Asianet Suvarna News Asianet Suvarna News

2020ರಲ್ಲಿ ಓದುಗರು ಮೆಚ್ಚಿದ 30 ಪುಸ್ತಕಗಳು

ಈ ವರ್ಷ ಹೆಚ್ಚು ಮೆಚ್ಚುಗೆ ಗಳಿಸಿದ ಪುಸ್ತಕ ಯಾವುದು ಎಂಬ ಪ್ರಶ್ನೆಯನ್ನು ಕರ್ನಾಟಕ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳ ಬಳಿ ಕೇಳಿದಾಗ ಅವರು ನೀಡಿದ ಉತ್ತರ ಹೀಗಿದೆ

Here is the list of 30 books that readers liked in 2020 dpl
Author
Bangalore, First Published Dec 20, 2020, 5:38 PM IST

ಗೈರ ಸಮಜೂತಿ

ರಾಘವೇಂದ್ರ ಪಾಟೀಲ್‌ ಅವರ ಕಾದಂಬರಿ. ನಾಲ್ಕುನೂರು ಪುಟಗಳ ಈ ಕೃತಿಯಲ್ಲಿ ಮೂರು ತಲೆಮಾರುಗಳ ಕಥನವಿದೆ. ಹಲವು ಪಾತ್ರಗಳು, ಸಾವು ನೋವು, ಭಾವದ ಹರಿವು ಓದುಗನನ್ನು ತಲ್ಲೀನಗೊಳಿಸುತ್ತದೆ. ಮನೋಹರ ಗ್ರಂಥಮಾಲೆ ಇದನ್ನು ಪ್ರಕಟಿಸಿದೆ.

ಗಲ್ಲುಗಂಬದ ಆತಂಕದಲ್ಲಿ

ಡಿವಿ ಗುರುಪ್ರಸಾದ್‌ ಅವರ ಈ ಕೃತಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಖೈದಿಗಳ ಕಥೆಗಳಿವೆ. ಗಲ್ಲುಗಂಬ ಏರಬೇಕಾದ ಖೈದಿಗಳ ಮನಸ್ಸಿನ ಯೋಚನೆಗಳು, ಅವನೊಳಗಿನ ಪಶ್ಚಾತ್ತಾಪ ಇತ್ಯಾದಿಗಳ ಕುರಿತ ಚಿತ್ರಣವಿದೆ. ಮನೋಹರ ಗ್ರಂಥಮಾಲೆ ಪ್ರಕಟಣೆ.

ತೇಜೋ ತುಂಗಭದ್ರ

ವಸುಧೇಂದ್ರ ಅವರ ಐತಿಹಾಸಿಕ ಕಥಾ ವಸ್ತುವನ್ನು ಒಳಗೊಂಡಿರುವ ಕಾದಂಬರಿ. ಸ್ವತಂತ್ರ ಪೂರ್ವ ಭಾರತದ ಸನ್ನಿವೇಶ, ವ್ಯಾಪಾರ, ವಹಿವಾಟುಗಳ ಸುತ್ತಲೂ ಕೇಂದ್ರೀಕೃತವಾದ ವರ್ಷದ ಬಹು ಚರ್ಚಿತ ಕೃತಿ ಇದು. ಛಂದ ಪ್ರಕಾಶನದ ಪುಸ್ತಕ.

ಫಾಲೋಯಿಂಗ್‌ ಫಿಶ್‌

ಸಮಂತ್‌ ಸುಬ್ರಮಣಿಯನ್‌ ಅವರ ಕೃತಿಯನ್ನು ಕನ್ನಡಕ್ಕೆ ಸಹನಾ ಹೆಗಡೆ ಅನುವಾದ ಮಾಡಿದ್ದಾರೆ. ಛಂದ ಪ್ರಕಾಶನದ ಪುಸ್ತಕ.

ನೆನಪಿನ ಹಕ್ಕಿಯ ಹಾರಲು ಬಿಟ್ಟು

ಮೂಡ್ನಾಕೂಡು ಚಿನ್ನಸ್ವಾಮಿ ಆತ್ಮಕಥನ. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಕೃತಿಯಲ್ಲಿ ಅವಮಾನ, ಶೋಷಣೆ, ಜಾತೀಯತೆ, ಮೇಲ್‌ಸ್ತರದ ಯಾಜಮಾನ್ಯದ ಜೊತೆಗೆ ಬೆಳೆದ ಲೇಖಕರ ಬದುಕಿನ ಜೊತೆಗೆ ಆ ಕಾಲಘಟ್ಟದ ಸಾಮಾಜಿಕ ಸ್ಥಿತಿಗತಿಯ ಚಿತ್ರಣವೂ ಇದೆ.

