ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು, ಪಾರದರ್ಶಕ ಚುನಾವಣೆಗಾಗಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಅಗತ್ಯವೆಂದು ಪ್ರತಿಪಾದಿಸಿದ್ದಾರೆ. ನಕಲಿ ಮತದಾರರು ಮತ್ತು ಅಕ್ರಮ ವಲಸಿಗರನ್ನು ತೆಗೆದುಹಾಕುವ ಈ ಪ್ರಕ್ರಿಯೆಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ನಿಲುವನ್ನು ಅವರು ಟೀಕಿಸಿದ್ದು, ನೈಜ ಭಾರತೀಯರಿಗೆ ಮಾತ್ರ ಮತದಾನದ ಹಕ್ಕು ಸಿಗಬೇಕೆಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ವಿಶ್ವಾಸಾರ್ಹತೆ ಬರಬೇಕಾದರೆ ಸಂವಿಧಾನದ ಆಶಯದಂತೆ ಪಾರದರ್ಶಕ ಚುನಾವಣೆ ನಡೆಯಬೇಕಿದೆ. ಭಾರತದಂತಹ 150 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ದೇಶವಾಸಿಗಳಷ್ಟೇ ಉಣ್ಣಲು ಅನ್ನ, ಕೈಗಳಿಗೆ ಕೆಲಸ, ಶಿಕ್ಷಣ, ಆರೋಗ್ಯ ನೀಡುವುದು ಸುಲಭದ ಕೆಲಸವಲ್ಲ. ಭಾರತಕ್ಕೆ ಸ್ವಾತಂತ್ರ್ಯ ಘೋಷಣೆಯಾದಾಗ ಶೇಕಡ 89ರಷ್ಟು ಅನಕ್ಷರಸ್ಥರು ತುಂಬಿದ ನಾಡು, ಮುಕ್ಕಾಲು ಶತಮಾನದಲ್ಲಿ ಶೇ.80ರಷ್ಟು ವಿದ್ಯಾವಂತರನ್ನು ತಯಾರಿಸುವುದು ತುಂಬಾ ಕಠಿಣವಲ್ಲವಾದರೂ ತೀರಾ ಸರಳವಂತೂ ಆಗಿರಲಿಲ್ಲ. ಇದೇ ನಾಡಿನ ವಿದ್ಯಾವಂತರು ವಿಧಾನಸೌಧದೊಳಗೆ ಪಾಕಿಸ್ತಾನಕ್ಕೆ ಜೈ ಅಂದಾಗ ನಮ್ಮ ಶಿಕ್ಷಣದ ಸ್ವರೂಪದ ಬಗ್ಗೆ ಚರ್ಚೆ ಆರಂಭವಾಗುತ್ತದೆ.

Add Asianetnews Kannada as a Preferred SourcegooglePreferred

ಇಂದು ದೇಶದಲ್ಲಿ ನಡೆಯುತ್ತಿರುವ ಎಸ್‌ಐಆರ್ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆಯೂ ಇಂತಹದೊಂದು ಚರ್ಚೆ ಹುಟ್ಟು ಹಾಕಿದೆ. ಜೊತೆಯಲ್ಲಿ ಪರ-ವಿರುದ್ಧದ ಸ್ವರಗಳು ಪ್ರತಿಧ್ವನಿಸುತ್ತಿವೆ. ಕೇಂದ್ರ ಆಳುವ ಬಿಜೆಪಿ, ರಾಜ್ಯದ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳಾದ ನಾವೆಲ್ಲಾ ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಎನ್ನುತ್ತೇವೆ. ಚುನಾವಣಾ ಫಲಿತಾಂಶ ವಿರುದ್ಧವಾಗಿ ಬಂದಾಗ ಹಲವು ಆರೋಪಗಳ ನಡುವೆ ಮತದಾರ ಪಟ್ಟಿಯ ಲೋಪವನ್ನು ಸೇರಿಸಿ ಆರೋಪಿಸಿದ್ದಿದೆ.

