾರೆ. ಇಡೀ ಪಿಂಕ್ ಸಿಟಿಯೇ ಕಾವ್ಯ, ಸಂಗೀತ, ಕಾದಂಬರಿ ಗುಂಗಲ್ಲಿ ಕಳೆದು ಹೋಗುತ್ತದೆ. ಈ ಸಲ ನೀವೀಗ ಭೇಟಿಯಾಗಬಹುದಾದ ಕೆಲವು ಯಾರೆಂಬುದನ್ನು ಓದಿ. 

Interesting Concert and Seminar at Jaipur Literary Fest
Author
Bengaluru, First Published Jan 23, 2019, 3:41 PM IST

ಬೆಂಗಳೂರು (ಜ. 23): ಐನೂರಕ್ಕೂ ಹೆಚ್ಚು ಸಾಹಿತಿಗಳು ಜೈಪುರದಲ್ಲಿ ಎದುರಾಗುತ್ತಾರೆ. ವಿದೇಶಗಳ ಸಾಹಿತಿಗಳು ಬರುತ್ತಾರೆ. ಅವರೆಲ್ಲಾ ತಮ್ಮ ತಮ್ಮ ಕತೆಗಳ ವ್ಯಥೆಗಳ ಬಗ್ಗೆ ಮಾತನಾಡುತ್ತಾರೆ. ಇಡೀ ಪಿಂಕ್ ಸಿಟಿಯೇ ಕಾವ್ಯ, ಸಂಗೀತ, ಕಾದಂಬರಿ ಗುಂಗಲ್ಲಿ ಕಳೆದು ಹೋಗುತ್ತದೆ. ಈ ಸಲ ನೀವೀಗ ಭೇಟಿಯಾಗಬಹುದಾದ ಕೆಲವು ಯಾರೆಂಬುದನ್ನು ಓದಿ. 

ಮೇಘನಾ-ಗುಲ್ಜಾರ್‌ ಮಾತುಕತೆ:

ತಲ್ವಾರ್‌, ರಾಜಿ ಮುಂತಾದ ಚಿತ್ರಗಳ ನಿರ್ದೇಶಕಿ ಮೇಘನಾ ಗುಲ್ಜಾರ್‌ ನಮ್ಮ ಕಾಲದ ಅತ್ಯುತ್ತಮ ಗೀತ ರಚನಕಾರ, ಕವಿ, ನಿರ್ದೇಶಕ ಗುಲ್ಜಾರ್‌ ಇಬ್ಬರೂ ಒಂದೇ ವೇದಿಕೆಯಲ್ಲಿ ಪರಸ್ಪರರ ಬಗ್ಗೆ ಮಾತಾಡಲಿದ್ದಾರೆ. ತಾನು ಹೇಗೆ ಅಪ್ಪನ ಪ್ರೀತಿಯಲ್ಲಿ ಅರಳಿದೆ ಎನ್ನುವುದನ್ನು ಮೇಘನಾ ಹೇಳಿಕೊಂಡರೆ, ತಾನು ಮಗಳನ್ನು ಹೇಗೆ ಬೆಳೆಸಿದೆ ಅನ್ನುವ ಬಗ್ಗೆ ಗುಲ್ಜಾರ್‌ ಮಾತಾಡಲಿದ್ದಾರೆ. ಈ ಪ್ರತಿಭಾವಂತ ತಂದೆ-ಮಗಳ ಮಾತುಕತೆ ಈ ಸಲದ ಜೈಪುರ ಹಬ್ಬದ ವಿಶೇಷಗಳಲ್ಲಿ ಒಂದು.

