Asianet Suvarna News Asianet Suvarna News

ಹಾಲುಗಲ್ಲದ ಚಿಣ್ಣರಿಗೆ ಕನ್ನಡ ಓದು..! ವನಿತಾ ಅಣ್ಣಯ್ಯ ಅವರ ಐಡಿಯಾ ಸೂಪರ್

ಹಾಲುಗಲ್ಲದ ಚಿಣ್ಣರಿಗೆ ಕನ್ನಡ ಓದು | ವನಿತಾ ಅಣ್ಣಯ್ಯ ಯಾಜಿ ರೂಪಿಸಿದ ದಪ್ಪ ರಟ್ಟಿನ ಚಿತ್ರ ಪುಸ್ತಕ

Handmade book with attractive drawings to learn kannada dpl
Author
Bangalore, First Published Mar 14, 2021, 3:34 PM IST

ತನ್ನ ಮಗುವಿಗೆ ಮಾತೃಭಾಷೆ ಕಲಿಸಬೇಕೆಂಬ ತುಡಿತ ಒಬ್ಬ ಕ್ರಿಯೇಟಿವ್ ಟೀಚರ್‌ಅನ್ನು ಕೃತಿಕಾರ್ತಿಯನ್ನಾಗಿಸಿದೆ. ಈಕೆ ರವೀಂದ್ರನಾಥ ಠಾಗೋರ್ ಅವರ ಶಾಂತಿನಿಕೇತನದಲ್ಲಿ ಚಿತ್ರಕಲೆ ಕಲಿತವರು.

ನೀನಾಸಂಗೆ ಹೋಗಿ ರಂಗ ತರಬೇತಿ ಪಡೆದವರು. ದೆಹಲಿ, ಅಹಮದಾಬಾದ್, ಕೊಲ್ಕತ್ತಾ, ಬೆಂಗಳೂರು ಮೊದಲಾದೆಡೆ ಚಿತ್ರಕಲಾ ಪ್ರದರ್ಶನ ನಡೆಸಿ ಶಹಬ್ಬಾಸ್ ‌ಗಿರಿ ಪಡೆದಿದ್ದಾರೆ. ಕೆನಡಾದ ಎಲಿಜಬೆತ್ ಫೌಂಡೇಶನ್, ದೆಹಲಿಯ ನೀವ್ ಆರ್ಟ್ ಫೌಂಡೇಶನ್‌ನ ಸ್ಕಾಲರ್‌ಶಿಪ್ ಪಡೆದ ಪ್ರತಿಭಾನ್ವಿತೆ.

ಹಲವು ಶಾಲೆ, ಸಂಸ್ಥೆಗಳೊಂದಿಗೆ ಸೇರಿ ಚಿತ್ರಕಲೆ ಕುರಿತ ಕೆಲಸ ಮಾಡುತ್ತಿದ್ದಾರೆ. ಇಂಥಾ ಪ್ರತಿಭಾನ್ವಿತೆ ಈಗ ಸುದ್ದಿಯಲ್ಲಿರುವುದು ಎಳೆಯರಿಗಾಗಿ ರೂಪಿಸಿರುವ ‘ಮೊದಲ ಓದು’ ಪುಸ್ತಕದ ಮೂಲಕ.

ವನಿತಾ ಅಣ್ಣಯ್ಯಯಾಜಿ ಚಿಕ್ಕ ಮಕ್ಕಳಿಗಾಗಿ ಹ್ಯಾಂಡ್‌ಮೇಡ್ ಚಿತ್ರಗಳಿರುವ ಚಂದದ ದಪ್ಪ ರಟ್ಟಿನ ಪುಸ್ತಕ ರೂಪಿಸಿದ್ದಾರೆ. ಇದು ಮಕ್ಕಳಿಗೆ ಮಾತೃಭಾಷಾ ಕಲಿಕೆಯ ಪ್ರವೇಶಿಕೆಯಂತಿದೆ. ಒಂದೂವರೆ ವರ್ಷದ ಎಳೆಯ ಕೂಸಿಂದ ಏಳು ವರ್ಷದವರೆಗಿನ ಮಕ್ಕಳಿಗೆ ಸಖತ್ ಇಷ್ಟವಾಗುವಂಥಾ ಪುಸ್ತಕ. ಈಗಾಗಲೇ ಈ ಸರಣಿಯಲ್ಲಿ ಎರಡು ಪುಸ್ತಕಗಳು ಹೊರಬಂದಿವೆ.  ‘ಎಲ್ಲರ ಪುಸ್ತಕ’ ಪ್ರಕಾಶನದ ಇವುಗಳನ್ನು ಪ್ರಕಟಿಸಿದೆ. ಮುಂದೆ ಕತೆಗಳ ಪುಸ್ತಕವನ್ನು ಇದೇ ವಿನ್ಯಾಸದಲ್ಲಿ ಹೊರತರುವ ಯೋಚನೆ ವನಿತಾ ಅವರಿಗಿದೆ.

ನನ್ನ ಭಾಷೆಯ ಮೊದಲ ಓದು:

ನನ್ನ ಮೊದಲ ಓದು ಶುರುವಾದದ್ದು ನನ್ನ ಭಾಷೆಯಲ್ಲಿ. ಅಂದರೆ ಮಾತೃ ಭಾಷೆಯಲ್ಲಿ. ಮುಂದಿನ ಓದೂ ಸರ್ಕಾರಿ ಶಾಲೆಯಲ್ಲಿ ಕನ್ನಡದಲ್ಲೇ. ಆದರೆ ನನ್ನ ಮಗುವಿನ ಸ್ಥಿತಿ ಹೀಗಲ್ಲ’ ಎನ್ನುವ ವನಿತಾಗೆ ತನ್ನ ಮಗುವಿಗೂ ತನ್ನಂತೆ ಮಾತೃ ಭಾಷೆಯಲ್ಲೇ ಮೊದಲ ಓದು ಸಿಗಬೇಕು ಎಂಬ ಹಂಬಲ.

