Asianet Suvarna News Asianet Suvarna News

ಶಾಂತಿ, ಸಹನೆಯ ಅಭಯಕ್ಕೆ ರೂಪಕ ಮಹಾಮಜ್ಜನ: ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದ ಧರ್ಮಾಧಿಕಾರಿ  ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯಲಿರುವ ನಾಲ್ಕನೇ ಮಹಾಮಜ್ಜನಕ್ಕೆ ಇಡೀ ನಾಡು ಸಜ್ಜಾಗಿದೆ. ಧರ್ಮಸ್ಥಳದ ತುಂಬಾ ಸಂಭ್ರಮ ಆವರಿಸಿರುವ ಈ ಸಂದರ್ಭದಲ್ಲಿ ಅವರ ಜೊತೆ ನಡೆಸಿದ ಮಾತುಕತೆ ಇಲ್ಲಿದೆ. 

Dharmasthala Dr. Veerendra Heggade talks about Bahubali Mahamajjana
Author
Bengaluru, First Published Feb 3, 2019, 3:05 PM IST

ಕಾರ್ಕಳ (ಫೆ. 03): ಧರ್ಮಸ್ಥಳದ ಧರ್ಮಾಧಿಕಾರಿ  ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯಲಿರುವ ನಾಲ್ಕನೇ ಮಹಾಮಜ್ಜನಕ್ಕೆ ಇಡೀ ನಾಡು ಸಜ್ಜಾಗಿದೆ. ಧರ್ಮಸ್ಥಳದ ತುಂಬಾ ಸಂಭ್ರಮ ಆವರಿಸಿರುವ ಈ ಸಂದರ್ಭದಲ್ಲಿ ಅವರ ಜೊತೆ ನಡೆಸಿದ ಮಾತುಕತೆ ಇಲ್ಲಿದೆ. 

ಮಹಾಮಜ್ಜನದ ಉದ್ದೇಶ ಏನು?

ಬಾಹುಬಲಿಯ ಬೃಹತ್‌ ಮೂರ್ತಿಗಳು ವಿಶ್ವದ ಏಕೈಕ ಆರಾಧನಾ ಪ್ರಾಕಾರ. ಅಂದರೆ ಎಲ್ಲಾ ಬಾಹುಬಲಿ ಮೂರ್ತಿಯನ್ನೂ ಕೂಡಾ ಬೃಹತ್‌ ಗಾತ್ರದಲ್ಲಿ ಮಾಡುತ್ತಾರೆ. ಹಾಗೆಯೇ ಬೇರೆ ಯಾವುದೇ ತೀರ್ಥಂಕರರನ್ನು ಅಥವಾ ಇತರರನ್ನು ಮಾಡುವುದಿಲ್ಲ. ಹಾಗಾಗಿ ಬಹುಶಃ ಈ ಗಾತ್ರವನ್ನು ಅನುಸರಿಸಿ ಪ್ರತಿದಿನ ಮತ್ತು ಪ್ರತಿ ವರ್ಷವೂ ಪೂಜೆ ಮಾಡುವುದು ಸಾಧ್ಯವಿಲ್ಲ ಎನ್ನುವ ಕಾರಣಕ್ಕೂ ಇರಬಹುದು ಅಥವಾ ಹನ್ನೆರಡು ವರ್ಷಕ್ಕೊಮ್ಮೆ ಮಾಡುವುದು ಶ್ರೇಷ್ಠ ಎನ್ನುವ ಕಾರಣಕ್ಕಾಗಿ ಹನ್ನೆರಡು ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕವನ್ನು ನಡೆಸುತ್ತಿದ್ದಾರೆ.

ಶ್ರವಣಬೆಳಗೊಳದಲ್ಲಿ ಸಾವಿರ ವರ್ಷಗಳಿಂದಲೂ ಹನ್ನೆರಡು ವರ್ಷಕ್ಕೊಮ್ಮೆ ಮಸ್ತಕಾಭಿಷೇಕ ನಡೆಯುವ ಪರಂಪರೆ ಬೆಳೆಯಿತು. ನಾವು ಕೂಡಾ ಸಂಕಲ್ಪ ಮಾಡಿದಂತೆ ಧರ್ಮಸ್ಥಳದಲ್ಲಿ ಹನ್ನೆರಡು ವರ್ಷಕ್ಕೊಮ್ಮೆ ಈ ಮಹಾಮಸ್ತಕಾಭಿಷೇಕವನ್ನು ಮಾಡುತ್ತೇವೆ. ಇದರ ಜೊತೆಗೆ ಅದರಲ್ಲಿ ಹಾಕುವ ಅನೇಕ ದ್ರವ್ಯಗಳು ಈ ಮೂರ್ತಿಯನ್ನು ಸ್ವಲ್ಪ ದೃಢ ಮಾಡುತ್ತವೆ. ಮತ್ತು ಮೂರ್ತಿಗೆ ರಕ್ಷಣೆ ಕೊಡುತ್ತದೆ ಎನ್ನುವ ಭಾವನೆ ಕೂಡಾ ಇರುವುದರಿಂದ ಹೀಗೆ ಹನ್ನೆರಡು ವರ್ಷಕ್ಕೊಮ್ಮೆ ಮಸ್ತಕಾಭಿಷೇಕವನ್ನು ಮಾಡುತ್ತಾರೆ.

