Asianet Suvarna News Asianet Suvarna News

ಬುದ್ಧನ ಕಾರುಣ್ಯ, ಬಸವಣ್ಣನ ಕಾಳಜಿಯೇ ಮೈವೆತ್ತ ರೂಪ!

ಬೆಂಗಳೂರು ತುಮಕೂರುಗಳ ನಡುವೆ ಸದಾ ಸಾವಿರ ಗಾಲಿಗಳು ಉರುಳುವ ಹೆದ್ದಾರಿಯಲ್ಲಿ ಕ್ಯಾತ್ಸಂದ್ರದ ಬಳಿ ಬಲಕ್ಕೆ ಹೊರಳಿದರೆ ಅನತಿ ದೂರದಲ್ಲಿಯೇ ನಾವು ಋಷ್ಯಾಶ್ರಮ ಸದೃಶವಾದ ತಪೋವನವೊಂದನ್ನು ಪ್ರವೇಶಿಸಿದ ಅನುಭವಕ್ಕೆ ಒಳಗಾಗುತ್ತೇವೆ.

 

g s shivarudrappa  gratitute to shivakumara swamiji with his writings
Author
Bengaluru, First Published Jan 22, 2019, 9:28 AM IST

ಡಾ| ಜಿ.ಎಸ್.ಶಿವರುದ್ರಪ್ಪ ದಿವಂಗತ ರಾಷ್ಟ್ರಕವಿ

 ಅತ್ತ ಇತ್ತ ಎತ್ತರವಾದ ಮರಗಳು, ಅದರಾಚೆ ಹರಡಿಕೊಂಡ ಹೊಲಗಳು, ಮುಂದೆ ಕಾಣುವ ವಿದ್ಯಾರ್ಥಿ ವಸತಿಗಳ ಸಮುಚ್ಚಯ ಹಾಗೂ ಪಾಠಶಾಲೆಗಳು, ಭಕ್ತಿ ಜನಾಕರ್ಷಕವಾದ ಗದ್ದೆಗಳು, ದೇವಾಲಯಗಳು, ಮಠಗಳು, ದಾಸೋಹ ಮತ್ತು ಪ್ರಸಾದ ನಿಲಯಗಳು, ಅತಿಥಿ ಗೃಹಗಳು, ಮುಂದೆ ಎಂದಿನಿಂದಲೋ ತಪಸ್ಸಿಗೆ ಕುಂತಂತಿರುವ ಗುಡ್ಡ. ಆ ಗುಡ್ಡದ ಮೆಟ್ಟಿಲು ಸಾಲುಗಳನ್ನೇರಿ ಹೋದರೆ ಅದು ತಲುಪುವ ಸಿದ್ಧಲಿಂಗೇಶ್ವರ ದೇವಾಲಯದ ತಂಪು. ಅದರ ಎದುರಿನ ಗುಹೆಯೊಳಗೆ ಹಾಗೂ ಎಂದೂ ಅರಕೆಯಾಗದ ‘ಸಿದ್ಧಗಂಗೆ’ಯ ‘ತೀರ್ಥಜಲ’ ಕುಂಡ. ಈ ದೇಗುಲದ ಪ್ರಕಾರದಿಂದ ಹೊರಬಂದು ಮೇಲೇರಿ ನಿಂತರೆ, ಒಂದೊಂದು ದಿಕ್ಕಿಗೆ ಒಂದೊಂದು ಆಕಾರದಲ್ಲಿ ದೃಗ್ಗೋಚರವಾಗುವ ಶಿವಲಿಂಗೆ ಬೆಟ್ಟದ ಧೀರ ನಿಲುವು. ಎಡಕ್ಕೆ ಎತ್ತರವಾದ ರಾಮದೇವರ ಬೆಟ್ಟ. ಹಿಂದಕ್ಕೆ ಏರಿಳಿದ ಶಿಖರ ಕಾನನ-ಕಂದರಗಳ ದೇವರಾಯನದುರ್ಗ ಮತ್ತು ನಾವು ನಿಂತ ನೆಲೆಯಲ್ಲೇ ಎತ್ತರವಾಗ ಧ್ವಜಸ್ತಂಭವೊಂದರ ಮೇಲೆ ಸದಾ ಸಭಿಕರನ್ನು ಕೈಬೀಸಿ ಕರೆಯುವ ಕಾವಿಯ ಬಾವುಟ.

