ರಂಗದ ಮೇಲೆ ಬರುತ್ತಿದೆ ’ರಾಕ್ಷಸ ತಂಗಡಿ’
ಗಿರೀಶ್ ಕಾರ್ನಾಡರು ‘ರಾಕ್ಷಸ ತಂಗಡಿ’ ಎನ್ನುವ ನಾಟಕ ಬರೆದಿದ್ದಾರೆ. ಇದು ವಿಜಯನಗರ ಸಾಮ್ರಾಜ್ಯದ ಪತನವಾದ ಬಗೆಯನ್ನು ಸವಿವರವಾಗಿ ಕಟ್ಟಿಕೊಡುವ ಐತಿಹಾಸಿ ನಾಟಕ. ನಾಟಕ ಓದುಗರ ಕೈ ಸೇರಿ ಹೆಚ್ಚು ಸಮಯವಾಗಿಲ್ಲ. ಅಷ್ಟರಲ್ಲೇ ಈಗ ಮೊಟ್ಟ ಮೊದಲ ಬಾರಿಗೆ ರಂಗದ ಮೇಲೆ ಬರುತ್ತಿದೆ ರಾಕ್ಷಸ ತಂಗಡಿ.
ಬೆಂಗಳೂರು (ಡಿ.22): ನಾನು ಈ ಮೊದಲು ಕೆಲವಾರು ಮಕ್ಕಳ ನಾಟಕ ಬರೆದು ನಿರ್ದೇಶನ ಮಾಡಿದ್ದೆ. ಕೆಲ ತಿಂಗಳ ಹಿಂದೆ ಬಂದ ಗಿರೀಶ್ ಕಾರ್ನಾಡ ‘ರಾಕ್ಷಸ ತಂಗಡಿ’ ನಾಟಕ ಕೊಂಡುಕೊಂಡು ಓದಲು ಶುರು ಮಾಡಿ, ಮುಗಿಸುವ ವೇಳೆ ನಾನೇ ಏಕೆ ಈ ನಾಟಕ ನಿರ್ದೇಶನ ಮಾಡಿ ರಂಗದ ಮೇಲೆತರಬಾರದು ಎಂದುಕೊಂಡೆ. ಅದಕ್ಕೆ ತಕ್ಕಂತೆ ನಮ್ಮ ಸೈಡ್‌ವಿಂಗ್ ತಂಡವೂ ನೆರವಾಯಿತು.
ಸೀದಾ ಕಾರ್ನಾಡರ ಬಳಿಗೆ ಹೋಗಿ ಒಪ್ಪಿಗೆ ಪಡೆದು ಅಭ್ಯಾಸ ಶುರು ಮಾಡಿಯೇ ಬಿಟ್ಟೆವು. ಮೊದಲೇ ಐತಿಹಾಸಿಕ ನಾಟಕ. ಅದರಲ್ಲೂ ವಿಜಯನಗರಕ್ಕೆ ಸಂಬಂಧಿಸಿದ್ದು ತುಂಬಾ ಕಠಿಣ ಎನ್ನಿಸಬಹುದು, ಸವಾಲಾಗಬಹುದು ಎನ್ನುವ ಪರಿಜ್ಞಾನ ನನಗೆ ಇದ್ದೇ ಇತ್ತು. ಆದರೂ ಟೀಂ ಎಲ್ಲಾ ಒಟ್ಟಾಗಿ ನಿಂತೆವು.
ಎರಡು ತಿಂಗಳಿನಿಂದ ಸತತವಾಗಿ ಅಭ್ಯಾಸ ಮಾಡಿ ಈಗ ಡಿ. 22 ರಂದು ಹನುಮಂತ ನಗರದ ಕೆ.ಎಚ್. ಕಲಾಸೌಧದಲ್ಲಿ ಮೊಟ್ಟ ಮೊದಲ ಬಾರಿಗೆ ಕಾರ್ನಾಡರ ‘ರಾಕ್ಷಸ ತಂಗಡಿ’ಯನ್ನು ನೋಡುಗರಿಗೆ ತೆರೆದಿಡುತ್ತಿದ್ದೇವೆ.
ವಿಜಯನಗರ 300 ವರ್ಷ ಆಳಿದ ದೊಡ್ಡ ಸಾಮ್ರಾಜ್ಯ. ಅದು ಅರ್ಧ ದಿನದ ಯುದ್ಧದಲ್ಲಿ ಹೇಗೆ ಪತನವಾಯಿತು, ಅದಕ್ಕೆ ಕಾರಣವಾದ ರಾಜಕೀಯ ಒಳ ಪಿತೂರಿಗಳೇನು ಎಂಬುದನ್ನು ಕಾರ್ನಾಡರು ತೋರಿಸಿದ್ದಾರೆ. ಇದನ್ನು ನಾವು ಪ್ರಸ್ತುತದ ರಾಜಕೀಯಕ್ಕೂ ಸಂಬಂಧ ಕಲ್ಪಿಸುವ ಪ್ರಯತ್ನ ಮಾಡಿದ್ದೇವೆ. 16 ರಿಂದ 18 ಪಾತ್ರಧಾರಿಗಳನ್ನು ಇಟ್ಟುಕೊಂಡು ಬೆಳಕು, ಪ್ರಸಾದನದಲ್ಲಿ ಸಾಕಷ್ಟು ಹೊಸತನವನ್ನು ಇಟ್ಟುಕೊಂಡು ಬರಲು ಸಿದ್ಧವಾಗಿದ್ದೇವೆ.
ಮೊದ ಮೊದಲು ನಾಟಕ ಆಯ್ಕೆ ಮಾಡಿಕೊಳ್ಳುವಾಗ ಭಯ ಇತ್ತು. ಅಭ್ಯಾಸ ಮಾಡುತ್ತಾ ಮಾಡುತ್ತಾ ಆ ಭಯ ಕಡಿಮೆಯಾಗಿದೆ. ಆದರೂ ಮೊದಲ ಬಾರಿಗೆ ಈ ರೀತಿಯ ಸಾಹಸ ಮಾಡಿದ್ದೇವೆ ಎನ್ನುವ ಸಂತೋಷ ಇಡೀ ತಂಡಕ್ಕಿದೆ. ಅದರ ಮುಂದೆ ಭಯ ಹೆಚ್ಚು ಸಮಯ ಉಳಿಯಲಾರದು.
ಸ್ಥಳ: ಕೆ.ಎಚ್. ಕಲಾಸೌಧ, ಹನುಮಂತ ನಗರ,
ಬೆಂಗಳೂರು
ಸಮಯ: ಡಿ. 22, ಸಂಜೆ 7.30