ಬಿಜೆಪಿ ಶಾಸಕ ಸುರೇಶ್ ಗೌಡರು ತಮ್ಮ ದೀರ್ಘಕಾಲದ ಆ್ಯಸಿಡಿಟಿ ಸಮಸ್ಯೆಗೆ ಆಸ್ಟ್ರೇಲಿಯಾದ ಔಷಧದಿಂದ ಪರಿಹಾರ ಕಂಡುಕೊಂಡಿದ್ದನ್ನು ವಿಧಾನಸಭೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಇರಾನ್ ಯುದ್ಧದ ಸುಳ್ಳು ಸುದ್ದಿಯಿಂದಾಗಿ ಬೆಳಗಾವಿಯಲ್ಲಿ ಪೆಟ್ರೋಲ್-ಡೀಸೆಲ್‌ಗಾಗಿ ಜನರು ಮುಗಿಬಿದ್ದಿದ್ದು, ಪ್ಲಾಸ್ಟಿಕ್ ಬಾಟಲಿಗಳ ಮಾರಾಟ ಜೋರಾಗಿತ್ತು

ತೈಲವನ್ನು ಕೇವಲ ವಾಹನಗಳಿಗೆ ಹಾಕಿಸಿಕೊಂಡರೆ ಪರ್ವಾಗಿಲ್ಲ. ನೀರು ಸಂಗ್ರಹಿಸುವ ಬಾಟಲ್‌ಗಳು, ಕ್ಯಾನ್‌ಗಳು, ಡ್ರಮ್‌ಗಳಲ್ಲಿಯೂ ಕೂಡ ಜನ ತಂದು ತುಂಬಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭ ಬಳಸಿಕೊಂಡು ಕೆಲ ವ್ಯಾಪಾರಸ್ಥರು ಪೆಟ್ರೋಲ್‌ ಬಂಕ್‌ಗಳ ಪಕ್ಕದಲ್ಲೇ ಪ್ಲಾಸ್ಟಿಕ್‌ ಬಾಟಲ್‌ಗಳು (2, 3, 5, 10 ಲೀ.) ಮಾರಾಟ ಮಾಡಲು ಆರಂಭಿಸಿಬಿಟ್ರು. ಪರಿಣಾಮ ಪೆಟ್ರೋಲ್‌, ಡಿಸೇಲ್‌ ತುಂಬಿಸಿಕೊಳ್ಳಲು ಬಂದವರಿಗಿಂತ ಪ್ಲಾಸ್ಟಿಕ್‌ ಬಾಟಲ್‌ ಮಾರಾಟ ಮಾಡುವವರದ್ದೇ ದೊಡ್ಡ ಹವಾ ಆಯ್ತು.

--------

ಆ್ಯಸಿಡಿಟಿ ಸಮಸ್ಯೆಗೆ 10 ವರ್ಷ ಕಾಲ ಸುಮಾರು 1 ಲಕ್ಷ ರಾನ್‌ಟೆಕ್‌ ಮಾತ್ರೆ ನುಂಗಿದರೂ ಸರಿ ಹೋಗಲಿಲ್ಲ. ನೂರು ಜನ ವೈದ್ಯರಿಗೆ ತೋರಿಸಿದರೂ ಸಮಸ್ಯೆ ಪರಿಹಾರ ಆಗಲಿಲ್ಲ. ಕೊನೆಗೆ ಆಸ್ಟ್ರೇಲಿಯಾದ ವೈದ್ಯರೊಬ್ಬರು ನೀಡಿದ ಒಂದು ಮಾತ್ರೆಯಿಂದ ಆ್ಯಸಿಡಿಟಿ ಸಮಸ್ಯೆ ವಾಸಿಯಾಯಿತು. ಕಳೆದ 14 ವರ್ಷಗಳಿಂದ ನನಗೆ ಆ್ಯಸಿಡಿಟಿ ಸಮಸ್ಯೆಯೇ ಇಲ್ಲ. ನನಗೀಗ 61 ವರ್ಷ. ಆರೋಗ್ಯವಾಗಿರುವುದರಿಂದ 45 ವರ್ಷದವನಂತೆ ಕಾಣುತ್ತೇನೆ..!