ಎಸ್‌ಐಆರ್‌ ವಿರೋಧಕ್ಕೆ ಕಾರಣಗಳು ವಿಚಿತ್ರ

ಇದೀಗ ಭಾರತ ಚುನಾವಣಾ ಆಯೋಗವೇ ಮತದಾರ ಪಟ್ಟಿಯ ಪರಿಷ್ಕರಣೆಯ ಆದೇಶ ಕೊಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಜೂ.20ರಿಂದ ಪ್ರಾರಂಭವಾಗುವ ಎಸ್‌ಐಆರ್‌, ದೇಶದ ನಾಗರಿಕನೊಬ್ಬನಿಗೆ ಕಡ್ಡಾಯ ಮತದಾನದ ಹಕ್ಕು ನೀಡಲಿದೆ. ಮತ್ತು ದೇಶವಾಸಿಗಳಲ್ಲದವರಿಗೆ ಮತದಾನದ ಹಕ್ಕು ನಿರಾಕರಿಸಲಿದೆ. ರಾಜಕೀಯ ಪಕ್ಷಗಳ ಕೆಲ ಮುಖಂಡರಲ್ಲಿರುವ ಸಂಘರ್ಷದ ಹೇಳಿಕೆಗಳು ಇಂದು ಮುನ್ನೆಲೆಗೆ ಬರುತ್ತಿರುವುದು ಇದೇ ಕಾರಣಕ್ಕೆ. ಕಾಂಗ್ರೆಸ್ ಪಕ್ಷದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಒಂದೇ ಸ್ವರದಲ್ಲಿ ಎಸ್ಐಆರ್ ವಿರೋಧಿಸುತ್ತಿದ್ದು ಅವರು ಕೊಡುವ ಕಾರಣಗಳು ವಿಚಿತ್ರವಾಗಿದೆ. ಸಂವಿಧಾನದ ಬದ್ಧ ನಿಲುವು ಹೊಂದಿದ ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಡಿಲೀಟ್ ಆಗಿದ್ದಾರೆ ಎಂದು ಆರೋಪಿಸಿರುವ ವಿಪಕ್ಷಗಳ ಒಕ್ಕೂಟ ತಮಿಳುನಾಡಿನಲ್ಲಿ ಬಿಜೆಪಿ ಗೆಲ್ಲಲಿಲ್ಲ ಎಂದ ಮೇಲೆ ಬಿಜೆಪಿಯ ಸ್ವಾರ್ಥ ಎಲ್ಲಿ ಬಂತು ಎಂಬ ಪ್ರಶ್ನೆಗೆ ಉತ್ತರ ಕೊಡುತ್ತಿಲ್ಲ.