ಕಾಲಯಾತ್ರೆ

ಕೃಷ್ಣಮೂರ್ತಿ ಹನೂರರ ಕಾದಂಬರಿ. ಬದುಕು ಕಟ್ಟಿಕೊಳ್ಳಬೇಕು ಎಂದು ಹಳ್ಳಿಯಿಂದ ನಗರಕ್ಕೆ ಬಂದ ವಲಸಿಗರನ್ನು ಆಧುನಿಕತೆ ಹೇಗೆ ಅಪ್ಪಚ್ಚಿ ಮಾಡುತ್ತದೆ ಎಂಬುದನ್ನು ಕಟ್ಟಿಕೊಡುವ ಕೃತಿ. ಅಂಕಿತ ಪುಸ್ತಕದ ಪ್ರಕಟಣೆ.

ನನ್ನೆದೆಯ ಹಾಡು ಹಕ್ಕಿ

ಇದು ನೇಮಿಚಂದ್ರರ ಬದುಕು ಬದಲಿಸಬಹುದು ಮಾಲಿಕೆಯ 4ನೇ ಪುಸ್ತಕ. ನೊಂದ ಬದುಕಿಗೆ ಸ್ಫೂರ್ತಿ ತುಂಬುವ ಬರಹಗಳು ಈ ಕೃತಿಯಲ್ಲಿವೆ. ಕ್ಯಾನ್ಸರ್‌, ಮಾರಣಾಂತಿಕ ಆರೋಗ್ಯ ಸಮಸ್ಯೆ ಜೊತೆಗೆ ಹೋರಾಡಿ ಗೆದ್ದವರ ಕಥೆಗಳ ಜೊತೆಗೆ ಬೇರೆ ವಿಷಯಗಳ ಕುರಿತೂ ಬರೆದಿದ್ದಾರೆ. ನವ ಕರ್ನಾಟಕ ಪ್ರಕಾಶನ ಇದನ್ನು ಪ್ರಕಟಿಸಿದೆ.

ಕೊರೋನ ಹೆದರದಿರೋಣ

ಇದು ಕೊರೋನಾ ಸಂದರ್ಭದಲ್ಲಿ ಬಂದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹಾಗೂ ಸರಸ್ವತಿ ಕಕ್ಕಿಲ್ಲಾಯ ಅವರ ಕೃತಿ. ಕೊರೋನಾದ ಬಗೆಗೆ ತಿಳುವಳಿಕೆಯನ್ನು ಹೆಚ್ಚಿಸಿ, ಅನಗತ್ಯ ಭೀತಿ ಹೋಗಲಾಗಿಡಿಸುವ ಬರಹಗಳು ಇದರಲ್ಲಿವೆ. ಇದು ನವ ಕರ್ನಾಟಕ ಪ್ರಕಾಶನದ ಕೊಡುಗೆ.

ವೈಷ್ಣವದಿಂದ ಶ್ರೀ ವೈಷ್ಣವಕ್ಕೆ

ಷ. ಶೆಟ್ಟರ್‌ ಅವರ ಸಂಶೋಧನಾ ಕೃತಿ. ಅಭಿನವ ಇದರ ಪ್ರಕಾಶಕರು.

ಕೆಂಪು ಮುಡಿಯ ಹೆಣ್ಣು

ನೊಬೆಲ್‌ ಪ್ರಶಸ್ತಿ ಪುರಸ್ಕೃತ ಲೇಖಕ ಒರ್ಹಾನ್‌ ಪಮುಕ್‌ ಅವರ ಕೃತಿಯನ್ನು ಓ.ಎಲ್‌. ನಾಗಭೂಷಣ ಸ್ವಾಮಿ ಕನ್ನಡಕ್ಕೆ ತಂದಿದ್ದಾರೆ. ಅಭಿನವ ಪ್ರಕಟಿಸಿದೆ.