ಹೀಗೆ ತಮ್ಮ ಆರೋಗ್ಯದ ಗುಟ್ಟುರಟ್ಟು ಮಾಡಿದವರು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್‌ ಗೌಡ. ಇತ್ತೀಚೆಗೆ ನಡೆದ ವಿಧಾನಸಭೆ ಕಲಾಪದಲ್ಲಿ ಆರೋಗ್ಯ ಇಲಾಖೆ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡುವಾಗ ಈ ವಿಚಾರ ಪ್ರಸ್ತಾಪಿಸಿದರು.

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ. ಆರೋಗ್ಯ ಬೇಕಾ? ಹಾಗಾದ್ರೆ ಮೊದಲು ಸರ್ಕಾರ ಮದ್ಯ ನಿಷೇಧಿಸಬೇಕು. ಸರ್ಕಾರವೇ ಮದ್ಯ ಮಾರಾಟಕ್ಕೆ ಟಾರ್ಗೆಟ್‌ ಫಿಕ್ಸ್‌ ಮಾಡಿ ಮದ್ಯ ಕುಡಿಯಿರಿ, ಕುಡಿಯಿರಿ ಎಂದರೆ, ಆರೋಗ್ಯ ಎಲ್ಲಿಂದ ಸಿಗಬೇಕು? ಹುಲಿ, ಚಿರತೆ, ಆನೆ ಮೊದಲಾದ ಪ್ರಾಣಿಗಳಿಗೆ ಯಾವ ಆಸ್ಪತ್ರೆ ಇತ್ತು? ಮನುಷ್ಯನೂ ಸಹ ಪ್ರಾಣಿಯೇ. ನಾಗರಿಕತೆಯಿಂದ ಈ ಮಟ್ಟಕ್ಕೆ ಬೆಳೆದಿದ್ದಾನೆ. ಸರ್ಕಾರ ಆಸ್ಪತ್ರೆಗಳಿಗೆ ವೈದ್ಯರನ್ನು ನೀಡುವುದಕ್ಕಿಂತ ರೋಗಗಳು ಬಾರದಂತೆ ತಡೆಯಬೇಕು ಎಂದು ಸಲಹೆ ನೀಡಿದರು.

ಇಂದಿನ ಆಹಾರ ಪದ್ಧತಿ ಬದಲಾಗಿದೆ. ಕೊಳಚೆ ನೀರಿನಿಂದ ಬೆಳೆಯುವ ತರಕಾರಿಗಳು ವಿಷಕಾರಿಯಾಗಿವೆ. ನಮ್ಮ ತಾತ ನೂರು ವರ್ಷ ಬದುಕಿದ್ದರು. ಆಗೆಲ್ಲಾ ಯಾವ ಆಸ್ಪತ್ರೆಗಳಿದ್ದವು? ನಾನು ಮನೆಯಲ್ಲೇ ಹುಟ್ಟಿದವನು. ಈಗ ಸಿಸೇರಿಯನ್‌ ಎಂಬುದು ಮಾಫಿಯಾ ಆಗಿದೆ. ಸರ್ಕಾರ ಆಸ್ಪತ್ರೆಗಳಿಗೆ ವೈದ್ಯರನ್ನು ನೀಡುವುದಕ್ಕಿಂತ ಕಾಯಿಲೆ ಬಾರದಂತೆ ತಡೆಯಬೇಕು. ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಬೇಕು. ಮದ್ಯ ಮಾರಾಟಕ್ಕೆ ಟಾರ್ಗೆಟ್‌ ಫಿಕ್ಸ್‌ ಮಾಡುವುದನ್ನು ಬಿಟ್ಟು ಮದ್ಯವನ್ನೇ ಬ್ಯಾನ್‌ ಮಾಡಬೇಕು ಎಂದು ಸುರೇಶ್‌ ಗೌಡ ಆಗ್ರಹಿಸಿದರು.