ಎಸ್ಐಆರ್ ಬೇಡ ಎನ್ನುವವರು ಒಬ್ಬ ವ್ಯಕ್ತಿ ಎರಡು-ಮೂರು ಕಡೆ ಮತದಾರ ಆಗಿರುವುದು ಸಮರ್ಥನೆ ಮಾಡುವುದು ಎಷ್ಟು ಸರಿ? ಒಬ್ಬ ವ್ಯಕ್ತಿ ಒಂದು ಮತ ವಿಚಾರವನ್ನು ಪ್ರತಿಪಾದಿಸುವ ಕಾಂಗ್ರೆಸ್ ಪಕ್ಷ, ಎಸ್ಐಆರ್ ಒಂದು ವ್ಯಕ್ತಿ ಹಲವು ಮತಗಳ ಪ್ರತಿಪಾದನೆಯನ್ನು ನಿಯಂತ್ರಿಸುತ್ತದೆ ಎಂಬುದನ್ನು ಸ್ವಾಗತಿಸುತ್ತಿಲ್ಲ ಏಕೆ? ಸತ್ತವರ ಹೆಸರು 20 ರಿಂದ 30 ವರ್ಷಗಳಿಂದ ಮತದಾರರ ಪಟ್ಟಿಯಲ್ಲಿ ಹಾಗೆ ಉಳಿದಿದ್ದು, ಅದನ್ನು ಪರಿಷ್ಕರಿಸಿ ಕೈ ಬಿಡದಿದ್ದರೆ ಸತ್ತವರ ಓಟು ಚುನಾವಣೆಯಾಗುವ ಅವಕಾಶವಿದೆಯಲ್ಲವೆ. ಮದುವೆಯಾಗಿ ಊರು ಬಿಟ್ಟು ಹೋದವರು ಒಂದೇ ಮೂಲ ಕುಟುಂಬ ಅಥವಾ ಸೇರಿದ ಮನೆ ಯಾವುದಾದರೂ ಒಂದು ಕಡೆ ಮತ ಚಲಾಯಿಸುವುದು ಸರಿ. ಹಾಗಂತ ಎರಡು ಕಡೆ ದಾಖಲಿಸಿಕೊಂಡು ಯಾವುದೋ ಒಂದೆಡೆ ಅವರ ಹೆಸರಲ್ಲಿ ನಕಲಿ ಮತ ಚುನಾವಣೆಯಾದರೆ ಯಾರು ಹೊಣೆ? ಬಿಹಾರ ರಾಜ್ಯವೊಂದರ ಹಲವು ಕಡೆ ನೊಂದಾಯಿಸಿದ 5 ಲಕ್ಷ ಮತಗಳು ನಕಲಿಯಾಗಿದ್ದು ಎಸ್ಐಆರ್ ವೇಳೆ ಬೆಳಕಿಗೆ ಬಂದಿವೆ.

ನುಸುಳುಕೋರರ ರಕ್ಷಣೆಗಾಗಿ ವಿರೋಧ

ಭಾರತ ದೇಶದ ಗಡಿಭಾಗದಲ್ಲಿ ನುಗ್ಗಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳಲ್ಲಿ ಆಶ್ರಯ ಪಡೆದಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಯರು ಮಾದಕ ವಸ್ತುಗಳ ಸರಬರಾಜು ಸೇರಿದಂತೆ ಅವರು ಮಾಡುವ ಅನಾಹುತಗಳು ಒಂದೆರಡಲ್ಲ. ಕ್ರಮಬದ್ಧ ವೀಸಾವಿಲ್ಲದ ಕಾರಣಕ್ಕೆ ಅಮೆರಿಕದಲ್ಲಿ ಉಳಿದುಕೊಂಡ ಭಾರತೀಯರ ಕೈಗೆ ಕೋಳಾ ಹಾಕಿ ವಾಪಸ್‌ ಕಳುಹಿಸಿದ ಟ್ರಂಪ್ ಆಡಳಿತ ಕಂಡ ಮೇಲೂ ಗಡಿನುಸುಳಿ ಬಂದು ಭಾರತದಲ್ಲಿ ಬದುಕು ಕಟ್ಟಿಕೊಳ್ಳುವ ನೆಪದಲ್ಲಿ ಬಾಂಬ್ ಸರಬರಾಜು ಮಾಡುವ ಬಾಂಗ್ಲಾ ಸಂಜಾತರಿಗೆ ಮತದಾನದ ಹಕ್ಕನ್ನು ನೀಡಲು ರಾಹುಲ್‌ಗಾಂಧಿ ಪಣತೊಟ್ಟು ಹೋರಾಟ ಮಾಡುವ ಅವಶ್ಯಕತೆ ಏನೆಂದು ಜನರಿಗೆ ಅರ್ಥವಾಗುತ್ತಿಲ್ಲ. ಬಿಹಾರದಲ್ಲಿ ಬಿಜೆಪಿ ಗೆದ್ದಾಗ ವೋಟ್‌ ಚೋರಿ ಎಂದವರು ಕೇರಳದಲ್ಲಿ ಕಾಂಗ್ರೆಸ್‌ ಗೆದ್ದಾಗ ಸಮರ್ಪಕ ಚುನಾವಣೆ ಎಂದರೆ ಏನರ್ಥ?