ಇಂಥ ತಪೋವನ ಸದೃಶವಾದ ‘ಸಿದ್ಧಗಂಗೆ’ಯ ಈ ಪರಿಸರದಲ್ಲಿ ಅರ್ಧ ಶತಮಾನಕ್ಕೂ ಹಿಂದೆ, ಮೂರು ವರ್ಷಗಳ ಕಾಲ ನಾನೊಬ್ಬ ವಿದ್ಯಾರ್ಥಿಯಾಗಿ ಕಳೆದ ಕಾಲವನ್ನು ನೆನೆದುಕೊಂಡರೆ ಧನ್ಯತೆ ಹಾಗೂ ಕೃತಜ್ಞತೆಯ ಭಾವನೆಗಳಲ್ಲದೆ ಮತ್ತೇನೂ ಕಾಣವು. ಬಡತನ ಹಾಗೂ ಅನಕ್ಷರತೆಯಿಂದಾಗಿ ಅವಕಾಶ ಹೀನರಲ್ಲಿ ಒಬ್ಬನಾಗಿದ್ದ ನಾನು ನನ್ನಂಥ ಎಷ್ಟೋ ಜನ, ಈ ಹೊತ್ತು ತಲೆಯೆತ್ತಿಕೊಂಡು ದಿಟ್ಟತನದಿಂದ ಬದುಕಲು ಸಾಧ್ಯವಾಗಿರುವುದು ಅಂದು ನನಗೆ ಈ ಶ್ರೀಕ್ಷೇತ್ರ ಒದಗಿಸಿದ ಅಶನ-ವಸತಿಗಳ ಆಶ್ರಮದಿಂದಲೇ. ಅಂದು ಇಂದಿನ ಹಾಗೆ, ಒಂದೊಂದು ಜಾತಿ-ಮತಗಳಿಗೊಬ್ಬೊಬ್ಬ ‘ಜಗದ್ಗುರು’ಗಳಿರಲಿಲ್ಲ. ಇಂದಿನ ಹಾಗೆ ಬಹುಸಂಖ್ಯೆ ಶಿಕ್ಷಣದ ವ್ಯಾಪಾರ ಸಂಸ್ಥೆಗಳೂ ಇರಲಿಲ್ಲ. ಬಹುತೇಕ ಸಾಮರಸ್ಯದಿಂದ ಬದುಕುತ್ತಿದ್ದ ಸಾಮಾಜಿಕ ಸಂದರ್ಭಗಳಿಂದಾಗಿ, ‘ಜಾತ್ಯತೀತತೆ’ಯ ಘೋಷಣೆಗಳಾಗಲೀ, ಭಾವೈಕ್ಯದ ಮಂತ್ರ ಪಠಣಗಳಾಗಲೀ ಇರಲಿಲ್ಲ. ಸನಾತನ ಧರ್ಮವನ್ನು ಸಂರಕ್ಷಿಸಿಕೊಂಡು ಬರುವುದರಲ್ಲಿಯೇ ಬಹುಮಟ್ಟಿಗೆ ತೃಪ್ತವಾದ ಮೇಲ್ವರ್ಗದ ಮಠಗಳನ್ನು ಹೊರತುಪಡಿಸಿದರೆ, ನಿಜವಾಗಿಯೂ ಸಾಮಾಜಿಕ ಕಾಳಜಿಗಳಿಂದ ತುಡಿಯುತ್ತ ಬಹುಜನ ಹಿತವನ್ನು ಗುರಿಯಾಗಿಸಿಕೊಂಡ ಕೆಲವು ಮಠಗಳಿದ್ದದ್ದು-ಶರಣ ಧರ್ಮದವರಲ್ಲೇ. ಅವುಗಳಲ್ಲೆಲ್ಲ ಸಿದ್ಧಗಂಗೆಯ ಮಠ ಮಾರ್ಗದರ್ಶಕ ಸ್ಥಾನದಲ್ಲಿತ್ತು.

ಅಷ್ಟೊಂದು ಜನಕ್ಕೆ ದಾಸೋಹ ಹೇಗೆ?