ಡಿಫರೆಂಟಾಗಿದೆ ಜೈಪುರ ಸಾಹಿತ್ಯಲೋಕದ ಕುಂಭಮೇಳ

ನರೇಂದ್ರ ಕೋಹ್ಲಿಯ ಕಥನಲೋಕ:

ಪುರಾಣಗಳನ್ನಿಟ್ಟುಕೊಂಡು ಕಾದಂಬರಿ ಬರೆಯುವುದು ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿದೆ. ಈ ಟ್ರೆಂಡನ್ನು ಹುಟ್ಟುಹಾಕಿದವರ ಪೈಕಿ ಮುಂಚೂಣಿಯಲ್ಲಿ ಇರುವವರು ನರೇಂದ್ರ ಕೋಹ್ಲಿ. 1975ರ ಹೊತ್ತಿಗೇ ಅವರು ಪುರಾಣ ಆಧಾರಿತ ಕೃತಿಗಳನ್ನು ರಚಿಸಿದವರು. ಅವರು ಬರೆದ ವಿವೇಕಾನಂದ ಕುರಿತ ಕೃತಿ, ಕೃಷ್ಣನ ಕುರಿತ ವಾಸುದೇವ ಓದುಗರ ಮನಸ್ಸಿನಲ್ಲಿ ನೆಲೆಯಾಗಿರುವಂಥ ರಚನೆಗಳು. ಮಹಾಭಾರತ ಮತ್ತು ರಾಮಾಯಣಗಳನ್ನು ಈಗ ಹೇಗೆ ಅರ್ಥಮಾಡಿಕೊಳ್ಳಬೇಕು ಅನ್ನುವ ಕುರಿತು ಅವರು ಮಾತಾಡಲಿದ್ದಾರೆ.

ಉಪಮನ್ಯು ಚಟರ್ಜಿಯ ಓದು:

ಇಂಗ್ಲಿಷ್‌ ಆಗಸ್ಟ್‌ ಕಾದಂಬರಿಯ ಮೂಲಕ ಐಎಎಸ್‌ಗಳ ಲೋಕವನ್ನು ಅನಾವರಣಗೊಳಿಸಿದ ಉಪಮನ್ಯು ಚಟರ್ಜಿ, ತಮ್ಮ ಹೊಸ ಕಾದಂಬರಿ ರಿವೆಂಜ್‌ ಆಫ್‌ ದಿ ನಾನ್‌ ವೆಜಿಟೇರಿಯನ್ಸ್‌ ಭಾಗಗಳನ್ನು ಓದಲಿದ್ದಾರೆ. ತಮ್ಮ ಕಾದಂಬರಿಯ ಗ್ರಹಿಕೆ, ದರ್ಶನ ಮತ್ತು ಹಾಸ್ಯಪ್ರಜ್ಞೆಯ ಬಗ್ಗೆ ಅವರು ವಿಸ್ತಾರವಾಗಿ ಮಾತನಾಡುತ್ತಾರೆ.

ರೀಮಾ ಹೂಜಾ ಚರಿತ್ರೆಯ ಪಾಠ:

ಮಹಾರಾಣ ಪ್ರತಾಪ್‌ ಸಿಂಹನ ಬದುಕನ್ನು ಕಟ್ಟಿಕೊಡುವ ಐತಿಹಾಸಿಕ ಕಾದಂಬರಿ ಬರೆದಿರುವ ರೀಮಾ ಹೂಜಾ, ಆ ಕಾದಂಬರಿಯ ಹುಟ್ಟಿನ ಕ್ಷಣಗಳನ್ನು ಚರ್ಚಿಸುತ್ತಾರೆ. ಅಕ್ಬರನ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ನಿರಾಕರಿಸಿದ ಪ್ರತಾಪ್‌ ಸಿಂಹ ಹೇಗೆ ತನ್ನ ಪುಟ್ಟಸೈನ್ಯವನ್ನು ಕಟ್ಟಿಕೊಂಡು ಹೋರಾಡಿದ ಎನ್ನುವುದನ್ನು ಹೇಳುತ್ತಲೇ ಆ ಕಾಲದ ರಜಪೂತರ ಬದುಕಿನ ಸೂಕ್ಷ್ಮ ವಿವರಗಳನ್ನೂ ಶ್ರೋತೃಗಳ ಮುಂದೆ ತೆರೆದಿಡಲಿದ್ದಾರೆ.