‘ಈ ಕಾಲದ ಮಕ್ಕಳ ಮೊದಲ ಓದು ಇಂಗ್ಲೀಷ್‌ನಲ್ಲೇ ಆಗುತ್ತದೆ. ಆದರೆ ನನಗೆ ನನ್ನ ಮಗುವಿಗೆ ಅದರ ಭಾಷೆಯಲ್ಲೇ ಮೊದಲ ಓದು ಸಿಗಬೇಕು ಎಂಬ ಆಸೆ. ಹೀಗಾಗಿ ನಾನು ಮಗುವಿಗೆ ಒಂದೂವರೆ ವರ್ಷ ಇದ್ದಾಗ ಚಿತ್ರ ಪುಸ್ತಕ ಮಾಡಿ ಅದರ ಓದನ್ನು ಪ್ರೋತ್ಸಾಹಿಸುತ್ತಿದ್ದೆ. ಇಂಗ್ಲೀಷ್  ಭಾಷೆಯಲ್ಲಿ ಹ್ಯಾಂಡ್ ಮೇಡ್ ಆರ್ಟ್ ಇರುವ ಚಿತ್ರಪುಸ್ತಕಗಳು ಸಾಕಷ್ಟು ಸಿಗುತ್ತವೆ. ಆದರೆ ಕನ್ನಡದಲ್ಲಿ ಸಿಗೋದಿಲ್ಲ. ಈ ಕಾರಣಕ್ಕೆ ನಾನೇ ಚಿತ್ರ ಪುಸ್ತಕ ಮಾಡಲಾರಂಭಿಸಿದೆ. ಅದು ಮಗುವಿಗೂ ಆಕರ್ಷಕವಾಗಿ ಕಂಡು ಅದರ ಮಾತೃಭಾಷೆಯ ಓದು ಸರಾಗವಾಯ್ತು. ಈಗ ಮಗಳಿಗೆ ಐದು ವರ್ಷ. ಅವಳ ಮೊದಲ ಓದಿನ ಪುಸ್ತಕಗಳನ್ನು ಈಗಲೂ ಬಹಳ ಇಷ್ಟ ಪಡುತ್ತಾಳೆ’ ಎನ್ನುತ್ತಾರೆ ವನಿತಾ.

ಕಾಶ್ಮೀರದಲ್ಲಿ ಸಿಲುಕಿದ ಕನ್ನಡಿಗರಿಗೆ ಸ್ಥಳೀಯ ಪೊಲೀಸರ ಅಭಯ...

ಇವರು ತಮ್ಮ ಮಗುವಿಗಾಗಿ ಈ ಥರ ಬಹಳಷ್ಟು ಚಿತ್ರ ಪುಸ್ತಕ ಮಾಡಿದ್ದಾರೆ. ಆದರೆ ಇದೀಗ ‘ಮೊದಲ ಓದು’ ಸರಣಿಯಲ್ಲಿ ಎರಡು ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕದಲ್ಲಿ ಒಂದೊಂದು ವಸ್ತುವಿನ ಐಡೆಂಟಿಟಿ, ಅದರ ಜೊತೆಗೆ ನಮ್ಮ ಸಂಬಂಧವನ್ನು, ಚಿತ್ರ ಮತ್ತು ಸರಳವಾದ ಒಂದೊಂದು ವಾಕ್ಯದ ಮೂಲಕ ಹೇಳಲಾಗಿದೆ. ‘ಅಮ್ಮನ ಜಡೆ’ ಹಾಗೂ ‘ಪದಾರ್ಥದ ರುಚಿ’ ಅನ್ನುವ ಎರಡು ಮೊದಲ ಓದಿನ ಪುಸ್ತಕಗಳು ಮಗುವಿನ ಮೊದ ಮೊದಲ ಹೆಜ್ಜೆಯಂತೆ ಬಾಲ್ಯದ ನೆನಪನ್ನು ಸ್ಮರಣೀಯವಾಗಿಸುವಂತಿವೆ.

‘ಮಕ್ಕಳಿಗೆ ಪುಸ್ತಕ ಆಪ್ತವಾಗಬೇಕು. ಅದು ನಮ್ಮ ಜೀವನದ ಭಾಗ ಅನ್ನುವುದನ್ನು ಮಕ್ಕಳು ಅವರ ಮೊದಲ ಓದಿನಿಂದಲೇ ಅನುಭವಿಸಬೇಕು’ ಎಂದು ಬಯಸುವ ವನಿತಾ ಅವರ ಪುಸ್ತಕಕ್ಕೆ ಈಗ ಭರ್ಜರಿ ಡಿಮ್ಯಾಂಡ್ ಇದೆ. ಈ ಬಗೆಯಲ್ಲಿ ಇನ್ನಷ್ಟು ಪುಸ್ತಕ ತರುವ ಸಲಹೆಗಳೂ ಪೋಷಕರಿಂದ ಬರುತ್ತಿವೆ. ಪುಸ್ತಕ ಬೇಕಿದ್ದರೆ ಸಂಪರ್ಕ ಸಂಖ್ಯೆ: 9141184535

Follow Us:
Download App:
  • android
  • ios