ಈ ಬಾರಿಯ ವಿಶೇಷತೆಗಳೇನು?

ಈ ಬಾರಿ ಬಾಹುಬಲಿಯ ಕತೆಯನ್ನು ನಾವು ವಿಶ್ವರೂಪವಾಗಿ ಇಲ್ಲಿ ವಿಚಾರಿಸುತ್ತೇವೆ. ಶ್ರೀ ಹೇಮಾವತಿ ಹೆಗ್ಗಡೆಯವರು ಮತ್ತು ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್‌ರವರು ಈ ಕಥಾನಕವನ್ನು ಅಂದರೆ ಭರತ - ಬಾಹುಬಲಿಯ ಕತೆಯನ್ನು ದೃಶ್ಯ ರೂಪಕವಾಗಿ ಐದು ದಿವಸಗಳಲ್ಲಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರಿಂದ ಯಾಕೆ ಬಾಹುಬಲಿಯ ವಿಶೇಷ ವ್ಯಕ್ತಿತ್ವ ಇಷ್ಟುಗೌರವಿಸಲ್ಪಡುತ್ತದೆ? ತ್ಯಾಗದ ಮಹತ್ವವೇನು? ವಿರಕ್ತಿಯ ಉದ್ದೇಶ ಏನು? ಮತ್ತು ಈ ರೀತಿ ಬೃಹತ್‌ ಮೂರ್ತಿಯನ್ನು ಮಾಡಿಡುವುದರಿಂದ ಏನು ಸಂದೇಶ ದೊರಕುತ್ತದೆ ಎನ್ನುವುದನ್ನು ಈ ಕಾರ್ಯಕ್ರಮದ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಪಂಚಮಹಾ ವೈಭವದ ಬಗ್ಗೆ ತಿಳಿಸಿ.

ಇದರಲ್ಲಿ ಪಂಚಮಹಾವೈಭವ ಅಂದರೆ ಮೊದಲನೆಯ ದಿವಸದಲ್ಲಿ ಭರತ, ಬಾಹುಬಲಿಯ ತಂದೆ ವೃಷಭನಾಥರು ಚಕ್ರವರ್ತಿಗಳಾಗಿ ಆಳುತ್ತಿರುತ್ತಾರೆ. ಅದರ ದೃಶ್ಯವನ್ನು ತೋರಿಸುತ್ತಾರೆ. ಆ ಬಳಿಕ ಅವರು ಅಸಿ, ಮಸಿ, ಕೃಷಿ ಅಂದರೆ ಪ್ರಥಮವಾಗಿ ವಿಶ್ವಕ್ಕೆ ಶಿಸ್ತುಬದ್ಧವಾಗಿ ಅಕ್ಷರಾಭ್ಯಾಸವನ್ನು, ವ್ಯವಹಾರ ಜ್ಞಾನವನ್ನು ಮತ್ತು ವ್ಯವಸ್ಥಿತ ಕೃಷಿಯ ಕಲ್ಪನೆಯನ್ನು ಕೊಟ್ಟವರು ವೃಷಭನಾಥರು ಎಂದು ಇತಿಹಾಸ ಹೇಳುತ್ತದೆ.

ಹಾಗಾಗಿ ವ್ಯವಸ್ಥಿತವಾದ ಬದುಕು, ವ್ಯವಸ್ಥಿತವಾದ ಅಕ್ಷರ ಜ್ಞಾನ, ಭಾಷೆ, ಸಂಸ್ಕಾರಗಳನ್ನು ಅವರು ಹೇಳಿಕೊಟ್ಟರು. ಅದರ ಜೊತೆಗೆ ಕೃಷಿ ಎಂದರೆ ಅದು ಸುಧಾರಿತ ಕೃಷಿಯಾಗಿ, ಅದು ಅರಣ್ಯ ಬೆಳೆಯಾಗದೆ ಅದನ್ನು ಸಂಸ್ಕಾರಯುತ ಬೆಳೆಯನ್ನಾಗಿ ಮಾಡಿಕೊಳ್ಳುವ ಮಾಹಿತಿಯನ್ನು ಕೊಟ್ಟದ್ದು ಅವರು ಎನ್ನುವ ಮಾಹಿತಿ ಇಲ್ಲಿದೆ.