ಉಷಾ ಉತ್ತುಪ್‌ ಸಂಗೀತ ಸ್ಮರಣೆ:

ಹದಿನೈದು ಭಾರತೀಯ ಭಾಷೆಗಳಲ್ಲೂ ಎಂಟು ವಿದೇಶಿ ಭಾಷೆಗಳಲ್ಲೂ ಹಾಡಿರುವ ಉಷಾ ಉತ್ತುಪ್‌ ತನ್ನ ವಿಶಿಷ್ಟಧ್ವನಿಗೆ ಹೆಸರಾದವರು. ಸಂಗೀತ ತನ್ನನ್ನು ಹೇಗೆ ಪೊರೆಯಿತು, ತಾನು ಹೇಗೆ ಸಂಗೀತದ ಮೊರೆಹೋದೆ ಎನ್ನುವುದನ್ನು ಅವರು ಹಾಡು-ಮಾತಲ್ಲಿ ವಿವರಿಸಲಿದ್ದಾರೆ.

ಭಾರತೀಯರ ಭಾಷೆ ಯಾವುದು?

ಭಾರತದಲ್ಲಿ ಪ್ರಾದೇಶಿಕ ಭಾಷೆಗಳು ಹತ್ತು ಹಲವು. ಅವುಗಳಲ್ಲಿ ಅತ್ಯುತ್ತಮ ಕೃತಿಗಳು ಬರುತ್ತಿವೆ. ಆದರೆ ಹೊರಗಿನಿಂದ ನೋಡುವವರಿಗೆ ಅವೆಲ್ಲರೂ ಭಾರತೀಯ ಕೃತಿಗಳೇ. ಹಲವು ಸಂಸ್ತೃತಿ, ಹಲವು ಚರಿತ್ರೆ, ಹಲವು ಅಭಿವ್ಯಕ್ತಿಗಳಿರುವ ದೇಶವನ್ನು ಒಂದಾಗಿ ನೋಡುವುದು ಹೇಗೆ ಅನ್ನುವುದರ ಕುರಿತು ರಾನಾ ದಾಸ್‌ಗುಪ್ತಾ, ಹರೀಶ್‌ ತ್ರಿವೇದಿ, ರೋಹನ್‌ ಮೂರ್ತಿ, ಪ್ರಿಯಂವದಾ ನಟರಾಜನ್‌ ಚರ್ಚಿಸುತ್ತಾರೆ.

ಕವಿ ಮೇಲೆ ಕವಿ:

ಲೇಖಕರ ಕುರಿತೇ ಲೇಖಕರು ಬರೆದರ ಹೇಗಿರುತ್ತದೆ? ಸಾಹಿತ್ಯ ಜಗತ್ತನ್ನು ಗೇಲಿ ಮಾಡುತ್ತಾ ಬರೆದ ಲೆಸ್‌ ಕೃತಿಯ ಕರ್ತೃ, ಲೇಖಕರ ಜಗತ್ತಿನ ಕಾಲಿಗೆಳೆದರೆ ತಲೆಗೆ ಸಾಲದ, ತಲೆಗೆಳೆದರೆ ಕಾಲು ಮುಚ್ಚದ ಸಂಗತಿಗಳ ಬಗ್ಗೆ ಬರೆದ ಆಂಡ್ಯ್ರೂ ಜೊತೆ ಈಟಿಂಗ್‌ ವ್ಯಾಸ್ಪ್ಸ್ ಕಾದಂಬರಿಯ ಲೇಖಕಿ ಅನಿತಾ ನಾಯರ್‌ ಗಂಭೀರವಾಗಿಯೂ ತಮಾಷೆಯಾಗಿಯೂ ಮಾತಾಡಲಿದ್ದಾರೆ. ಲೇಖಕನ ಜೀವನದ ವಿಷಾದ ವಿನೋದಗಳೆರಡೂ ಈ ಗೋಷ್ಠಿಯ ಹೈಲೈಟುಗಳೆಂದು ವರ್ಣಿಸಲಾಗಿದೆ.