ನಾನು ಅನೇಕ ವೇಳೆ ಆಶ್ಚರ್ಯಪಟ್ಟಿದ್ದೇನೆ. ಇದೇನಿದು ಹಗಲು-ರಾತ್ರಿ ಬಂದು ಹೋಗುವ ಇಷ್ಟೊಂದು ಜನಕ್ಕೆ ಹೀಗೆ ಊಟದ ವ್ಯವಸ್ಥೆ ಮಾಡಲು ಈ ಮಠ ಪುರಾಣಕಾಲದ ಅಕ್ಷಯಪಾತ್ರೆಯೇ ಅಂತ ಯೋಚಿಸಿದ್ದಿದೆ. ಆದರೆ, ಈ ಮಠದ ಅಕ್ಷಯ ಪಾತ್ರೆ ಸಾರ್ವಜನಿಕರೇ ಅನ್ನುವುದು ಸೋಜಿಗದ ಸಂಗತಿಯೇನಲ್ಲ. ಈ ದಾಸೋಹವನ್ನು ಪ್ರಾರಂಭಿಸಿದ ಮೊದಲಲ್ಲಿ ಶ್ರೀ ಅಟವೀಸ್ವಾಮಿಗಳೂ, ಶ್ರೀ ಉದ್ದಾನ ಸ್ವಾಮಿಗಳೂ ಜೋಳಿಗೆ ಹಿಡಿದು ಸುತ್ತಮುತ್ತಲಿನ ಹಳ್ಳಿಗಳಿಂದ ಭಿಕ್ಷಾರೂಪದ ದವಸ ಧಾನ್ಯಗಳನ್ನು ಸಂಗ್ರಹಿಸಿ ತರುತ್ತಿರುವುದನ್ನು ಗಮನಿಸಿದ್ದೆ. ನಂತರ ಶ್ರೀ ಶಿವಕುಮಾರ ಸ್ವಾಮಿಗಳೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದಾಗ ಮೊದಲು ಮಾಡಿದ ಕೆಲಸವೇ ಇದು. ಸರ್ವಜ್ಞ ಹೇಳಿದಂತೆ ‘ತಿರಿವರಿಂ ಸಿರಿವಂತರಾಯ?’ ಇಲ್ಲಿ ನಡೆಯುವ ನಿತ್ಯ ದಾಸೋಹ ಹಾಗೂ ಶಿಕ್ಷಣ ಕಾರ್ಯಗಳನ್ನು ಕಂಡು, ಜನ ತಾವಾಗಿಯೇ ತಮ್ಮ ಕಾಣಿಕೆ ಎಂದೋ ಕೊಡುಗೆ ಎಂದೋ ಗಾಡಿಗಾಡಿಗಳಲ್ಲಿ ದವಸ ಧಾನ್ಯಗಳನ್ನು ತಂದು ಮಠದ ಉಗ್ರಾಣಕ್ಕೆ ಅರ್ಪಿಸುವುದನ್ನು ನೋಡಿದ್ದೇನೆ.

ಶೂದ್ರರಿಗಾಗಿ ಶುರುವಾದ ಸಂಸ್ಕೃತ ಶಾಲೆ!