ದೋಶಮುಕ್ತ ಪಾರದರ್ಶಕ ಚುನಾವಣೆಯೊಂದೇ ಪ್ರಜಾಪ್ರಭುತ್ವದ ತಳಗಟ್ಟು ಎಂದು ಬಾಬಾ ಸಾಹೇಬರು ಹೇಳಿದ ಮೇಲೂ, ಮಾತೆತ್ತಿದರೆ ಸಂವಿಧಾನದ ಆಶಯ ಉಲ್ಲೇಖಿಸುವವರು ಎಸ್ಐಆರ್ ವಿರೋಧಿಸಿ ನುಸುಳುಕೋರರನ್ನು ರಕ್ಷಿಸುವ ಹಠವೇಕೆ? ಅಕ್ರಮ ಬಾಂಗ್ಲಾದೇಶಿಯರ ರಕ್ಷಣೆಯೇ ತನ್ನ ಅಧಿಕಾರದ ಗದ್ದುಗೆ ಎಂಬಂತೆ ವರ್ತಿಸಿದ ಮಮತಾ ಬ್ಯಾನರ್ಜಿ ಸ್ವತಃ ಕಪ್ಪು ಕೋಟು ಧರಿಸಿ ಸುಪ್ರೀಂಕೋರ್ಟ್‌ನ ಬಾಗಿಲು ಬಡಿದು, ಹೊಸ ಆರ್ಭಟದ ಮೂಲಕ ಸಂಚಲನ ಸೃಷ್ಟಿಸಿಯೂ, ಸರ್ವೋಚ್ಚ ನ್ಯಾಯಾಲಯ ನೈಜ ಭಾರತೀಯರಿಗೆ ಮಾತ್ರ ದೇಶದಲ್ಲಿ ಮತದಾನ ಎಂದು ನ್ಯಾಯ ಎತ್ತಿ ಹಿಡಿದ ನಂತರವೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರಿಗೆ ಈ ಅಪಪ್ರಚಾರದ ಅವಶ್ಯಕತೆ ಏನು?

18 ವರ್ಷದ ವಯಸ್ಕರು ಮತದಾರ ಪಟ್ಟಿಗೆ

ಎಸ್ಐಆರ್ ಮೂಲ ಉದ್ದೇಶ, ಜವಾಬ್ದಾರಿಯುತ ಸರ್ಕಾರಿ (ಬಿಎಲ್ಒ) ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಅರ್ಹ ಮತದಾರರಿಗೆ ಮತದ ಹಕ್ಕನ್ನು ಊರ್ಜಿತಗೊಳಿಸಿ ಪ್ರತಿ ಭಾರತೀಯರಿಗೂ ಮತದಾನದ ಹಕ್ಕು ಖಾತ್ರಿ ಗೊಳಿಸುವುದೇ ಆಗಿರುತ್ತದೆ. ಅದರಲ್ಲೂ ರಾಜ್ಯದಲ್ಲಿ ಅ.1ರಿಂದ ನಿಗದಿಗೊಳಿಸಿ, ಅಂದು 18 ವರ್ಷ ತುಂಬಿದ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಚುನಾವಣಾ ಆಯೋಗದ ಸ್ಪಷ್ಟ ಉದ್ದೇಶ. ಕಾಂಗ್ರೆಸ್ ಹೇಳುವಂತೆ ಅಲ್ಪಸಂಖ್ಯಾತರೂ, ದಲಿತರೂ, ಹಿಂದುಳಿದವರೂ, ಆದಿವಾಸಿಗಳಿಗೂ 18 ತುಂಬಿದರೆ ಮತದಾನದ ಹಕ್ಕು ಕಡ್ಡಾಯ ಎಂದ ಮೇಲೆ ಜಾತಿ, ಧರ್ಮದ ತಾರತಮ್ಯ ಎಲ್ಲಿಂದ ಬಂತು? ಕೇಂದ್ರದಲ್ಲಿ ತಮ್ಮದಲ್ಲದ ಪಕ್ಷ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಎಸ್ಐಆರ್ ವಿರೋಧಿಸುವ ಭರದಲ್ಲಿ ನೈಜ ಭಾರತೀಯ ಪ್ರಜೆಯೊಬ್ಬ ನೀಡುವ ಪ್ರಜಾಪ್ರಭುತ್ವದ ತೀರ್ಪು ವಿದೇಶಿಯನ್ನೊಬ್ಬ ಅಪಹರಿಸದಂತೆ ಎಚ್ಚರಿಕೆ ವಹಿಸುವುದು ಸಂವಿಧಾನಬದ್ಧ ಕರ್ತವ್ಯ ಎಂದಾದ ಮೇಲೆ ರಾಜಕೀಯ ಕಾರಣಗಳಿಗಾಗಿ ಜನತಂತ್ರ ವ್ಯವಸ್ಥೆ ಬಲಿಯಾಗಬಾರದು ಎಂದು ರಾಜ್ಯ ಆಳುವ ರಾಷ್ಟ್ರದ ವಿಪಕ್ಷ ಅರ್ಥೈಸಿಕೊಳ್ಳಬೇಕಾಗಿದೆ. ಅನ್ಯಾಯ ಆಗಿದ್ದರೆ ನನ್ನೆಡೆಗೆ ಬನ್ನಿ ನಿಮ್ಮ ರಾಜಕಾರಣದ ಭವಿಷ್ಯ ಏರುಪೇರಾದರೆ ಅದನ್ನು ಅಕ್ರಮಗಳ ಮೂಲಕ ಸರಿದಾರಿಗೆ ತರುವ ಯತ್ನ ಒಪ್ಪಲಾಗದು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟ ಶಬ್ದಗಳಲ್ಲಿ ಘೋಷಿಸಿದೆ.