ಶಂಕರಾಚಾರ್ಯರ ಕುರಿತು ಸಂವಾದ:

ಶಂಕರಾಚಾರ್ಯರ ಜೀವನವನ್ನು ಆಧರಿಸಿದ ಕೃತಿ ರಚಿಸಿದ ಪವನ್‌ ವರ್ಮ ಜೊತೆ ಕವಿ ಮಕರಂದ್‌ ಪರಾಂಜಪೆ ಸಂವಾದ ನಡೆಸಲಿದ್ದಾರೆ. ಮೂವತ್ತೆರಡು ವರ್ಷಗಳ ಕಿರು ಅವಧಿಯಲ್ಲಿ ಧಾರ್ಮಿಕವಾಗಿ ಮಹತ್ವದ ಬದಲಾವಣೆಗಳನ್ನು ತಂದ ಶಂಕರರ ಬದುಕಿನ ಘಟನೆಗಳನ್ನು ನೆನಪಿಸಿಕೊಂಡು ಅದರ ಮಹತ್ವದ ಕುರಿತು ಚರ್ಚೆ ನಡೆಯಲಿದೆ.

ಪ್ರೇಮಕತೆಗಳಿಗೆ ಕೊನೆಯುಂಟೆ?:

ಕನ್ನಡದಲ್ಲಿ ಜನಪ್ರಿಯ ಕತೆಗಳನ್ನು ಕೇಳುವವರಿಲ್ಲ ಅಂತ ಹೇಳುವವರಿದ್ದಾರೆ. ಆದರೆ ಇಂಗ್ಲಿಷಿನಲ್ಲಿ ಹಾಗೇನಿಲ್ಲ ಅಂತ ತೋರಿಸಿಕೊಡಲು ಐ ಟೂ ಹ್ಯಾಡ್‌ ಎ ಲವ್‌ ಸ್ಟೋರಿ, ಕ್ಯಾನ್‌ ಲವ್‌ ಹ್ಯಾಪನ್‌ ಟ್ವೈಸ್‌, ಯುವರ್‌ ಡ್ರೀಮ್ಸ್‌ ಆರ್‌ ಮೈನ್‌ ನೌ- ಮುಂತಾದ ಕಾದಂಬರಿಗಳ ಜನಕ ರವೀಂದ್ರ ಸಿಂಗ್‌, ಎವೆರಿವನ್‌ ಹ್ಯಾಸ್‌ ಎ ಸ್ಟೋರಿ ಬರೆದ ಸವಿ ಶರ್ಮಾ ಮತ್ತು ತನ್ನ ಪ್ರೇಮಕತೆಗಳಿಂದ ಹೆಸರಾದ ಬುಲ್‌ಬುಲ್‌ ಶರ್ಮ ಒಟ್ಟಾಗಿ ಸೇರಿ ಪ್ರೇಮಕತೆಗಳ ಕುರಿತು ಮಾತಾಡುತ್ತಾರೆ.

ಐನೂರಕ್ಕೂ ಹೆಚ್ಚು ಸಾಹಿತಿಗಳು ಜೈಪುರದಲ್ಲಿ ಎದುರಾಗುತ್ತಾರೆ. ವಿದೇಶಗಳ ಸಾಹಿತಿಗಳು ಬರುತ್ತಾರೆ. ಅವರೆಲ್ಲಾ ತಮ್ಮ ತಮ್ಮ ಕತೆಗಳ ವ್ಯಥೆಗಳ ಬಗ್ಗೆ ಮಾತನಾಡುತ್ತಾರೆ. ಇಡೀ ಪಿಂಕ್ ಸಿಟಿಯೇ ಕಾವ್ಯ, ಸಂಗೀತ, ಕಾದಂಬರಿ ಗುಂಗಲ್ಲಿ ಕಳೆದು ಹೋಗುತ್ತದೆ. ಈ ಸಲ ನೀವೀಗ ಭೇಟಿಯಾಗಬಹುದಾದ ಕೆಲವು ಯಾರೆಂಬುದನ್ನು ಓದಿ. 

Follow Us:
Download App:
  • android
  • ios