ಮೊದಲ ಅಗತ್ಯ ಅನ್ನ ನಿಜ. ಆದರೆ ಹೊಟ್ಟೆಯ ಹಸಿವಿನ ಜೊತೆಗೆ ಮನಸ್ಸಿನ ಹಸಿವು ಇದೆಯಲ್ಲ. ಅದಕ್ಕೆ ಆಹಾರ ಎಂದರೆ ಶಿಕ್ಷಣವೇ. ಈ ಕಾರ್ಯವು ಪ್ರಾರಂಭವಾಗಿದ್ದು, ಉದ್ದಾನ ಸ್ವಾಮಿಗಳ ಕಾಲದಲ್ಲಿ. ಸ್ವಾರಸ್ಯದ ಸಂಗತಿ ಎಂದರೆ ಉದ್ದಾನ ಸ್ವಾಮಿಗಳು ಪ್ರಾರಂಭ ಮಾಡಿದ್ದು ಸಂಸ್ಕೃತ ಪಾಠಶಾಲೆಯನ್ನು. 1927ರಲ್ಲಿ ಅಧಿಕೃತವಾಗಿ ಪ್ರಾರಂಭವಾದ ಈ ಪಾಠಶಾಲೆಯಲ್ಲಿ ಬ್ರಾಹ್ಮಣ, ಲಿಂಗಾಯತ, ಗೌಡ, ಹರಿಜನ... ಹೀಗೆ ವಿವಿಧ ಕೋಮುಗಳಿಗೆ ಸೇರಿದ ಐವತ್ಮೂರು ವಿದ್ಯಾರ್ಥಿಗಳಿದ್ದರಂತೆ. ಇದೊಂದು 19ನೇ ಶತಮಾನದಲ್ಲಿ ಸಂಭವಿಸಿದ ಮಹತ್ವದ ಘಟನೆ. ಯಾಕೆಂದರೆ ಇಂಡಿಯಾದಂಥ ದೇಶದ ಪಾರಂಪರಿಕವಾದ ಸಂಸ್ಕೃತ ಭಾಷೆಯ ಶಿಕ್ಷಣವೆನ್ನುವುದು ಶತಶತಮಾನಗಳ ಕಾಲ ಕೇವಲ ಮೇಲು ವರ್ಗದವರ ಗುತ್ತಿಗೆಯಾಗಿ, ಶೂದ್ರ ವರ್ಗದವರ ನಾಲಗೆಯಲ್ಲಿ ಉಚ್ಚರಿಸುವುದಿರಲಿ ಕಿವಿಯಲ್ಲಿ ಕೇಳಬಾರದ ‘ದೇವಭಾಷೆ’ಯಾಗಿತ್ತು. ಹತ್ತೊಂಭತ್ತನೆಯ ಶತಮಾನದ ವಸಾಹತುಸಾಹಿಯ ಸಂದರ್ಭದಲ್ಲಿ ಕನ್ನಡ ಅಥವಾ ಇಂಗ್ಲಿಷ್ ಶಿಕ್ಷಣ ತಾನಾಗಿಯೇ ಲಭ್ಯವಾಗಬಹುದಾಗಿದ್ದ ಪರಿಸ್ಥಿತಿಯಲ್ಲಿ ಉದ್ದಾನ ಸ್ವಾಮಿಗಳು ಸಂಸ್ಕೃತ ಪಾಠಶಾಲೆಯೊಂದನ್ನು ಶೂದ್ರ ಸಮುದಾಯದವರಿಗಾಗಿ ಪ್ರಾರಂಭಿಸಿದ್ದರ ಚಾರಿತ್ರಿಕ ಮಹತ್ವವನ್ನು ಪ್ರತ್ಯೇಕವಾಗಿಯೇ ನಾವು ಪರಿಭಾವಿಸಬೇಕು.