ಪ್ರತಿ ಚುನಾವಣೆಯಲ್ಲಿ ಅಥವಾ ಕನಿಷ್ಠ 10 ವರ್ಷಕ್ಕೊಮ್ಮೆ ಆದರೂ ಮತದಾರರ ಪಟ್ಟಿ ಪರಿಷ್ಕರಣೆ ನಿಯಮ ರೂಪಿಸುವುದು ಮೋದಿ ಸರ್ಕಾರವಲ್ಲ. ಆ ನಿಯಮದ ಅನುಷ್ಠಾನ ಮಾಡುತ್ತಿರುವುದು ಮಾತ್ರ ಕೇಂದ್ರ ಸರ್ಕಾರದ ನಿಲುವು. ಸರ್ಕಾರಿ ಅಧಿಕಾರಿಗಳು ಅಥವಾ ಬಿಎಲ್‌ಒಗಳು ಮನೆ ಮನೆಗೆ ತೆರಳಿದ್ದಕ್ಕೆ ಬೇಕಾದ ದಾಖಲೆಗಳು ಮುಕ್ತವಾಗಿ ಸಿಗಲಿವೆ. ಭಾರತೀಯನೆಂಬ ಯಾವುದೇ ದಾಖಲೆ ಕೊಟ್ಟರೆ ಮತದ ಹಕ್ಕು ಅಭಾದಿತ. ದೇಶದ ವಾಸ್ತವ್ಯದ ದಾಖಲೆಯೇ ಇಲ್ಲದ ಅಕ್ರಮವಾಸಿಗಳಿಗೆ ಮತದಾನದ ಹಕ್ಕು ಕೊಡಿ ಎಂದು ವಾದಿಸುವುದು ರಾಷ್ಟ್ರೀಯ ನೀತಿಗೆ ವಿರೋಧ. ದೇಶದ ಪೌರಲ್ಲದವರ ಹೆಸರು ತೆಗೆದರೆ ರಾಷ್ಟ್ರೀಯ ಭದ್ರತೆಗೆ ಹೆಚ್ಚು ಅನುಕೂಲ. ಎಸ್ಐಆರ್ ಸರಿಯಾಗಿ ನಡೆಸಿದರೆ ಸ್ವಚ್ಛ, ನಿಖರ ಮತ್ತು ನೈಜ ಮತದಾರರ ಪಟ್ಟಿ ಸಿಗಲಿದ್ದು ಇದು ನ್ಯಾಯ ಸಮ್ಮತ ಚುನಾವಣೆ ನಡೆಯಲು ಸಾಧ್ಯವಾಗುತ್ತದೆ.