--------

ಇರಾನ್‌ ವಾರು-ಪ್ಲಾಸ್ಟಿಕ್‌ ಬಾಟಲಿ ಮಾರಾಟ ಜೋರು!

ಮಧ್ಯಪ್ರಾಚ್ಯದಲ್ಲಿ ಇರಾನ್‌ ಹೊತ್ತಿ ಉರಿಯುತ್ತಿದೆ. ಅಲ್ಲಿನ ಬೆಂಕಿಯ ಬಿಸಿ ಭಾರತಕ್ಕೂ ತಟ್ಟಿದೆ. ಇದರ ಮಧ್ಯೆ ಬೆಳಗಾವಿಯಲ್ಲಿ ಪೆಟ್ರೋಲ್‌, ಡಿಸೇಲ್‌ ಕೊರತೆಯಾಗುತ್ತದೆ ಎಂಬ ಸುಳ್ಳು ಸುದ್ದಿಯನ್ನೇ ಹಬ್ಬಿಸಿಬಿಟ್ಟರು. ಸಿಕ್ಕಿದ್ದು ಸೀರುಂಡೆ ಎಂಬಂತೆ ಬೆಳಗಾವಿ, ಬೈಲಹೊಂಗಲ, ಗೋಕಾಕ ಸೇರಿ ಅನೇಕ ಕಡೆಯ ಪೆಟ್ರೋಲ್‌ ಬಂಕ್‌ಗಳು ರಾತ್ರಿ 12 ಗಂಟೆಯಾದರೂ ಫುಲ್‌ ರಶ್‌.

ತೈಲವನ್ನು ಕೇವಲ ವಾಹನಗಳಿಗೆ ಹಾಕಿಸಿಕೊಂಡರೆ ಪರ್ವಾಗಿಲ್ಲ. ನೀರು ಸಂಗ್ರಹಿಸುವ ಬಾಟಲ್‌ಗಳು, ಕ್ಯಾನ್‌ಗಳು, ಡ್ರಮ್‌ಗಳನ್ನು ಕೂಡ ಜನ ತಂದು ತುಂಬಿಸಿಕೊಳ್ಳುತ್ತಿದ್ದರು. ಇದೆ ಸಂದರ್ಭ ಬಳಸಿಕೊಂಡು ಕೆಲ ವ್ಯಾಪಾರಸ್ಥರು ಪೆಟ್ರೋಲ್‌ ಬಂಕ್‌ಗಳ ಪಕ್ಕದಲ್ಲೇ ಪ್ಲಾಸ್ಟಿಕ್‌ ಬಾಟಲ್‌ಗಳು (2, 3, 5, 10 ಲೀ) ಮಾರಾಟ ಮಾಡಲು ಆರಂಭಿಸಿಬಿಟ್ರು.

ಪರಿಣಾಮ ಪೆಟ್ರೋಲ್‌, ಡಿಸೇಲ್‌ ತುಂಬಿಸಿಕೊಳ್ಳಲು ಬಂದವರಿಗಿಂತ ಪ್ಲಾಸ್ಟಿಕ್‌ ಬಾಟಲ್‌ ಮಾರಾಟ ಮಾಡುವವರದ್ದೇ ದೊಡ್ಡ ಹವಾ ಆಯ್ತು. ಇದನ್ನು ಕಂಡ ಪೊಲೀಸ್‌ ಇಲಾಖೆ ಕೇವಲ ವಾಹನಗಳಿಗೆ ಮಾತ್ರ ತೈಲ ತುಂಬಿಸಬೇಕು. ಇಲ್ಲವಾದರೆ ಕೇಸ್‌ ಹಾಕ್ತೀವಿ ಅಂತ ಖಡಕ್‌ ಎಚ್ಚರಿಕೆ ಕೊಟ್ಟು.