ಶಿವಕುಮಾರ ಶ್ರೀಗಳ ಬಹುಮುಖಿ ಸೇವೆ

ಅರ್ಧ ಶತಮಾನಕ್ಕೂ ಹಿಂದಿನ, ನಲವತ್ತರ ದಶಕದಲ್ಲಿ ನಾನು ಈ ಮಠದಲ್ಲಿದ್ದಾಗ, ಶಾಲೆ-ಕಾಲೇಜುಗಳಲ್ಲಿ ಓದುತ್ತಾ ಇಲ್ಲಿ ಆಶ್ರಯ ಪಡೆದವರ ಸಂಖ್ಯೆ ಸುಮಾರು ನಾಲ್ಕು ನೂರರಷ್ಟಿತ್ತು. ಬಹುಶಃ ಯಾವುದೇ ಒಂದು ಸಂಸ್ಥೆ ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳಿಗೆ ಉಚಿತವಾದ ಅಶನ-ವಸತಿಗಳನ್ನು ಒದಗಿಸುತ್ತಿದ್ದುದು ಆ ಕಾಲಕ್ಕಂತೂ ಇರಲಿಲ್ಲ. ಹಾಗೆ ಆಶ್ರಯ ಪಡೆದವರು ಕೇವಲ ವೀರಶೈವರೇನಲ್ಲ. ಸಮಾಜದ ಶೂದ್ರ ಸಮುದಾಯದ ಬೇರೆ ಬೇರೆ ಕೋಮುಗಳವರೂ ಇದ್ದರು. ಅವರ ಜತೆಗೆ ಕೆಲವರು ಹರಿಜನರೂ ಇದ್ದರು. ಅಷ್ಟೇ ಇಲ್ಲ, ಮಡಿವಂತ ವರ್ಗದ ಬ್ರಾಹ್ಮಣ ವಿದ್ಯಾರ್ಥಿಗಳಿಗೂ ಇಲ್ಲಿ ಅವಕಾಶವಿತ್ತು. ನಮ್ಮೆಲ್ಲರ ವಸತಿಗಳಲ್ಲಿ ಯಾವ ತಾರತಮ್ಯವೂ ಇರಲಿಲ್ಲ. ನಾವೆಲ್ಲ ಬಡವರೆಂಬ, ನಾವೊಬ್ಬ ಮನುಷ್ಯರೆಂಬ, ಆ ಕಾರಣಕ್ಕೆ ನಾವೆಲ್ಲ ಒಂದೆಂಬ ಭಾವನೆಯೇ ಪ್ರಮುಖವಾಗಿತ್ತು. ದಿನವೂ ಸಂಜೆ ಏಳು ಗಂಟೆಗೆ ಸಾಮೂಹಿಕವಾಗಿ ಕೂತು ಪ್ರಾರ್ಥನೆ ಮಾಡುವ ಸಂದರ್ಭ ಕೂಡಾ ನಮ್ಮಲ್ಲಿ ಒಂದು ಆಧ್ಯಾತ್ಮಿಕವಾದ ಏಕತಾ ಭಾವನೆಯ ಸಂಕೇತವಾಗಿತ್ತು.

ನಾನೇ ನನ್ನ ಎಳೆಯ ದಿನಗಳಲ್ಲಿ ಕಂಡಂತೆ ಸಂಸ್ಕೃತ ಪಾಠಶಾಲೆಯ ಚಿಕ್ಕಮಕ್ಕಳಿಗೂ ಶಿವಕುಮಾರ ಸ್ವಾಮಿಗಳು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ದಿನವೂ ಬರುವ ಭಕ್ತಾದಿಗಳ ಯೋಗಕ್ಷೇಮವನ್ನು ವಿಚಾರಿಸುವುದೂ, ತೀರಾ ಸಾಮಾನ್ಯರಾದ ಗ್ರಾಮೀಣ ಜನರ ನಂಬಿಕೆಗಳನ್ನು ಆಘಾತಗೊಳಿಸದೇ ಅವರನ್ನು ಸಮಾಧಾನಗೊಳಿಸುವುದೂ, ದಿನವೂ ನಡೆಯುತ್ತಿದ್ದ ಮಠದ ವಿಸ್ತರಣ ಕಾರ್ಯಗಳನ್ನು ಪರಿಶೀಲಿಸುವತ್ತ ಕೆಲಸಗಾರರಿಗೆ ಸೂಚನೆ ಕೊಡುತ್ತಾ ಸಮಯ ಬಿದ್ದರೆ ತಾವೇ ಕೂಲಿಗಾರರ ಜೊತೆಗೆ ಹೆಗಲು ಕೊಟ್ಟು ಕೆಲಸ ಮಾಡುವುದೂ, ಇದ್ದಕ್ಕಿದ್ದ ಹಾಗೆ ಅಡುಗೆ ಮನೆ ಪ್ರವೇಶಿಸಿ ತಾವೇ ಮುದ್ದೆ ತಿರುಹುವುದು (ಭಾರಿ ಗಾತ್ರದ ಪಾತ್ರೆಗಳಲ್ಲಿ ಬೇಯುತ್ತಿದ್ದ ಮುದ್ದೆಯನ್ನು ತಿರುಹುವುದು ಸುಲಭದ ಕೆಲಸವೇನಲ್ಲ), ಊಟದ ಪಂಕ್ತಿಯ ನಡುವೆ ನಿಂತು ಮಕ್ಕಳು ಹಾಗೂ ಭಕ್ತರು ಊಟ ಮಾಡುವುದನ್ನು ಪ್ರೀತಿಯಿಂದ ವೀಕ್ಷಿಸುವುದು ಸೇರಿದಂತೆ ಇಂತಹ ಬಹು ಸಂಖ್ಯೆಯ ಕಾರ್ಯಚಟುವಟಿಕೆಗಳನ್ನು ನಾನು ನೋಡುತ್ತಾ ಅಲ್ಲಿ ಪುಟಿಯುವ ಜೀವ ಕಾರುಣ್ಯಕ್ಕೆ ಬೆರಗಾಗಿದ್ದೇನೆ.