ಐ ವಿಟ್ನೆಸ್‌

ದಾಖಲೆಯ ಮಾರಾಟ ಕಂಡ ಈ ಕೃತಿಯ ಕರ್ತೃ ನಿವೃತ್ತ ಎಸ್‌ಪಿ ಎಸ್‌ಕೆ ಉಮೇಶ್‌. ಅವರ ವೃತ್ತಿ ಬದುಕಿನ ರೋಚಕ ಅನುಭವಗಳನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ಮೊದಲ ಕೃತಿಯಲ್ಲೇ ಸಿಕ್ಸರ್‌ ಬಾರಿಸಿದ ಕೀರ್ತಿ ಉಮೇಶ್‌ ಅವರದು. ಆ್ಯಸಿಡ್‌ ಪಾತಕಿಯ ಕಥೆಯನ್ನು ಅವರಿಲ್ಲಿ ತೆರೆದಿಟ್ಟಿದ್ದಾರೆ. ಸಪ್ನ ಈ ಪುಸ್ತಕ ಪ್ರಕಟಿಸಿದೆ.

ರಾಯಕೊಂಡ

ಕರಣಂ ಪವನ್‌ ಪ್ರಸಾದ್‌ ಬರೆದ ಕಾದಂಬರಿ. ಕಾನ್‌ಕ್ಲೇವ್‌ ಮೀಡಿಯಾ ಪ್ರಕಟಣೆ. ಇದು ರಾಯಕೊಂಡ ಬ್ರಾಹ್ಮಣ ಕುಟುಂಬದ ತಲೆಮಾರುಗಳ ಕಥೆ. ವಂಶಾವಳಿಯ ನಕ್ಷೆಯ ಜೊತೆಗೆ ತೆಲುಗು ಸಂಭಾಷಣೆಯೊಂದಿಗೆ ಹೊಸತನದಲ್ಲಿ ಈ ಕಾದಂಬರಿ ಇದೆ. ರಾಜಕೀಯ, ಸಂಬಂಧ, ಸಾಮಾಜಿಕತೆ ಎಲ್ಲವೂ ಈ ಕಾದಂಬರಿಯಲ್ಲಿದೆ.

ಊರ ಬೀದಿಯ ಸುತ್ತು

ಎಂ.ಆರ್‌. ಕಮಲ ಅವರ ಪ್ರಬಂಧಗಳ ಸಂಕಲನ. ಕಥನ ಪ್ರಕಾಶನದ ಪುಸ್ತಕ.

ಹಂಸ ಏಕಾಂಗಿ

ಇದು ಕಬೀರರ ಹಾಡುಗಳು, ವಚನಗಳು, ಕಾವ್ಯವನ್ನು ಒಳಗೊಂಡ ಪ್ರವೇಶಿಕೆ ರೀತಿಯ ಪುಸ್ತಕ. ಬರೆದವರು ಕೇಶವ ಮಳಗಿ. ಪ್ರಕಟಿಸಿದ್ದು ಕಥನ ಪ್ರಕಾಶನ.

ಆರನೇ ಹೆಂಡತಿಯ ಆತ್ಮಕತೆ

ತೆಹಮಿನ ದುರಾನಿ ಎನ್ನುವ ಪಾಕಿಸ್ತಾನಿ ಲೇಖಕಿ ಬರೆದ ಆತ್ಮ ಕಥನ (ಮೈ ಫä್ಯಡಲ್‌ ಲಾರ್ಡ್‌) ಇದನ್ನು ಆರ್‌.ಕೆ. ಹುಡಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಸೃಷ್ಟಿಪ್ರಕಾಶನ ಪ್ರಕಟಿಸಿದೆ.

ಸಫಾ

ಸೊಮಾಲಿಯಾ ದೇಶದ ಕತೆ. ಇದು ಯೋನಿ ಛೇದದ ಕುರಿತು ರಚಿತವಾಗಿರುವ ಪುಸ್ತಕ. ವಾರಿಸ್‌ ಡೈರಿ ಮೂಲ ಲೇಖಕಕರಾಗಿದ್ದು ಕನ್ನಡಕ್ಕೆ ಪ್ರಸಾದ್‌ ನಾಯಕ್‌ ಅನುವಾದ ಮಾಡಿದ್ದಾರೆ. ಸೃಷ್ಟಿಪ್ರಕಾಶನ ಪ್ರಕಟಿಸಿದೆ.