ಮರುದಿನ ಯಾವ ಬಂಕ್‌ನಲ್ಲಿಯೂ ಪ್ಲಾಸ್ಟಿಕ್‌ಗಳಿಗೆ ಪೆಟ್ರೋಲ್‌ ಬೀಳಲಿಲ್ಲ !

--------------

ಕಾಂಗ್ರೆಸ್‌ ಪರ ಯತ್ನಾಳ ಪ್ರಚಾರ ಮಾಡ್ತಾರಾ?

ಬಾಗಲಕೋಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಪ್ರಚಾರ ಭರಾಟೆ ತೀವ್ರಗೊಂಡಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಘಟಾನುಘಟಿ ನಾಯಕರು ಆಗಮಿಸಿದ್ದರು. ಇದೆ ವೇಳೆ ಬಿಜೆಪಿ ಉಚ್ಚಾಟಿತ ನಾಯಕ ಯತ್ನಾಳ ಕೂಡ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬರುತ್ತಾರೆ ಅಂತ ಜೋರಾಗಿ ವದಂತಿ ಹಬ್ಬಿತ್ತು. ಆದರೆ, ಬಿಜೆಪಿ ಪರ ಯತ್ನಾಳ ಪ್ರಚಾರದ ಸಾಧ್ಯತೆಯ ವದಂತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದರು. ಅಷ್ಟೇ ಅಲ್ಲ, ನನ್ನ ಪ್ರಕಾರ ಶಾಸಕ ಬಸನಗೌಡ ಯತ್ನಾಳ ಅವರು ಕಾಂಗ್ರೆಸ್ ಪರ ಕೆಲಸ ಮಾಡಬೇಕು ಎಂದು ವಾದಿಸಿದರು.

ಬಾಗಲಕೋಟೆ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯತ್ನಾಳ್‌ ಬಿಜೆಪಿಯಿಂದ ಉಚ್ಚಾಟನೆಯಾಗಿದ್ದಾರೆ. ಉಚ್ಚಾಟನೆ ಮಾಡಿದ ಪಾರ್ಟಿ ಪರ ಯಾಕೆ ಮಾಡಬೇಕು ಎ೦ಬುದು ಮುಖ್ಯಮಂತ್ರಿಯವರ ವಾದವಾಗಿತ್ತು. ನನಗೆ ಗೊತ್ತಿರುವ ಮಟ್ಟಿಗೆ ಶಾಸಕ ಬಸನಗೌಡ ಯತ್ನಾಳ ಬಿಜೆಪಿಗೆ ಮಾಡಲಿಕ್ಕಿಲ್ಲ ಎಂದಷ್ಟೇ ಹೇಳಿದರು.

ಆದರೆ, ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಹಾಗಾದರೆ ಕಾಂಗ್ರೆಸ್ ಪರ ಪ್ರಚಾರಕ್ಕೆ ಯತ್ನಾಳ ಅವರಿಗೆ ಮನವಿ ಮಾಡುವಿರಾ ಎಂಬ ಪ್ರಶ್ನೆ ಕೇಳಿದರು. ಇದಕ್ಕುತ್ತರಿಸಿದ ಸಿಎಂ ಸಿದ್ದರಾಮಯ್ಯ, ಇಲ್ಲ ಎನ್ನುವ ಬದಲು ಆಗಲ್ಲ ಎಂಬುವುದನ್ನು ಸನ್ನೆ ಮೂಲಕ ತಿಳಿಸಿಕೊಟ್ಟು, ನಕ್ಕು ಮುಂದೆ ನಡೆದರು.

-ಮೋಹನ ಹಂಡ್ರಂಗಿ

-ಶ್ರೀಶೈಲ ಮಠದ

-ಈಶ್ವರ ಶೆಟ್ಟರ.