ಗಾಂಧೀ ಸ್ಮರಣೆ, ಚಂಪಾ ದೃಷ್ಟಿಯಲ್ಲಿ ಮಹಾತ್ಮ
ಮಹಾತ್ಮ ಗಾಂಧಿಯ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ಪ್ರಸಕ್ತ ಕಾಲದಲ್ಲಿ ಸಾಹತಿ, ಕವಿ, ಚಂದ್ರಶೇಖರ್ ಪಾಟೀಲ್ ಅವರಿಗೆ ಗಾಂಧಿ ಕಂಡಿದ್ದು ಹೀಗೆ?
- ಚಂದ್ರಶೇಖರ ಪಾಟೀಲ್
ಖಾಲೀ ಗದ್ದಲದ ಈ ನಾಡಿನ
ಉದ್ದಗಲಕ್ಕೂ
ಈಗ ಶಾಂತಿ ನೆಲೆಸಿದೆ.
ನರನಾಡಿಯೆಲ್ಲ ನಿಂತೇ ಹೋದಂತಾಗಿ
ನಾವೆಲ್ಲ ಯೋಗಿಗಳಾಗಿದ್ದೇವೆ.
ಹಾದಿ ಮಾತು, ಬೀದಿ ಭಾಷಣಗಳ ಸದ್ದಡಗಿ
ಕಿವಿ ತುಂಬ ಹುಲುಸಾಗಿ ಕೂದಲು ಬೆಳೆಯುತ್ತಿದೆ.
ಅನಾಚಾರ ಅತ್ಯಾಚಾರ ಭ್ರಷ್ಟಾಚಾರಗಳ ಬದಲು
ಪತ್ರಿಕೆಗಳ ತುಂಬ ಶುದ್ಧ ಸಮಾಚಾರ ತುಂಬಿದೆ,
ಎಲ್ಲಾ ಸಾಮಾನುಗಳ ಬೆಲೆ ಇಳಿದೂ ಇಳಿದೂ
ಈಗ ಕೈಗೆ ಸಿಗದಂತಾಗಿವೆ.
ಬಿಡಾಡಿ ನಾಯಿಗಳ ನಿರ್ಬೀಜೀಕರಣವಾಗಿದೆ.
ಭಾರತದ ಜನಸಂಖ್ಯೆ ಇಳಿಯುತ್ತಿದೆ.
ನಾಳಿನ ನಾಗರಿಕರಾಗಿ ಇಂದಿನ ಮಕ್ಕಳೆಲ್ಲ
ಸರಿಯಾಗಿ ಸಾಲೆಗೆ ಹೋಗಿ
ಒಂದು ಎರಡು ಬಾಳೆಲೆ ಹರಡು
ಕಲಿಯುತ್ತಿದ್ದಾರೆ.
ಹಸಗಂಡು ಮನೆಗೆ ಬಂದು
ಮಣ್ಣಿನ ವಾಸನೆಯ ತಾಜಾ ಊಟ ಮಾಡುತ್ತಾರೆ.
ಜಾಣ ಬಾಬಾಗಳಿಗೆ ಹುಚ್ಚುಗೌಡರ ಬೆನ್ನು ಸಿಕ್ಕು
ಧರ್ಮೋದ್ಧಾರದ ಸವಾರಿ ಮುನ್ನಡೆದಿದೆ.
ಅಸ್ಪಶ್ಯ ದೇವರಿಗೆ ಹರಿಜನರ ದರ್ಶನವಾಗಿ
ಅವರ ಉದ್ಧಾರವೂ ಆಗುತ್ತಿದೆ.
ಸರಕಾರದ ಕೆಲಸ ದೇವರ ಕೆಲಸವಾಗಿ
ತುಪ್ಪದ ದೀಪ ಢಾಳಾಗಿ ಉರಿಯುತ್ತಿವೆ
ವಿಶೇಷ ಪ್ರಾರ್ಥನೆಗಳಿಂದಾಗಿ ದೇಶದ ತುಂಬ
ಜಿಟಿ ಜಿಟಿ ಮಳೆ ಹಿಡಿದಿದೆ.
ನಮ್ಮ ತ್ರಿವರ್ಣ ಧ್ವಜ ತೊಯ್ದು ತಪ್ಪಡಿಯಾಗಿ
ಅಶೋಕ ಚಕ್ರ ಸ್ಥಿರವಾಗಿದೆ.
ಹೆದ್ದಾರಿಯ ಮೇಲೆ ಕೆಟ್ಟು ನಿಂತ ಟ್ರಕ್ಕು ಕೂಡ
ನಾಡು ಮುನ್ನಡೆದಿದೆ-ಎಂಬ ಸಂದೇಶ ಹೊತ್ತಿದೆ.
ರೇಡಿಯೋದ ಗಿಳಿವಿಂಡು, ಅದೋ,
ಒಕ್ಕೊರಲಿಂದ ಅದೇ ಹಾಡು ಹಾಡುತ್ತಿದೆ.
ಧನ್ಯತೆಯ ಈ ಕ್ಷಣದಿ, ಓ ಮುದ್ದುರಂಗ,
ಕಿವಿ ಮುಚ್ಚಿ, ಕಣ್ಣು ಮುಚ್ಚಿ,
ನೆನೆ ಗಾಂಧಿಯನು.
(ಯಾವ ಗಾಂಧಿ? ಅಂತ ತಿಳಿಯದೇ
ಪೆದ್ದುಲಿಂಗ?)
ಬಾಯಿ ಮುಚ್ಚಿ,
ನೆನೆ ನೆನೆ ಗಾಂಧಿಯನು.