ಮೂರ್ಖನ ಮಾತುಗಳು

ಅಧ್ಯಾತ್ಮ, ವ್ಯಕ್ತಿತ್ವಕ್ಕೆ ಸಂಬಂಧಿಸಿದ ಅಹೋರಾತ್ರ ಅವರ ಕೃತಿ. 2016ರಲ್ಲಿಯೇ ಪ್ರಕಟವಾಗಿದ್ದರೂ ಲಾಕ್‌ಡೌನ್‌ ಸಮಯದಲ್ಲಿ 3 ಮುದ್ರಣ ಕಂಡ ಕೃತಿ. ಸಾವಣ್ಣ ಪ್ರಕಾಶನ ಇದನ್ನು ಪ್ರಕಟಿಸಿದೆ.

ಲಿಪಿ ಪತ್ರಗಳು

ಸಾವಣ್ಣ ಪ್ರಕಾಶನ ಪ್ರಕಟಿಸಿರುವ, ಲೇಖಕಿ ಮೇಘನಾ ಸುಧೀಂದ್ರ ಅವರು ಬರೆದಿರುವ ಕೃತಿ ಇದು. ಕಡಿಮೆ ಅವಧಿಯಲ್ಲಿಯೇ ಉತ್ತಮ ಪ್ರತಿಕ್ರಿಯೆ ಗಳಿಸಿದ ಕೃತಿ.

ಕಾಗೆ ಮುಟ್ಟಿದ ನೀರು

ಪುರುಷೋತ್ತಮ ಬಿಳಿಮಲೆ ಅವರ ಆತ್ಮಕಥನ. ಅಹರ್ನಿಶಿ ಪ್ರಕಟಣೆ. ಆಗಸ್ಟ್‌ನಲ್ಲಿ ಪ್ರಕಟವಾಗಿ ಆನ್‌ಲೈನ್‌ನಲ್ಲಿಯೇ ಅತಿ ಹೆಚ್ಚು ಮಾರಾಟವಾಗಿ ಮೂರು ಮುದ್ರಣಗಳನ್ನು ಕಂಡಿರುವ ಕೃತಿ.

ಕುಮಾರವ್ಯಾಸ ಭಾರತ ಸಂಗ್ರಹ ‘ಸರಸ ಸೌಗಂಧಿಕ ಪರಿಮಳ’

ಕೃಷ್ಣಮೂರ್ತಿ ಹನೂರು ಅವರ ಈಗಷ್ಟೇ ಪ್ರಕಟವಾಗಿರುವ ಕೃತಿ. ಅಹರ್ನಿಶಿ ಪ್ರಕಾಶನದ ಈ ಕೃತಿ ಓದುಗರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದೆ.

ಕಾಡುತಾವ ನೆನಪು

ಡಾ. ಎಚ್‌ ಗಿರಿಜಮ್ಮನವರ ಆತ್ಮಕತೆ. ಬೆಂಗಳೂರಿನ ಗೀತಾಂಜಲಿ ಪ್ರಕಾಶನದ ಕೃತಿ.

ಜಾತಿ ಬಂತು ಹೇಗೆ?

ಜಿ ಎನ್‌ ನಾಗರಾಜ್‌ ಬರೆದ ಕರ್ನಾಟಕದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಉಗಮದ ಕುರಿತ ಪುಸ್ತಕ. ಬಹುರೂಪಿಯ ಪ್ರಕಟಣೆ

ನೀಲ ಆಕಾಶ

ನಾ. ಮೊಗಸಾಲೆಯವರ ಈ ತನಕದ ಕವಿತೆಗಳ ಮಹಾಸಂಪುಟ.ಬೆಂಗಳೂರಿನ ಸ್ನೇಹಾ ಎಂಟರ್‌ಪ್ರೈಸಸ್‌ ಪ್ರಕಟಣೆ.

ಸ್ತ್ರೀವಾದ; ಅಂಚಿನಿಂದ ಕೇಂದ್ರದೆಡೆಗೆ

ಎಚ್‌ಎಸ್‌ ಶ್ರೀಮತಿ ಅನುವಾದಿಸಿದ ಬೆಲ್‌ ಹುಕ್ಸ್‌ ಪುಸ್ತಕ. ಸಂಗಾತ ಪುಸ್ತಕ ಇದನ್ನು ಹೊರತಂದಿದೆ

Follow Us:
Download App:
  • android
  • ios