ಎಸ್ಐಆರ್‌, ಮತಯಂತ್ರ ದೂರುವುದೇಕೆ?

ಯಾರು ಭಾರತೀಯರೆಂಬ ಕನಿಷ್ಠ ದಾಖಲೆ ಹೊಂದದಿದ್ದರೆ ಮತ್ತು ಅವರು ನೈಜ ವಿದೇಶಿಗರಾಗಿದ್ದರೆ ಅವರ ಮೇಲೆ ಪ್ರೀತಿ ಏಕೆ? ಹೊಸದಾಗಿ ಹೆಸರು ಸೇರಿಸಲು ಫಾರಂ 6ರಲ್ಲಿ ಅವಕಾಶ ಕಲ್ಪಿಸಲಾಗಿದೆ. ವ್ಯಕ್ತಿಗಳು ಸ್ಥಳಾಂತರವಾಗಿದ್ದರೆ ಆ ಪ್ರದೇಶದಲ್ಲಿ ಸೇರ್ಪಡೆಗೊಳಿಸಲು ಫಾರಂ ನಂಬರ್‌ 7ರಲ್ಲಿ ಅನುಕೂಲ ನೀಡಲಾಗಿದೆ. ಫೋಟೋ ಬದಲಾವಣೆ, ಹೆಸರು ಮತ್ತು ವಯಸ್ಸಿನ ತಿದ್ದುಪಡಿ ಇದ್ದರೆ ಫಾರಂ ನಂಬರ್ 8ರಲ್ಲಿ ದಾಖಲಿಸಬಹುದಾಗಿದೆ. ಆನ್‌ಲೈನ್ ಮೂಲಕ ಹೆಲ್ಪ್‌ಲೈನ್ ಪರಿಚಯಿಸಿದ್ದು, ಬಿಎಲ್‌ಒ ಮತ್ತು ತಹಸೀಲ್ದಾರ್ ಕಚೇರಿಗಳಲ್ಲಿ ಆಫ್‌ಲೈನ್ ಸೇವೆಯ ಅವಕಾಶ ಚುನಾವಣೆ ಆಯೋಗ ನೀಡಿದೆ. ಗೊಂದಲ ಪರಿಹರಿಸಿಕೊಳ್ಳಲು ಉಚಿತ ಕರೆ ಸಂಖ್ಯೆ ಪ್ರಕಟಿಸಲಾಗಿದ್ದು, ನೈಜ ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಜರುಗಿಸಿದ್ದು ಇದೆಲ್ಲಾ ಗೊತ್ತಿದ್ದು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಎಸ್ಐಆರ್ ದೂರುವುದು, ಮತಯಂತ್ರಗಳನ್ನು ದೂಷಿಸುವುದು ಅರ್ಥಹೀನ.

ಇಲ್ಲಿಯವರೆಗೂ ರಾಹುಲ್‌ಗಾಂಧಿ ಅವರು ಮತ್ತು ಸಿದ್ದರಾಮಯ್ಯ ಅವರ ನೇತೃತ್ವದ ತಂಡ ದೂರಿದ್ದು ಮತ ಯಂತ್ರಗಳನ್ನು. ಆದರೆ, ಶೃಂಗೇರಿಯ ಪ್ರಕರಣದಲ್ಲಿ ಸಮಸ್ಯೆ ಬಂದಿದ್ದು ಮತಯಂತ್ರದಿಂದ ಅಲ್ಲ, ಬದಲಾಗಿ ಮತಪತ್ರದಲ್ಲಿ. ಅದು ಗೊತ್ತಿದ್ದೂ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಗೆ ಕಾಯಿದೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ತರುತ್ತಿರುವುದು ಕಾಗದದ ಮೂಲಕವೇ ಚುನಾವಣೆ ನಡೆಯಬೇಕೆಂದು ಸಿದ್ದರಾಮಯ್ಯ ಅವರಂತಹ ಹಿರಿಯ ರಾಜಕಾರಣಿಗೆ ಇದೆಲ್ಲ ಗೊತ್ತಿಲ್ಲದೆ ಇರಲು ಸಾಧ್ಯವಿಲ್ಲ. ಗೊತ್ತಿದ್ದು ಅಸತ್ಯದ ಪ್ರತಿಪಾದನೆ ಅವರ ಮುತ್ಸದ್ದಿತನಕ್ಕೆ ಗೌರವ ಹೆಚ್ಚಿಸುವುದಿಲ್ಲ.