ಮಸ್ತಕಾಭಿಷೇಕದ ಸಿದ್ಧತೆಗಳು ಹೇಗೆ ನಡೆಯುತ್ತಿವೆ?

ಈಗ ಧÜರ್ಮಸ್ಥಳದಲ್ಲಿ ಕಳೆದ ಹನ್ನೆರಡು ವರ್ಷಗಳ ಬಳಿಕ ಮಹಾಮಸ್ತಕಾಭಿಷೇಕದ ವ್ಯವಸ್ಥೆ ಆಗುತ್ತಿದೆ. ಭಗವಾನ್‌ ಬಾಹುಬಲಿಯ ಸುತ್ತಲೂ ಕಬ್ಬಿಣದ ಪಂಜರಗಳನ್ನು ರಚಿಸಿ ಅದರ ಮೇಲೆ ಹತ್ತಿ ತಲೆಗೆ ಅಭಿಷೇಕ ಮಾಡುವ ಸಾಧ್ಯತೆಯನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮಗಳಿಗಾಗಿ ಬೃಹತ್‌ ಪ್ರತ್ಯೇಕ ಪೆಂಡಾಲ್‌ಗಳನ್ನು ರಚಿಸಲಾಗಿದೆ. ಮತ್ತು ಸಾಂಸ್ಕತಿಕ ಕಾರ್ಯಕ್ರಮಗಳಿಗಾಗಿ ಅಮೃತವರ್ಷಿಣಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಭಕ್ತರಿಗೆ ನಿಮ್ಮ ಕಿವಿಮಾತು.

ಬಹುಶಃ ನಮ್ಮ ರಾಷ್ಟ್ರದಲ್ಲಿ ವಿಶ್ವಕ್ಕೆ ಎತ್ತರದಿಂದ ನಿಂತು ಶಾಂತಿಯ ಸಂದೇಶವನ್ನು ಕೊಟ್ಟವರು ಭಗವಾನ್‌ ಬಾಹುಬಲಿ ಮೂರ್ತಿ ಎನ್ನುವ ಒಂದು ಕಲ್ಪನೆಯಿದೆ. ವಿಶ್ವದಲ್ಲಿ ದಿನೇ ದಿನೇ ಅಶಾಂತಿ ಬೆಳೆಯುತ್ತಾ ಇದೆ, ಅಸಹನೆ ಬೆಳೆಯುತ್ತಾ ಇದೆ, ಅಸಹಕಾರ ಬೆಳೆಯುತ್ತಾ ಇದೆ.

ಎಲ್ಲಿ ನೋಡಿದರೂ ಯುದ್ಧಭೀತಿ ಮತ್ತು ಭಯೋತ್ಪಾದಕರ ಭೀತಿ. ಹಾಗೆಯೇ ಹಿರಿಯ ಸ್ಥಾನಗಳಲ್ಲಿರುವ ರಾಜಕಾರಣಿಗಳಿಂದ ಪ್ರಾರಂಭವಾಗಿ ಅತ್ಯಂತ ಶ್ರೀಸಾಮಾನ್ಯನೂ ಕೂಡಾ ಇಂದು ಒಂದಲ್ಲ ಒಂದು ರೀತಿಯ ಭಯದಿಂದ, ಭೀತಿಯಿಂದ ಬದುಕುವಂತಹ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ನಾವೆಲ್ಲರೂ ಸುಖ, ಶಾಂತಿ, ನೆಮ್ಮದಿ ಮತ್ತು ಸಹಜವಾಗಿ ಬದುಕಬೇಕಾದರೆ ಅಹಿಂಸೆಯನ್ನು ಅಳವಡಿಸಿಕೊಳ್ಳಬೇಕು. ಶಾಂತಿ, ನೆಮ್ಮದಿಯನ್ನು ಒದಗಿಸಿಕೊಡಬೇಕು ಎನ್ನುವ ಸಂದೇಶವನ್ನು ನಾವು ಈ ಮೂಲಕ ಕೊಡುತ್ತಿದ್ದೇವೆ.


 

Follow Us:
Download App:
  • android
  • ios