ಸನ್ಯಾಸವೆಂದರೆ ವೈರಾಗ್ಯವಷ್ಟೇ ಅಲ್ಲ

ಒಂದು ಕಾಲವಿತ್ತು. ವೈರಾಗ್ಯ ಎಂದರೆ ಸನ್ಯಾಸ ಎಂದರೆ ಸಂಸಾರವನ್ನು ತೊರೆದು ಸಮಾಜವನ್ನು ತೊರೆದು ಜನಸಂಗ ದೂರವಾದ ಕಾಡುಮೇಡುಗಳಲ್ಲೋ, ಯಾರು ಪ್ರವೇಶ ಮಾಡಲಾಗದ ಗಿರಿ-ದರಿಗಳ ಗುಹಾಂತರಗಳಲ್ಲೋ ಧ್ಯಾನ ತಪಸ್ಸುಗಳಲ್ಲಿ ನಿರತರಾಗಿ ಆಧ್ಯಾತ್ಮ ಸಾಧನೆಯಲ್ಲಿ ತೊಡಗುವುದು ಎಂದು. ಆದರೆ ಬುದ್ಧ ಬಹುಜನ ಹಿತಕ್ಕಾಗಿ, ಬಹುಜನ ಸುಖಕ್ಕಾಗಿ ತಮ್ಮನ್ನು ತಾವು ಸೇವಾ ಮನೋಭಾವದಿಂದ ತೊಡಗಿಸಿಕೊಳ್ಳುವ ಕ್ರಿಯೆಯಲ್ಲಿ ಸಾರ್ಥಕ್ಯ ಇದೆ ಎಂದ. ಸಂಸಾರಿಯೇ ಆಗಲಿ, ಸಂನ್ಯಾಸಿಯೇ ಆಗಲಿ, ಈ ಮರ್ತ್ಯದ ಸಾಮಾಜಿಕ ನೆಲೆಯೊಳಗೆ ನಿಂತೇ ಶಿವಯೋಗವನ್ನು ಸಾಧಿಸುತ್ತ, ಕಾಯಕ ಅಥವಾ ಶಿವಾರ್ಪಿತ ಮನೋಭಾವದ ದುಡಿಮೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತ ಸರ್ವಜನ ಹಿತದಲ್ಲಿ ನಿರತವಾಗಬೇಕೆಂಬುದೇ ಇದರ ತಿರುಳು. ಬುದ್ಧನ ಮಾನವ ಕಾರುಣ್ಯವನ್ನೂ, ಬಸವನ ತೀವ್ರ ಸಾಮಾಜಿಕ ಕಾಳಜಿಗಳನ್ನೂ ಒಟ್ಟಿಗೇ ಕಾಣಬಹುದಾದದ್ದು ಸಿದ್ಧಗಂಗೆಯಂಥ ಅಪರೂಪದ ಕ್ಷೇತ್ರಗಳಲ್ಲಿ ಹಾಗೂ ಈ ಮನೋಧರ್ಮದ ಪ್ರತಿನಿಧಿಯಂತಿರುವ ಶಿವಕುಮಾರ ಸ್ವಾಮಿಗಳಂಥವರ ವ್ಯಕ್ತಿತ್ವದಲ್ಲಿ ಮಾತ್ರ.

(ಶ್ರೀಗಳ 104ನೇ ಜನ್ಮದಿನದಂದು ಬಿಡುಗಡೆಯಾದ ‘ನಿರಂಜನಶ್ರೀ’ ಗ್ರಂಥಕ್ಕೆ ಬರೆದಿದ್ದ ಲೇಖನ)

 

Follow Us:
Download App:
  • android
  • ios