ಸದ್ಯಕ್ಕಂತೂ ಕರ್ನಾಟಕ ಸರ್ಕಾರದ ಅಂಗಳದ ಮುಂದೆ ನೈಜ ಭಾರತೀಯರಿಗಾಗಿ ಮತದಾರರ ಪಟ್ಟಿಯ ಪರಿಷ್ಕರಣೆ ಎಸ್‌ಐಆರ್‌ ಸ್ವರೂಪ ಬಂದು ನಿಂತಿದೆ. ರಾಜ್ಯದ ಸರಿ ಸುಮಾರು 5.5 ಕೋಟಿ ಮತದಾರರಲ್ಲಿ ಜೊಳ್ಳು-ಪೊಳ್ಳುಗಳಿದ್ದರೆ ಕಿತ್ತು ಹೊರಬಿಸುಟು ನೈಜ ಭಾರತೀಯರ ಮತದಾರರ ಪಟ್ಟಿ ಪ್ರಕಟವಾಗಲಿ ಎಂಬುದೇ ಪ್ರತಿ ದೇಶಪ್ರೇಮಿಗಳ ಹಾರೈಕೆ. ಎಸ್‌ಐಆರ್‌ ಅನ್ನು ಮನೆಮನೆಯಲ್ಲೂ ಗೌರವಿಸೋಣ. ಸದೃಢ ನ್ಯಾಯ ಸಮ್ಮತ, ಪ್ರಜಾಪ್ರಭುತ್ವದ ಆಡಳಿತಕ್ಕೆ ಮುನ್ನುಡಿ ಬರೆಯೋಣ ಬನ್ನಿ.

ಸದ್ಯಕ್ಕಂತೂ ಕರ್ನಾಟಕ ಸರ್ಕಾರದ ಅಂಗಳದ ಮುಂದೆ ನೈಜ ಭಾರತೀಯರಿಗಾಗಿ ಮತದಾರರ ಪಟ್ಟಿಯ ಪರಿಷ್ಕರಣೆ ಎಸ್‌ಐಆರ್‌ ಸ್ವರೂಪ ಬಂದು ನಿಂತಿದೆ. ರಾಜ್ಯದ ಸರಿ ಸುಮಾರು 5.5 ಕೋಟಿ ಮತದಾರರಲ್ಲಿ ಜೊಳ್ಳು-ಪೊಳ್ಳುಗಳಿದ್ದರೆ ಕಿತ್ತು ಹೊರಬಿಸುಟು ನೈಜ ಭಾರತೀಯರ ಮತದಾರರ ಪಟ್ಟಿ ಪ್ರಕಟವಾಗಲಿ ಎಂಬುದೇ ಪ್ರತಿ ದೇಶಪ್ರೇಮಿಗಳ ಹಾರೈಕೆ. ಎಸ್‌ಐಆರ್‌ ಅನ್ನು ಮನೆಮನೆಯಲ್ಲೂ ಗೌರವಿಸೋಣ. ಸದೃಢ ನ್ಯಾಯ ಸಮ್ಮತ, ಪ್ರಜಾಪ್ರಭುತ್ವದ ಆಡಳಿತಕ್ಕೆ ಮುನ್ನುಡಿ ಬರೆಯೋಣ ಬನ್ನಿ.